ತಾತ, ನನ್ನ ತಾಯಿಯ ತಂದೆ, ನಮ್ಮ ಮನೆಗೆ ಬಂದಾಗ ನಮ್ಮಿಬ್ಬರ ನಡುವೆ ನಡೆದ ಒಂದು ಚಿಕ್ಕ ಮಾತುಕತೆ.
ತಾತ: ಇಲ್ನೋಡಪ್ಪ (ಜೇಬಲ್ಲಿದ್ದ ಕೆಲವು ಚೀಟಿ ಇತ್ಯಾದಿಗಳನ್ನು ಹೊರಗೆ ತೆಗೆಯುತ್ತಾ) ನೀನು ಕಳೆದ್ಸಾರಿ ವಿದೇಶಕ್ಕೆ ಹೋದಾಗಲೂ ನಿನ್ನ ಪೋಟೋ ಪೇಪರ್ ನಲ್ಲಿ ಬಂದಿತ್ತು.
ಈ ಸರ್ತಿನು ಬಂದಿದೆ.
ನಾನು : ತಾತ ಅದು ಎರಡು ವರ್ಷದ ಹಿಂದಿನ ಪೇಪರ್? ಇನ್ನು ಇದೆಯಾ ನಿಮ್ಮತ್ರ?
ತಾತ: ಹ್ಹೂನಪ್ಪಾ (ನಗುತ್ತಾ), ಮನೆ ಮುಂದೆ ಕುಂತಿರ್ತೀನಿಲ್ಲಾ ಸಾಯಂಕಾಲ ಅವಾಗ ದಿನಾ ಯಾರಾದ್ರೂ ಬಂದು ಕೂತು ಮಾತಾಡ್ಸಿ ಹೋಗ್ತಾರೆ.
ಆಗ ಇದನ್ನ ತೋರಿಸಿ ನಿನ್ನ ಬಗ್ಗೆ ಹೇಳ್ತಾ ಇರ್ತೀನಿ.
ನಾನು: ಹೌದಾ ತಾತ.
(ಅಷ್ಟೊತ್ತಿಗೆ ನಾನು ನನ್ನ ಲ್ಯಾಪ್ಟಾಪ್ ದಲ್ಲಿದ್ದ ಅಜ್ಜಿಯ ಚಿತ್ರವನ್ನ ತೋರಿಸಿದೆ, ಈ ಚಿತ್ರ ನನ್ನ ಮದುವೇ ನಿಶ್ಚಿತಾರ್ದದ ದಿವಸ ತೆಗೆದದ್ದು.
ಸುಮಾರು ಒಂದೂವರೆ ವರ್ಷದ ಹಳೆಯದು)
ತಾತ: ಅಯ್ಯೋ ನಿಮ್ಮವ್ವಾ
(ನಾವು ನಮ್ಮ ಅಜ್ಜಿಯನ್ನ ಅವ್ವಾ ಅಂತಿದ್ವಿ. ಅವ್ವಾ ಈಗ್ಗೆ ಐದು ತಿಂಗಳ ಹಿಂದೆ ಮೃತರಾದರು. ಆಗ ನಾನು ವಿದೇಶದಲ್ಲಿದ್ದೆ)
ಅಯ್ಯೋ, ಹೇಗೆ ನಿಂತಾಲ್ನೋಡಪ್ಪಾ ನಿಮ್ಮವ್ವ.? ತಾಯೀ ನೋಡ್ಬಾರವ್ವಾ ಇಲ್ಲಿ
(ತಾತ ಅಮ್ಮನನ್ನ ಕರೆದರು, ಎಲ್ಲಾ ಹೆಣ್ಣು ಮಕ್ಕಳನ್ನೂ "ತಾಯೀ" ಅಂತಾನೆ ಕರಿಯೋದು ತಾತ).
ನಾನು: ಹ್ಞೂ ತಾತಾ. ಎಲ್ಲರಿಗೂ ಒಂದು ದಿವಸ ಅಂತ ಇರುತ್ತೆ. ಆ ದಿನ ಬಂದಾಗ ಹೊರಡಲೇ ಬೇಕು.
ತಾತ: ಅಲ್ಲಪ್ಪಾ ಈ ಜೀವನ ಆದ್ಮೇಲೆ ನಾವೆಲ್ಲಿಗೆ ಹೋಗ್ತೀವಿ? ನಾವು ದಿನ ಬೆಳಗ್ಗೆ ಏಳ್ತೀವಿ...ಊಟ ಮಾಡ್ತೀವಿ...ನಿದ್ದೆ ಮಾಡ್ತೀವಿ...ಇದೆಲ್ಲಾಕ್ಕೂ ಏನಪ್ಪಾ ಕಾರಣ?
(ಏನನ್ನೂ ಉತ್ತರಿಸದೆ. ನನ್ನ mp3 player ಹೊರಗೆ ತೆಗೆದು "ಮಂಕುತ್ತಿಮ್ಮನ ಕಗ್ಗ" ವನ್ನ ಹುಡುಕಿದೆ.ಅದರಲ್ಲಿ ಕೆಲವು ಸ್ಲೋಕಗಳ ತಾತ್ಪರ್ಯವನ್ನೇ ನನ್ನ ತಾತನಿಗೆ ಕೆಲವು ನಿಮಿಷ ಕೇಳಿಸಿದೆ.
ಕೆಲವು ನಿಮಿಷ ಕೇಳಿದ ನಂತರ...
ತಾತ ತಾವು ಓದಿದ್ದ ಭಗವದ್ಗೀತೆಯ ತಾತ್ಪರ್ಯವನ್ನ ಹೇಳಲಿಕ್ಕೆ ಆರಂಬಿಸಿದರು...
ಕೆಲವು ನಿಮಿಷ ಕೇಳಿದ ನಂತರ...)
ನಾನು: ತಾತಾ ಇದನ್ನ ಎಲ್ಲಿ ಕಲಿತೆ? (ನನ್ನ ತಾತ ತುಂಬಾ ಹೆಚ್ಚೇನೂ ಓದಿಲ್ಲ.ಈಗ ಅವರಿಗೆ 85 ವರ್ಷ)
ತಾತ: ನಮಿಗೆ ಸ್ಕೂಲ್ನಾಗೆ ಹೇಳ್ಕೊಟ್ಟಿದ್ರು.
ನಾನು: ತಾತ ನೀನು ಎಷ್ಟು ಓದಿದ್ದೀಯ?
ತಾತ : ಹೇ (ನಗುತ್ತಾ) ಒಂದೋ ಎರಡೋ ಅಷ್ಟೇ ಅಂದರು.
(ನಕ್ಕು. ಸ್ವಲ್ಪ ಹೊತ್ತು ನನ್ನ ತಾತನ ಅಣ್ಣ-ಅಪ್ಪ ಇವರ ಬಗ್ಗೆ ವಿಚಾರಿಸದೆ)
ತಾತ: ಇಲ್ಲ ಅಪ್ಪನನ್ನ ಸರಿಯಾಗಿ ನೋಡೇ ಇಲ್ಲ . ನಾನು ತೀರ ಚಿಕ್ಕವನಿದ್ದಾಗ (4 ತಿಂಗಳು) ತೀರಿ ಹೋದರಂತೆ.
ನಾನು : ಮತ್ತೆ ನಿಮಗೆ ಸಾಕಿದ್ದು ಯಾರು?
ತಾತ: ನಮ್ಮ ದೊಡ್ಡಣ್ಣ. ದೊಡ್ಡಣ್ಣ ಅಷ್ಟೊತ್ತಿಗಾಗಲೇ ಬೇಸಾಯ ಹೊಡಿತಿದ್ದಾ. ನಾನು ನಮ್ಮಪ್ಪನಿಗೆ ಕೊನೆ ಮಗ.
(ತಾತನ ಅಣ್ಣ ಈಗ ಯಾರೂ ಇಲ್ಲ. ತಾತ ಒಬ್ಬರೇ ಇರೋದು)
ನಾನು : ನಿಮ್ಮ ಅಪ್ಪ ಏಕೆ ತೀರಿ ಕೊಂಡರು?
ತಾತ: ಅಯ್ಯೋ ಅವಗೆಲ್ಲಾ ಇನ್ಗಿದ್ದಿಲ್ಲಾ... ವರ್ಷಕ್ಕೋ ಎರಡು ವರ್ಷಕ್ಕೋ ಒಂದ್ಸಾರ್ತಿ ರೋಗ ಬಂದು ಬಿಡ್ತಿದ್ವು. ಆಗ ಊರಲ್ಲಿ ಯಾರು ಇರ್ತಿರ್ಲಿಲ್ಲ.
ಊರು ಬಿಟ್ಟು ತಿಂಗಳೋ ಎರಡು ತಿಂಗಳೋ ಎಲ್ಲೋ ದೂರ ಹೋಗಿ ಇರ್ಬೇಗಿತ್ತು. ಆಗ ರೋಗ ತಗಲಿ ನಮ್ಮಪ್ಪ ಹೋಗ್ಬಿಟ್ರಂತೆ.
ನಾನು : ಅಲ್ಲ ತಾತ. ಎರಡು ವರ್ಷಕ್ಕೆ ಒಂದ್ಸಾರಿ ಅಂದ್ರೂನು ಎಷ್ಟು ಕಷ್ಟ ಅಲ್ವ ಊರ್ಬಿಟ್ಟೋದು ಅಂದ್ರೆ? ಅದು ಸಂಸಾರ ಸಮೇತ?
ತಾತ: ಅಯ್ಯೋ ಇಲ್ಲ ಅಂದ್ರೆ ಬದುಕ್ತಿರ್ಲಿಲ್ಲಾಪ್ಪ.
ನಾನು : ಆಮೇಲೆ ಏನಾಯ್ತು?
ತಾತ: ನಾನು ನಿಮ್ಮವ್ವನ್ನ (ಅಜ್ಜಿಗೆ ಅವ್ವ ಅಂತಿದ್ವಿ ನಾವು) ಮದ್ವೆ ಆದೆ. ನಮ್ಮೊರಿಂದ ಇಲ್ಲಿಗೆ
(ನನ್ನ ಅವ್ವನ ತವರು ನನ್ನ ಅಜ್ಜ - ತಂದೆಯ ತಂದೆ - ಊರಿಗೆ ತುಂಬಾ ಸಮೀಪ)
ನಿಮ್ಮವ್ವನ್ನ ನೋಡೋಕ್ಕೆ ನಾನು ಒಂದೆರಡು ಸಲ ಕುದುರೆಯಲ್ಲಿ ಬಂದಿದ್ದೆ.
ನಾನು : (ನಗುತ್ತ) ಹೌದಾ ತಾತ.
ತಾತ : ಹ್ಞೂ.. ಆಮೇಲಾಮೇಲೆ ಎಷ್ಟೋ ಬಾರಿ ನಡೆದು ಕೊಂಡೆ ಬರುತ್ತಿದ್ದೆ. (ಸುಮಾರು 30 ಕಿ ಮೀ)
ನಾನು: ಅಲ್ಲ ತಾತ ಅಷ್ಟು ದೂರ ಹೇಗೆ ನಡಿತಿದ್ರಿ?
ತಾತ: ಬೆಳಗ್ಗೆ ಎದ್ದು , ರೊಟ್ಟಿ ಕಟ್ಟಿಸ್ಕಂದು ಹೊರಟರೆ, ಕಾಡು ದಾರಿಯಲ್ಲಿ ಬಂದರೆ ಮದ್ಯಾಹ್ನ ಇಲ್ಲಿರ್ತಿದ್ವಿ. ನಡುವೆ ಒಂದು ಬಾರಿ ಎಲ್ಲಾದರು ನೀರು ಇರೋ ಕಡೆ ಆ ರೊಟ್ಟಿ ತಿಂದು ಬರ್ತಿದ್ದೆ.
(ಸ್ವಲ್ಪ ಹೊತ್ತು ಯೋಚಿಸಿ)
ನಾನು : ತಾತ, ನಿಮಗೂ-ನಮಿಗು ಎಷ್ಟು ವ್ಯತ್ಯಾಸ ಅಲ್ವ?
ತಾತ : (ನಕ್ಕು) ಆ ರೀತಿ ನಡದು-ನಡದು ನೋಡಪ್ಪ ಈ ವಯಸ್ಸಲ್ಲಿ ನನಗೆ ಮೊಣಕಾಲಿನ ನೋವು ಬರುತ್ತೆ.
ನಾನು: ನೀವು ಬಾರಿ ಗಟ್ಟಿ ತಾತ. (ಲ್ಯಾಪ್ಟಾಪ್ನಲ್ಲಿ ಚಿತ್ರಗಳನ್ನು ತೋರಿಸ್ತಾ ವಿದೇಶದ ಕೆಲವು ಚಿತ್ರಗಳನ್ನು ತೋರಿಸಿದೆ)
ತಾತ: ಅಲ್ಲಪ್ಪಾ. ವಿಮಾನದಗೆ ಹಾರೋವಾಗ ಮೇಲೆ ಮೋಡ ಅಡ್ಡ ಬರುತ್ತೇನಪ್ಪ?
ನಾನು: ಹ್ಞೂ.. ಬರುತ್ತೆ ತಾತ. ಮೋಡಗಳ ಮದ್ದೇನೆ ಹಾರೋಗುತ್ತೆ ವಿಮಾನ.
ತಾತ: ಏನೋಪ್ಪ ಸುಖವಾಗಿ ಹೋಗಿ ಬಂದೆಲ್ಲ ಅಷ್ಟೇ ಸಾಕು. ನೀನು ಹುಟ್ಟಿದಾಗ ಜೋತಿಷಿ ಹೇಳಿದ್ರು ನೀನು ತುಂಬಾ ಹೆಸರು ಮಾಡ್ತೀಯ ಅಂತ ಮಗ ಆಗ್ತೀಯ ಅಂತ, ಅವರು ಹೇಳಿದ್ದು ನಿಜ ಆಯಿತು ನೋಡು.
ಅಮ್ಮ : ಊಟಕ್ಕೆ ಆಗಿದೆ. ಅಲ್ಲಿಗೆ ಕೊಡ್ಲ ಅಥವಾ ಇಲ್ಲಿಗೆ ಬರ್ತೀರಾ?
ನಾನು: ಕೈ ತೊಳ್ಕೊಬೇಕು ನಾವು. ಬಾ ತಾತ ಊಟ ಮಾಡೋಣ.
(ನಾನು ಕೈ ತೊಳ್ದು. ನನ್ನ ಜಾಗಕ್ಕೆ ಬಂದೆ. ತಾತ ಕೈ-ಕಾಲು ತೊಳ್ದು ಹೊರಗೆ ಬಂದು)
ತಾತ: ತಾಯೀ ವಿಭೂತಿ ಕೊಡವ್ವ. ನೀನು ವಿಭೂತಿ ಅಚ್ಗಂದೆನಪ್ಪಾ ?
ನಾನು: ಇಲ್ಲ ತಾತ.
ತಾತ: ವಿಭೂತಿ ಅಚ್ಕಂದಾಗೆ ಊಟ ಮಾಡ್ತೀಯ?
ನಾನು: ಹೇ ನನಿಗು ಬೇಗ ವಿಭೂತ ಕೊಡ್ರಿ. ತಾತ ಬೈತಾರೆ.
(ವಿಭೂತಿ ಅಚ್ಗೊಂದು.. ನಾನು ಲ್ಯಾಪ್ಟಾಪ್ ಮುಂದೆ ಕೂತ್ಗಂಡು ಊಟ ಮಾಡ್ದೆ. ತಾತ ಟೇಬಲ್ ಹತ್ರ ಕೂತು ಊಟ ಮಾಡಿದ್ರು. ಇಬ್ರದು ಊಟ ಆಯ್ತು)
ತಾತ: ತಾಯಿ ಟಿ ವಿ ಹಾಕ್ಬಾರವ್ವಾ... ಸುವರ್ಣ ಚಾನೆಲ್ "ಶಿವಲೀಲಾಮೃತ" ದಾರಾವಾಹಿಯನ್ನ ತಪ್ಪದೆ ನೋಡ್ತೀನಿ.
(ತಾತ ಟಿ ವಿ ನೋಡೋದ್ರಲ್ಲಿ ಮಗ್ನರಾದರು, ನಾನು ಒಂದು ರೌಂಡ್ ಹೋಗ್ಬರಣ ಅಂತ ಹೊರಗೆ ಹೊರಟೆ)
7 ಕಾಮೆಂಟ್ಗಳು:
ನಿಮ್ಮ ಮತ್ತು ನಿಮ್ಮ ತಾತನ ಅನುಬಂಧ ನೋಡಿ ತುಂಬಾ ಖುಷಿಯಾಯಿತು...
ನನ್ನಜ್ಜನ್ನನ್ನು ನಾನು ಸಣ್ಣವನಿರುವಾಗಲೇ ಕಳೆದು ಕೊಂಡೆ..
ಈಗ ಅವರು ಬರೀ ನೆನಪಷ್ಟೇ...
ನಿಮ್ಮ ತಾತನಿಗೆ ನನ್ನ ನಮಸ್ಕಾರಗಳನ್ನು ತಿಳಿಸಿ...
ಅಭಿನಂದನೆಗಳು....
ಆತ್ಮೀಯ ಪ್ರಕಾಶರೇ,
ನಿಮ್ಮ ನಮಸ್ಕಾರಗಳನ್ನ ಖಂಡಿತ ತಿಳಿಸ್ತೇನೆ.
ಈ ಬರಹದ ಮಾತುಕತೆ ನಡೆದ ಮುಂದಿನ ದಿನವೇ ತಾತ, ನೆಗಡಿ ಹಾಗೂ ಜ್ವರದಿಂದ ಬಳಲುತ್ತಿದ್ದರು. ಹಾಗಾ ನನ್ನ ತಮ್ಮ ಹೋಗಿ ತುರ್ತಾಗಿ ಒಂದು ಮಾತ್ರೆಯನ್ನ ತಂದು ಕೊಟ್ಟ, ಆ ಮಾತ್ರೆಯ ಸೈಜ್ ನೋಡಿ, ತಾತ ಏನೆಂದರು ಗೊತ್ತೇ?
"ಅಯ್ಯೋ!! ಇಂತ ಚಿಕ್ಕ ಮಾತ್ರೆನಾ ತರೋದು? ಸ್ವಲ್ಪ ದೊಡ್ದು ತರದಲ್ವೆ? ಇದ್ರಕೈಯಾಗೆ ಏನೂ ಕೆಲಸ ಆಗಲ್ಲ. ದೊಡ್ಡ ಮಾತ್ರೆ ಅಗಿದ್ರೆ ಬೇಗ ಗುಣ ಆಗ್ತಿತ್ತು"
ಅಂತಲ್ಲಾ ಸಕತ್ತಾಗಿ ಬೈತಿದ್ರು. ನಾನು ಹೋಗಿ, ಸುಮ್ನೆ ಆ ಮಾತ್ರೆ ನುನ್ಗಪ್ಪಾ ಆಮೇಲೆ ನಿನಿಗೇ ಗೊತ್ತಾಗುತ್ತೆ ಅಂದೇ.
ಅದಕ್ಕೆ ತಾತ, "ನಾನು ಈಗ 85 ವರ್ಷ,100 ವರ್ಷ ಬದುಕಬೇಕು" ಅಂತ ಅಂದ್ರು.
ಟೈಮ್ ಸಿಕ್ಕಾಗೆಲ್ಲಾ ಪುರ್ಸೋತ್ತಿಲ್ದಂಗೆ ಪುಸ್ತಕ ಓದ್ತಾರೆ... ಈಗಲೂ ಕನ್ನಡಕ ಹಾಕಲ್ಲ.
ನಿಮ್ಮ ಮತ್ತು ನಿಮ್ಮ ತಾತನ ಸಂಭಾಷಣೆ ತುಂಬಾ ಇಷ್ಟ ಆಯಿತು.
ನಿಮ್ಮ ತಾತನಿಂದ ನಿಮಗೆ ಒಳ್ಳೊಳ್ಳೆ ವಿಚಾರಗಳು ತಿಳಿತಾ ಇರಬೇಕು.
ನೀವೇ ಧನ್ಯ.
<"ಅಯ್ಯೋ!! ಇಂತ ಚಿಕ್ಕ ಮಾತ್ರೆನಾ ತರೋದು? ಸ್ವಲ್ಪ ದೊಡ್ದು ತರದಲ್ವೆ? ಇದ್ರಕೈಯಾಗೆ ಏನೂ ಕೆಲಸ ಆಗಲ್ಲ. ದೊಡ್ಡ ಮಾತ್ರೆ ಅಗಿದ್ರೆ ಬೇಗ ಗುಣ ಆಗ್ತಿತ್ತು">
ನಗು ತಡೆಯೋಕೆ ಆಗಲಿಲ್ಲಾ...
ಗೋಪಾಲಾರೆ,
ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು.
---
ನಮ್ಮ ತಾತ ಅವತ್ತು ಇನ್ನೂ ಸಿಟ್ಟು ಮಾಡ್ಕಂಡು, "ಬೈಕಲ್ಲಿ ಹೋಗಿದೆಲ್ಲೋ, ನಿನಗೇನು ಭಾರ ಆಗ್ತಿತ್ತಾ ಸ್ವಲ್ಪ ದೊಡ್ದು ತರಕ್ಕೆ" ಅಂತ ಸರಿಯಾಗಿ ಕ್ಲಾಸ್ ತಗೊಂಡಿದ್ರು. ನನ್ನ ತಮ್ಮ ಪಕ್ಕಕ್ಕೆ ತಿರುಗಿ, ಸುಮ್ನೆ ನಗ್ತಿದ್ದಾ. ತಾತಗೆ ಸಿಟ್ಟು ಇನ್ನೂ ಜಾಸ್ತಿ ಆಗ್ತಿತ್ತು.
---
ತಾತ, ಒಂದ್ಸಾರಿ, ಗಾಂಧೀಜಿನ ಹತ್ತಿರದಿಂದ ನೋಡಿದ್ರಂತೆ, ಅವ್ರು ಇದುವರೆಗೆ ಒಂದೇ ಒಂದ್ಸಾರಿ ಬೆಂಗಳೂರಿಗೆ ಬಂದಿರೋದಂತೆ,
ಅವ್ರು ಬಂದಾಗ, ವಿಧಾನ ಸೌದ ಕ್ಕೆ ಇನ್ನೂ ಬುನಾದಿ ಹಾಕ್ತಿದ್ರಂತೆ.
ನಿಮ್ಮ ತಾತನ ಕಥೆ ತುಂಬಾ ಚೆನ್ನಾಗಿದೆ.. ಅವರಿಗೆ ನನ್ನ ನಮಸ್ಕಾರಗಳನ್ನು ತಿಳಿಸಿ.
ಆತ್ಮೀಯ ಹರೀಶರೆ,
ನನ್ನ ಬ್ಲಾಗ್ಗೆ ಸ್ವಾಗತ, ಪ್ರತಿಕ್ರಿಯೆಗೆ ವಂದನೆಗಳು.
ತಾತರವರಿಗೆ, ನಿಮ್ಮ ನಮಸ್ಕಾರ ತಿಳಿಸ್ತೀನಿ.
ಮೊನ್ನೆ ಯಾಕೋ ಕಾಲು ನೋವು ಮಾಡ್ಕೊಂಡಿದ್ದಾರಂತೆ, ನೋಡ್ಕೊಂಡು ಬರೋಕ್ಕೆ ಅಮ್ಮ ಹೋಗ್ಬೇಕು ಅಂತಿದ್ರು.
ಕಾಮೆಂಟ್ ಪೋಸ್ಟ್ ಮಾಡಿ