ಬುಧವಾರ, ಆಗಸ್ಟ್ 11, 2010

ಪೋಗೋ ಕನ್ನಡ ಡಬ್ಬಿಂಗು ಹೋಗೋ

ಕನ್ನಡಕ್ಕೆ ಡಬ್ಬಿಂಗು ಬರಲಿ ಎನ್ನುವುದು ಅಂತರ್ಜಾಲದಲ್ಲಿ ಚರ್ಚೆಗಳನ್ನು ಹುಟ್ಟುಹಾಕಿದೆ. ಅಲ್ಲಿ ಇಲ್ಲಿ ಚರ್ಚೆಗಳು ನಡೆಯುತ್ತಿವೆ. ಗ್ರಾಹಕರಲ್ಲಿ ಅನೇಕರು ಡಬ್ಬಿಂಗ್ ಪರವಾಗಿದ್ದಾರೆ. ಆದರೆ ಚಿತ್ರರಂಗದಲ್ಲೆ ಅನೇಕ ತಂತ್ರಜ್ಞರಿಂದ ಇದಕ್ಕೆ ವಿರೋಧ ವ್ಯಕ್ತವಾಗಿದೆ, ಆಗುತ್ತಿದೆ.

ಈ ಕೆಳಗಿನ ಪ್ಯಾರಾದಲ್ಲಿ ಡಬ್ಬಿಂಗ್‌ ಹಾಗೂ ರೀಮೇಕ್‌ ಚಿತ್ರಗಳಿಗಿರುವ ವ್ಯತ್ಯಾಸವನ್ನು ವಿವರಿಸಲಾಗಿದೆ. ಆದುದರಿಂದ ಇದು ಈಗಾಗಲೇ ನಿಮಗೆ ತಿಳಿದಿದ್ದರೆ ಈ ಪ್ಯಾರಾವನ್ನೂ ಹಾರಿಸಿ, ಮುಂದಿನ ಪ್ಯಾರಾದಿಂದ ಮುಂದುವರಿಸಿ.
ಮೊದಲಿಗೆ ಡಬ್ಬಿಂಗ್ ಎಂದರೇ...ಅನ್ಯಭಾಷೆಯ ಒಂದು ದೃಶ್ಯಾವಳಿಗೆ ತಮ್ಮದೇ ಭಾಷೆಯನ್ನು ಅಳವಡಿಸುವುದು. ಆದರೆ ಮೂಲ ದೃಶ್ಯದ ಕಥೆಯಾಗಲಿ ಅಥವಾ ಪಾತ್ರಗಳಾಗಲಿ ಯಾವುದೂ ಬದಲಾಗುವುದಿಲ್ಲ.  ಉದಾಹರಣೆಗೆ ಒಂದು ಆಂಗ್ಲ ಭಾಷೆಯ ಚಿತ್ರದ ಪಾತ್ರಗಳು ಸಂಪೂರ್ಣ ಕನ್ನಡದಲ್ಲಿಯೇ ಮಾತಾಡುತ್ತಿರುವಂತೆ ಕೇವಲ ಧ್ವನಿಯನ್ನು ಅಳವಡಿಸಲಾಗುತ್ತದೆ. ಮೂಲ ಕಥೆಗೆ ತಕ್ಕಂತೆ ಸಂಭಾಷಣೆಯನ್ನೂ ಸಹ ನಮ್ಮ ಭಾಷೆಗೆ ಅನುವಾಧಿಸಲಾಗಿರುತ್ತದೆ. ರೀಮೇಕ್‌ ಹಾಗೂ ಡಬ್ಬಿಂಗ್‌ ನಡುವೆ ಇರುವ ವ್ಯತ್ಯಾಸ ಎಂದರೆ ರೀಮೇಕ್‌ ಚಿತ್ರದಲ್ಲಿ ಸಂಪೂರ್ಣ ಚಿತ್ರವನ್ನು ಮರುಸೃಷ್ಟಿಸಲಾಗುತ್ತದೆ. ಕೇವಲ ಕಥೆ (ಕೆಲವೊಮ್ಮೆ ಸಂಗೀತ ಹಾಗೂ ಸಾಹಿತ್ಯ)ಮಾತ್ರ ಮೂಲಚಿತ್ರದಿಂದ ಪಡೆದುಕೊಂಡು ನಂತರ, ಪಾತ್ರಗಳು, ಸಂಭಾಷಣೆ, ಚಿತ್ರೀಕರಣದ ಸ್ಥಳ, ಭಾಷೆ, ಹೀಗೇ ಎಲ್ಲವನ್ನೂ ಹೊಸದಾಗಿ ಆಯಾ ನೇಟಿವಿಟಿಗೆ ತಕ್ಕಂತೆ ಮರು ನಿರ್ಮಿಸಬೇಕಾಗುತ್ತದೆ ಅಥವಾ ಶೂಟಿಸಬೇಕಾಗುತ್ತದೆ.  ಆದರೆ ಡಬ್ಬಿಂಗ್‌ನಲ್ಲಿ ಇಷ್ಟೆಲ್ಲಾ ರಗಳೆ ಇಲ್ಲ. ಕೇವಲ ಸಂಭಾಷಣೆಯನ್ನು ಅನುವಾಧಿಸಿ ಅದನ್ನು ಮೂಲ ಚಿತ್ರಕ್ಕೆ ಅಳವಡಿಸಿದರೆ ಆಯಿತು.

ಈಗ ಕೆಲವು ಕನ್ನಡಪರ ಆಸಕ್ತಿಯುಳ್ಳವರು ಕನ್ನಡ ಡಬ್ಬಿಂಗ್‌ ಬೇಕೇ ಬೇಕು ಎಂದು ಒತ್ತಾಸೆಯನ್ನು ಮುಂದಿಟ್ಟಿದ್ದಾರೆ. ಇದಕ್ಕೆ ಇವರು ಮುಂದಿಡುತ್ತಿರುವ ಕೆಲವು ಮುಖ್ಯ ಕಾರಣಗಳು ಈ ರೀತಿ ಬರುತ್ತವೆ.

<<
1. ಬೆಂಗಳೂರಿನ ಇಂಗ್ಲಿಷ್ ಮೀಡಿಯಂ ವಾತಾವರಣದಲ್ಲಿ ಬೆಳೆಯೋ ಮಕ್ಕಳಿಗೆ ಪೊಗೊ, ಕಾರ್ಟೂನ್ ನೆಟವರ್ಕ್, ಡಿಸ್ನಿ ಚಾನಲ್ ನಲ್ಲಿ ಬರುವ ಕಾರ್ಟೂನ್ ಕಾರ್ಯಕ್ರಮವನ್ನು ಇಂಗ್ಲಿಷ್ ಅಲ್ಲಿ ನೋಡಿ ಆನಂದಿಸಬಹುದು. ಆದರೆ ಅದೇ, ಕರ್ನಾಟಕದ ಚಿಕ್ಕ ಚಿಕ್ಕ ಊರಲ್ಲಿರುವ ಕನ್ನಡದ ಕಂದಮ್ಮಗಳು ಮಾತ್ರ ಅರ್ಥ ಆಗದೇ ಇದ್ರೂ ಇಂಗ್ಲಿಷ್, ಹಿಂದಿಯಲ್ಲೇ ನೋಡಬೇಕು.
.
.
.
.
2.೯೦೦ ಕೋಟಿಯ ಅವತಾರ್ ಸಿನೆಮಾ ಕನ್ನಡದಲ್ಲಿ ಮಾಡಲು ಎಂದಿಗಾದರೂ ಸಾಧ್ಯವೇ? ಹಾಗಿದ್ದಾಗ ಅದನ್ನು ನೋಡಬೇಕು ಅನ್ನುವ ಕನ್ನಡಿಗರು ಪರ ಭಾಷೆಯಲ್ಲೇ ನೋಡುತ್ತಾರೆ. ಅಲ್ಲಿಗೆ ಕನ್ನಡ ಎಲ್ಲೂ ಸಲ್ಲದ ನುಡಿಯಾಗಿ ಉಳಿಯುತ್ತಿದೆ. ನಮಗೆ ನಮ್ಮ ಉದ್ಯಮವೂ ಬೇಕು, ನಮ್ಮ ಭಾಷೆಯೂ ಬೇಕು.
.
.
.

3.ನನ್ನ ಮಕ್ಕಳು ಕನ್ನಡದಲ್ಲಿ ಕಾರ್ಟೂನ್ ಕಾರ್ಯಕ್ರಮಗಳು, ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಬಿಂಬಿಸುವ ಕಾರ್ಯಕ್ರಮಗಳನ್ನು ಕಾರ್ಟೂನ್ ನೆಟ್ವರ್ಕ್,ಡಿಸ್ಕವರಿ ವಾಹಿನಿಗಳಲ್ಲಿ ನೋಡಬಯಸಿದರೆ, ಅದು ಕನ್ನಡದಲ್ಲಿಲದ ಕಾರಣ ಇಂಗ್ಲಿಷ್ ನಲ್ಲಿಯೇ ನೋಡಬೇಕಿರುವ ಅನಿವಾರ್ಯತೆ ಇವತ್ತಿನ ಮಟ್ಟಿಗೆ ಇದೆ.
>>

ಈಗ ಈ ಹೇಳಿಕೆಗಳನ್ನು ಸ್ವಲ್ಪ ವಿಮರ್ಶಿಸೊಣ.
ಇಂದು ನಮ್ಮ ಕರ್ನಾಟಕದಲ್ಲಿ ಆಂಗ್ಲಭಾಷೆಯ ಬೆಳವಣಿಗೆ ಎಷ್ಟು ವೇಗದಲ್ಲಿದೆ ಎಂದರೆ ಮೇಲೆ ತಿಳಿಸಿರುವ ಪೋಗೋ, ಕಾರ್ಟೂನ್‌ ನೆಟ್‌ವರ್ಕ್‌ ಚಾನೆಲ್‌ಗಳು ಅಥವಾ ಅವತಾರ್, ಜುರಾಸಿಕ್‌ ಪಾರ್ಕ್‌ ನಂತಹ ಚಲನಚಿತ್ರಗಳು ನಮ್ಮ ಗ್ರಾಮೀಣ ಪ್ರದೇಶದ ಚಿಕ್ಕ ಚಿಕ್ಕ ಊರುಗಳಲ್ಲಿರುವ ಮಕ್ಕಳನ್ನು ತಲುಪಲು ಇನ್ನೂ ಕೆಲವು ವರ್‍ಷಗಳು ಬೇಕಾಗಬಹುದು. ಆದರೆ ಈಗಾಗಲೇ ಎಲ್ಲಾಕಡೆ ಆಂಗ್ಲಮಾದ್ಯಮದ ಶಾಲೆಗಳು ತಲೆಯೆತ್ತಿವೆ. ಹಾಗಾಗಿ ಇಂತಹ ಕಾರ್ಯಕ್ರಮಗಳನ್ನು ವೀಕ್ಷಿಸುವಲ್ಲಿ ಈ ಮಕ್ಕಳಿಗೆ ಖಂಡಿತ ಕೇವಲ ಭಾಷೆ ಅಡ್ಡಿಪಡಿಸುವುದಿಲ್ಲ. ಬದಲಾಗಿ ಈ ಮಕ್ಕಳ ಭಾಷಾಜ್ಞಾನವನ್ನು ಮತ್ತಷ್ಟು ಉನ್ನತಗೊಳಿಸುತ್ತದೆ. ಇನ್ನು ಯುವಕರು ಅಥವಾ ಮುದುಕರ ವಿಷಯವನ್ನು ಮೇಲಿನ ಕನ್ನಡಪರ ಹೋರಾಟಗಾರರು ತಲೆಕೆಡಿಸಿಕೊಂಡಿಲ್ಲ. ಸೋ, ಅದರ ಬಗ್ಗೆ ಚರ್ಚೆ ನಮಗೂ ಬೇಡ.

ಇಷ್ಟು ಹೇಳಿ ಮುಗಿಸಿದರೆ ಸಾಕಾಗುವುದಿಲ್ಲ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ವಿಮರ್ಶಿಸೋಣ. ಏನೆಂದರೆ ಈಗ ನಮ್ಮ ಮಕ್ಕಳಿಗೆ ಆಂಗ್ಲಭಾಷೆಯ ಗಂಧಗಾಳಿಯೂ ಇಲ್ಲ. ಎಂದು ಭಾವಿಸಿಕೊಳ್ಳೋಣ. ಆಗಲೂ ಹೇಗೇ ಕನ್ನಡ ಡಬ್ಬಿಂಗ್‌ ಅನಿವಾರ್ಯವಲ್ಲ ಎಂಬುದನ್ನು ಈಗ ನೋಡೋಣ.

ಪೋಗೋ ಚಾನೆಲ್‌ಅನ್ನೇ ಉದಾಹರಣೆಗೆ ತೆಗೆದು ಕೊಳ್ಳೋಣ. ಇಲ್ಲಿ ಭಿತ್ತರಿಸುವ ಒಂದು ಬಹು ಜನಪ್ರಿಯ ಕಾರ್ಯಕ್ರಮ ಮಿ. ಬೀನ್. ಈ ಕಾರ್ಯಕ್ರಮ ಹೇಗಿದೆ ಎಂದರೆ ಹಿಂದಿನ ದಶಕದಲ್ಲಿ ಬಹು ಜನಪ್ರಿಯವಾಗಿದ್ದ ಚಾರ್ಲಿಚಾಂಪ್ಲಿನ್ ಕಾರ್ಯಕ್ರಮದ ಹಾಗೇ ಇದೆ. ಎರಡರಲ್ಲೂ ಹಾಸ್ಯವೇ ಪ್ರಧಾನ. ಹಾಗೂ ಎರಡೂ ಮೂಖಚಿತ್ರಗಳು. ಇಲ್ಲಿ ಕಥಾನಾಯಕನು ಮಾತಾಡದೇ ಕೇವಲ ನಟನೆಯಿಂದಷ್ಟೇ ವೀಕ್ಷಕರನ್ನು ಮನರಂಜಿಸುತ್ತಾನೆ.
ಸೋ, ಇಲ್ಲಿ ಆಂಗ್ಲವೂ ಇಲ್ಲ, ಹಿಂದಿಯೂ ಇಲ್ಲ. ಇನ್ನು ಕನ್ನಡಮಕ್ಕಳಿಗೆ ಅನ್ಯಾಯವಾಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.

ಇದೇ ಚಾನೆಲ್‌ನಲ್ಲಿ ಬರುವ ಮತ್ತೊಂದು ಕಾರ್ಯಕ್ರಮವನ್ನು ಗಮನಿಸೋಣ. ಅದೆಂದರೆ ಟಾಮ್‌ ಅಂಡ್‌ ಜರ್ರಿ. ಓಹ್. ಈ ಕಾರ್ಯಕ್ರಮವಂತೂ ವ್ಯಯಕ್ತಿಕವಾಗಿ ನನಗೆ ಬಲು ಅಚ್ಚುಮೆಚ್ಚು. ಇಲ್ಲಿ ಕೂಡ ಅಷ್ಟೇ, ಇಲ್ಲಿ ಬರುವ ಪ್ರಮುಖ ಪಾತ್ರಗಳೇ ಎರಡು ಮೂಖ ಪ್ರಾಣಿಗಳು. ಒಂದು ಬೆಕ್ಕು ಮತ್ತೊಂದು ಇಲಿ. ಕಾರ್ಯಕ್ರಮದಲ್ಲೂ ಸಹ ಈ ಪಾತ್ರಗಳು ಮೂಖವೇ. ಇಲ್ಲಿ ಅವುಗಳ ನಡುವಿನ ಚಿನ್ನಾಟ, ಜಗಳ, ಕಿತ್ತಾಟವೇ ಕಥಾವಸ್ತು. ಅಪರೂಪಕ್ಕೊಮ್ಮೆ ಮನೆಯೊಡತಿಯ ಅರಚಾಟ ಕೇಳಬಹುದು. ಆದರೆ ಆಕೆಯ ಮಾತು ಸ್ಪಷ್ಟವಾಗಿ ಆಂಗ್ಲದಲ್ಲಿಯೂ ಇರುವುದಿಲ್ಲ. ಹಾಗಾಗಿ, ಇಲ್ಲಿಯೂ ಕನ್ನಡ ಡಬ್ಬಿಂಗ್‌ ಮಾಡುವ ಪ್ರಶ್ನೇಯೇ ಹೇಳುವುದಿಲ್ಲ.
ವಾಸ್ತವದಲ್ಲಿ ಈ ಮೇಲೆ ತಿಳಿಸಿದ ಎರಡೂ ಕಾರ್ಯಕ್ರಮಗಳನ್ನು ಕನ್ನಡಕ್ಕೆ ಡಬ್ಬಿಂಗ್‌ ಮಾಡುವುದಕ್ಕೆ ಅವಕಾಶವೂ ಇಲ್ಲ. ಏಕೆಂದರೆ ಭಾಷೆಯ ವಿಷಯದಲ್ಲಿ ಈ ಎರಡೂ ಕಾರ್ಯಕ್ರಮಗಳು ತಟಸ್ಥ.

ಈಗ ಪೋಗೋ ಚಾನಲ್‌ನಲ್ಲಿ ಪ್ರಸಾರವಾಗುವ ಮತ್ತೊಂದು ಜನಪ್ರಿಯ ಕಾರ್ಯಕ್ರಮವನ್ನು ವಿಮರ್ಶಿಸೋಣ. ಅಲ್ಲಿ ಬರುವ ಕೆಲವು ಮನರಂಜನಾತ್ಮಕ ಆಟಗಳು. ವ್ಹಾವ್. ಈ ಆಟಗಳನ್ನು ನೋಡಿದರೇ ನಮ್ಮ ದೇವೇಗೌಡರ ಮುಖದಲ್ಲಿಯೂ ನಗು ಚಿಮ್ಮಬಹುದು. ಏಕೆಂದರೆ ಈ ಆಟಗಳ ಪರಿಕಲ್ಪನೆಯೇ ಆ ರೀತಿ ಇದೆ. ಈ ಆಟದಲ್ಲಿಯೂ ಸಹ ಎಲ್ಲಿಯೂ ಭಾಷೆಯು ನಮಗೆ ಅಡ್ಡಿಯಾಗಲು ಸಾಧ್ಯವೇ ಇಲ್ಲ.

ಇನ್ನು ಇದೇ ಫೊಗೋ ಚಾನೆಲ್‌ನಲ್ಲಿ ಬರುವ ಮತ್ತೊಂದು ಜನಪ್ರಿಯ ಕಾರ್ಯಕ್ರಮವೆಂದರೆ ಕೆಲವು ಆಟಿಕೆಗಳನ್ನ ಅಥವಾ ಕೆಲವು ಸಣ್ಣಪುಟ್ಟ ವ್ಯೆಜ್ಞಾನಿಕ ಸಾಧನಗಳನ್ನು ಅಥವಾ ಯಂತ್ರಗಳನ್ನು ತಯಾರಿಸುವುದನ್ನು ತೋರಿಸಿಕೊಡುತ್ತಾರೆ. ಈ ಕಾರ್ಯಕ್ರಮದಲ್ಲಿ ತಯಾರಿಕಾ ವಿಧಾನವನ್ನು ಆಂಗ್ಲ ಅಥವಾ ಹಿಂದಿ ಭಾಷೆಯಲ್ಲಿ ವಿವರಿಸುವುದು ಸತ್ಯ. ಹಾಗೆಂದ ಮಾತ್ರಕ್ಕೆ ಈ ಭಾಷೆಗಳೇ ಅಲ್ಲಿ ಜೀವಾಳವಲ್ಲ. ಏಕೆಂದರೆ ವಿಧಾನವನ್ನೂ ಸಹ ಟೀವೀ ಪರದೆಯ ಮೇಲೆ ಆತ ಸ್ಪಷ್ಟವಾಗಿ ವಿವರಿಸುತ್ತಾನಲ್ಲದೇ. ಮೂರ್ನಾಲ್ಕು ಬಾರಿ ರೀಪ್ಲೇ ಕೂಡ ಇರುತ್ತದೆ. ಎಲ್ಲಾ ಪರಿಕರಗಳನ್ನೂ ಆತ ಸ್ಪಷ್ಟವಾಗಿ ಪರದೆಯ ಮೇಲೆ ತೋರಿಸುತ್ತಾನೆ. ಉದಾಹರಣೆಗೆ ಬೆಂಕಿ ಪೆಟ್ಟಿಗೆಯನ್ನು ಬಳಸಿ ಏನನ್ನಾದರೂ ತಯಾರಿಸುತ್ತಿದ್ದರೆ ಆತ ಬೆಂಕಿಪೆಟ್ಟಿಗೆಯನ್ನೇ ತಂದು ಅದನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನೂ ಸಹ ಅಲ್ಲಿಯೇ ಮಾಡಿ ತೋರಿಸುತ್ತಿತ್ತಾನೆ.
ಹಾಗಾಗಿ ಈ ಕಾರ್ಯಕ್ರಮವನ್ನು ವೀಕ್ಷಿಸಲು ಸಹ ಭಾಷೆಯ ಪಾತ್ರ ತೀರ ಕಡಿಮೆ ಅಥವಾ ನಗಣ್ಯವೆಂದೆ ಹೇಳಬಹುದು.


ಇನ್ನು ಡಿಸ್ಕವರಿ ಚಾನೆಲ್‌ ಬಗ್ಗೆ ಒಂದೆರಡು ಮಾತು ಹೇಳಲೇ ಬೇಕು. ನಿಜ ಹೇಳಬೇಕೆಂದರೆ ಇದೊಂದು ಕೇವಲ ಮಕ್ಕಳಿಗಾಗಿ ನಿರ್ಮಿಸಿರುವ ಚಾನೆಲ್‌ ಅಲ್ಲ. ಇಲ್ಲಿ ಯುವಕರು ಹಾಗೂ ವೃದ್ದರು ನೋಡಿದರೂ ಮೈನವಿರೇಳುವಂತಿರುವಂತ್ತಹ ಕಾರ್ಯಕ್ರಮಗಳು ಪ್ರಸಾರವಾಗುತ್ತವೆ. ಅನೇಕ ಭಾರಿ ಹೇಗಾಗುತ್ತದೆ ಎಂದರೆ ಮಕ್ಕಳಿರುವ ಪೋಷಕರು ತಮ್ಮ ಮಕ್ಕಳನ್ನು ಮಲಗಿಸಿ ನಂತರ ರಾತ್ರಿ ಅವರು ಮತ್ತೆ ನಿದ್ದೆಯಿಂದ ಎಚ್ಚರವಾದಾರು ಎಂಬುವ ಭಯದಿಂದ ಟೀವೀ ವಾಲ್ಯೂಮ್‌ ಮ್ಯೂಟ್‌ ಮಾಡಿಕೊಂಡಾದರೂ ಸಹ ಈ ಕಾರ್ಯಕ್ರಮವನ್ನು ವೀಕ್ಷಿಸುತ್ತಾರೆ. ಅಂದರೆ ಇಲ್ಲಿ ಭಾಷೆ ಅಥವಾ ಕಾರ್ಯಕ್ರಮದ ಸಂಭಾಷಣೆಗಿಂತ ಅಲ್ಲಿ ಪ್ರಸಾರವಾಗುವ ದೃಶ್ಯಗಳೇ ನಮ್ಮನ್ನ ಸೆಳೆಯುತ್ತವೆ. ಹಾಗಾಗಿ ಕನ್ನಡಮಕ್ಕಳು ಭಾಷೆಯ ಜ್ಞಾನವಿಲ್ಲ ಎನ್ನುವ ಕೊರಗು ಇಲ್ಲಿಯೂ ಕಾಣಿಸುವುದಿಲ್ಲ.

ಇನ್ನು ಮುಂದಿನ ವಿಶ್ಲೇಷಣೆ ಚಲನಚಿತ್ರಗಳತ್ತ. ಅವತಾರ್‌ ಚಿತ್ರವನ್ನೇ ತೆಗೆದುಕೊಳ್ಳೋಣ. ಈ ಚಿತ್ರದ ಶೇ.60ರಷ್ಟು ಭಾಗ ಕೇವಲ ಕಂಪ್ಯೂಟರ್ ಗ್ರಾಫಿಕ್ಸ್. ಇನ್ನು ಇದರ ಕಥೆಯೋ ಇನ್ನೂ ಶತಮಾನದ ಆಚೆಗಿನ ಭವಿಷ್ಯಕ್ಕೆ ಸಂಭಂದಿಸಿದ್ದು. ಈ ಚಿತ್ರವನ್ನು ಅರ್ಥಮಾಡಿಕೊಳ್ಳಲು ಕೇವಲ ಭಾಷೆ ಬಂದರಷ್ಟೇ ಸಾಲದು. ಜೊತೆ ಜೊತೆಗೆ ವಿಜ್ಞಾನ ಹಾಗೂ ತಂತ್ರಜ್ಞಾದ ಬೆಳವಣಿಗೆಯಲ್ಲಿಯೂ ಸಹ ತಕ್ಕಮಟ್ಟಿನ ಜ್ಞಾನ ಅತೀ ಅವಶ್ಯಕ. ಈ ಚಿತ್ರದ ಚಿತ್ರಕಥೆಯನ್ನು ಸಿದ್ದಪಡಿಸಿಟ್ಟುಕೊಂಡು ಸುಮಾರು ಹತ್ತು ಹನ್ನೆರಡು ವರ್ಷ ನಿರ್ದೇಶಕರು ಕಾಯುತ್ತಾ ಕೂತಿದ್ದರಂತೆ. ಏಕೆಂದರೆ ಚಿತ್ರದ ನಿರ್ಮಾಣಕ್ಕೆ ಅವಶ್ಯಕವಾಗಿದ್ದ ತಂತ್ರಜ್ಞಾನವೇ ಇನ್ನೂ ಲಭ್ಯವಿರಲಿಲ್ಲವಂತೆ. 900 ಕೋಟಿ ವ್ಯಯಿಸಿ ಕನ್ನಡದಲ್ಲಿ ಇದೇ ಚಿತ್ರವನ್ನು ನಿರ್ಮಿಸುವುದು ವಾಸ್ತವದಲ್ಲಿ ಸಾದ್ಯವಿಲ್ಲದಿರಬಹುದು ಒಪ್ಪಿಕೊಳ್ಳೋಣ. ಹಾಗೆಂದ ಮಾತ್ರಕ್ಕೆ ಕನ್ನಡ ಚಿತ್ರರಂಗದಲ್ಲಿ ಈ ರೀತಿಯ ಪ್ರಯತ್ನಗಳು ನಡೆದೇ ಇಲ್ಲವೇ. ಇಲ್ಲ ಎಂದು ಹೇಳಿ, ದಯವಿಟ್ಟು ಕನ್ನಡದಲ್ಲಿರುವ ಕೆಲವರಾದರೂ ಕ್ರಿಯಾತ್ಮಕ ನಿರ್ದೇಶಕರನ್ನು ಅವಹೇಳನ ಮಾಡಬೇಡಿ.

2001ರಲ್ಲಿ ತೆರೆಕಂಡ ಉಪೇಂದ್ರ ಹಾಗೂ ಅನಂತನಾಗ್ ಅಭಿನಯದ ಕನ್ನಡದ ಹಾಲಿವುಡ್‌ ಚಿತ್ರ ನಿಮಗೆ ನೆನಪಿಲ್ಲವೇ? ಅದರಲ್ಲಿಯೂ ವಿಜ್ಞಾನ ಹಾಗೂ ತಂತ್ರಜ್ಞಾನ ಹೇಗೆಲ್ಲ ಅಭಿವೃದ್ದಿ ಪಡಿಸಬಹುದು ಎನ್ನುವ ಸಂದೇಶ ಇರಲಿಲ್ಲವೇ? ಆದರೂ ಆ ಚಿತ್ರ ಸೋತಿತು. ಕಾರಣ ಏನಿರ ಬಹುದು ಆಲೋಚಿಸಿದ್ದೀರ? ಅಷ್ಟೇ ಏಕೆ ಸದ್ಯಕ್ಕೆ ಭಾರೀ ಪ್ರಚಾರದಲ್ಲಿರುವ ಬಹುಕೋಟಿ ವೆಚ್ಚದ ನಮ್ಮ ರಜನಿಕಾಂತ್‌ ಅಭಿನಯದ ತಮಿಳಿನ ಎಂಡ್ರಿಯನ್ ಚಿತ್ರದ ಮೂಲ ಕಥೆಯೂ ಸಹ ಇದೇ ಹಾಲಿವುಡ್‌ ಚಿತ್ರದ್ದು ಎನ್ನುವ ಸುದ್ದಿ ಗುಲ್ಲೆದ್ದಿದೆ. ಹೌದಲ್ಲವೇ?

ಇದಕ್ಕೆ ಮತ್ತಷ್ಟು ಉದಾಹರಣೆ ನೀಡಬಹುದು, ರಮೇಶ್‌ ಅರವಿಂದ್‌ ಅಭಿನಯದ ಪ್ರತ್ಯರ್ಥ ಹಾಗೂ ಡೈನಮಿಕ್ ಹೀರೂ ದೇವರಾಜ್‌ ಅಭಿನಯದ ಮಾನವ 2020. ಚಿತ್ರಗಳನ್ನು ನೀವು ನೋಡಿಲ್ಲವೇ? ಈ ಚಿತ್ರಗಳೂ ಸಹ ವಿಜ್ಞಾನ ಹಾಗೂ ತಂತ್ರಜ್ಞಾನದ ಬೆಳವಣಿಗೆಯ ಬಗ್ಗೆ ಬೆಳಕು ಚೆಲ್ಲಿದ್ದವಲ್ಲವೇ? ಆದರೂ ಈ ಚಿತ್ರಗಳು ಯಶಸ್ಸು ಗಳಿಸಲಿಲ್ಲ. ಅಥವಾ ಜನರು ಈ ಚಿತ್ರಗಳತ್ತ ಒಲವು ತೋರಲಿಲ್ಲ.

ಇನ್ನು ಅಣ್ಣಾವ್ರು ಅಭಿನಯದ ಜೇಮ್ಸ್ ಬಾಂಡ್‌ ಶೈಲಿಯ ಆಪರೇಶನ್ ಡೈಮಂಡ್‌ ರಾಕೆಟ್, ಸಿ, ಐ, ಡಿ 999 ಈ ಸರಣಿಯ ಚಿತ್ರಗಳು ಅಂದಿನ ಕಾಲಕ್ಕೆ ನಮ್ಮ ನಿರ್ದೇಶಕರು ತೋರಿಸಿದ ಧೈರ್ಯವಲ್ಲವೇ? ಆದರೆ ಒಮ್ಮೆ ರಾಜ್‌ಕುಮಾರ್ ಅವರೇ ಒಂದು ತುಂಬಿದ ಸಭೆಯಲ್ಲಿ ತಾವು ಆ ಜೇಮ್ಸ್ ಭಾಂಡ್‌ ಶೈಲಿಯ ಚಿತ್ರಗಳನ್ನು ಒಪ್ಪಿಕೊಳ್ಳಬಾರದಿತ್ತು ಎಂದಿದ್ದರು.

ನಮ್ಮ ಚಿತ್ರಪ್ರೇಮಿಗಳು ಈ ಮಾದರಿಯ ಚಿತ್ರಗಳನ್ನು ಅದೇಕೋ ಆಲಂಗಿಸಿ ಬರಮಾಡಿಕೊಳ್ಳಲಿಲ್ಲ. ಇದು ಕೇವಲ ಕಾಲ್ಪನಿಕ ಎಂದೆನೆಸಿ ಸತ್ಯಾಂಶಕ್ಕೆ ದೂರದಾದದ್ದು ಎಂದೆನಿಸಿ ನಮ್ಮ ಜನಗಳು ಈ ಮಾದರಿಯ ಚಿತ್ರಗಳತ್ತ ಒಲವು ತೋರಿಸಲೇ ಇಲ್ಲವೆನಿಸುತ್ತದೆ.

ಇನ್ನು ನೀವು ಹೇಳುವ ಅವತಾರ್, ಜುರಾಸಿಕ್‌ ಪಾರ್ಕ್ ಈ ಚಿತ್ರಗಳನ್ನು ನಮ್ಮ ಜನ ಜೀರ್ಣಿಸಿಕೊಂಡಾರೆಯೇ? ಇಲ್ಲಿವರೆಗಿನ ಕನ್ನಡಚಿತ್ರರಂಗದ ಇತಿಹಾಸವನ್ನು ಒಮ್ಮೆ ಅವಲೋಕಿಸಿದರೆ  ಈ ಚಿತ್ರಗಳು ಕನ್ನಡದಲ್ಲೇ ಬಿಡುಗಡೆ ಆದರೂ ನಮ್ಮವರು ಪ್ರೋತ್ಸಾಹಿಸುತ್ತಾರೆ ಎನ್ನುವುದು ಕೇವಲ ಹಾಳೆಯ ಮೇಲಿನ ವಾದವಾಗುವುದು ಅಷ್ಟೇ.

ಈಗಲೂ ತಮಗೆ ಚಿತ್ರದ ಸಂದೇಶ ಮುಖ್ಯವಲ್ಲ ಅಲ್ಲಿ ಬರುವ ದೃಶ್ಯಾವಳಿಗಳು, ಪಾತ್ರಗಳು ಹಾಗೂ ನಿರ್ದೇಶಕನ ಕೈಚಳಕವಷ್ಟೇ ಮುಖ್ಯವೆನ್ನಿಸಿರಬಹುದು. ಹಾಗಿದ್ದರೆ ಆಂಗ್ಲಭಾಷೆಯಲ್ಲಿಯೇ ಆ ಚಿತ್ರಗಳನ್ನು ವೀಕ್ಷಿಸಲು ಬೇಡ ಎಂದು ನಿಮ್ಮನ್ನು ಯಾರೂ ಕಟ್ಟಿಹಾಕುತ್ತಿಲ್ಲ. ಅಲ್ಲವೇ?.

ಈಗಲೂ ಅಲ್ಲೊಮ್ಮೆ ಇಲ್ಲೊಮ್ಮೆ ಯಾವುದೋ ಕೆಲವು ಕಾರ್ಯಕ್ರಮಗಳಿಗೆ ಡಬ್ಬಿಂಗ್‌ ಬೇಕೇ ಬೇಕು ಎಂದು ನಿಮಗನ್ನಿಸಿದರೆ, ಖಂಡಿತ ನೀವೂ ಸಹ ಇನ್ನೊಂದು ಭಾಷೆಯನ್ನು ಕಲಿತು ಕೊಳ್ಳಲು ಸಂಪೂರ್ಣ ಸ್ವತಂತ್ರರು ಎಂಬುದನ್ನು  ಜ್ಞಾಪಿಸಲಿಚ್ಚಿಸುತ್ತೇನೆ.

ಕಡೆಯದಾಗಿ ತಿಳಿಸುವುದೇನೆಂದರೆ, ಕನ್ನಡಕ್ಕೆ ಡಬ್ಬಿಂಗ್‌ ಎಷ್ಟು ಅನಿವಾರ್ಯ ಎಂಬುದನ್ನು ಮನಗಾಣಲು ನಮ್ಮ ಕೆಲವು ಸ್ನೇಹಿತರು ನೀಡುತ್ತಿರುವ ಉದಾಹರಣೆಗಳು ನನಗೇಕೋ ಬಾಲಿಶ ಎನಿಸಿದವು. ಇದಕ್ಕಿಂತಲೂ ಗಂಭೀರವಾದ ಅನಿವಾರ್ಯತೆಗಳನ್ನು ಇವರು ಮನಗಂಡಿರಬಹುದು. ಆದರೆ ಉದಾಹರಣೆಗೆಂದಷ್ಟೇ ಈ ಮೇಲಿನ ಅಂಶಗಳನ್ನು ಸೂಚಿಸುತ್ತಿರಬಹುದು. ಯಾವುದಕ್ಕೂ ಅವರು ನೀಡುವ ಕಾರಣಗಳು ಮನಮುಟ್ಟುವಂತಿಲ್ಲ ಎನ್ನಿಸಿದ್ದರಿಂದ ಈ ವಿಶ್ಲೇಷಣೆಗೆ ಮುಂದಾಗಬೇಕಾಯಿತು. ಇದು ವಿಶ್ಲೇಷಣೆ ಅಷ್ಟೇ, ನನ್ನ ತೀರ್ಮಾನವಲ್ಲ.

16 ಕಾಮೆಂಟ್‌ಗಳು:

ವಿ.ರಾ.ಹೆ. ಹೇಳಿದರು...

ಕನ್ನಡದ ಮಕ್ಕಳು ಅಂದ್ರೆ ಬರೀ ಮಕ್ಕಳನ್ನೇ ತಗೋಬೇಡಿ. ಕನ್ನಡದವರು ಅಂತ ತಗೋಬೇಕು. ಇಂಗ್ಲೀಷ್ ಹಿಂದಿ ಅರ್ಥಾಗದೇ ಇದ್ದೋರಿಗೆ ಮಾತ್ರ ಕನ್ನಡ ಬೇಕು ಅಂತ ಅಲ್ಲ. ಅಥವಾ ಯಾವುದೋ ಕಾರ್ಯಕ್ರಮ ನೋಡಕ್ಕೆ ಆ ಭಾಷೆ ಕಲಿಯೋಕಾಗಲ್ಲ. ಎಲ್ಲರಿಗೂ ಅವರವರದ್ದೇ ಭಾಷೆಯಲ್ಲಿ ಸಾಧ್ಯವಾದಷ್ಟು ಎಲ್ಲಾ ಕಾರ್ಯಕ್ರಮಗಳನ್ನು ನೋಡುವ ಅವಕಾಶ ಕೊಡಬೇಕು ಅಂತ.

Me, Myself & I ಹೇಳಿದರು...

ವಿಕಾಸ್‌ರವರೇ, ಅದಕ್ಕೇ ಹೇಳಿದ್ದು ಇದು ನನ್ನ ತೀರ್ಮಾನವಲ್ಲ ಎಂದು. ಈಗಾಗಲೇ ಬೇರೇಕಡೆ ಚರ್ಚೆಯಲ್ಲಿ ಪ್ರಸ್ತಾಪವಾಗಿರುವ ಅಂಶಗಳಲ್ಲಿ ಗಟ್ಟಿತನವಿಲ್ಲ. ಅದನ್ನು ತಿಳಿಸಲಿಕ್ಕೆಂದೇ ಈ ಪ್ರಯತ್ನಮಾಡಿದ್ದು. ಪೋಗೋ ಅಥವಾ ಅವತಾರ್‌ನಂತಹ ಉದಾಹರಣೆಗಳು ಕೇವಲ ಉದಾಹರಣೆಗಳೇ ಆಗಿರಬಹುದು ಆದರೂ ಸಮಸ್ಯೆಯನ್ನು ಸೂಕ್ತವಾಗಿ ಬಿಂಬಿಸುತ್ತಿಲ್ಲ. ಪೋಗೋ ನೋಡಲು ನನಗೆ ಭಾಷೆ ಗೊತ್ತಿಲ್ಲ ಎನ್ನುವವರನ್ನು ಕಂಡರೆ ನನಗೆ ನಗು ಬಂದಿತ್ತು. ಹಹಹ..

b.suresha ಹೇಳಿದರು...

ನಿಮ್ಮ ಅನಿಸಿಕೆ ಮತ್ತು ವಿಶ್ಲೇಷಣೆ ಸರಿಯಾಗಿದೆ. ನನಗೆ ನೀವು ಪೋಗೋ ಮತ್ತು ಅವತಾರ್‌ ಚಿತ್ರಗಳನ್ನು ಕುರಿತು ಸೂಚಿಸಿದ ಸತ್ಯಗಳು ಮೆಚ್ಚುಗೆಯಾದವು.
ಡಬ್ಬಿಂಗ್ ಬರಲಿ ಎಂದು ಬೇಡುತ್ತಿರುವವರು ಉದ್ಯಮದಲ್ಲಿಯೇ ಇರುವ ಮತ್ತು ಅದಾಗಲೇ ಅನೇಕ ವಿದೇಶಿ ಟೆಲಿವಿಷನ್ ಕಾರ್ಯಕ್ರಮಗಳ ಹಕ್ಕನ್ನು ಕೋಟ್ಯಾಂತರ ಕೊಟ್ಟು ಪಡೆದಿರುವ ನಾಲ್ಕೈದು ಜನ. ಆ ಜನರಿಗೆ ಡಬ್ಬಿಂಗ್ ಮೇಲಿನ ನಿಷೇಧ ಹೋಗಬೇಕು ಎನ್ನುವುದು ಕೇವಲ ವ್ಯಾವಹಾರಿಕ ಕಾರಣಕ್ಕೆ. ಹಾಗಾಗಿ ಅದೇ ಜನ ಡಬ್ಬಿಂಗ್ ಪರವಾದ ವಾದವೊಂದನ್ನು ಸೃಷ್ಟಿಸುತ್ತಲೇ ಇದ್ದಾರೆ. ಈ ಡಬ್ಬಿಂಗ್ ಪರ ಮಾತುಗಳು ಆರಂಭವಾಗಿ ಇಲ್ಲಿಗೆ ಹತ್ತು ವರ್ಷಗಳಾಗಿವೆ. ಇಲ್ಲಿಯವರೆಗೆ ತಪ್ಪಿಸಿದ್ದೇವೆ. ಇನ್ನೆಷ್ಟು ವರ್ಷ ಇದು ಸಾಧ್ಯ ಎಂಬುದು ನನಗೂ ತಿಳಿದಿಲ್ಲ.
ನಿಮ್ಮಂತಹವರ ಬೆಂಬಲ ಇದ್ದರೆ ಈ ಹೋರಾಟ ಮುಂದುವರೆಯುತ್ತದೆ.
ನಿಮಗೆ ಒಳಿತಾಗಲಿ.

Me, Myself & I ಹೇಳಿದರು...

ಬೀಸುರವರೆ ಸ್ವಾಗತ, ಹೀಗೆಯೇ ಬರುತ್ತಿರಿ.

ಮೊದಮೊದಲು ಆ ಚರ್ಚೆಗಳಲ್ಲಿ ಬರುತ್ತಿದ್ದ ಉದಾಹರಣೆಗಳಿಂದ ಸ್ವಲ್ಪ ಕಕ್ಕಾಬಿಕ್ಕಿಯಾಗುತ್ತಿದ್ದೆ. ಆಮೇಲಾಮೇಲೆ ನೋಡಿ ನಕ್ಕು ಸುಮ್ಮನಾಗುತ್ತಿದ್ದೆ. ಆದರೂ ಈಗೀಗ ಈ ವಿಷಯದ ಚರ್ಚೆ ಸ್ವಲ್ಪ ಮುಂದಕ್ಕೆ ಬಂದಿದೆ ಎಂದು ತಿಳಿದ ಮೇಲೆ ಸುಮ್ಮನೆ ಕೂರಲಾಗಲಿಲ್ಲ. ಅನಿಸಿಕೆಯನ್ನು ತಿಳಿಸಲೇ ಬೇಕೆನಿಸಿತು.

ನೀವೂ ಇನ್ನಷ್ಟು ಸತ್ಯಾಂಶಗಳನ್ನು ನಮ್ಮ ಮುಂದೆ ಇಟ್ಟಿದ್ದೀರಿ. ಒಳ್ಳೆಯದಾಯಿತು. ಓದುಗರು ಈ ಅಂಶವನ್ನೂ ಪೂರ್ಣವಾಗಿ ಓದಿಕೊಳ್ಳಲಿ ಅಂದು ಆಶಿಸುತ್ತೇನೆ. ಧನ್ಯವಾದಗಳು.

samayakannada ಹೇಳಿದರು...

ಡಬ್ಬಿಂಗ್‌ ಕನ್ನಡಕ್ಕೆ ಈಗ ಬೇಕಿದೆ ಎಂಬುದು ನನ್ನ ಅಭಿಪ್ರಾಯ. ಪತ್ರಿಕೋದ್ಯಮದ ನನ್ನ ಅನುಭವದ ಹಿನ್ನೆಲೆಯಲ್ಲಿ ಹೇಳುವುದಾದರೆ, ಕನ್ನಡ ಪತ್ರಿಕೆಗಳಲ್ಲಿ ಅಥವಾ ಟಿವಿ ಮಾಧ್ಯಮಗಳಲ್ಲಿ ಕೆಲಸ ಬೇಕೆಂದರೆ, ಇಂಗ್ಲಿಷ್‌ನಿಂದ ಕನ್ನಡಕ್ಕೆ ಅನುವಾದ ಮಾಡುವುದು ಗೊತ್ತಿರಬೇಕು. ಇದು ಕಡ್ಡಾಯ. ಏಕೆಂದರೆ, ನಾವು ಹೆಕ್ಕುವ ಬಹುತೇಕ ವರದಿಗಳ ಮೂಲ ಇಂಗ್ಲಿಷ್‌ನಲ್ಲಿರುತ್ತದೆ. ಎಷ್ಟೋ ಜನ ಪ್ರತಿಭಾವಂತ ಬರಹಗಾರರು, ಪತ್ರಕರ್ತರು ಈ ಒಂದಂಶದಲ್ಲಿ ಪರಿಣಿತರಲ್ಲದ ಕಾರಣ ಅವರಿಗೆ ಕೆಲಸ ನಿರಾಕರಿಸಿದ್ದನ್ನೂ ನಾನು ನೋಡಿದ್ದೇನೆ. ಇಂಟರ್‌ನೆಟ್‌ ವಿಷಯಕ್ಕೆ ಬಂದರೂ ಇಂಗ್ಲಿಷ್‌ ಜ್ಞಾನ ಅನಿವಾರ್ಯ.
ಇವತ್ತು ಕನ್ನಡ ಚಿತ್ರರಂಗ ಕನ್ನಡವನ್ನು ಉಳಿಸಿ ಬೆಳೆಸುವ ಬಹುಮುಖ್ಯ ಅಂಗ ಎಂಬಂತೆ ಬಿಂಬಿಸಲಾಗುತ್ತಿದೆ. ಆದರೆ, ಕನ್ನಡ ಬೆಳೆಸಲು ಕನ್ನಡ ಚಿತ್ರರಂಗ ಮಾಡಿರುವ, ಮಾಡುತ್ತಿರುವ ಕೆಲಸಗಳನ್ನು ನೋಡಿದರೆ ಅದಕ್ಕೆ ಸಿಕ್ಕ ಪ್ರಚಾರವೇ ಹೆಚ್ಚು ಅನಿಸುತ್ತದೆ. ಅದು ಖಂಡಿತವಾಗಿ ಸಮಗ್ರ ಕನ್ನಡ ಅಭಿವೃದ್ಧಿಯ ಮುಖವಾಣಿಯಲ್ಲ.
ನನ್ನ ಪ್ರಕಾರ ಡಬ್ಬಿಂಗ್‌ ಬರೋದು ಒಳ್ಳೆಯದು. ಈ ಕುರಿತಂತೆ ಸಿನಿಮಾ ಪತ್ರಕರ್ತ ಸದಾಶಿವ ಶೆಣೈ ಬರೆದ ಈ ಲೇಖನ ಬೆಳಕು ಚೆಲ್ಲುತ್ತದೆ. ನೋಡಿ: http://www.ourkarnataka.com/kannada/movie/dubbing09.htm
ಈ ಕುರಿತು ನಂತರ ವಿವರವಾಗಿ ಬರೆಯುವೆ.

Me, Myself & I ಹೇಳಿದರು...

ಚಾಮರಾಜ್ ಸಾರ್, ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.

ಮತ್ತೊಮ್ಮೆ ಸ್ಪಷ್ಟಪಡಿಸುತ್ತಿದ್ದೇನೆ. ಈ ವಿಷಯದಲ್ಲಿ ವ್ಯಯಕ್ತಿಕವಾಗಿ ನಾನಿನ್ನೂ ತಟಸ್ತ. ನೀವು ಡಬ್ಬಿಂಗ್‌ ಬೆಂಬಲಿಸುತ್ತಿದ್ದೀರಿ.
ಆದರೆ ಡಬ್ಬಿಂಗ್‌ ಬೇಕೆಂದು ಆರ್ಭಟಿಸುತ್ತಿರುವ ಅನ್ಯರು ತಮ್ಮ ನಿಲುವಿಗೆ ಕಂನ್ವಿನ್ಸ್ ಆಗುವಂತಹ ಕಾರಣಗಳನ್ನು ನೀಡಿಲ್ಲವೆಂದಷ್ಟೇ ನನ್ನ ಅಭಿಪ್ರಾಯ.
ಅದನ್ನಷ್ಟೇ ಇಲ್ಲಿ ತಿಳಿಸಿರುವುದು. ಕನ್ನಡಕ್ಕೆ ಆಂಗ್ಲದ ಅನಿವಾರ್ಯತೆ ಇರುವುದು ಕೇವಲ ಟೀವೀ ಹಾಗೂ ಪತ್ರಿಕಾ ಮಾದ್ಯಮದಲ್ಲಷ್ಟೇ ಎನ್ನಲೂ ಸಾದ್ಯವಿಲ್ಲ. ಅಲ್ಲವೇ?

Me, Myself & I ಹೇಳಿದರು...

ಸವಡಿ, ಸಾರ್‍, ಸದಾಶಿವ ಶೆಣೈ ಇವರು ಅನೇಕ ಅಂಶಗಳನ್ನು ಪಟ್ಟಿಮಾಡಿಟ್ಟು, ನಂತರ ಚರ್‍ಚೆಗೆ ಆಹ್ವಾನಿಸಿದ್ದಾರೆ. ಇದರಲ್ಲಿ ಕೆಲವಾದರೂ ಗಂಭೀರ ಅಂಶಗಳಿವೆ ಎನ್ನುವುದು ಕಂಡುಬರುತ್ತಿದೆ. ಚರ್‍ಚೆ ಆಗಲಿ ಬಿಡಿ. ನೋಡೋಣ. :)

ವಿ.ರಾ.ಹೆ. ಹೇಳಿದರು...

ಕೆಲವರು ಪೋಗೋ, ಅವತಾರ್ ಉದಾಹರಣೆ ಕೊಟ್ಟರು ಅಂತ ಅದರ ಮೇಲೆಯೇ ವಾದ, ಪ್ರತಿವಾದ ಮಂಡಿಸಬೇಕಾಗಿಲ್ಲ. overall ಡಬ್ಬಿಂಗ್ ಬಗ್ಗೆ study ಮಾಡಬೇಕು. ಇಲ್ಲದಿದ್ದರೆ ದಾರಿ ತಪ್ಪುವುದು ಚಿಂತನೆ, ಚರ್ಚೆ . :)

Me, Myself & I ಹೇಳಿದರು...

ವಿಕಾಸ್‌ರವರೆ, ನಿಮ್ಮ ಮಾತು ನಿಜ. ಸದಾಶಿವ ಶೆಣೈ ಇವರು ಒಂದು ಓವರ್‌ಆಲ್‌ ಸ್ಟಡಿ ಮಾಡಿ. ಒಂದು ಲೇಖನವನ್ನು ಪ್ರಕಟಿಸಿದ್ದಾರೆ. ಅಂತರ್ಜಾಲದಲ್ಲಿಯೂ ಇದು ಲಭ್ಯವಿದೆ. ಮೇಲೆ ಸವಡಿ ಸಾರ್‌ ತೋರಿಸಿದ್ದಾರೆ ನೋಡಿ. ಭಝ್‌ನಲ್ಲಿಯೂ ಹಾಕಿದ್ದೇನೆ. ಚರ್ಚೆಗೆ ವೆಲ್‌ಕಮ್ಮು :)

ಸಾಗರದಾಚೆಯ ಇಂಚರ ಹೇಳಿದರು...

ಡಬ್ಬಿಂಗ್ ಗೆ ನನ್ನ ವಿರೋಧವಿದೆ

ನಿಮ್ಮ ಮಾತುಗಳು ನೂರಕ್ಕೆ ನೂರು ನಿಜ

Me, Myself & I ಹೇಳಿದರು...

ಗುರುಮೂರ್ತಿಯವರೇ

ಡಬ್ಬಿಂಗಿನ ಗಾಳಿ ಬೀಸಿದೆ. ಸೋ, ಹಾಗೇ ಅದರಲ್ಲಿ ಸ್ವಲ್ಪ ವಿಹರಿಸೋಣವೆಂದು ಈ ಪ್ರಯತ್ನ. ಪ್ರತಿಕ್ರಿಯೆಗೆ ಧನ್ಯವಾದಗಳು.

Harisha - ಹರೀಶ ಹೇಳಿದರು...

>> ಇಂದು ನಮ್ಮ ಕರ್ನಾಟಕದಲ್ಲಿ ಆಂಗ್ಲಭಾಷೆಯ ಬೆಳವಣಿಗೆ ಎಷ್ಟು ವೇಗದಲ್ಲಿದೆ ಎಂದರೆ ಮೇಲೆ ತಿಳಿಸಿರುವ ಪೋಗೋ, ಕಾರ್ಟೂನ್‌ ನೆಟ್‌ವರ್ಕ್‌ ಚಾನೆಲ್‌ಗಳು ಅಥವಾ ಅವತಾರ್, ಜುರಾಸಿಕ್‌ ಪಾರ್ಕ್‌ ನಂತಹ ಚಲನಚಿತ್ರಗಳು ನಮ್ಮ ಗ್ರಾಮೀಣ ಪ್ರದೇಶದ ಚಿಕ್ಕ ಚಿಕ್ಕ ಊರುಗಳಲ್ಲಿರುವ ಮಕ್ಕಳನ್ನು ತಲುಪಲು ಇನ್ನೂ ಕೆಲವು ವರ್‍ಷಗಳು ಬೇಕಾಗಬಹುದು

ನೀವು ಯಾವು ಕಾಲದಲ್ಲಿದ್ದೀರಿ ಎಂದು ತಿಳಿಯುತ್ತಿಲ್ಲ.. ಡೈರೆಕ್ಟ್ ಟು ಹೋಂ (ಸೆಟ್ ಟಾಪ್ ಬಾಕ್ಸ್) ಬಂದ ಮೇಲೆ ಯಾರು ಬೇಕಾದರೂ ಎಲ್ಲಿ ಬೇಕಾದರೂ ಯಾವ ಚಾನೆಲ್ಲುಗಳನ್ನು ಬೇಕಾದರೂ ನೋಡಬಹುದು. (ಹಣ ತೆರಬೇಕಷ್ಟೇ)

>> ಏಕೆಂದರೆ ಭಾಷೆಯ ವಿಷಯದಲ್ಲಿ ಈ ಎರಡೂ ಕಾರ್ಯಕ್ರಮಗಳು ತಟಸ್ಥ.

ನೀವು ಬರೀ ಮೂಕಿ ಕಾರ್ಟೂನುಗಳನ್ನೇ ಏಕೆ ಉದಾಹರಣೆಗೆ ತೆಗೆದುಕೊಳ್ಳುತ್ತೀರಿ? ಅಂಕಲ್ ಸ್ಕ್ರೂಜ್, ಜಂಗಲ್ ಬುಕ್ ಮುಂತಾದವುಗಳ ಬಗ್ಗೆ ಏಕೆ ನಿರ್ಲಕ್ಷ್ಯ? (ಜಂಗಲ್ ಬುಕ್ ಅನ್ನು ಈಟಿವಿ ಕನ್ನಡದಲ್ಲಿ ಬಿತ್ತರಿಸಿದಂತೆ ನೆನಪು)

>> ಮಕ್ಕಳನ್ನು ಮಲಗಿಸಿ ನಂತರ ರಾತ್ರಿ ಅವರು ಮತ್ತೆ ನಿದ್ದೆಯಿಂದ ಎಚ್ಚರವಾದಾರು ಎಂಬುವ ಭಯದಿಂದ ಟೀವೀ ವಾಲ್ಯೂಮ್‌ ಮ್ಯೂಟ್‌ ಮಾಡಿಕೊಂಡಾದರೂ ಸಹ ಈ ಕಾರ್ಯಕ್ರಮವನ್ನು ವೀಕ್ಷಿಸುತ್ತಾರೆ.

ಇದೊಂದು ಬಾಲಿಶ ಕಾರಣ. ಸುಮ್ಮನೆ ಚಿತ್ರ ನೋಡುವುದರಿಂದ ಮನರಂಜನೆ ಸಿಗಬಹುದೇ ಹೊರತು, ಯಾವ ತಿಳುವಳಿಕೆಯೂ ಮೂಡಲಾರದು. ನಿಮ್ಮ ವಾದಕ್ಕೆ ಪ್ರತಿವಾದ ಮಾಡಲೇ ಬೇಕು ಎಂದಾದರೆ, ಟಿವಿಗಳಿಗೆ ಹೆಡ್ ಫೋನ್ ಹಾಕಿ ಕೇಳಬಹುದಲ್ಲ?

>>‌ ಹಾಗೆಂದ ಮಾತ್ರಕ್ಕೆ ಕನ್ನಡ ಚಿತ್ರರಂಗದಲ್ಲಿ ಈ ರೀತಿಯ ಪ್ರಯತ್ನಗಳು ನಡೆದೇ ಇಲ್ಲವೇ.

ಪ್ರಯತ್ನ್ ನಡೆದಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಅಂತಹ ಚಲನಚಿತ್ರವಂತೂ ಬಂದಿಲ್ಲ.

>>‌ ನಮ್ಮ ಚಿತ್ರಪ್ರೇಮಿಗಳು ಈ ಮಾದರಿಯ ಚಿತ್ರಗಳನ್ನು ಅದೇಕೋ ಆಲಂಗಿಸಿ ಬರಮಾಡಿಕೊಳ್ಳಲಿಲ್ಲ. ಇದು ಕೇವಲ ಕಾಲ್ಪನಿಕ ಎಂದೆನೆಸಿ ಸತ್ಯಾಂಶಕ್ಕೆ ದೂರದಾದದ್ದು ಎಂದೆನಿಸಿ ನಮ್ಮ ಜನಗಳು ಈ ಮಾದರಿಯ ಚಿತ್ರಗಳತ್ತ ಒಲವು ತೋರಿಸಲೇ ಇಲ್ಲವೆನಿಸುತ್ತದೆ.

ಕಾಲ್ಪನಿಕವನ್ನು ಕಾಲ್ಪನಿಕವೆಂಬಂತೆ ಬಿಂಬಿಸಿದರೆ ಯಾರೂ ಮೆಚ್ಚುವುದಿಲ್ಲ. ಕಾಲ್ಪನಿಕವನ್ನು ನೈಜವೆಂಬಂತೆ ಚಿತ್ರಿಸಿದಾಗ ಮಾತ್ರ ಅದಕ್ಕೆ ಬೆಲೆ ಸಿಗುವುದು. ಅವತಾರ್ ಜನಕ್ಕೆ ಇಷ್ಟವಾಗಿದ್ದು ಕಥೆಗಿಂತ ಹೆಚ್ಚು ಅದರ ತ್ರೀಡಿ ಎಫೆಕ್ಟಿನಿಂದಾಗಿ. ಹ್ಯಾರಿ ಪಾಟರ್ ಕಥಾ ಸರಣಿ ಇಷ್ಟವಾಗುವುದು ಅದು ೧೦೦% ಕಾಲ್ಪನಿಕ ಎಂದು ಗೊತ್ತಿದ್ದರೂ ನಮ್ಮನ್ನೂ ಆ ಮಾಯಾಲೋಕಕ್ಕೆ ಕರೆದೊಯ್ಯುವಂತೆ ಮಾಡುವ ಶೈಲಿಗೆ.

>>‌ ಈಗಲೂ ತಮಗೆ ಚಿತ್ರದ ಸಂದೇಶ ಮುಖ್ಯವಲ್ಲ ಅಲ್ಲಿ ಬರುವ ದೃಶ್ಯಾವಳಿಗಳು, ಪಾತ್ರಗಳು ಹಾಗೂ ನಿರ್ದೇಶಕನ ಕೈಚಳಕವಷ್ಟೇ ಮುಖ್ಯವೆನ್ನಿಸಿರಬಹುದು. ಹಾಗಿದ್ದರೆ ಆಂಗ್ಲಭಾಷೆಯಲ್ಲಿಯೇ ಆ ಚಿತ್ರಗಳನ್ನು ವೀಕ್ಷಿಸಲು ಬೇಡ ಎಂದು ನಿಮ್ಮನ್ನು ಯಾರೂ ಕಟ್ಟಿಹಾಕುತ್ತಿಲ್ಲ.

ನನಗೆ ಆಂಗ್ಲ ಬರದಿದ್ದರೆ? ನಾನು ಚಿತ್ರನೋಡಿ ಆನಂದಿಸಬೇಕೆ? ಅದೇ ಕನ್ನಡಕ್ಕೆ ಡಬ್ ಆದರೆ ಅರ್ಥಮಾಡಿಕೊಂಡು ಆನಂದಿಸಬಹುದಲ್ಲವೇ? ಅರ್ಥವಾಗದ ಇಟಾಲಿಯನ್, ಜರ್ಮನ್, ಫ್ರೆಂಚ್ ಚಿತ್ರಗಳನ್ನು ಸಬ್-ಟೈಟಲ್ ಹಾಕಿಕೊಂಡು ನೋಡುತ್ತೇವೆ. ಏಕೆ? ಬರೀ ಚಿತ್ರ ನೋಡಿ ಖುಷಿ ಪಡುವಂತಿದ್ದರೆ ಸಬ್-ಟೈಟಲ್ ಯಾಕೆ ಬೇಕಿತ್ತು?

>>‌ ಈಗಲೂ ಅಲ್ಲೊಮ್ಮೆ ಇಲ್ಲೊಮ್ಮೆ ಯಾವುದೋ ಕೆಲವು ಕಾರ್ಯಕ್ರಮಗಳಿಗೆ ಡಬ್ಬಿಂಗ್‌ ಬೇಕೇ ಬೇಕು ಎಂದು ನಿಮಗನ್ನಿಸಿದರೆ, ಖಂಡಿತ ನೀವೂ ಸಹ ಇನ್ನೊಂದು ಭಾಷೆಯನ್ನು ಕಲಿತು ಕೊಳ್ಳಲು ಸಂಪೂರ್ಣ ಸ್ವತಂತ್ರರು ಎಂಬುದನ್ನು ಜ್ಞಾಪಿಸಲಿಚ್ಚಿಸುತ್ತೇನೆ.

ಇದು impractical. ಜಗತ್ತಿನ ಭಾಷೆಗಳನ್ನೆಲ್ಲ ಕಲಿತು ಆ ಭಾಷೆಯ ಚಿತ್ರಗಳನ್ನು ನೋಡುವಷ್ಟು ಜಾಣರೇ ನಾವು? ನಿಮಗೀಗ ತೆಲುಗು, ತಮಿಳು, ಹಿಂದಿ ಅರ್ಥವಾಗುತ್ತಿರಬಹುದು; ಆ ಚಿತ್ರಗಳನ್ನು ಕಲಿತು ಅರ್ಥಮಾಡಿಕೊಳ್ಳುತ್ತೇನೆ ಎನ್ನುತ್ತೀರಿ. ಅದೇ ಚಲನಚಿತ್ರ ಮಣಿಪುರಿಯೋ, ಭೋಜಪುರಿಯೋ ಆಗಿದ್ದಲ್ಲಿ ಆ ಭಾಷೆಗಳನ್ನು ಕಲಿತು ಚಿತ್ರ ನೋಡುವುದು ಒಳ್ಳೆಯದೋ ಅಥವಾ ಆ ಚಲನಚಿತ್ರಗಳ ಕನ್ನಡ ಆವೃತ್ತಿಯಲ್ಲಿ ನೋಡುವುದು ಒಳ್ಳೆಯದೋ?

Me, Myself & I ಹೇಳಿದರು...

ಹರೀಶರವರೇ,

ಡಿಟಿಎಚ್, ಹೆಡ್‌ಪೋನ್‌, ಸಬ್‌ಟೈಟಲ್‌ :) ಏನ್ವಾಮೀ?
ಎಲ್ಲಾ ವಿಷಯದಲ್ಲಿ ಒಂದೇ ಕಾಮೆಂಟಿನಲ್ಲಿ ನೂಕಿ ತಮಾಷೆ ನೋಡ್ತಿದಿರಾ?

ಜಗತ್ತಿನ ಎಲ್ಲಾ ಭಾಷೆಯ ಎಲ್ಲಾ ಕಾರ್ಯಕ್ರಮಗಳೂ ಕನ್ನಡಕ್ಕೆ ಡಬ್ಬಿಂಗ್ ಬರಲಿ ಎನ್ನುವಂತೆ ನಿಮ್ಮ ಆಶಯವಿರುವುದು ಸ್ಪಷ್ಟವಾಗಿದೆ. ಹಾಗಾಗಿ ನಿಮ್ಮ ವಿಚಾರಗಳನ್ನು ಪ್ರತ್ಯೇಕವಾಗಿಯೇ ವಿಶ್ಲೇಷಿಸಿದರೆ ಹೆಚ್ಚು ಸೂಕ್ತವೆಂಬುದು ನನ್ನ ಅಭಿಪ್ರಾಯ.

ಅಲ್ಲದೇ, ಅಂತರ್ಜಾಲದಲ್ಲಿ ಈ ಚರ್ಚೆಯ ಉಳಿದ ಅಂಶಗಳನ್ನು ನೀವುನ್ನೂ ಓದಿರುವವರಂತೆ ಕಂಡುಬರುತ್ತಿಲ್ಲ.

ಪ್ರತಿಕ್ರಿಯೆಗೆ ಧನ್ಯವಾದಗಳು.

Harisha - ಹರೀಶ ಹೇಳಿದರು...

ಲೋದ್ಯಾಶಿಯವರೇ,

>‌ ಡಿಟಿಎಚ್, ಹೆಡ್‌ಪೋನ್‌ ಇವೆಲ್ಲಾ ಹಳ್ಳಿಜನಗಳನ್ನು ಮನಸ್ಸಿನಲ್ಲಿಟ್ಟು ಕೊಂಡು ನೀವು ಹೇಳಿದಂತಿಲ್ಲ. <

ಎಂದು ಮೊದಲು ಬರೆದು, ಅದನ್ನು ಅಳಿಸಿಹಾಕಿ

> ಡಿಟಿಎಚ್, ಹೆಡ್‌ಪೋನ್‌, ಸಬ್‌ಟೈಟಲ್‌ :) ಏನ್ವಾಮೀ?
ಎಲ್ಲಾ ವಿಷಯದಲ್ಲಿ ಒಂದೇ ಕಾಮೆಂಟಿನಲ್ಲಿ ನೂಕಿ ತಮಾಷೆ ನೋಡ್ತಿದಿರಾ? <

ಎಂದು ಬರೆದು ತಮಾಷೆ ಮಾಡ್ತಾ ಇರೋದು ಯಾರು?

Rakesh Shettty ಹೇಳಿದರು...

ಲೋಹಿತ್,
ನಾನು ಡಬ್ಬಿಂಗ್ ಪರ ನನ್ನ ಅನಿಸಿಕೆ ಇಲ್ಲಿದೆ ನೋಡಿ

ಡಬ್ಬಿಂಗ್ ಬೇಕೋ ಬೇಡವೋ ಅಂತ ನಿರ್ಧರಿಸಬೇಕಾದವನು “ಕನ್ನಡ ಪ್ರೇಕ್ಷಕನೋ?” ಇಲ್ಲ “ಕನ್ನಡ ಚಿತ್ರ ರಂಗವೋ?”

http://janaganamanadina.wordpress.com/2010/09/01/

Me, Myself & I ಹೇಳಿದರು...

ರಾಕೇಶ್,

ನಮಗೂ ಸ್ವಾತಂತ್ರವಿದೆ ಎಂದು ನಂಬಿದ್ದೇನೆ.

ಆ ನಂಬಿಕೆಯಲ್ಲಿಯೇ ಇದೇ ವಿಷಯವಾಗಿ ಈಗಾಗಲೇ ಉದ್ದುದ್ದದ ಎರಡೆರಡು ಪೋಸ್ಟ್‌ಗಳನ್ನು ಇದೇ ಬ್ಲಾಗ್‌ನಲ್ಲಿ ಪ್ರಕಟಿಸಿದ್ದಾಗಿದೆ. ಹೇಳಲು ಇನ್ನೇನಾದರೂ ಹೊಸ ಅಂಶ ಸಿಕ್ಕರೆ ಮತ್ತೊಂದು ಪೋಸ್ಟ್ ಹಾಕುವ ಪ್ರಯತ್ನ ಮಾಡುತ್ತೇನೆ.

ಧನ್ಯವಾದಗಳು.

ನಿಮ್ಮ ಬ್ಲಾಗನ್ನೂ ವೀಕ್ಷಿಸಿದೆ.

ಹೀಗೆಯೇ ಬಂದು ಹೋಗುತ್ತಿರಿ.

blogspot add widget