ಭಾನುವಾರ, ಜನವರಿ 9, 2011

elektro magnetik waves

ನಾಲ್ಕಾರು ತಿಂಗಳುಗ ಹಿಂದೆ ಸಂಪಾದಿಸಿದ್ದು. ಕೆಲವು ಅನ್ಯ ಚಾನೆಲ್‌ಗಳ ಮೂಲಕ ನೀವೀಗಾಗಲೇ ಓದಿದ್ದರೂ ಓದಿರಬಹುದು. ಈಗ ಮತ್ತೇನೂ ಬದಲಾವಣೆಗಳನ್ನು ಮಾಡದೇ ಯಥಾವತ್ ನನ್ನ ಬ್ಲಾಗಿನಲ್ಲಿ ಪ್ರಕಟಿಸುತ್ತಿದ್ದೇನೆ. ವಂದನೆಗಳು. [ಪೂರ್ಣ ವಿರಾಮ]

ರೇಡಿಯೋ ಅಲೆಗಳು.
ವಿದ್ಯುತ್ಕಾಂತೀಯ ಅಲೆಗಳ ಬಗ್ಗೆ ಆಸಕ್ತಿ ಆರಂಬವಾದದ್ದು ಮ್ಯಾಕ್ಸ್‌ವೆಲ್‌ ಎಂಬ ಬ್ರಿಟೀಷ್ ಮೂಲದ ವಿಜ್ಞಾನಿಯ ಮೂಲಕ. ಸುಮಾರು 1870ರ ದಶಕದ ಆಸುಪಾಸಿನಲ್ಲಿ ಇವರು ವಿದ್ಯುತ್ಕಾಂತೀಯ ಅಲೆಗಳ ಅಸ್ಥಿತ್ವದ ಬಗ್ಗೆ ಮೊಟ್ಟಮೊದಲ ಬಾರಿಗೆ ಸುಳಿವು ನೀಡಿದ್ದರು. ಇವರು ಸಿದ್ದಪಡಿಸಿದ ಮಾಹಿತಿಯಿಂದ ಪ್ರೇರೇಪಿತರಾದ ಕೆಲವು ವಿಜ್ಞಾನಿಗಳು ಹೆಚ್ಚಿನ ಪ್ರಯೋಗಗಳಿಗೆ ತೊಡಗಿಕೊಂಡರು. ನಂತರದ ದಶಕಗಳಲ್ಲಿ ವಿವಿದ ದೇಶಗಳಲ್ಲಿ ಕೆಲವು ವಿಜ್ಞಾನಿಗಳು ತಮ್ಮ ಪ್ರಯೋಗಗಳಲ್ಲಿ ಯಶಸ್ವಿಯನ್ನು ಕಂಡರು.
ವಿದ್ಯುತ್ಕಾಂತೀಯ ಅಲೆಗಳನ್ನು ಪ್ರಾಯೋಗಿಕವಾಗಿ ಪ್ರದರ್ಶಿಸಿದವರಲ್ಲಿ ಭಾರತದವರೇ ಆದ ಜಗದೀಶ್ ಚಂದ್ರ ಬೋಸ್, ಇಟಲಿಯವರಾದ ಮಾರ್ಕೊನಿ, ಅಮೇರಿಕದ ಟೆಲ್ಸಾ ಇನ್ನೂ ಕೆಲವು ವಿಜ್ಞಾನಿಗಳು ಮೊದಲಿಗರು. ವಿದ್ಯುತ್ಕಾಂತೀಯ ಅಲೆಗಳು ಪ್ರಸಾರವಾಗಲು ಯಾವುದೇ ವಿದ್ಯುತ್‌ವಾಹಕ ತಂತಿಗಳ ಸಹಾಯ ಬೇಕಿಲ್ಲ ಎಂಬ ಜ್ಞಾನವನ್ನು ಈ ವಿಜ್ಞಾನಿಗಳು ತಮ್‌ತಮ್ಮ ಪ್ರಯೋಗಗಳ ಮೂಲಕ ಪ್ರದರ್ಶಿಸಿರುವರು. ಈ ಅಲೆಗಳ ಈ ವಿಶಿಷ್ಟ ಗುಣವೇ ಮುಂದೆ ಮಾನವನ ಜೀವನ ಪದ್ದತಿಯನ್ನೇ ಬದಲಿಸಿದ ತಂತ್ರಜ್ಞಾನಕ್ಕೆ ಚಾಲನೆನೀಡಿತು.
ವಿದ್ಯುತ್‌ಕಾಂತೀಯ ಅಲೆಗಳ ಮೊದಲ ಜನಪ್ರಿಯ ಕೊಡುಗೆ "ರೇಡಿಯೋ". ರೇಡಿಯೋ ಸಾಧನಗಳಲ್ಲಿರುವ ತಂತ್ರಜ್ಞಾನ ತೀರಾ ಸರಳವಾಗಿ ಅರ್ಥಮಾಡಿಕೊಳ್ಳಬಹುದು..
೧) ವಿದ್ಯುತ್‌ಕಾಂತೀಯ ಅಲೆಗಳಿಗೆ ಕೆಲವು ನಿರ್ದಿಷ್ಟ ಸಂಖ್ಯೇತಗಳನ್ನು ಬೆರೆಸಿ ಅಂಟೇನಾ ಮೂಲಕ ಬಿತ್ತರಿಸಲಾಗುತ್ತದೆ.
೨) ನಿಮ್ಮ ಮನೆಗಳಲ್ಲಿರುವ ರೇಡಿಯೋ ರಿಸೀವರ್‌ಗಳು ಈ ಅಲೆಗಳನ್ನು ಗ್ರಹಿಸಿಕೊಂಡು, ಅವುಗಳಲ್ಲಿ ಅಡಕವಾಗಿರುವ ಸಂಖ್ಯೇತಗಳನ್ನು ಬೇರ್ಪಡಿಸುತ್ತವೆ.
೩) ಈ ಸಂಖ್ಯೇತಗಳನ್ನು ಧ್ವನಿಯಾಗಿ ಪರಿವರ್ತಿಸಿ, ನಂತರ ಸ್ಪೀಕರ್ ಮೂಲಕ ಈ ಧ್ವನಿಯನ್ನು ಹೊರಹಾಕುತ್ತವೆ. ನಾವು ಆಲಿಸಿಕೊಳ್ಳುತ್ತೇವೆ.
೪) ಅದು ಕ್ರಿಕೆಟ್ ಮ್ಯಾಚ್ ವೀಕ್ಷಕ ವಿವರಣೆ ಇರಬಹುದು, ನಿಮ್ಮ ನೆಚ್ಚಿನ ಗಾಯಕರು ಹಾಡಿರುವ ಜಾನಪದ ಗೀತೆಯಾಗಿರಬಹುದು, ಅಥವ ನಿಮ್ಮ ನೆಚ್ಚಿನ ಚಿತ್ರಗೀತೆಯಾಗಿರಬಹುದು ಅಥವ ಕೃಷಿಗೆ ಸಂಬಂದಿಸಿದ ಮತ್ತೋರ್ವ ತಜ್ಞರ ಜೊತೆಗಿನ ಚರ್ಚೆಯೇ ಆಗಿರಬಹುದು ಅಥವ ಇನ್ನಾವುದೇ ಕಾರ್ಯಕ್ರಮವಿರಬಹುದು.
ಎಲ್ಲಾ ರೀತಿ ಧ್ವನಿಗಳನ್ನೂ ಸಂಖ್ಯೇತಗಳಾಗಿ ಬಿತ್ತರಿಸಲು ಹಾಗೂ ನಂತರ ಆ ಸಂಕ್ಯೇತಗಳನ್ನು ಗ್ರಹಿಸಿಕೊಂಡು ಪುನಃ ಧ್ವನಿಯಾಗಿ ಪರಿವರ್ತಿಸಿ ಆಲಿಸಿಕೊಳ್ಳಲು ಮೇಲೆ ತಿಳಿಸಿದ ನಾಲ್ಕು ಅಂಶಗಳನ್ನು ಪಾಲಿಸಲೇಬೇಕು.


ಧಾರವಾಡ ಕೆಂದ್ರದಿಂದ ಈಗ ೬೦೦೦ ಕಂಪನಾಂಕದಲ್ಲಿ ಕನ್ನಡ ಪ್ರಾದೇಶಿಕ ವಾರ್ತೆಗಳು ಪ್ರಸಾರವಾಗಲಿದೆ. ಓದುತ್ತಿರುವವರು ಪ್ರಸಾದ್... ಈ ರೀತಿಯ ಪ್ರಕಟಣೆಗಳನ್ನು ತಾವೂ ಸಹ ತಮ್ಮ ಹಳೆಯ ರೇಡಿಯೋಗಳಲ್ಲಿ ಈ ಹಿಂದೆ ಆಲಿಸಿದ್ದಿರಬಹುದು. ಮೊದಲೆಲ್ಲಾ ಕೇವಲ ಎ.ಎಮ್‌.ರೇಡಿಯೋಗಳು ಮಾತ್ರ ಹೆಚ್ಚು ಜನಪ್ರಿಯವಾಗಿದ್ದವು. 19ನೇ ಶತಮಾನದ ಆರಂಭದಲ್ಲೇ ಇಂತಹ ಎ.ಎಮ್‌.ರೇಡಿಯೋಗಳು ಬೆಳಕಿಗೆ ಬಂದವಾದರೂ 1920 ರವರೆಗೆ ಇವುಳಿಗೆ ನಿರ್ದಿಷ್ಟ ಪರಿಮಿತಿಯನ್ನು (ರೇಂಜ್) ನಿಗದಿ ಪಡಿಸಿರಲಿಲ್ಲ. ನಂತರ 1930ರ ಆರಂಭದಲ್ಲಿ ಎ.ಎಮ್‌.ರೇಡಿಯೋಗಳ ಕಂಪನಾಂಕ ಬ್ಯಾಂಡನ್ನು 535 kHz to 1,700 kHz ಎಂದು ನಿಗದಿ ಮಾಡಲಾಯಿತು. 
೧೯೩೦ರ ಆಸುಪಾಸಿನಲ್ಲಿ ಎಪ್.ಎಮ್. ರೇಡಿಯೋಗಳು ಬೆಳಕಿಗೆ ಬಂದವು. ಆದರೆ ಜನಪ್ರಿಯವಾಗಲು 1960ರ ವರೆಗೆ ಕಾಯಬೇಕಾಯಿತು. 1960ರ ನಂತರ ಎಪ್.ಎಮ್ ರೇಡಿಯೋಗಳ ಬ್ಯಾಂಡನ್ನು 88 MHz to 108 MHz ಎಂದು ನಿಗದಿ ಮಾಡಲಾಯಿತು. ಬೆಂಗಳೂರಿನಲ್ಲಿ ಅದೆಷ್ಟೋ ಅನೇಕ ಎಪ್.ಎಮ್. ರೇಡಿಯೋ ಚಾನೆಲ್‌ಗಳಿವೆ. ಇವುಗಳೆಲ್ಲವೂ ತಮ್ಮ ಅಲೆಗಳ ಕಂಪನಾಂಕವನ್ನು ಕೇವಲ 88 MHz to 108 MHz ರ ಒಳಗೆ ನಿರ್ದಿಷ್ಟಗೊಳಿಸಿವೆ. ಇದನ್ನು ನೀವೂ ಸಹ ಈಗಾಗಲೇ ಗಮನಿಸಿರ ಬಹುದು. ಎಪ್.ಎಮ್.ರೇಡಿಯೋಗಳು ಸದ್ಯಕ್ಕೆ ಕೇವಲ ದೊಡ್ಡ ದೊಡ್ಡ ನಗರಗಳಿಗೆ ಮಾತ್ರ ಸೀಮಿತವಾಗಿವೆ. ಆದರೆ ಸಣ್ಣ-ಪುಟ್ಟ ನಗರಗಳನ್ನು ತಲುಪುವಲ್ಲಿ ಇನ್ನೂ ಹಿಂದೆ ಬಿದ್ದಿವೆ.
ಅಲೆಗಳನ್ನು ತರಂಗಾಂತರ, ಆವೃತ್ತಿ ಹಾಗೂ ಅವುಗಳ ಶಕ್ತಿಗಳಿಗನುಗುಣವಾಗಿ ವಿವಿದ ಉದ್ದೇಶಗಳಿಗೆ ಬಳಸಿಕೊಳ್ಳಲಾಗುತ್ತದೆ. ರೇಡಿಯೋ ಅಲೆಗಳ ತಂತ್ರಜ್ಞಾನವು ಟೀವೀ, ಮೋಬೈಲ್ ಪೋನ್, ಜಿಪಿಎಸ್, ಏರ್ ಟ್ರಾಪಿಕ್ ಕಂಟ್ರೋಲ್‌ ಮುಂತಾದ ದೂರಸಂಪರ್ಕ ಮಾದ್ಯಮದಲ್ಲಷ್ಟೇ ಅಲ್ಲದೇ ಮೈಕ್ರೋಓವನ್, ರಿಮೋಟ್ ಕಂಟ್ರೋಲ್ಟ್ ಆಟಿಕೆಗಳು, ರ್ಯಡಾರ್‌ಗಳು ಹೀಗೇ ಇನ್ನೂ ಹಲವು ಕ್ಷೇತ್ರಗಳಿಗೆ ಪ್ರಯೋಜನಕಾರಿಯಾಗಿದೆ. ಚಿತ್ರವನ್ನು ಗಮನಿಸಿ. 
2ಜಿ ತಂತ್ರಜ್ಞಾನದಲ್ಲಿ ಅಲ್ಪ ವ್ಯಾಪ್ತಿಯಲ್ಲಿ ಈ ಅಲೆಗಳನ್ನು ಬಳಸಿಕೊಳ್ಳಲಾಗುತ್ತಿದೆ. ಮೋಬೈಲ್‌ ಪೋನ್‌ಗಳಲ್ಲಿ ಅಲೆಗಳ ಮೂಲಕ ಮಾಹಿತಿ ರವಾನೆಯ ದರ ಸಾಧಾರಣ ಮಟ್ಟದ್ದಾಗಿದ್ದು. ಇದೀಗ ಪ್ರಪಂಚದ ಹಲವು(ಅಂದಾಜು ೫೦) ರಾಷ್ಟ್ರಗಳಲ್ಲಿ 3ಜಿ ಸೇವೆಯನ್ನು ಆರಂಬಿಸಲಾಗಿದೆ. ಪ್ರಮುಖವಾಗಿ ಧ್ವನಿ ಪ್ರಸಾರಕ್ಕಷ್ಟೇ ಸೀಮಿತವಾಗಿದ್ದ ಮೋಬೈಲ್‌ಪೋನ್‌ಗಳು ಈಗ, ಇನ್ನು ಮುಂದೆ ಮತ್ತಷ್ಟು ಹೆಚ್ಚಿನ ವಿವಿದ ಸೇವೆಯನ್ನೊದಗಿಸಲು ಶಕ್ತವಾಗಿವೆ(ವಾಗಲಿವೆ). 2ಜಿ ಸೇವೆಗಳಿಗಿಂತ ಇನ್ನೂ ಅಧಿಕ ವೇಗದಲ್ಲಿ ಮಾಹಿತಿ ರವಾನೆಯು ಸಾದ್ಯವಾಗಲಿದೆ.


3ಜಿ ತಂತ್ರಜ್ಞಾನವು ಸಂಪೂರ್ಣ ಹೊಸದೇನೂ ಅಲ್ಲ. ಇಸವಿ 2000ದ ಆರಂಬದಲೇ ಮೊಟ್ಟಮೊದಲ ಬಾರಿಗೆ ಜಪಾನಿನ ಡೋಕೋಮೋ ಕಂಪನಿಯು 3ಜಿ ಸೇವೆಗಳನ್ನು ಯಶಸ್ವಿಯಾಗಿ ಆರಂಬಿಸಿತ್ತು. ಈಗಾಗಲೇ ಯುರೋಪ್‌, ಅಮೇರಿಕ, ಚೀನಾ, ಜಪಾನ್‌, ನಿವ್‌ಜಿಲ್ಯಾಂಡ್, ಆಸ್ಟ್ರೇಲಿಯಾ ಇನ್ನೂ ಮುಂತಾದ ರಾಷ್ಟ್ರಗಳಲ್ಲಿ ಹಲವಾರು ಗ್ರಾಹಕರು 3ಜಿ ಸೇವೆಯನ್ನು ಬಳಸುತ್ತಿದ್ದಾರೆ. ಇದೀಗ ಭಾರತವೂ ಸಹ ಮೋಬೈಲ್‌ ಗ್ರಾಹಕರಿಗೆ 3ಜಿ ಸೇವೆಯನ್ನು ಒದಗಿಸಲು ಮುಂದಾಗಿರುವುದು ನಮಗೆಲ್ಲಾ ಸಂತಸದ ಸಂಗತಿ. ಕೇವಲ 3ಜಿ ಸ್ಪೆಕ್ಟ್ರಮ್‌ನ ಹರಾಜಿನಿಂದಲೇ ನಿರೀಕ್ಷೆಗೂ ಮೀರಿದ ಸುಮಾರು 70 ಸಾವಿರ ಕೋಟಿ ಹಣವನ್ನು ನಮ್ಮ ಭಾರತ ಸರ್ಕಾರವು ತನ್ನ ಬೊಕ್ಕಸಕ್ಕೆ ತುಂಬಿಸಿ ಕೊಂಡಿದೆ. ಇನ್ನು ಕೆಲವೇ ತಿಂಗಳುಗಳಲ್ಲಿ ಭಾರತದಲ್ಲಿಯೂ ಸಹ 3ಜಿ ಸೇವೆಗಳು ಆರಂಬವಾಗಲಿವೆ ಎಂಬ ಮಾಹಿತಿ ಭಾರೀ ನಿರೀಕ್ಷೆಯನ್ನೇನೋ ಹುಟ್ಟಿಸಿದೆ. ಆದರೆ ಎಷ್ಟು ಪ್ರಮಾಣದ ಜನರಿಗೆ ತಲುಪಲಿದೆ ಎಂಬುದೇ ಈಗಿರುವ ಪ್ರಶ್ಣೆ.

ಭಾರತದಲ್ಲಿ ೩ಜಿ ಸೇವೆಯನ್ನೊದಗಿಸಲು ಭಾರ್ತಿ ಏರ್‌ಟೆಲ್, ವೋಡಾಪೋನ್, BSNL, MTNL ಹೀಗೇ ಹತ್ತಕ್ಕಿಂತಲೂ ಅಧಿಕ ಸೇವಾಧಾರರು ಭಾರಿ ಶುಲ್ಕವನ್ನು ತೆತ್ತು ಸರ್ಕಾರದಿಂದ ಪರವಾನಿಗಿ ಗಿಟ್ಟಿಸಿ ಕೊಂಡಿವೆ. ಆದರೆ ಇಷ್ಟೊಂದು ಅಧಿಕ ಶುಲ್ಕವನ್ನು ನೀಡಿರುವ ಈ ಕಂಪನಿಗಳು ಉತ್ತಮ ಗುಣಮಟ್ಟದ ಸೇವೆಯನ್ನು ಭಾರತದ ಮೂಲೆ ಮೂಲೆಗಳಿಗೂ ತಲುಪಿಸಲು ಯಶಸ್ವಿಯಾಗ ಬಲ್ಲವೇ? ಎಂದ ಪ್ರಶ್ಣೆ ಈಗ ಕಾಡತೊಡಗಿದೆ. ಸರ್ಕಾರವು ಅಪಾರ ಲಾಭಗಳಿಸುವ ಉದ್ದೇಶವನ್ನೇನೋ ಈಡೇರಿಸಿಕೊಂಡಿದೆ. ಆದರೆ ಬಳಕೆದಾರರಿಗೆ ಅಧಿಕ ಶುಲ್ಕ ತೆರಬೇಕಾದ ಸಂಕಟ ಎದುರಾದರೆ ಆಗ ಏನು ಗತಿ? ಎಂಬುದನ್ನು ಇನ್ನೂ ಕಾದು ನೋಡ ಬೇಕಿದೆ.
ಈಗಾಗಲೇ 3ಜಿ ಸೇವೆಗಿಂತಲು ತುಸು ಹೆಚ್ಚಾದ ಸೇವೆಗಳನ್ನು ಸ್ಟೀಡನ್‌ ದೇಶವು ತನ್ನ ಗ್ರಾಹಕರಿಗೆ ಒದಗಿಸುತ್ತಿರುವ ವರದಿಗಳೂ ಇವೆ. ಇವುಗಳು 4ಜಿ ಸೇವೆಗಳು ಎಂದು ಕರೆಸಿಕೊಳ್ಳಲ್ಪಡುತ್ತಿವೆ. ಡೋಕೋಮೋ ಹಾಗೂ ಸ್ಯಾಂಸಂಗ್‌ ಕಂಪನಿಗಳು ಈಗಾಗಲೇ ೪ಜಿ ತಂತ್ರಜ್ಞಾನದ ಬಗ್ಗೆ ಸಾಕಷ್ಟು ಪ್ರಯೋಗಗಳನ್ನು ಆರಂಭಿಸಿಯಾಗಿದೆ.


ರೇಡಿಯೋ ಅಲೆಗಳು ಮಾನವನ ಜೀವನದ ದಿಕ್ಕನ್ನೇ ಬದಲಾಯಿಸುವಷ್ಟು ಗಣನೀಯ ಪ್ರಮಾಣದ ಕ್ರಾಂತಿಗೆ ಕಾರಣವಾಗಿರುವುದು ಅಕ್ಷರಶಹ ಸತ್ಯ. ಆದರೆ ಈ ರೇಡಿಯೋ ಅಲೆಗಳು ಪರಿಸರದ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತಿವೆ ಎಂಬ ಆತಂಕವೂ ಆಗಾಗ ಕೇಳಿಬರುತ್ತಿರುತ್ತದೆ. ಕೆಲವು ಜೀವ ಸಂತತಿಗಳನ್ನೇ ಈ ಅಲೆಗಳು ಆಹುತಿ ಪಡೆದುಕೊಂಡಿವೆ ಎಂಬ ಆರೋಪಗಳನ್ನು ನೀವೂ ಸಹ ಕೇಳಿರದೇ ಇರುವುದಿಲ್ಲ.
---
ಚಿತ್ರಗಳ ಹಕ್ಕುಗಳು ಆಯಾ ಮಾಲಿಕರದ್ದು.

blogspot add widget