ಸೋಮವಾರ, ನವೆಂಬರ್ 23, 2009

ನಮ್ಮ ಬೀದಿ ತುಂಬಾ ವರ್ಲ್ಡ್ ಫೇಮಸ್

ಕಣದ ಮನೆಯಲ್ಲಿ ಕಣಗಲ ಗಿಡವನ್ನ ಬೆಳೆಸಿದ್ದರ ಕಥೆಯ ಎರಡನೇ ಕಂತು ಇವತ್ತು ಹಾಕಿದ್ದೇನೆ...ಮೊದಲ ಕಂತನ್ನ ಈಗಾಗಲೇ ಓದಿಲ್ಲದಿದ್ದರೆ ಇಲ್ಲಿ ಓದಿ.

~~~

ಮೂರ್ತ್ಯಪ್ಪ ಇವತ್ತಿಗೆ ನಾಲ್ಕು ದಿನ ಆತು, ಆದ್ರೆ ಇನ್ನೂ ಚಿಗುರು ಕಾಣಿಸ್ತಿಲ್ಲ. ನಾನು ಸ್ವಲ್ಪ ಸರ್ಕಾರಿ ಗೊಬ್ರ ಹಾಕ್ತೀನಿ.

ಅಯ್ಯೋ! ಅದಕ್ಕೆ ಗೊಬ್ರ ಬೇಡ ಸಾವ್ಕಾರಾ, ಅದೆಲ್ಲ ಚಿಗುರೋಡೆಯುತ್ತೆ. ನಿಂಗೆ ಗೊತ್ತಾಗಲ್ಲ. ಈಗ್ಲೇ ಸರ್ಕಾರಿ ಗೊಬ್ರ ಹಾಕಿದ್ರೆ ಅದ್ರ ಎಳೆ ಬೇರು ಸುಟ್ಟು ಹೋಗುತ್ತೆ ಅಷ್ಟೇ. ಅದ್ರ ಪಾಡಿಗೆ ಅದನ್ನ ಬಿಟ್ಟು ನಿಮ್ಮ ಪಾಡಿಗೆ ನೀವು ಸ್ವಲ್ಪ ಇರ್ಬಾರ್ದೆ.

ಮೂರ್ತ್ಯಪ್ಪನ ಮಾತು ಲೆಕ್ಕಕ್ಕೆ ತೆಗಳ್ದೆ, ಪರೀಕ್ಷೆ ಮಾಡಣ ಅಂತ ಯೋಚ್ಸಿ, ಒಂದು ಬೊಗಸೆ ಪೂರ್ತಿ ಸರ್ಕಾರಿ ಗೊಬ್ರಾನೂ ತಗಮ್ಬಂದೆ. ಆದ್ರೆ ಎಲ್ಲಾ ಗುಣಿಗೂ ಸಮವಾಗಿ ಹಾಕ್ಲಿಲ್ಲ. ಒಂದು ಗುಣಿಗೆ ಜಾಸ್ತಿ ಹಾಕಿ, ಇನ್ನೊಂದಕ್ಕೆ ಸ್ವಲ್ಪವೆ ಸ್ವಲ್ಪ ಹಾಕಿದ್ದೆ. ಕರಿಬೇವಿನ ಗಿಡಕ್ಕೂ ಸ್ವಲ್ಪ ಹಾಕಿದೆ.

ಮತ್ತೊಂದೆರಡು ದಿನ ಬಿಟ್ಟು ಬಂದೆ, ಕಡ್ಡಿ ನೆಟ್ಟಿದ್ದ ಗುಂಡಿ ಮುಂದೆ ಕುಂತೆ, ಮೂರ್ತ್ಯಪ್ಪನೂ ನನ್ನಿಂದೆ ಇದ್ದ. ಕಡ್ಡಿಯಲ್ಲಿ ಇನ್ನೂ ಚಿಗುರಿಲೇನೇ ಕಾಣಿಸ್ತಿಲ್ಲ. ಕರಿಬೇವಿನ ಗಿಡದಲ್ಲಿ ಕೆಳಗಿನ ಎಲೆಗಳು ಒಣಗ್ತಾ ಬರ್ತಿದ್ವು.ನಾನು ಬೇಸರದಿಂದ ಮೂರ್ತ್ಯಪ್ಪನ ಕಡೆ ನೋಡ್ದೆ.

ನೋಡು ಮೂರ್ತ್ಯಪ್ಪ, ಸಾಕಷ್ಟು ನೀರಾಕಿದ್ದೀನಿ, ಬೇರೆ ಬೇರೆ ಮಣ್ಣು ಹಾಕಿದ್ದೀನಿ, ತಿಪ್ಪೆ ಗೊಬ್ರಾನೂ ಹಾಕಿದ್ದೀನಿ, ಕೊನೆಗೆ ಇರ್ಲಿ ಅಂತ ಸ್ವಲ್ಪ ಸರ್ಕಾರಿ ಗೊಬ್ರಾನೂ ಹಾಕಿದ್ದೀನಿ. ಆದ್ರೆ ಇನ್ನೂ ಚಿಗುರೇ ಕಾಣಿಸ್ತಿಲ್ಲ. ನೀನು ಹೇಳಿದ್ದೆ ಒಂದು ವಾರ ಆದ್ಮೇಲೆ ಚಿಗುರು ಬರುತ್ತೆ ಅಂತ, ಈಗ ನೋಡು ಒಂದ್ವಾರ ಆತು, ಇನ್ನೂ ಕಡ್ಡಿ, ಕಡ್ಡಿನೇ ಇದೆ, ಸಸಿನೇ ಹಾಗಿಲ್ಲಾ. ಕರಿಬೇವಿನ ಎಲೆಗಳು ಕೂಡ ಒಣಗ್ತಾ ಇವೆ. ಸ್ವಲ್ಪ ಔಷಧಿ ತಂದು ಈ ಕರಿಬೇವಿನ ಗಿಡಕ್ಕೆ ಸ್ಪ್ರೇ ಮಾಡ್ತೀನಿ.

ಸಾವ್ಕಾರಾ, ನಾನಾಗಲೇ ಹೇಳ್ದೆ ನಿಮ್ಗೆ, ಅದಿನ್ನೂ ಮೊದ್ಲು ಬೇರು ಬಿಡ್ಬೇಕು ಆಮೇಲೆ ಚಿಗುರು ಬರುತ್ತೆ ಅಂತ, ನೀವು ನನ್ನ ಮಾತು ಲೆಕ್ಕಕ್ಕೆ ತಗಳ್ದೇನೆ ಸರ್ಕಾರಿ ಗೊಬ್ರ ಹಾಕಿದ್ರಿ, ಈಗ ಇದ್ರ ಬೇರು ಕೂಡ ಸುಟ್ಟು ಹೋಗಿದೆ ಅನ್ಸುತ್ತೆ. ಆದ್ರೂ ಏನೂ ತಲೆ ಕೆಡಿಸ್ಕೂ ಬೇಡ್ರಿ, ಇನ್ನೂ ಸ್ವಲ್ಪ ದಿನ ಟೈಮ್ ಕೊಡಿ, ಈ ಮಣ್ಣಲ್ಲಿ ಸರ್ಕಾರಿ ಗೊಬ್ಬರದ ಶಕ್ತಿ ಕಡ್ಮೆ ಆದ್ಮೇಲೆ, ಬೇರು ಬಂದೇ ಬರುತ್ತೆ. ಆಮೇಲೆ ಚಿಗುರೆಲೆನೂ ಬರುತ್ತೆ. ಕರಿಬೇವಿನ ಗಿಡದಲ್ಲಿ ಈಗಿರೋ ಎಲ್ಲಾ ಎಲೆಗಳು ಉದ್ರುತಾವೆ. ಆಮೇಲೆನೇ ಜೊತೆಗೆ ಒಂದೊಂದೇ ಹೊಸ ಎಲೆ ಬರೋದು.

ಆದ್ರೂ ಮನಸ್ಸಿಗೆ ಸಮಾಧಾನ ಇರ್ಲಿಲ್ಲ. ಶೇಂಗ ಗಿಡಕ್ಕೆ ಹಾಕ್ತಿದ್ದನ್ನ ಗಮನಿಸಿದ್ದ ನಾನು, ಸುಣ್ಣವನ್ನೇ ಔಷಧಿ ಅಂತೇಳಿ ಊಹಿಸಿ, ಎಲ್ಲಾ ಗಿಡ್ಗಗಳಿಗೂ ಸುತ್ಲೂ ಸುಣ್ಣ ಹಾಕಿದೆ. ಮತ್ತೆ ಎಲೆನೆಲ್ಲ ಹಸಿ ಹಸಿ ಮಾಡಿ, ಎಲೆಗೂ ಸ್ವಲ್ಪ ಸುಣ್ಣ ಮೆತ್ತಿದೆ. ಯಾಕಂದ್ರೆ ರೋಗದ ಕೀಟಗಳು ಅಲ್ಲಿದ್ರೆ ಅವೂ ಸತ್ತು ಹೋಗ್ಲಿ ಅನ್ನೋ ಭಾವ್ನೆಯಾಗಿತ್ತು ನಂದು. :)

ಇಷ್ಟು ಮಾಡಿದ್ದು, ನೋಡಿದ ಮೂರ್ತ್ಯಪ್ಪ, ತುಂಬಾ ತಲೆ ಬಿಸಿ ಮಾಡ್ಕಂದಿದ್ದ. ಅದುಕ್ಕೆ ಗೊಬ್ರ, ಔಷಧಿ ಏನೂ ಬೇಡ ಅಂತ ಹೇಳಿದ್ನೆಲ್ಲಾ ಸಾವ್ಕಾರಾ. ಮತ್ಯಾಕೆ ಇದೆಲ್ಲ ಅಂತ ಕೇಳಿದ.

ಇಷ್ಟೆಲ್ಲಾ ಮಾಡಿದ್ರೂ ಹೊಸ ಚಿಗುರು ಬರ್ದೇ ಇದ್ದದ್ದನ್ನ ಗಮನಿಸಿ, ನನಿಗೆ ಕೆಟ್ಟ ಮೇಲೆ ಬುದ್ದಿ ಬಂತು ಅನ್ನೋ ಹಾಗಾಯ್ತು ಮತ್ತೆ ಅಂಗಾದ್ರೆ ಮೂರ್ತ್ಯಪ್ಪ, ಈ ಗುಣಿಲಿರೋ ಮಣ್ಣನ್ನೆಲ್ಲ ಬದಲ್ಸಿ ಇವತ್ತಿಂದ ಮತ್ತೆ ಬೇರೆ ಹೊಸ ಮಣ್ಣು ತಂದಾಕ್ಲ?

ಬೇಡ ಸಾವ್ಕಾರಾ, ನೀವು ಸ್ವಲ್ಪ ಅದಕ್ಕೆ ಟೈಮ್ ಕೊಡಿ ಸಾಕು.

ಮತ್ತೆ ಒಂದೆರ್ಡು ದಿನ ಕಾದೆ, ಆದ್ರೆ ಇನ್ನೂ ಚಿಗುರೆಲೇನೆ ಕಾಣಿಸ್ತಿಲ್ಲ, ಮೂರ್ತ್ಯಪ್ಪ ಇಲ್ದೆ ಇದ್ದಾಗ ಆಯಪ್ಪ ಹೇಳಿದ್ದೂ ನಿಜವ? ಈ ಕಡ್ಡಿಲಿ ನಿಜಕ್ಕೂ ಬೇರು ಬಂದಿರುತ್ತಾ? ಅಂತ ಪರೀಕ್ಷೆ ಮಾಡ್ಬೇಕು ಅಂತೇಳಿ, ಸ್ವಲ್ಪವೆ ಸರ್ಕಾರಿ ಗೊಬ್ರ ಹಾಕಿದ್ದ, ಗುಣಿಯಿಂದ ಒಂದು ಕಡ್ಡಿನ ಕಿತ್ತು ತಗ್ದು ನೋಡಿದರಾಯ್ತು ಅಂತ ಯೋಚ್ಸಿದೆ. ಹಾಗೇ ಮಾಡ್ದೆ. ಕಡ್ಡಿ ಕಿತ್ತು ಗಮನಿಸಿದೆ. ಅದ್ರಲ್ಲಿ ನಿಜಕ್ಕೂ ಬೇರು ಬರ್ತಾ ಇದ್ವು. ಅಜ್ಜಿಯ ನೆರೆ ಕೂದಲಿನ ಹಾಗೆ ಸಣ್ಣನೆಯ ಬಿಳಿ ಎಳೆಗಳು ಬರ್ತಿದ್ವು. ನೋಡಿ ಖುಷಿ ಆಯ್ತು, ಮತ್ತೆ ಆ ಕಡ್ಡಿನ ವಾಪಾಸ್ ನೆಟ್ಟೆ.

ಮುಂದಿನ ದಿನ ಮೂರ್ತ್ಯಪ್ಪನ ಹತ್ರ ಹೇಳ್ದೆ. ಮೂರ್ತ್ಯಪ್ಪ ನಿನ್ನೆ ನಾನು ಕಡ್ಡಿ ಕಿತ್ತು ನೋಡ್ದೆ, ನೀನೆಳ್ದಂಗೆ ಬೇರು ಬರ್ತಾ ಇವೆ. ಅಂದ್ರೆ ಇನ್ನು ಸ್ವಲ್ಪ ದಿನದ ಮೇಲೆ ಚಿಗುರೆಲೆ ಬರುತ್ತೆ ಅಲ್ವ?

ಬರುತ್ತೆ ಸಾವ್ಕಾರಾ, ಆದ್ರೆ ಈಗ ಮತ್ತೆ ತಿಪ್ಪೆ ಗೊಬ್ರ, ಸರ್ಕಾರಿ ಗೊಬ್ರ, ಸರ್ಕಾರಿ ಔಷಧಿ ಅಂತೆಲ್ಲ ತಂದು ಹಾಕ್ಬೇಡಿ. ಸ್ವಲ್ಪ ಚಿಗುರೆಲೆ ಬಂದ್ಮೇಲೆ ಏನಾದರೂ ಹಾಕಿ. ಉಪಯೋಗನೂ ಹಾಗುತ್ತೆ.

ಅಲ್ಲಿಂದ ಒಂದು ವಾರ - ಹದಿನೈದು ದಿನ, ಗಿಡಗಳ ಬಗ್ಗೆ ಹೆಚ್ಚು ತಲೆ ಕೇದಿಲ್ಕೊಳ್ಳಿಲ್ಲಾ.

ಅಷ್ಟೊತ್ತಿಗೆ ಒಂದಿನ ಅಮ್ಮ ಚಿಗುರೆಲೆ ಕಾಣಿಸಿ ಕೊಳ್ತಾ ಇರೋದನ್ನ ಗಮನಿಸಿದ್ರು, ಗಿಡಗಳಲ್ಲಿ ಹೊಸ ಚಿಗುರೆಲೆ ಬಂದಿದೆ ಅಂತ ಅವ್ರೇ ಬಂದು ನಂಗೆ ಹೇಳಿದ್ರು, ನಾನು ಹೋಗಿ ನೋಡ್ದೆ. ಸಣ್ಣ ಸಣ್ಣ ಚಿಗುರು ಸೂಕ್ಷ್ಮವಾಗಿ ಕಾಣಿಸ್ತಾ ಇದ್ವು. ಆವತ್ತೇ ಮೂರೂ ಗಿಡಗಳಿಗೆ ಸುತ್ತಲೂ ಬಿದಿರಿನ ಒಣ ಕಡ್ಡಿ ತಂದು ನೆಟ್ಟೆ, ಅದಕ್ಕೆ ತಂತಿ ಸುತ್ತಿ. ಬಿಗಿ ಭದ್ರತೆ ಮಾಡ್ಬಿಟ್ಟೆ. ಗಿಡನ ಮುಟ್ಬೇಕು ಅಂದ್ರೆ ಅಂದಕ್ಕೆ ಅಂತಾನೆ ಒಂದು ಚಿಕ್ಕ ಕಿಟಕಿ ಮಾಡಿದೆ.


ಅಲ್ಲಿಂದ ನಾನು ಇನ್ನೂ ಇಬ್ರನ್ನ ನನ್ನ ಜೊತೆ ಸೇರಿಸ್ಕಂದೆ. ಗೋಡೆಯ ಮಟ್ಟ ನೋಡೋಕ್ಕೆ ಅಂತ ತರಗಾರರು ಒಂದು ಸಣ್ಣ ಗಾತ್ರದ ಪೈಪನ್ನ ಉಪಯೋಗಿಸ್ತಾ ಇದ್ರು. ಅಂತ ಒಂದು ಹಳೇ ಪೈಪ್ ಉಪ್ಯೂಗಕ್ಕೆ ಬರಲ್ಲ ಅಂತ ಬಿಸಾಡಿದ್ರು. ಗಿಡಕ್ಕೆ ನೀರಾಕ್ಕೊಕ್ಕೆ ಅಂತ ಒಂದು ಲೀಟರಿನ ಡಬ್ಬದ ಕೆಳಗೆ ಒಂದು ರಂದ್ರ ಮಾಡಿ, ಈ ಪೈಪ್ನ ಒಂದೆರ್ಡು ಅಡಿ ಉದ್ದ ಕತ್ತರಿಸಿ ತಂದು ಸಿಗ್ಸಿದೆ. ಪಕ್ಕದ ತೊಟ್ಟಿಯಿಂದ ಡಬ್ಬದಲ್ಲಿ ನೀರ್ತಂದು, ಆ ಪೈಪ್ ಮೂಲ್ಕ ಗಿಡಕ್ಕೆ ಬಿದಿರಿನ ಕಡ್ಡಿ ಸಂದಿಯಿಂದ ನೀರಾಕೊದೇ ಒಂದು ಕುತೂಹಲವಾಗ್ಬಿಡ್ತು. ನಮ್ಗೆ ಆವತ್ತು ಇದೆ ಒಂದು ದೊಡ್ಡ ಇಂಜಿನೀರಿಂಗ್ ಅನ್ನಿಸಿತ್ತು.

~~~~ (*) ~~~~

ಮುಂದೆ ಕನಗಲ ಹೂವು ನಮ್ಮ ಮನೆಗೆ ಅಷ್ಟೇ ಅಲ್ಲಾ, ನಮ್ಮೂರಿನ ದೇವಸ್ಥಾನಗಳ ಪೂಜಾರಿಗಳ ಮನಗೆ ಮತ್ತೆ ನಮ್ಮೂರಿನ ದೇವಸ್ಥಾನಗಳಿಗೂ ಹೋಗಿ ಮುಟ್ಟಿತ್ತು. ದೇವಸ್ಥಾನದ ಪೂಜಾರಿಗಳೇ ದಿನ ಬಂದು ಹೂವು ಕಿತ್ಗಂಡು ಹೋಗ್ತಿದ್ರು. ಆದ್ರೆ ಕರಿಬೇವಿನ ಗಿಡ ಹೆಚ್ಚು ಎತ್ತರ ಬೆಳಿಲೆ ಇಲ್ಲಾ. ಎರಡ್ಮೂರು ವರ್ಷ ಆದ್ಮೇಲೆ ಸತ್ತು ಹೋತು. ಕನಗಲ ಗಿಡ ತುಂಬಾ ದೊಡ್ದಾಗಿತ್ತು. ಮತ್ತೆ ಅದ್ರ ಪಕ್ಕದಲ್ಲೇ ಇದ್ದ ಕೊಳವೆ ಬಾವಿಯ ಪಂಪ್ ಕೂಡ ಹಾಗಿನ್ದಾಗೆ ಕೆಟ್ಟು ನಿಲ್ತಿತ್ತು. ಇದರ ರಿಪೇರಿ ಮಾಡೋ ಸಂದರ್ಬದಲ್ಲಿ ಪಕ್ಕದಲ್ಲಿದ್ದ ಗಿಡ ತುಂಬಾ ಅಡ್ಡಿ ಮಾಡುತ್ತೆ ಅಂತಾ, ಗಿಡನ ಅಲ್ಲಿಂದ ಎತ್ತಂಗಡಿ ಮಾಡಿದ್ದಾರೆ. ಆದ್ರೆ ಅಮ್ಮ ಈಗ್ಲೂ ಮತ್ತೊಂದು ಕನಗಲ ಗಿಡನ ಅಲ್ಲೇ ಹತ್ರದಲ್ಲೇ ಬೆಳ್ಸಿದ್ದಾರೆ. ಈಗ ಅದೂ ನಮ್ಮ ಬೀದಿ ತುಂಬಾ ವರ್ಲ್ಡ್ ಫೇಮಸ್.

ಬುಧವಾರ, ನವೆಂಬರ್ 18, 2009

ಕಡ್ಡಿ, ಕಡ್ಡಿನೇ ಇದೆ, ಹೊಸ ಚಿಗುರೇ ಬಂದಿಲ್ಲಾ?

ಹವ್ಯಾಸಕ್ಕೆ ಇರ್ಲಿ ಅಂತ ಇನ್ನೊಂದು ಕೂತೂಹಲವಾದ ಕಾರ್ಯದಲ್ಲಿ ನನ್ನನ್ನ ನಾನು ತೊಡಗಿಸ್ಕೋಡ್ಡಿದ್ದೀನಿ. ಆದು ಏನೂ ಅಂತ ನಿಮ್ಗೆಲ್ಲ ಇಷ್ಟರಲ್ಲೇ ತಿಳಿಸ್ತೀನಿ. ಈ ನಡುವೆ ಹೊಸ ಬರಹವನ್ನ ಬರಿಯೊಕ್ಕಾಗ್ಲಿ ಅಥ್ವ ನಿಮ್ಮಗಳ ಬರಹಗಳನ್ನ ಓದೋದಕ್ಕಾಗ್ಲಿ ನನಗೆ ಪುರುಸೊತ್ತಾಗ್ತಾ ಇಲ್ಲ. ಆದ್ರೆ ಬಿಡುವು ಮಾಡ್ಕೋಂಡು ಮುಂದಿನ ಹದಿನೈದು ದಿನಗಳಲ್ಲಿ ಬ್ಲಾಗ್ನಲ್ಲಿ ಯಥಾ ಪ್ರಕಾರ ಕಾಣಿಸ್ಲೋಳ್ತೀನಿ. ಇಷ್ಟು ಮಾತ್ರ ಹೇಳಿ ಹೋದ್ರೆ ಹೇಗೆ? ಅದಕ್ಕೇಂತ ಈಗಾಗ್ಲೇ ಇಂತಹ ಒತ್ತಡದ ಸಂದರ್ಭಗಳಿಗೆ ಇರ್ಲಿ ಅಂತ ಬರೆದಿಟ್ಟಿದ್ದ ಬರಹವೊಂದನ್ನ ಇಲ್ಲಿ ಇವತ್ತು ಹಾಕಿರ್ತೀನಿ. ಅಮ್ಮ ಅಪ್ಪನ ನಡುವೆಯ ಸಂಭಾಷಣೆಯೊಂದಿಗೆ ಬರಹ ಆರಂಬವಾಗುತ್ತೆ.
~~~~ (*) ~~~~
ಮನೆ ಹಳೆದಾಯ್ತು, ಬೇಗ ಹೊಸ್ಮನೆ ಕಟ್ಸೋ ವ್ಯವಸ್ಥೆ ಮಾಡಿ.

ಆಯ್ತು, ಮುಂದಿನ ವರ್ಷದಿಂದ ಮನೆ ಕಟ್ಸಾಣ, ಈ ವರ್ಷನೇ ಬೇಡ!

ಮನೆ ಕಟ್ಸಿದ್ರೆ, ಇಲ್ಲಿ ಕಟ್ಸೋದು ಬೇಡ ಮತ್ತೆ. ಕಣದಲ್ಲಿ ಕಟ್ಸಣ, ಇಲ್ಲಿ ಜಾಗ ಸಾಕಾಗಲ್ಲ.

ಆಯ್ತು, ಹೊಸ್ಕಣದಲ್ಲಿ ನಮ್ಮ ಜಾಗ ಅಳತೆ ಮಾಡ್ಸಿ ಕಟ್ಸಿದ್ರಾಯ್ತು.

ಹೀಗೇ ಕಾಲ ಕಳ್ದು, ಒಂದು ಶುಭದಿನ ಮನೆ ಕಟ್ಸೋಕ್ಕೆ ಕೆಲಸ ಶುರು ಮಾಡಿದ್ರು. ಅಪ್ಪನಿಗೆ ಹಣದ ಬಗ್ಗೆ ಸ್ವಲ್ಪ ಆತಂಕ ಇದ್ರೂನೂ ಉತ್ಸಾಹದಿಂದಲೇ ಮನೆ ಕಟ್ಸೋದಕ್ಕೆ ತಕ್ಷಣಕ್ಕೆ ಬೇಕಿದ್ದ ಇಟ್ಟಿಗೆ, ಕಲ್ಲು, ಸಿಮೆಂಟು ಒಂದೊಂದೇ ವ್ಯವಸ್ಠೆ ಮಾಡೋದಕ್ಕೆ ಓಡಾಡ್ತಾ ಇದ್ರು.

ಆಗ ನನ್ನ ಜವಾಬ್ದಾರಿ ಏನಪ್ಪಾ ಅಂದ್ರೆ, ಊಟದ ಸಮಯ ಒಂದ್ಬಿಟ್ಟು, ಉಳ್ದಾ ದಿನ ಪೂರ್ತಿ ಕಣದಲ್ಲೇ ಇರ್ಬೆಕಿತ್ತು. ಎನಾದ್ರೂ ಕಳ್ಳತನ ಹಾಗುತ್ತೆ ಅನ್ನೋ ಯೋಚ್ನೆ ಇದ್ದಿದ್ದರಿಂದ, ಈ ರೀತಿ ಮಾಡ್ಬೇಕಾಗಿತ್ತು. ಆದ್ರೆ ರಾತ್ರಿ ನಾನು ಮನೇಲೇ ಇರ್ತಿದ್ದೆ, ಕಣದಲ್ಲಿ ಯಾರಾದ್ರು ಬೇರೆಯವರನ್ನ ಮಲಗಿಲಿಕ್ಕೆ ವ್ಯವಸ್ಠೆ ಮಾಡಿದ್ರು. ಬೇಸಿಗೆ ರಜಾ ಪೂರ್ತಿ ನಾನು ಕಣದಲ್ಲೇ ಕಳ್ದೆ.

ಈ ರೀತಿ ಇರ್ಬೇಕಾದ್ರೆ, ಒಂದಿನ ನಮ್ಮ ಹಳೇ ಮನೆ ಇತ್ತಲಲ್ಲಿ ಇದ್ದ ಕನಗಲ ಹೂವಿನ ಗಿಡವನ್ನ ನಾನು ನಮ್ಮ ಹೊಸ್ಮನೆ ಹತ್ರಾನು ಬೆಳಸ್ಬೇಕು ಅಂತ ಯೋಚ್ನೆ ಬಂತು. ಯಾಕಂದ್ರೆ ಹೊಸಮನೆಗೆ ಹೋದ್ಮೇಲೆ ಪೂಜೆಗೆ ಹೂವು ಅಂತ ಮತ್ತೆ ಹಳೇ ಮನೆಗೆ ಬರೋದು ಬೇಡ ಅಂತ.

ಅಮ್ಮ, ಕನಗಲ ಗಿಡನ ಹೊಸ್ಮನೆ ಹತ್ರನೂ ಬೆಳಿಸ್ಬೇಕು, ಹೊಸ್ಮನೆಗೆ ಹೋದ್ಮೇಲೆ ನಮಿಗೆ ಹೂವಿನ ಚಿಂತೆ ಇರಲ್ಲ.

ಹ್ಞೂ, ಅದಕ್ಕೇನಂತೆ ಈಗ ಇತ್ತಲಲ್ಲಿ ಇದೆಯಲ್ಲ ಅದೇ ಗಿಡದ ಒಂದೆರ್ಡು ರಮ್ಬೇಗಳನ್ನ ಕತ್ರಿಸ್ಕೊಂದು ಹೋಗಿ ಅಲ್ಲಿ ಹೊಸ್ಮನೆ ಕಣದಲ್ಲಿ ನೆಡು.

ಅಮ್ಮಾ , ಬರೀ ಕಡ್ಡಿ ನೆಟ್ರೆ ಸಾಕ? ಅದುನ್ನ ಪ್ಯಾಕೆಟ್ ಮಾಡಿ ನೆಡೋದಲ್ವ? ಬೇರು, ಬೀಜ ಏನೂ ಬೇಡ್ವ?

ಹೇ, ಇದನ್ನೆಲ್ಲಾ ಪ್ಯಾಕೆಟ್ ಯಾಕ್ಮಾಡ್ತೀಯ? ಕಡ್ಡಿನೇ ಸಾಕು, ಸ್ವಲ್ಪ ನೀರಾಕ್ತಾ ಇರು ಸಾಕು.

ಆಯ್ತು ಸರಿ ಇವತ್ತೇ ಗಿಡ ನೆಡ್ತೀನಿ.

ಇತ್ತಲಲ್ಲಿ ಒಂದೆರ್ಡು ತೆಳ್ಳನೆಯ ಉದ್ದನೆಯ ಕನಗಲ ರಮ್ಬೇಗಳನ್ನ ಕತ್ತರಿಸ್ಕಂದೆ, ತಗಂಡು ಹೊಸ್ಮನೆ ಕಣಕ್ಕೆ ಬಂದೆ. ಈಗ ಇದನ್ನ ಹೇಗೆ ನೆಡೋದು?

ನಮ್ಮನೆ ಕೆಲ್ಸಕ್ಕೆ ಒಬ್ಬ ಹೆಣ್ಮಗ್ಳು ಬರ್ತಿದ್ರು. ಅವ್ರ ಗಂಡನಿಗೆ ಒಂದು ಆಪರೇಷನ್ ಹಾಗಿತ್ತು. ಹಾಗಾಗಿ ಆಯಪ್ಪ ಏನೂ ಕೆಲಸ ಮಾಡ್ತಿರ್ಲಿಲ್ಲ. ಬರೀ ಅವ್ರಿವ್ರ ಮನೆ ಮುಂದೆ ಟೈಮ್ ಪಾಸ್ ಮಾಡ್ತಿದ್ದ. ಈಗ ಅವ್ನ ಹೆಂಡ್ತಿ ನಮ್ಮ ಹೊಸ್ಮನೆ ಕೆಲ್ಸಕ್ಕೆ ಬರ್ತಿದ್ರಿಂದ ಯಾವಾಗ್ಳೂ ಅಲ್ಲೇ ಕಣದಲ್ಲಿ ಇರ್ತಿದ್ದ. ಯಾರದ್ರೂ ಮಾತಾಡಕ್ಕೆ ಸಿಕ್ಕೇ ಸಿಕ್ತಾರೆ ಅಂತ. ನನಿಗೆ ಆಯಪ್ಪ ಯಾವಾಗ್ಲು "ಸಾವ್ಕಾರ" ಅಂತ ಕರೀತಿದ್ದು. ಆಯಪ್ಪನ ಹೆಸ್ರು "ಮೂರ್ತ್ಯಪ್ಪ". ನಾನು "ಮೂರ್ತ್ಯಪ್ಪ" ಅಂತಾನೆ ಕರೀತಿದ್ದೆ.

ಮೂರ್ತ್ಯಪ್ಪ, ನಮ್ಮ ಹಳೇ ಮನೆ ಇತ್ಲಲ್ಲಿ ಇರೋ ಕನಗ್ಲ ಗಿಡದ ಕಡ್ಡಿ ಇವು. ಈ ಕಡ್ಡಿಗಳು ಚಿಗುರೋಡ್ದು, ಗಿಡ ಹಾಗ್ತಾವಂತೆ, ಇಲ್ಲಿ ನೀರೂ ಹತ್ರದಲ್ಲೇ ಇದೆ, ಅದಕ್ಕೆ ಇಲ್ಲೇ ನೆಡ್ತೀನಿ. ಹಾಗೇ ಇದು ಕರಿಬೇವಿನ ಗಿಡ, ಇದನ್ನು ಇಲ್ಲೇ ನೆಡ್ತೀನಿ.

ಅಲ್ಲಾ ಸಾವ್ಕಾರಾ, ಒಂದು ಕಡಿ ನೆಡು ಸಾಕು, ನಿಮ್ದೊಂದು ಮನೆಗೆಲ್ಲ ಎಷ್ಟು ಗಿಡ ಬೇಕು? ಎಷ್ಟು ಹೂವು ಬೇಕು? ಮತ್ತೆ ಹೂವಿನ ಗಿಡ, ಕರಿಬೇವಿನ ಗಿಡದ ನಡ್ವೆ ಸ್ವಲ್ಪ ಜಾಗ ಬಿಡಿ. ಅವು ಬೆಳ್ದು ದೊಡ್ದವಾದ್ಮೇಲೆ ಅವಕ್ಕೆ ಇನ್ನೂ ಜಾಗ ಬೇಕಾಗುತ್ತೆ. ನಿಮ್ಮ ಹಳೇ ಮನೆ ಹಿಂದೆ ಇರೋ ಗಿಡನೆ ನೋಡಿ, ಈಗ ಎಷ್ಟು ದೊಡ್ಡದಾಗಿದೆ ಅಂತ.

ಆತು ಮೊರ್ತ್ಯಪ್ಪ ಸ್ವಲ್ಪ ಜಾಗ ಬಿಡ್ತೀನಿ. ಈ ಕಡ್ಡಿಗಳು, ಚಿಗುರೋಡಿಯೋದೆ ನಂಗೆ ಡೌಟು, ಅದಿಕ್ಕೆ ಈ ಎರಡು ಕಡ್ಡಿಗಳನ್ನ ನಾಲ್ಕು ಚಿಕ್ಕ ಚಿಕ್ಕ ಕಡ್ಡಿ ಮಾಡಿ, ಒಂದೊಂದತ್ರ ಎರಡೆರಡು ಕಡ್ಡಿ ನೆಡ್ತೀನಿ.

ಅಯ್ಯೋ ಬೇಡ ಸಾವ್ಕಾರಾ, ಒಂದೇ ಕಡ್ಡಿ ನೆಡಿ ಸಾಕು. ಅದಕ್ಕಿಂತ ಚಿಕ್ಕದಾಗಿ ಕತ್ತರಿಸ್ಬೇಡಿ. ಅದು ಉಪ್ಯೊಗಕ್ಕೆ ಬರಲ್ಲ.

ನಾನು ಮೂರ್ತ್ಯಪ್ಪನ ಮಾತನ್ನ ಲೆಕ್ಕಕ್ಕೆ ಇಟ್ಕಲ್ದೆ, ಎರಡನ್ನು ಕತ್ತರ್ಸಿ ನಾಕು ತುಂಡು ಮಾಡ್ದೆ. ಒಂದಡಿ ಆಳದ ಮೂರು ಗುಂಡಿ ತಗ್ದೆ, ಅದ್ರಲ್ಲಿ ಒಂದಿಷ್ಟು ಕಪ್ಪು ಮಣ್ಣು, ಕೆಂಪು ಮಣ್ಣು, ಒಂದಿಷ್ಟು ತಿಪ್ಪೆ ಗೊಬ್ರ ಹಾಕಿ ರಾಡಿ ಮಾಡ್ದೆ. ಒಂದು ಗುಣಿಗೆ ಎರಡು ಕಡ್ಡಿ, ಅಂದ್ರಂತೆ ಮೂರು ಗುಣಿಲಿ ನಾಲ್ಕು ಕಡ್ಡಿ ಮತ್ತೆ ಒಂದು ಕರಿಬೇವಿನ ಗಿಡ ಅಂತ ನನ್ನ ಪ್ಲ್ಯಾನ್ ಇತ್ತು.

ಗುಣಿಯ ಮದ್ಯೆದಲ್ಲಿ ಹೂವಿನ ಗಿಡದ ಎರಡೆರಡು ಕಡ್ಡಿ ಇಟ್ಟು, ಮುಚ್ಚಿದೆ. ಸಪೋರ್ಟಿಗೆ ಇರ್ಲಿ ಅಂತೇಳಿ ಇನ್ನೊಂದು ಬೇರೆ ಜಾತಿಯ ಒಣ ಕಂಡಿನೂ ಅದ್ರ ಜೊತೆ ನೆಟ್ಟಿದ್ದೆ. ಇದೆ ರೀತಿ ಕರಿಬೇವಿನ ಗಿಡಕ್ಕೂ ಮಾಡಿದ್ದೆ.

ಅಲ್ಲಾ ಸಾವ್ಕಾರಾ. ಅದಿನ್ನೂ ಬೇರಿಲ್ಲದ, ಎಲೆಯಿಲ್ಲದ ಕಡ್ಡಿ ಅಷ್ಟೇ. ಅದಕ್ಕೆ ಬೇರ್ಬೇರೆ ಮಣ್ಣು, ತಿಪ್ಪೆ ಗೊಬ್ರ ಎಲ್ಲಾ ಯಾಕೇ? ಸುಮ್ನೆ ಸ್ವಲ್ಪ ನೆಲ ಹಸಿ ಮಾಡಿ ಕಡ್ಡಿ ಸಿಗ್ಸಿ ಸಾಕು. ಕರಿಬೇವಿನ ಗಿಡಕ್ಕೂ ಅಷ್ಟೇ, ಅದು ಇನ್ನೂ ಹೊಸ ಬೇರು ಬರ್ಬೇಕು. ಅಲ್ಲಿತಂಕಾ ಅದಕ್ಕೆ ನೀರು ಮತ್ತೆ ಸ್ವಲ್ಪ ಮಣ್ಣು ಸಾಕು,

ಎರಡು ದಿನ ಬಿಟ್ಟು ಬಂದೆ, ಆದ್ರೆ ಇನ್ನೂ ಚಿಗುರೇ ಕಾಣಿಸ್ತಿಲ್ಲ. ಅಯ್ಯೋ ಕಡ್ಡಿ ಒಣಗಿ ಹೋಗಿದೆ ಅನ್ಸುತ್ತೆ. ಮೂರ್ತ್ಯಪ್ಪ ನೀನೆಳಿದ್ದು ಸರಿ, ನಾನು ಕಡ್ಡಿನ ಅಷ್ಟು ಚಿಕ್ಕದಾಗಿ ತುಂಡು ಮಾಡ್ಬಾರ್ದಾಗಿತ್ತು ಅನ್ಸುತ್ತೆ. ನಾನು ಮತ್ತೆ ಬೇರೆ ಕಡ್ಡಿ ತಂದು ನೆಡ್ತೀನಿ.

ಅಯ್ಯೋ ಸಾವ್ಕಾರಾ, ಅದಕ್ಕಿನ್ನೂ ಎರಡೇ ಎರಡು ದಿನ ಹಾಗಿದೆ, ಈಗ್ಲೇ ಹೇಗೆ ಚಿಗುರು ಬರುತ್ತೆ? ಒಂದು ವಾರನಾದ್ರೂ ಟೈಮ್ ಕೊಡ್ರಿ ಅದುಕ್ಕೆ. ಅದು ಮೊದ್ಲು ನೆಲದ ಒಳ್ಗೆನೇ ಸಣ್ಣ ಸಣ್ಣ ಬೇರು ಬರುತ್ತೆ. ಆ ಬೇರು ಬಂದಾದ ಮೇಲೆ ಸಣ್ಣ ಚಿಗುರೆಲೆ ಕಾಣ್ಸುತ್ತೆ. ಆ ಗಣ್ಣು ಇದ್ದಾವಲ್ಲ? ಅಲ್ಲೇ ಚೂರು ಹಸುರು ಬಣ್ಣದ ಚಿಗುರು ಬರುತ್ತೆ ನೋಡ್ತಿರಿ.

ಅನ್ಗಂತೀಯ ಮೂರ್ತ್ಯಪ್ಪ, ಯಾವ್ದುಕ್ಕು ಕಡ್ಡಿ ಒಣಗ್ದಂಗೆ ಅದರ ತುದಿಗೆ ಆಕ್ಳ ಸಗಣಿ ತಂದು ಅಂಟಿಸ್ತೀನಿ.

ಆ ಕೆಲಸ ಬೇಕಾದ್ರೆ ಮಾಡು ಸಾವ್ಕಾರಾ.

ಬೇರೆಯವರ ಮನೆ ಮುಂದಿನ ಹೊಸ ಗಿಡಗಳಿಗೆ ಈ ರೀತಿ ಮಾಡಿದ್ದು ಗಮನಿಸಿದ್ದ ನಾನು, ಸಗಣಿನ ತಂದು ಅದೇ ರೀತಿ ಕಡ್ಡಿ ತುದಿಗೆ ಮೆತ್ತಿದೆ.

ಮತ್ತೆ ಎರಡು ದಿನ ಬಿಟ್ಟು ಬಂದು ಗಮನ್ಸಿದೆ. ಆದ್ರೆ ಇನ್ನೂ ಚಿಗುರು ಕಾಣಿಸ್ತಿಲ್ಲ.ಅಷ್ಟೊತ್ತಿಗೆ ಮೂರ್ತ್ಯಪ್ಪ ನನ್ನ ಹಿಂದೆ ಬಂದು ನಿಂತು ನನ್ನನ್ನೇ ನೋಡ್ತಿದ್ದ.


~~~~ (*) ~~~~


ತುಂಬ ಉದ್ದ ಆಯ್ತು, ಅದಕ್ಕೆ ಇವತ್ತಿಗೆ ಇಲ್ಲಿಗೆ ನಿಲ್ಲಿಸಿ, ಮತ್ತೆ ಮುಂದಿನ ಭಾಗವನ್ನ ಇನ್ನೊಂದಿನ ಹಾಕ್ತೇನಿ

ಶನಿವಾರ, ನವೆಂಬರ್ 7, 2009

ಏನಪ್ಪಾ ಇದು? ರೂಪಾಯಿಗೇನೇ ಬೆಲೆ ಕಟ್ಟೋದಾ!

ನಮ್ಮ ದೇಶ ಪ್ರಗತಿಯನ್ನ, ಸ್ವಾವಲಂಬನೆಯನ್ನ ಹೇಗೆ ಸಾಧಿಸೋದು? ಅದಕ್ಕೂ ಹಣ ದುಬ್ಬರಕ್ಕೂ ಇರುವ ಸಂಬಂದ ಏನು? ಹೀಗೆ ಇನ್ನೂ ಕೆಲ್ವು ಆರ್ಥಿಕ ವಿಷ್ಯಗಳನ್ನ ದೀರ್ಘವಾಗಿ, ಸರಳ್ವಾದ ಭಾಷೆಯಲ್ಲಿ, ಕುತೂಹಲ ಬರಿತ್ವಾಗಿ ಬರಿಬೇಕು ಅಂತೇಳಿ ತುಂಬಾ ದಿನದಿಂದ ಮನಸ್ಸಿತ್ತು. ವಾಣಿಜ್ಯ ವಿಷಯದಲ್ಲಿ ಪದವಿ ಮಾಡಿರೋವ್ರಿಗೆ ಇಂತಹ ವಿಷ್ಯಗಳು ತುಂಬಾ ಆಳ್ವಾಗಿ ತಿಳ್ದಿರುತ್ತೆ. ನಾನು ವಾಣಿಜ್ಯ ವಿದ್ಯಾರ್ಥಿ ಅಲ್ದೇ ಹೊದ್ರೂನೂ ಆಸಕ್ತಿಯಿಂದ ಅಷ್ಟೆ ಇಲ್ಲಿ ಬರೆದದ್ದು. ತಪ್ಪು-ಒಪ್ಪುಗಳು ಇರ್ಬೌದು. ಓದಿ ಮುಗ್ಸಿ ಮೇಲೆ ಬರಹ ಇಷ್ಟನೂ ಆಗ್ಬೌದು ಅಥ್ವ ಹೊಸ ಹೊಸ ಗೊಂದಲಗಳೂ ಸಹ ಆಗ್ಬೌದು. ವಾಕ್ಯಗಳು ಹಿಂದು-ಮುಂದು ಆಗ್ಬೇಕಾಗಿತ್ತು ಅನ್ನಿಸ್ಬೌದು, ಅಥ್ವ ಅರ್ಥನೇ ಆಗ್ದೇನೇ ಇರ್ಬೌದು. ಇವೆಲ್ಲವನ್ನೂ ಗಮನದಲ್ಲಿಟ್ಟು ಕೊಂಡು ಏನಾದ್ರೂ ಮುಂಜಾಗ್ರತೆ ಕ್ರಮಗಳನ್ನ ತಗೋ ಬೇಕು ಅನ್ಸಿದ್ರೆ, ತಗೋಂಡು ನಂತರ ಓದಿ.


~~~ ( * ) ~~~

"ವ್ಯಾಪಾರ" ಮೊದಲ? "ಹಣ" ಮೊದಲ? (ಹಣ ಹುಟ್ಟಿದ್ದು ಹೇಗೆ?)
ನಮ್ಮ ದಿನ ನಿತ್ಯದ ಒಡನಾಟದಲ್ಲಿ ಮೊದಲು ಬಂದಿದ್ದು, ಹಣವೂ ಅಲ್ಲ, ವ್ಯಾಪಾರವೂ ಅಲ್ಲ. ಮೊದಲು ಹುಟ್ಟಿದ್ದು ಅವಶ್ಯಕತೆ,
 * ಅವಶ್ಯಕತೆಯಿಂದ - ಅನಿವಾರ್ಯತೆ,
 * ಅನಿವಾರ್ಯದಿಂದ - ಅವಲಂಬನೆ,
 * ಅವಲಂಬನೆಯಿಂದ - ಪರಸ್ಪರ ಸಹಬಾಳ್ವೆ,
 * ಸಹಬಾಳ್ವೆಯಲ್ಲಿಯೇ - ಒಂದು ಸ್ಪರ್ದೆ.
 * ಈ ಸ್ಪರ್ದೆಯೇ - ವ್ಯಾಪಾರ.
 * ವ್ಯಾಪಾರಕ್ಕೆ ಅನುವಾಗೋದಕ್ಕೆ ಹುಟ್ಟಿದ ಹೊಸ ಅಂಶವೇ "ಹಣ".

ಉದಾಹರಣೆಗೆ,
 * ಮೊದ್ಲು ಮನುಷ್ಯನಿಗೆ ಬೇಕಿದ್ದು ತಿನ್ನೋಕೆ ಒಂದಿಷ್ಟು ಆಹಾರ, ಇದು ಅವಶ್ಯಕತೆ. ತಿನ್ನೋಕೇ ಬೇಕಾದ ಎಲ್ಲಾ ಉತ್ಪನ್ನಗಳನ್ನೂ  ಒಬ್ಬನೇ ವ್ಯಕ್ತಿಯಿಂದ ಅಥ್ವ ಒಂದೇ ಕುಟುಂಬದಿಂದ ಪೂರೈಕೆ ಮಾಡ್ಕೊಳ್ಳೊಕ್ಕೆ ಹಾಗ್ತಿರ್ಲಿಲ್ಲ.
 * ಅಕ್ಕಿಯಿದ್ದವ್ನತ್ರ ಗೋದಿ ಇರ್ತಿರ್ಲಿಲ್ಲ. ಗೋದಿ ಇದ್ದವ್ನತ್ರ ತರ್ಕಾರಿ ಇರ್ತಿರ್ಲಿಲ್ಲ. ಈಗ ಪರಸ್ಪರ ಸಹಕಾರ ಅನಿವಾರ್ಯವಾಯ್ತು. ಅಕ್ಕಿಯಿದ್ದವ್ನು ಒಂದಿಷ್ಟು ಅಕ್ಕಿ ಕೊಟ್ಟು ಅದಕ್ಕೆ ಬದಲಾಗಿ ಸ್ವಲ್ಪ ಗೋದಿ ಇರೋವ್ನತ್ರ ಗೋದಿಯನ್ನ, ತರ್ಕಾರಿಯವ್ನತ್ರ ತರ್ಕಾರಿಯನ್ನ ತೊಗೋಂಡ.
 * ಇದೇ ತರ ಉಳ್ದವ್ರು ಸಹ ತಮ್ಮ ಉತ್ಪನ್ನಗಳನ್ನ ಇತರರ ಉತ್ಪನ್ನಗಳೊಂದಿಗೆ ಅವಶ್ಯಕತೆಗೆ ತಕ್ಕಂತೆ ಕೊಟ್ಟು ತಗೋಳ್ಳೋ ವ್ಯವಸ್ಥೆ ಸೃಷ್ಠಿ ಆಯ್ತು. ಈ ರೀತಿ ಪರಸ್ಪರ ಒಬ್ಬರಿಗೊಬ್ರು ಅವಲಂಬಿತವಾದ್ರು.
 * ಈ ರೀತಿಯ ಪರಸ್ಪರ ಸಹಕಾರದ ಅನಿವಾರ್ಯತೆಯ ಅವಲಂಬನೆಯನ್ನೇ ನಾನು ಸಹಬಾಳ್ವೆ ಅಂತ ಕರೆದದ್ದು.
 * ಈ ಸಹಬಾಳ್ವೆ ಹೀಗೇ ವ್ಯವಸ್ಥಿತವಾಗಿ ಸಾಗ್ತ ಇತ್ತು. ಜನಸಂಖ್ಯೆ ಹೆಚ್ಚಾಯ್ತು, ಉತ್ಪನ್ನಗಳ ಉತ್ಫಾದನೆ ಹಾಗೂ (ಕ)ಬಳಕೆ ಎರ್ಡರ ಪ್ರಮಾಣವೂ ಹೆಚ್ಚಾಯ್ತ ಬಂತು. ಮುಂದೆ ಇದರಲ್ಲಿ ಪರಸ್ಪರ ಸ್ಪರ್ಧೆ ಏರ್ಪಟ್ತು.
 * ಈ ಸ್ಪರ್ಧೆಯನ್ನೇ ನಾನು ವ್ಯಾಪಾರ ಅಂದಿದ್ದು. ಆದ್ರೆ ಈ ಹೊಸ ವ್ಯಾಪಾರದ ವ್ಯವಸ್ಥೆಯಲ್ಲಿ ಒಂದಿನ ಒಂದು ಗೊಂದಲ ಉಂಟಾತು. ಹೇಗೆ?
 * ಅಕ್ಕಿ, ಗೋದಿ, ತರ್ಕಾರಿ ಅಥ್ವಾ ಇನ್ನಾವುದೇ ಉತ್ಪನ್ನವಾಗಿರ್ಬೌದು, ಇವುಗಳನ್ನ ಕೊಡು-ತಗೋಳ್ಳೋವಾಗ, ಇವುಗಳ ಅಳತೆಯ ಪ್ರಮಾಣದಲ್ಲಿ, ಮೌಲ್ಯದ ವಿಷಯದಲ್ಲಿ, ಸಾಕಾಷ್ಟು ಭಿನ್ನಾಭಿಪ್ರಾಯಗಳು ಮೂಡಿದ್ವು. ಈ ವ್ಯವಸ್ಥೆಯಲ್ಲಿ ಸ್ವಲ್ಪ ಬದಲಾವಣೆಯ ಅವಶ್ಯಕತೆ ಇದೆ ಅನ್ನಿಸ್ತು. ಈ ಹೊಸ ಬೆಳವಣಿಗೆಯ ಪ್ರಕಾರ, ಪರಸ್ಪರರು ನೇರ್ವಾಗಿ ತಮ್ಮ ತಮ್ಮ ಉತ್ಪನ್ನಗಳನ್ನ ಅದಲು-ಬದಲು ಮಾಡ್ಕೊಳ್ಳೊದರ ಬದಲು, ಪ್ರತೀ ಉತ್ಪನ್ನಗಳಿಗೆ ಒಂದಿಷ್ಟು ಮೌಲ್ಯ ನಿಗದಿ ಮಾಡಿದ್ರು, ಈ ಮೌಲ್ಯವನ್ನ ಅಳತೆ ಮಾಡ್ಲಿಕ್ಕೆ ಬಂದ ಮತ್ತೊಂದು ಹೊಸ ವ್ಯವಸ್ಥೆಯೇ "ಹಣ".
 * ವ್ಯಾಪಾರದಿಂದ ಹಣ, ಹಣದಿಂದ ಮತ್ತೋಂದಿಷ್ಟು ಹಣ. ಇದೆಲ್ಲಕ್ಕೆ ಅನುಕೂಲವಾಗುವಂತೆ ಒಂದು ಮಾರುಕಟ್ಟೆ.

ಜಾಗತಿಕವಾಗಿ ಹಣವನ್ನ ವಿವಿದ ರೀತಿಯಲ್ಲಿ ಗುರ್ತಿಸ್ತಾರೆ. ಉದಾಹರಣೆಗೆ,
 * ನಮ್ಮಲ್ಲಿ "ರೂಪಾಯಿ" ( Rs; INR)
 * ಬ್ರಿಟೀಷ್ರಲ್ಲಿ "ಪೌಂಡ್" ( £; GBP)
 * ಅಮೇರಿಕದ "ಡಾಲರ್" ( $; USD)
 * ಯುರೋಪಿನ "ಯೂರೋ"( €; EUR) ,
 * ರಷ್ಯದಲ್ಲಿ "ರಬಲ್" ( руб; RUB)
 * ಜಪಾನ್ನಲ್ಲಿ "ಯನ್" ( ¥; JPY) ಇತ್ಯಾದಿ... http://www.xe.com/symbols.php


ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶದ ಪ್ರಗತಿಯನ್ನ ಪ್ರತಿಬಿಂಬಿಸೋದರಲ್ಲಿ ಕೆಳಗಿನ ಈ ಎರ್ಡೂ ಅಂಶಗಳು ಪಾತ್ರವಹಿಸ್ತಾವೆ.
 * ಹಣದ ಮೌಲ್ಯ
 * ಸ್ವಾವಲಂಬನೆ

ಹಣದ ಮೌಲ್ಯ ಅಂದ್ರೆ ಏನು? ಮೊದ್ಲು ತಿಳ್ಕೋಳ್ಳೋಣ.
ಹಣದ ಮೌಲ್ಯ ಅಂದ್ರೆ, ನನ್ನತ್ರ ಇರೋ ಪ್ರತಿ ಒಂದೊಂದು ರೂಪಾಯಿಗೆ, ಮಾರುಕಟ್ಟೆಯಲ್ಲಿ ಎಷ್ಟು ಬೆಲೆ ಇದೆ ಅಂತ ಅರ್ಥ.


ಏನಪ್ಪಾ ಇದು, ರೂಪಾಯಿಗೇನೇ ಬೆಲೆ ಕಟ್ಟೋದಾ!!! ಏನದರರ್ಥ?
ನೋಡೋಣ ಸಾದ್ಯವಾದಷ್ಟು ತಿಳ್ಕೋಳ್ಳೊ ಪ್ರಯತ್ನ ಮಾಡೋಣ. ಉದಾಹರಣೆಗೆ, ಈಗ್ಗೆ ಸುಮಾರು ಇಪ್ಪತ್ತು ವರ್ಷದ ಹಿಂದೆ, ನಮ್ಮತ್ರ ಒಂನ್ನೂರು ರೂಪಾಯಿ ಇತ್ತು ಅಂದಿದ್ರೆ, ನಾಲ್ಕಾರು ಜನ ಇರೋಂತ ಒಂದು ಕುಟುಂಬಕ್ಕೆ ಒಂದು ವಾರಕ್ಕೆ ಸಾಕಾಗೋಷ್ಟು ತರ್ಕಾರಿ, ಅಕ್ಕಿ, ಬೇಳೆ, ಎಣ್ಣೆ, ಹಾಲು ಇತ್ಯಾದಿಯನ್ನ ಕೊಂಡ್ಕೋಂಡು ಬರ್ಬೌದಿತ್ತು. ಆದ್ರೆ ಇವತ್ತು ಕೇವಲ ಒಂದು ಲೀಟರ್ ಹಾಲಿನ ಬೆಲೆ ಇಪ್ಪತ್ತು ರೂಪಾಯಿ ಮುಟ್ಟಿದೆ. ಒಂದು ಕೇ.ಜಿ ಅಕ್ಕಿ ಬೆಲೆ ನಲವತ್ತು ದಾಟಿದೆ. ತರ್ಕಾರಿಗಳಂತೂ ಮಾರ್ಕಟ್ಟೆಗೆ ಹೋಗಿ ಕೊಂಡ್ಕೋಂಡು ನಮ್ಮ ಚೀಲದಲ್ಲಿ ಹಾಕ್ಕೋಳ್ಳೊಕಿಂತ ಮುಂಚೆ ಬೆಲೆ ಎಷ್ಟು ಅಂತ ಹೇಳೊಕ್ಕೇ ಸಾದ್ಯ ಇಲ್ಲ.

ಇರ್ಬೌದು ಆದ್ರೆ ಆವತ್ತು ವಾರಕ್ಕೆ ಹತ್ತು ರೂಪಾಯಿ ಸಿಗೋ ಕೆಲ್ಸಕ್ಕೆನೇ ಈವತ್ತು ನೂರು ರೂಪಾಯಿ ಸಿಗುತ್ತಲ್ಲಾ? ಆದಾಯನೂ ಹೆಚ್ಚು ಖರ್ಚೂ ಹೆಚ್ಚು, ಅದ್ರಲ್ಲಿ ಹಣದ ಮೌಲ್ಯದ ಪ್ರಶ್ನೆ ಏನ್ಬಂತು?

ಹೌದು, ಆವತ್ತಿನ ದಿನಗಳಲ್ಲಿ ಆದಾಯನೂ ಕಡ್ಮೆ ಇತ್ತು ತಕ್ಕಂತೆ ಖರ್ಚೂ ಕಡ್ಮೆ ಇತ್ತು. ಇವತ್ತಿನ ದಿನಗಳಲ್ಲಿ ಉತ್ಪಾದನೆಯನ್ನ ಹೆಚ್ಚು ಮಾಡ್ಕಳ್ಳಕ್ಕೆ ಅನೇಕ ಹೊಸ ಹೊಸ ತಂತ್ರಜ್ಞಾನವನ್ನ ಅಳವಡಿಸ್ಕೊಳ್ತಾ ಇದೀವಿ. ಆದ್ರೆ ಹೆಚ್ಚುತ್ತಿರೋ ಜನಸಂಖ್ಯೆಗೆ ಸರ್ಯಾಗಿ ಉತ್ಪಾದನೆ ಜಾಸ್ತಿ ಹಾಗ್ದೆ ಹೋದ್ರೆ, ಎಲ್ವೂ ತಲೆ ಕೆಳಗಾಗುತ್ತೆ. ಹೀಗಾಗಿಯೇ ತಂತ್ರಜ್ಞಾನಕ್ಕೆ ಇವತ್ತು ಇಷ್ಟೋಂದು ಮಹತ್ವ ಬರೋಕ್ಕೆ ಕಾರಣ್ವಾಯ್ತು.

ಒಂದು ಉದಾಹರಣೆಗೆ, ಇಂದಿರಾಗ್ಯಾಂದಿಯವ್ರ ಕಾಲ್ದಲ್ಲಿ ಹಸಿರು ಕ್ರಾಂತಿ ಹಮ್ಮಿಕ್ಕೊಂಡಿದ್ರು. ಆಗ ನಮ್ಮ ಆಹಾರ ಉತ್ಪನ್ನಗಳ ಪ್ರಮಾಣವನ್ನ ಅನೇಕ ಪಟ್ಟು ಹೆಚ್ಚಿಸ್ಕೊಳ್ಳಿಕ್ಕಾಯ್ತು. ಅದು ನಮ್ಗೆ ತುಂಬಾನೇ ಅನಿವಾರ್ಯವಾಗಿತ್ತು. ನಮ್ಮ ಜನಸಂಖ್ಯೆಯ ಅವಶ್ಯಕತೆಗಿಂತ ಎಷ್ಟೋ ಪಟ್ಟು ಕಡ್ಮೆ ಪ್ರಮಾಣದಲ್ಲಿ ನಮ್ಮಲ್ಲಿ ಆಹಾರ ಉತ್ಪಾದನೆ ಇತ್ತು. ಅವತ್ತಿನ ದಿನಗಳಲ್ಲಿ ಆಮದು ಮಾಡ್ಕೋಳ್ಳೊದು ಸಹ ದುಬಾರಿಯಿತ್ತು. ಅಥ್ವ ಅದು ಸಾದ್ಯವಿತ್ತೊ ಇಲ್ವೊ ನಂಗೊತ್ತಿಲ್ಲ.

ಹಣದ ಮೌಲ್ಯ ಏರು-ಪೇರು ಹಾಗೋಕ್ಕೇ ಕಾರ್ಣಗಳು ಹಲ್ವಾರು ಇರ್ಬೌದು. ಅತೀ ಮುಖ್ಯವಾಗಿ ಉತ್ಪಾದನೆ ಹಾಗೂ ಭಕ್ಷಕರ ಪ್ರಮಾಣದ ಮೇಲೆ ಇದು ತುಂಬಾ ಅವಲಂಬಿತವಾಗಿರುತ್ತೆ.
 * ಮೊದಲ್ನೇದ್ರ ಪ್ರಮಾಣ ಎರಡ್ನೇದ್ರ ಪ್ರಮಾಣಕ್ಕಿಂತ ಹೆಚ್ಚಿದ್ದಾಗ ಹಣದ ಬೆಲೆ (ಮೌಲ್ಯ) ಯೂ ಹೆಚ್ಚಾಗುತ್ತೆ.
 * ಮೊದಲ್ನೇದ್ರ ಪ್ರಮಾಣ ಎರಡ್ನೇದ್ರ ಪ್ರಮಾಣಕ್ಕಿಂತ ಕಡ್ಮೆಯಾದಾಗ ಹಣದ ಬೆಲೆ (ಮೌಲ್ಯ) ನೂ ಕುಸಿಯುತ್ತೆ.

ಇದೇ ಕಾರಣಕ್ಕೇನೇ ಇಂದಿರಮ್ಮನ ಕಾಲ್ದಲ್ಲಿ ನಮ್ಮ ರೂಪಾಯಿಯ ಮೌಲ್ಯ ಡಾಲರ್ ಎದುರಿಗೆ ದಾಖಲೆ ಪ್ರಮಾಣ್ದಲ್ಲಿ ಕುಸಿದಿದ್ದು. ಇವತ್ತಿಗೂ ಕುಸಿತಿದೆ.

ಎಲ್ಲಿವರ್ಗೆ ನಮ್ಮ ಉತ್ಪನ್ನಗಳ ಮೇಲೆ ಬೇರೆಯವ್ರು ಅವಲಂಬಿತ್ವಾಗಿರ್ತಾರೋ ಅಲ್ಲಿವರ್ಗೆ ನಾವು ಸುರಕ್ಷಿತವಾಗಿರ್ತೀವಿ. ನಮ್ಮಲ್ಲಿ ಯಾವ್ದೂ ಉತ್ಪಾದನೆ ಇಲ್ಲಾಂದ್ರೆ ಅಥ್ವ ನಮ್ಮಲ್ಲಿರೋ ಉತ್ಪನ್ನಗಳಿಗೆ ಬೇಡಿಕೆ ಇಲ್ಲಾಂದ್ರೆ ಮುಂದಿನ ಕಷ್ಟದ ದಿನಗಳ ಬಗ್ಗೆ ಎಚ್ಚರಿಕೆ ವಹಿಸ್ಬೇಕಾಗುತ್ತೆ. ಉತ್ಪಾದನೆಗೆ ಕಚ್ಚಾವಸ್ತುಗಳು ಬೇಕು. ಇಂತಹ ಕಚ್ಚಾವಸ್ತುಗಳಿಗೆ ನಾವು ಪ್ರತ್ಯಕ್ಷವಾಗಿ ಅಥ್ವ ಪರೋಕ್ಷವಾಗಿ ನೈಸರ್ಗಿಕ ಸಂಪನ್ಮೂಲಗಳನ್ನ ಅವಲಂಬಿಸಿದಿವಿ. ಆದ್ರೆ ಇಂತಹ ಸಂಪನ್ಮೂಲಗಳು ತುಂಬ ನಿರ್ದಿಷ್ಠವಾಗಿ ಹಾಗೂ ಸೀಮಿತ್ವಾಗಿ ದೊರಿತವೆ. ಅವಕ್ಕೂ ಒಂದು ಅಂತ್ಯ ಅಂತ ಇರುತ್ತೆ. ಕಾಲ ಕ್ರಮೇಣ ಒಂದೊಂದೇ ಸಂಪನ್ಮೂಲಗಳು ಸಂಪೂರ್ಣವಾಗಿ ಖಾಲಿ ಹಾಗ್ತಾ ಬರುತ್ವೇ.

ಈಗ ಜಾಗತಿಕ ಮಟ್ಟದಲ್ಲಿ ಒಂದು ದೇಶದ ಹಣದ ಮೌಲ್ಯ ಹಾಗೂ ಆ ದೇಶದ ಪ್ರಗತಿ ಪರಸ್ಪರ ಒಂದಂಕ್ಕೊಂದು ಜೊತೆ ಜೊತೆಯಾಗಿ ಸಾಗ್ತಾವೆ. ನಾವು ನಮ್ಮ ಹಣವನ್ನ ಜಾಗತಿಕ ಮಾರುಕಟ್ಟೆಯಲ್ಲಿ ವ್ಯಯಿಸಿ, ಅದರ ಮೌಲ್ಯಕ್ಕೆ ತಕ್ಕಂತೆ ಇತರೆ ಅವಶ್ಯಕ ಉತ್ಪನ್ನಗಳನ್ನ ಖರೀದಿ ಮಾಡ್ಬೌದು. ಅದೇ ರೀತಿ, ಇತರೆ ದೇಶ್ದವ್ರು ಸಹ ತಮ್ಮ ಹಣವನ್ನ ಖರ್ಚ್ಮಾಡಿ, ಅವರಿಗೆ ಅಗತ್ಯವಾದ ಉತ್ಪನ್ನಗಳನ್ನ ಖರೀದಿಸ್ಬೌದು.

ಇವತ್ತು ಅಮೇರಿಕದ ಅರ್ಥ ವ್ಯವಸ್ಥೆ ದುಸ್ಥಿತಿಯಲ್ಲಿದ್ದಾಗ, ಬೇರೆ ಹಲವರು ಇದ್ರಿಂದ ನಷ್ಟಕ್ಕೆ ಒಳ್ಗಾಗಿದ್ದು ಸುಳ್ಳಲ್ಲ. ಅದಕ್ಕೆ ಕಾರಣ ಇಲ್ಲಿ ನಾವು ಒಬ್ಬರ ಮೇಲೆ ಇನ್ನೋಬ್ರು ಅವಲಂಬಿಗಳಾಗಿರೋದು. ಇದೇ ಸಂದರ್ಭದಲ್ಲಿ ಇನ್ನೂ ಕೆಲ್ವು ದೇಶಗಳು ತಮ್ಮ ಉತ್ಪನ್ನಗಳ ಮಾರುಕಟ್ಟೆಯನ್ನ ವಿಸ್ತರಿಸ್ಕೋಂಡ್ವು. ಜಾಗತಿಕ ಮಟ್ಟದಲ್ಲಿ ಹಣದ ಮೌಲ್ಯದಲ್ಲಿ ಆದ ಏರು.ಪೇರುಗಳನ್ನ ಚಿತ್ರದಲ್ಲಿ ಗಮನಿಸಿ. ಚಿತ್ರ ಕೃಪೆ ಗೂಗಲ್ ‍ಹಾಗೂ ಮಿಂಗ್ ಡಾಟ್ ಕಾಂ.

ಮಾಹಿತಿ ಸಂಗ್ರಹಣೆ, ಸ್ನೇಹಿತರೊಂದಿಗೆ, ಸಹೋದ್ಯೋಗಿಗಳೊಂದಿಗೆ ಅಲ್ಪ ಸ್ವಲ್ಪ್ ಚರ್ಚೆ, ಗೂಗಲ್ ತಾಣಗಳು ಹಾಗೂ ನನ್ನ ಅರ್ದಾಂಗಿಯ ಸಲಹೆಗಳು.


~~~ ( * ) ~~~

ನಿಮ್ಗೆ ಇಷ್ಟ ವಾಯ್ತು ಅಂದ್ರೆ ತಿಳ್ಸಿ, ಇನ್ನೋಂದಿಷ್ಟು ಬರಿತೀನಿ.

ಭಾನುವಾರ, ನವೆಂಬರ್ 1, 2009

ಪ್ರತಿ ಮನೆಮನೇಲಿ ಒಬ್ಬೊಬ್ರು ಇಂಜಿನಿಯರು ಮತ್ತೆ ಡಾಕ್ಟ್ರು

ಕನ್ನಡ ರಾಜ್ಯೋತ್ಸವಕ್ಕೆ ಅಂತೇಳಿ ಕನ್ನಡ ಭಾಷಾಭಿಮಾನದ ವಿಶೇಷ ಬರಹ ಇದು. ಹಾಗಂತ ಇದ್ರಲ್ಲಿ ಯಾವ್ದನ್ನೂ ಹೊಸ್ದಾಗಿ ಬೇಯಿಸಿ ತಂದು ನಿಂಗೆ ಬಡಿಸ್ತಿರೊದಲ್ಲಾ. ಹತ್ತನೇ ತರಗತಿವರ್ಗೆ ಕನ್ನಡ ಮಾದ್ಯಮದಲ್ಲಿಯೇ ಗ್ರಾಮೀಣ ಮಟ್ಟದ ಶಾಲೆಗಳಲ್ಲಿ ಓದ್ಕೊಂನ್ಡು ಬಂನ್ದೀರೊವ್ನು ನಾನು. ಹಾಗಾಗಿ ಅದ್ರ ಬಗ್ಗೆನೇ ಒಂನ್ದಿಷ್ಟು ಬರೀತಿದೀನಿ.

ಇಂಗ್ಳೀಷ್ ಮಾದ್ಯಮದಿಂದ ಬಂದಂತಹ ವಿದ್ಯಾರ್ಥಿಗಳು ಕನ್ನಡ ಮಾದ್ಯಮದಿಂದ ಬಂದಂತ ವಿದ್ಯಾರ್ಥಿಗಳು ಅಂದ್ರೆ ಅಥ್ವಾ ಗ್ರಾಮೀಣ ಮಟ್ಟದಿಂದ ಬಂದಂತಹ ಮಕ್ಳು ಅಂದ್ರೆ ಒಂದ್ರೀತಿ ಕೀಳರಿಮೆಯಿಂದ, ಸಂಕುಚಿತ ಭಾವದಿಂದ ನೋಡೊದಂತು ಸಾಮಾನ್ಯ ಸಂಗ್ತಿ. ಅದಕ್ಕೆ ವಿದ್ಯಾರ್ಥಿಗಳನ್ನ ಮಾತ್ರ ಧೂಷಿಸಿ ಏನೂ ಪ್ರಯೋಜ್ನ ಇಲ್ಲಾ. ಯಾಕಂದ್ರೆ ಬಾಲ್ಯದಿಂದ್ಲೆ ಆ ರೀತಿ ಭಾವ್ನೆಗಳನ್ನ ಅವ್ರ ಪೋಷಕರು ಮಕ್ಳ ತಲೆಗೆ ತುಂಬಿರ್ತಾರೆ. ಮೊದ್ಲು ನಮ್ಮ ಸಮಾಜದಲ್ಲಿರೋ ಇಂಗ್ಲೀಷ್ ಪ್ರಿಯರ ಮಡಿವಂತಿಗೆ ಕಡ್ಮೆ ಹಾಗ್ಬೇಕು. ಇಲ್ದೇ ಹೋದ್ರೆ ಇದೇ ಸಂಸ್ಕ್ರುತಿ ಮುಂದುವರ್ದು ಭವಿಷ್ಯದಲ್ಲಿ ಕನ್ನಡ ಭಾಷೆ ಕಂಣ್ಮರೆ ಆಗೋಕ್ಕೆ ಶತಮಾನಗಟ್ಲೆ ಕಾಯೋ ಅವಶ್ಯಕತೆ ಇಲ್ಲಾ ಅನ್ಸುತ್ತೆ.

ಇಷ್ಟಕ್ಕೂ ಇಂಗ್ಲೀಷೇ ಮಾತೃ ಭಾಷೆ ಆಗಿದ್ರೂ, ಇವತ್ತು ಅಮೇರಿಕದಲ್ಲಿ ಯಾಕೆ ಈ ರೀತಿ ನಿರುದ್ಯೋಗ ಸಮಸ್ಯೆ ಅಂತ ಪ್ರಶ್ನೆನೇ ಬರಲ್ವೇ? ಅದಕ್ಕೆ ಇತರೇ ಹಲ್ವಾರು ಕಾರಣಗಳು ಇರ್ಬೌದು. ಆದ್ರೆ ಕೇವ್ಲಾ ಇಂಗ್ಳೀಷ್ ಬರುತ್ತೆ ಅಂದ ಮಾತ್ರಕ್ಕೆ ಉದ್ಯೋಗ ಖಾತ್ರಿ ಅಂತೇನೂ ಇಲ್ವಲ್ಲಾ?

ನಮಗಿಷ್ಟ ಬಂದ ಯಾವ್ದೇ ವಿಷಯವನ್ನಾಗಲಿ ಮಾತೃ ಭಾಷೆಯಲ್ಲಿಯೇ ಕಲಿಯೋ ವ್ಯವಸ್ಥೆ ಖಂಡಿತ ಬರ್ಬೇಕು. ಕಲಿಕೆಗೆ ಮಾದ್ಯಮವಷ್ಟೇ ಮುಖ್ಯಾ ಅಲ್ಲ. ಕಲಿಯೋ ಭಾವ್ನೆ, ಛಲ, ಆಸಕ್ತಿ ಸೌಕರ್ಯ ಕೂಡ ಇರ್ಬೆಕು. ಸೌಕರ್ಯ ಅಂದಾಕ್ಷಣ ಅದು ಇಂಗ್ಳೀಷ್ ಮಾದ್ಯಮ ಅಂತಲ್ಲಾ. ಕಲಿಕೆಗೆ ಇಂಗ್ಲೀಷ್ ಮಾದ್ಯಮ ಒಂದು ಸೌಕರ್ಯ ಅಲ್ಲ. ಅದೊಂದು ನಮ್ಮನ್ನ ನಾವು ರಾತ್ರಿ ಕಂಡ ಬಾವಿಗೆ ಹಗಲಲ್ಲಿ ತಳ್ಳಿಕೊಂಡು ಬಿದ್ದ ಉದಾಹರಣೆಯಷ್ಟೇ. ಮೊದ್ಲು ಇಂಗ್ಲೀಷ್ ಬಗೆಗಿನ ಅನಗತ್ಯ ವ್ಯಾಮೋಹ ದೂರ್ವಾಗ್ಬೇಕು.

ಇತ್ತೀಚೆಗೆ ಒಂದಿನ ಯುರೋಪಿನಲ್ಲಿ ರೈಲಲ್ಲಿ ಸಂಚರಿಸ್ತಾ ಇದ್ದೆ. ಆಗ ನನ್ನ ಪಕ್ಕ ಕೂತಿದ್ದ ಹುಡ್ಗಿ ದಾರಿ ತುಂಬಾ ಓದ್ತಿದ್ದನ್ನ ಗಮನ್ಸಿ ಪರಿಚಯ ಮಾಡ್ಕಂಡೆ. ಆಕೆ ಫಾರ್ಮಸಿ ವಿದ್ಯಾರ್ಥಿನಿಯಂತೆ. ಅವ್ಳ ಕೈಲಿದ್ದಾ ಪುಸ್ತಕ ಅವ್ಳ ಮಾತೃ ಭಾಷೆಯಲ್ಲಿಯೇ ಇದ್ದದ್ದನ್ನ ಕಂಡು, ನಾನು ಇಂಗ್ಲೀಷ್ ಮಾದ್ಯಮಕ್ಕೆ ಸೇರಿದಾಗ (ಪಿ.ಯೂ.ಸಿ) ಮೊದ ಮೊದ್ಲು ಅನುಭವಿಸಿದ ಗೊಂದ್ಲದ ದಿನಗಳನ್ನ ಊಹಿಸ್ಕೊಂಡೆ. ಆದ್ರೆ ನಮ್ಮಲ್ಲಿ ವಿಪರ್ಯಾಸವೆಂಬಂತೆ ವಿಗ್ನಾನವನ್ನ ಕಲಿಯೊಕ್ಕೆ ಇಂಗ್ಲೀಷ್ ಗೊತ್ತಿರ್ಲೇ ಬೇಕು ಅನ್ನೋ ಕಡ್ಡಾಯ ಇದೆ. ಕಾಗುಣಿತ ಕಲಿಯೊಕ್ಕೆ ಮೊದ್ಲೇ ಅ, ಆ, ಇ, ಈ ... ಕಲಿಲೇ ಬೇಕು ಒಪ್ಕೋಳೋಣ. ಆದ್ರೆ ವಿಗ್ನಾನ, ಗಣಿತ ಇಂತದ್ದೆಲ್ಲಾ ಕಲಿಯೊಕ್ಕೆ ಇಂಗ್ಲೀಷ್ ಕಡ್ಡಾಯ ಏಕೆ?

ಇವತ್ತು ನಮ್ದೇಶದ ಗ್ರಾಮೀಣ ಮಟ್ಟದ ಪ್ರತಿಭೆಗಳು ಸಹ ಬೆಳಕಿಗೆ ಬರ್ಬೆಕು ಅಂದ್ರೆ ನಮ್ನಮ್ಮಾ ಮಾತೃ ಭಾಷೆಯಲ್ಲೇ ಎಲ್ಲವನ್ನೂ ಕಲಿಯೋ ವ್ಯವಸ್ಥೆ ಖಂಡಿತ ಸ್ವಾಗತಾರ್ಹ. ಹಾ!!! ಒಂದ್ಮಾತು, ಇಷ್ಟು ಮಾತ್ರಕ್ಕೆ ಇವತ್ತಿನವರ್ಗೆ ನಮ್ಮ ಸಮಾಜದಲ್ಲಿ ಆಗಿರೋ ಅಭಿವೃದ್ದಿ ಕಾರ್ಯಾಗಳೆಲ್ಲಾ ಕೆವ್ಲಾ ಇಂಗ್ಳೀಷ್ ಮಾದ್ಯಮದ ವಿದ್ಯಾರ್ಥಿಗಳಿಂದ ಅಥ್ವಾ ನಗರ ಪ್ರದೇಶದಿಂದ ಬಂದಿರೋ ಮಕ್ಳಿಂದ ಮಾತ್ರ ಅನ್ನೋ ತೀರ್ಮಾನಕ್ಕೆ ಬಂದ್ಬಿಡ್ಬೇಡಿ. ಎಷ್ಟೇ ಅಸೌಕರ್ಯಗಳಿದ್ರೂ ಸಹ, ಗ್ರಾಮೀಣ ಮಟ್ಟದ ಹಾಗೂ ಕನ್ನಡ ಮಾದ್ಯಮದ ಮಕ್ಳು ಸಹ ಸಾಕಷ್ಟು ಸಾಧನೆಗಳನ್ನ ಮಾಡಿದ್ದಾರೆ. ಮಾಡ್ತಿದಾರೆ, ಮುಂದೆಯೂ ಮಾಡ್ತಾರೆ.

ಯಾವ್ದೇ ವಿಷ್ಯಾವನ್ನಾ ಮಾತೃ ಭಾಷೆಯಲ್ಲಿಯೇ ಕಲಿ ಬೇಕಾದ್ರೆ, ವಿದ್ಯಾರ್ಥಿಗಳಿಗೂ ಸಾಕಷ್ಟು ಸರಳ್ವಾಗಿ, ಸುಲಭ್ವಾಗಿ ಅರ್ಥ ಆಗುತ್ತೆ. ಆದ್ರೇ ಅಲ್ಲೊಮ್ಮೆ ಇಲ್ಲೊಮ್ಮೆ ಬರುವಾ
 * ಗಣಿತದ ಪ್ರಮೇಯಗಳ ನಿರೂಪಣೆಯೋ
 * ವಿಗ್ನಾನದಲ್ಲಿ ಬರೋ ನಾಮಪದಗಳೋ, ಕ್ರಿಯಾಪದಗಳೋ ಅಥ್ವಾ
 * ಇನ್ನೂ ಕೆಲ್ವು ಸಾಮಾನ್ಯ ಪದಗುಚ್ಚಗಳೋ
ಅಲ್ಪ ಸ್ವಲ್ಪ ಕಷ್ಟವಾಗ್ಬೌದು. ಅದಕ್ಕೇಂತ ಶಿಕ್ಷಣ ಮಾದ್ಯಮವನ್ನೇ ಬದಲ್ಸೋದು ಎಷ್ಟು ಸೂಕ್ತ ಹೆಜ್ಜೆ? ಕಲಿಕೆಯಲ್ಲಿ ಮೊದಮೊದ್ಲು ಎಲ್ಲವೂ ಕಷ್ಟವಾಗೋದು ಸಾಮಾನ್ಯ. ಅದಕ್ಕೇ ಅದನ್ನ ಕಲಿಕೆ, ಶಿಕ್ಷಣ ಅಂತ ಅನ್ನೋದು. ಇಲ್ದೇ ಹೊದ್ರೆ ಶಿಕ್ಶಣಿಕಿಂತ ಮೊದ್ಲೇ ಪರೀಕ್ಷೆಗಳನ್ನ ನಡೆಸ್ಬೌದಾಗಿತ್ತು.

ಇಂಗ್ಳೀಷ್ ಮಾದ್ಯಮದಲ್ಲಿ ಅಂದ್ಮಾತ್ರಕ್ಕೆ ವಿಘ್ನಾನ, ಗಣಿತ ಎಲ್ವೂ ಕಲಿಯಕ್ಕೇ ಸರಲ್ವಾಗುತ್ತೆ, ಸುಲಭ್ವಾಗುತ್ತೆ ಅಂತಾದ್ರೆ
 * ಇಂಗ್ಲೀಷ್ನಲ್ಲಿ ಈ ವಿಷ್ಯಗಳಿಗೆ ಸಂಬಂದಿಸಿದ ಕಠಿಣ ಪದಗಳೇ ಇಲ್ವೇ?
 * ಆಗಿದ್ರೆ, ಇಂಗ್ಲೀಷ್ನಲ್ಲಿ ನಿಘಂಟು ಅಂತಾನೇ ಇಲ್ವೇ? ಇದ್ರೂ ಅದನ್ಯಾರೂ ಬಳಸೊದೇ ಇಲ್ವೇ?
 * ಯಾವ್ದೇ ಇಂಗ್ಳೀಷ್ ಪುಸ್ತಕ ಓದಿದ ಕೂಡ್ಲೇ ಎಲ್ವೂ ಸರಳ್ವಾಗಿ ಅರ್ಥ ಆಗ್ಬೇಕು ತಾನೇ?
 * ಅಂಗಾದ್ರೇ, ಇಂಗ್ಳೀಷ್ ಮಾದ್ಯಮದ ವಿದ್ಯಾರ್ಥಿಗಳೇಕೆ ಕಾಂನ್ವೆಟ್ಗೆ, ಶಾಲೆಗೆ, ಕಾಲೇಜ್ಗೆ ಹೋಗ್ತಾರೆ?
 * ವಿಶೇಷ ಮನೆಪಾಠಕ್ಕೆ (ಟ್ಯೂಷನ್) ಯಾಕೇ ಹೋಗ್ತಾರೆ?
 * ಮನೇಲೇ ಕೂತ್ಕಂಡು, ಸ್ವಂತ ಓದಿ ಎಲ್ಲಾ ಕಲ್ಕೋ ಬಹುದಲ್ವೇ?
 * ಕೊನೆಗೆ ಒಟ್ಟಿಗೇ ವರ್ಷದಲ್ಲಿ ಒಂದ್ಸಾರಿ ಪರೀಕ್ಷೆ ಬರಿಯೋಕ್ಕೆ ಮಾತ್ರ ಬಂದ್ರೆ ಸಾಕಾಗಲ್ವೇ?
 * ಇದ್ರಿಂದಾ ನಮ್ಮ ಸರ್ಕಾರಕ್ಕೂ ಹಾಗೂ ಎಲ್ಲಾ ಪೋಷಕರಿಗೂ ಸಾಕಷ್ಟು ಖರ್ಚು ಕಡ್ಮೆ ಹಾಗ್ತಿತ್ತಲ್ವೇ?
 * ಎಲ್ರೂ ತಮ್ತಮ್ಮಾ ಮನೇಲೇ ಒದ್ಕೊಂಡ್ರೆ ಸಾಕು ಅಂತಾದ್ರೆ ಕೆವ್ಲಾ ಆಸಕ್ತಿಯೊಂದಿದ್ರೆ ಸಾಕು, ಎಂತಹ ಬಡ ವಿದ್ಯಾರ್ಥಿ ಸಹ ಸಾಕಷ್ಟು ವಿದ್ಯಾಬ್ಯಾಸ ಮಾಡ್ಬೌದಾಗಿತ್ತಲ್ವೇ?
 * ಆಗ, ನಂದೇಶದ ಪ್ರತಿ ಮನೆಮನೇಲಿ ಒಬ್ಬೊಬ್ರು ಇಂಜಿನಿಯರು ಮತ್ತೆ ಡಾಕ್ಟ್ರು ಇರ್ತಿದ್ದ್ರಲ್ವೇ?

ಆದ್ರೂ ಇವತ್ತು ಇಂಗ್ಲೇಂಡ್, ಅಮೇರಿಕ, ಆಸ್ಟ್ರೇಲಿಯಾ ಇಲ್ಲೇಲ್ಲಾ
 * ಕಾಂನ್ವೆನ್ಟ್ ಗಳು
 * ಕಾಲೇಜ್ಗಳು
 * ವಿವಿದ ವಿಶ್ವ ವಿದ್ಯಾನಿಲಯಗಳು
ಅಂತ ಯಾಕಿವೇ? ಅಲ್ಲೇಲ್ಲಾ ಜನರ ಮಾತೃ ಭಾಷೆನೇ ಇಂಗ್ಲೀಷ್ ಅಲ್ವೇ?

ಯುರೋಪ್ ರಾಷ್ಟ್ರಗಳಲ್ಲಿ, ರಷ್ಯಾದಲ್ಲಿ, ಜಪಾನ್ನಲ್ಲಿ, ಅಷ್ಟು ದೂರ ಏಕೆ? ಪಕ್ಕದ ಚೀನಾದಲ್ಲಿ, ಇಂದಿಗೂ ಇಂಗ್ಲೀಷ್ ಭಾಷೆ ಅಂದ್ರೆ ನಂಮ್ದೇಶ್ದಲ್ಲಿ ಸಿಗೋ ರೀತಿಲಿ ವಿಷೇಶ ಪ್ರತಿಷ್ಟೆ, ಘನತೆ, ಮಾರ್ಯಾದೇ ಯಾವ್ದೂ ಸಿಗಲ್ಲಾ. ಆದ್ರೂ ಈ ದೇಶಗಳು ನಂಮ್ದೇಶಕ್ಕಿಂತ ಯಾವುದ್ರಲ್ಲಿ ಹಿಂದೆ ಇದಾವೇ ಸ್ವಾಮಿ? ಆದ್ರೆ ನಮ್ಮ ಸಮಾಜ್ದಲ್ಲಿ ಇದಕ್ಕೆ ವ್ಯತಿರಿಕ್ತವಾಗಿ ಇಂಗ್ಳೀಷ್ ಭಾಷೇನ ಬಳ್ಸೋದು ಅಂದ್ರೆ ಅವ್ರ ಪ್ರತಿಷ್ಟೆ, ಘನತೆ, ಗೌರವ ಹೆಚ್ಚಾದಂತೆ ಮತ್ತೆ ಅದನ್ನ ತಮ್ಮ ಅಭಿವೃದ್ದಿ ಸಂಖ್ಯೇತವಾಗಿ ಭಾವಿಸ್ತಾರಲ್ಲಾ? ಅದು ಯಾಕೆ?

ಈ ಪ್ರಶ್ನೆಗೆ ಉತ್ತರ ಸರಳ. ಬ್ರಿಟೀಷರು ನಮ್ಮ ಮೇಲೆ ಇನ್ನೂರು ವರ್ಷ ಸತತ್ವಾಗಿ ದಬ್ಬಾಳಿಕೆ ಮತ್ತೆ ಅತ್ಯಾಚಾರ ಮಾಡಿದ್ದೇ ಇದಕ್ಕೆಲ್ಲಾ ಮೂಲ ಕಾರ್ಣ.
ಇಲ್ದೇ ಹೋಗಿದ್ರೆ?
 * ಕನ್ನಡನೂ ಇಲ್ಲಾ
 * ಇಂಗ್ಲೀಷ್ ಕೂಡ ಇಲ್ಲಾ.

ಕೆಲ್ವು ಮೂಲಗಳ ಪ್ರಕಾರ, ಪ್ರಪಂಚದಲ್ಲಿ ಸದ್ಯಕ್ಕೆ ಅತೀ ಹೆಚ್ಚು ಇಂಗ್ಲೀಷ್ ಮಾತಾಡೋವ್ರ ಜನಸಂಖ್ಯೆಯಲ್ಲಿ ನಮ್ದೇಶಕ್ಕೆ ತೃತೀಯ ಸ್ಥಾನ ಸಿಗುತ್ತಂತೆ. ತುಂಬಾ ಅದ್ಬುತ ಸಾಧನೆ ಅಲ್ವೇ? ನಮ್ದೇ ದೇಶದ ಪ್ರತಿಭೆಗಳನ್ನ ಬಲಸ್ಕೋಳ್ದೇ ಹೋದ್ರೂನೂ ಪರ್ವಾಗಿಲ್ಲಾ, ಪ್ರೋತ್ಸಾಸದೇ ಹೋದ್ರೂ ಪರ್ವಾಗಿಲ್ಲಾ, ನಮ್ಗೆ ಇಂಗ್ಲೀಷ್ ಮಾತಾಡಕ್ಕೆ ಮಾತ್ರ ಚೆನ್ನಾಗಿ ಬರುತ್ತೆ. ಶಬ್ಬಾಶ್!

ಇಂಗ್ಲೀಷ್ರು ಬಂದ್ರು ಮುಸಲ್ಮಾನ ದೊರೆಗಳು ಮಾಡ್ತಿದ್ದಾ ದಬ್ಬಾಳಿಕೆಯಿಂದ ನಮ್ಮ ಸಮಾಜನ ಬಚಾವ್ ಮಾಡಿದ್ರು, ಇಲ್ದೇ ಹೋಗಿದ್ರೆ? ಏನಾಗ್ತಿತ್ತು ಅಂತೇಳಿ ಕೊನೆಗೆ ಒಂದು ಹಾಸ್ಯ ಸಂಭಾಷಣೆಯೊಂದಿಗೆ ಈ ಬರಹನ ಮುಗಿಸ್ತೀನಿ

 "ಹೇಯ್, ನಿಂಬ್ದು ಬೇಟಾ, ಯಾವ್ದೂ ಭಾಷೇಲಿ ಓದ್ತದೆ?"

 "ಜಿ, ನಮ್ದುಗೆ ಬೇಟಾಗೆ, ಕನ್ನಡಾಗೆ ಓದ್ತದೆ."

 "ಹೇ! ನಿಂಮ್ದುಗೇ ಇನ್ನೂ ಯಾವ್ದೂಗೇ ಕಾಲ್ದಾಗೇ ಐತೆ? ಕನ್ನಡಾಗೆ ಕಲ್ತು ಏನು ಉಪ್ಯೊಗ ಆಯ್ತದೆ? ಅನ್ತ ಕಳೀಸ್ತೀರಿ?"

 "ಜಿ, ಯಾಕೇ? ಈಗ ನಂಮ್ದುಗೇ ಏನಾತು?"

 "ನಮ್ದುಗೆ ನವಾಬಂಗೆ ಹೇಳಿದ್ದು ನಿಮ್ಗೆ ಇನ್ನೂ ಗೊತ್ತಾಗಿಲ್ಲಾ? ಎಲ್ರೂ ಉರ್ದೂಗೆ ಭಾಷೇಲೀ ಕಲ್ಸಿ ಅಂತ ಹೇಳಿದಾರೆ! ಮುಂದೆ, ಮಕ್ಳಿಗೇ ಇಗ್ನಾನ, ಗಣಿತ ಕಲಿಯಕ್ಕೆ ಶಾನಾ ಸುಲ್ಬಾ ಆಯ್ತಾದಂತೆ!"

 "ಹೌದಾಜೀ, ಇದು ನಮ್ದುಗೇ ಗೊತ್ತೇ ಇರ್ಲಿಲ್ಲಾ. ಇಗೋ ಈಗ್ಲೇ ಹೋಗಿ, ನಂಮ್ದುಗೇ ಬೇಟಾಂದು, ಉರ್ದುಗೇ ಮಾದ್ಯಾಮಕ್ಕೆ  ಸೇರಿಸ್ತದೆ!, ಜೈ ನವಾಬ್"

ಜೈ ಹಿಂದ್ ,
ಜೈ ಕರ್ನಾಟಕ ಮಾತೆ.

blogspot add widget