ಶನಿವಾರ, ಸೆಪ್ಟೆಂಬರ್ 26, 2009

ಶ್ವಾನರ ಮಿತ್ರರು - 2

ಶ್ವಾನರ ಮಿತ್ರರು - ಭಾಗ ೨. ಮೊದಲೇ ಹೇಳಿದಂತೆ ಇನ್ನಷ್ಟು ಮಿತ್ರರನ್ನ ಕರೆ ತಂದಿದ್ದೀನಿ. ಈಗ ನೋಡೋಣ ಬನ್ನಿ.































                          

ಈ ಭಾರಿ ನಾಯಿಗಳು ಏನಂತಾರೆ ಅಂತ ನಾನೇನೂ ಹೇಳಿಲ್ಲಾ... ಈ ನಾಯಿ ಮಿತ್ರರ ಬಗ್ಗೆ ನಿಮಗೇನಾದ್ರು ಅನ್ನಿಸಿದ್ರೆ ತಿಳಿಸಿ. 

ಬುಧವಾರ, ಸೆಪ್ಟೆಂಬರ್ 23, 2009

ಭಾಷೆ, ಮಾಧ್ಯಮ ಹಾಗೂ ಕಲಿಕೆ - 2

"ಭಾಷೆ, ಮಾಧ್ಯಮ ಹಾಗೂ ಕಲಿಕೆ - ೧" ಬರಹ, ಎಷ್ಟು ಓದುಗರಿಗೆ ಆಸಕ್ತಿಂದ ಕೂಡಿತ್ತು ಅಂತ ನನಿಗೆ ಅಷ್ಟು ತಿಳಿದಿಲ್ಲಾ, ಆದ್ರೆ, ಅದರ ಇನ್ನೊಂದು ಭಾಗ ಇಲ್ಲಿ ಹಾಕಿದ್ದೀನಿ. ಸುಮ್ಮನೇ ಯಾಕಪ್ಪಾ ಈ ಜೀವಿ ಇಷ್ಟೊಂದು ಉದ್ದುದ್ದಾ ಬರ್ದು ಹಾಕಿ, ವೃತಾ ಶ್ರಮ ತಗೊಂತಾನಪ್ಪಾ. ಅಂತನ್ಸಿದ್ರೆ ಹೇಳ್ಬಿಡ್ರಿ.


ಈ ನಡುವೆ ಕೆಳಗಿನ ಎರಡು ಬ್ಲಾಗ್ಗಳಲ್ಲಿ ಅಡ್ಡಾಡ್ತಿರ್ಬೇಕಾಂದ್ರೆ ,
"ನೀವು ನಕ್ಕರೆ ಹಾಲು ಸಕ್ಕರೆ"
"ಯಳವತ್ತಿ ಬ್ಲಾಗ್...".
ನಾನೂ ಯಾಕೆ ಒಂದೆರಡು ಹಾಸ್ಯ ಬರಹ ಬರಿ ಬಾರದು ಅಂತೇನೂ ಅನ್ನಿಸ್ಲಿಲ್ಲಾ...ಆದ್ರೆ ನನ್ನ ಅನುಭವಗಳೇ ಕೆಲವು ಭಾರಿ ಹಾಸ್ಯ ಹಾಗ್ಬಿಟ್ತಿವೆ. ಹಾಗಾಗಿ ನೆನಪಿಗೆ ಸಿಕ್ಕಂತಹ ಕೆಲವು ಘಟನೆಗಳನ್ನ ಬರೀತಿದ್ದೀನಿ. ಶೀರ್ಷಿಕೆ ಏನೂ ಅಂದ್ರೆ, "ಹಾಸ್ಯ ಸನ್ನಿವೇಶದ ಕೆಲವು ತುಂಡುಗಳು!"


ಆದ್ರೆ ಅದಕ್ಕಿಂತ ಮೊದಲೇ, ಇದನ್ನ ಓದಿ ಬಿಡಿ. ಈ ಕೆಳ ಕಂಡ ಬರಹ ಇಷ್ಟ ಹಾಗ್ದೆ ಇದ್ರೆ ಅದನ್ನೇ ದೊಡ್ದು ಮಾಡ್ಬೇಡ್ರಿ. ಪುನಃ ಬರ್ತಾ ಇರ್ರಿ.. ಹೊಸ ಪೋಸ್ಟ್ ಇರುತ್ವೆ.


--------------------------------------------------------------------------------
ಇಲ್ಲಿಂದಾ ಮುಂದುವರೆದಿದೆ...


ಭಾಷೆ ಕೇವಲ ಒಂದು ಸಂಪರ್ಕ ಸಾಧನ ಅಷ್ಟೇ. ಅದ್ರಿನ್ದಾನೇ ಎಲ್ಲಾ ಅನ್ನೋದು ಎಷ್ಟು ಸರಿ? ವಿಷಯ ಜ್ಞಾನ ಬೆಳಸಿ ಕೊಳ್ಳೋಕ್ಕೆ ಪ್ರತಿಯೊಬ್ರಿಗೂ ಅವಕಾಶ ಇರ್ಬೇಕು, ಅದು ಯಾವ ಮಾದ್ಯಮದಲ್ಲಿ ಅನ್ನೋದು ತುಂಬಾ ಸಾಧಾರಣ ಪ್ರಶ್ನೆ ಆಗ್ಬಿಡುತ್ತೆ. ನನಗೆ ಕನ್ನಡ ಚೆನ್ನಾಗಿ ಗೊತ್ತು. ಯಾಕಂದ್ರೆ ನಾನು ಶಾಲೆಯಲ್ಲಿ ಮೇಷ್ಟ್ರು ಹೇಳ್ಕೋಡೋಕ್ಕೇ ಮೊದ್ಲೇ ನಮ್ಮ ಮನೇಲೆ ಮಾತಾಡೋದು ಕಲ್ತಿದ್ದೆ.


ನಮಿಗೆ ಮೊದ್ಲು ಮೊದ್ಲು ಇಂಗ್ಲೀಶ್ ಹೇಳ್ಕೋಟ್ಟಾಗ ನಾವು ಹೇಗೆ ಕಲೀತಿದ್ವಿ? ಅದನ್ನ ಕನ್ನಡಕ್ಕೆ ಅನುವಾದ ಮಾಡ್ಕಂಡು ಅಭ್ಯಾಸ ಮಾಡ್ತಿದ್ವಿ. ಆಮೇಲೆ ನಿಧಾನಕ್ಕೆ ವಾಕ್ಯ ಮಾಡೋದು ಕಲ್ತ್ವಿ. ಆಮೇಲೆ ಪುಸ್ತಕ ಓದೋದು ಕಲ್ತಿವಿ. ಈಗ ಇಂಗ್ಲಿಷ್ನಲ್ಲೇ ಮಾತೂ ಆಡ್ತೀವಿ.


ನಮಗೆ ಸ್ಕೂಲ್ನಲ್ಲಿ ಇಂಗ್ಲಿಷ್ನ ಮೊದ್ಲು ಮೊದ್ಲು ಹೇಳ್ಕೋಟ್ಟಾಗ ನಾನು ಹೇಗೆ ಯೋಚಿಸ್ತಿದ್ದೆ ಅಂತ ಗೊತ್ತೇ? ಇಂಗ್ಲೀಷ್ನ ಮೊದ್ಲು ಮೊದ್ಲು ಕಲಿ ಬೇಕಾದರೆ, ಜಗತ್ತಲ್ಲಿ ಎಲ್ಲರೂ ಸಹ, ಇಂಗ್ಲೀಶ್ ವಾಕ್ಯಗಳ ಅರ್ಥವನ್ನ ಮೊದಲು ಕನ್ನಡಕ್ಕೇ ಅನುವಾದ ಮಾಡ್ಕಂಡು ಕಲಿತಾರೆ. ಆಮೇಲೆ ನಿಧಾನಕ್ಕೆ ಇಂಗ್ಲಿಷ್ನಲ್ಲೇ ಮಾತಾಡೋದು ಕಲಿತಾರೆ. ಮಾತಾಡೋದು ಕಲಿತಮೇಲೆ ಇಂಗ್ಲಿಷ್ ಪುಸ್ತಕ ಅರಾಮಾಗಿ ಓದ್ಬೋಹುದು ಅಂತ.


ಆಗಂತ ಭಾಷೆಗೆ ಮಹತ್ವವೇ ಇಲ್ಲ ಅನ್ನೋದು ಎಷ್ಟು ಸರಿ? ಪ್ರತಿ ಭಾಷೆಗೂ ಅದರದೇ ಆದ ಮಹತ್ವವಿರುತ್ತೆ. ಅದರ ಅಸ್ತಿತ್ವ ಅದಕ್ಕೆ ಅಷ್ಟು ಸುಲಭವಾಗಿ ದಕ್ಕಿದುದಾಗಿರುವುದಿಲ್ಲ. ಉದಾಹರಣೆಗೆ ಸಂಸ್ಕೃತ ಅನ್ನೋದು ಒಂದು ಸತ್ತ, ಮೃತ ಭಾಷೆ ಅಂತೆಲ್ಲಾ ಜನ ಹೇಳೋದು, ಬರಿಯೋದು ಕೇಳಿದ್ದೇನೆ, ನೋಡಿದ್ದೇನೆ. ನಾನೊಬ್ಬ ಭಾಷಾ ತಜ್ಞನಲ್ಲ, ಆಗಂತ ಇಂತ ಚಾಣಾಕ್ಷ್ಯ ತೀರ್ಮಾನಗಳನ್ನ ಕಂಡಾಗ ಮನಸ್ಸು ತೀರಾ ಕುಪಿತಗೊಳ್ಳುತ್ತೆ. ನಾನು ಸಂಸ್ಕೃತ ಶಿಕ್ಷಕನೂ ಅಲ್ಲ, ಸಂಸ್ಕೃತ ವಿದ್ಯಾರ್ಥಿಯೂ ಅಲ್ಲ. ಆದ್ರೆ ಇಂತಹ ಅತಿರೇಕಿಗಳನ್ನ ಗಮನಿಸಿ ಈಗೀಗ ಸ್ವಲ್ಪ ಸಂಸ್ಕೃತದ ಬಗ್ಗೆ ಓದಿ ತಿಳೀತ ಇದ್ದೇನೆ ಅಷ್ಟೇ. 2006 ರ ಸಾಲಿನ " ಜ್ಞಾನಪೀಠ" ಪ್ರಶಸ್ತಿ ಲಭಿಸಿರೋದು ಸಂಸ್ಕೃತಕ್ಕೆ. ಸಂಸ್ಕೃತದಲ್ಲಿಯೂ ಬೆಳವಣಿಗೆಗಳು ಆಗ್ತಿರೋದಕ್ಕೆ ಇದಕ್ಕಿನ್ನ ಸಾಕ್ಷಿ ಬೇಕೇ?


ನನ್ನ ಪ್ರಕಾರ, ಒಬ್ಬ ವ್ಯಕ್ತಿಯ ಜ್ಞಾನದ ವಿಶಾಲತೆಯನ್ನ ಅಳಿಯಲಿಕ್ಕೆ ಇರೋ ಒಂದು ಸುಲಭ ಸಾಧನ ಅಂದ್ರೆ ಏನು ಗೊತ್ತೇ? ಅದು ವ್ಯಕ್ತಿಯ ಪದಕೋಶದ ವಿಶಾಲತೆಯನ್ನ ತಿಳಿಯೋದು. ಪದಕೋಶದ ವಿಶಾಲತೆಗೆ ಸಮಾನ ಅನುಪಾತದಲ್ಲಿ ಇರುತ್ತೆ ವಿಷಯ ಜ್ಞಾನ. ಹೆಚ್ಚು ಹೆಚ್ಚು ಅರ್ಥ ಗರ್ಭಿತ ಪದಗಳನ್ನ, ಪದ ಗುಚ್ಚದಳನ್ನ, ನುಡಿಗಳನ್ನ ಸಂಧರ್ಬಕ್ಕೆ ಅನುಗುಣವಾಗಿ ಯಾರು ಸರಾಗವಾಗಿ ಬಳಸ್ತಾನೋ ಅವ್ನಿಗೆ ವಿಷಯ ಜ್ಞಾನ ಸಾಕಷ್ಟು ಇರುತ್ತೆ.


ನಮ್ಮ ಕನ್ನದಲ್ಲಿರೋ ಪ್ರತಿಶತ 50 ಪದಗಳು ಸಂಸ್ಕೃತದಿಂದ ನೇರವಾಗಿ ಅಥವಾ ಪರೋಕ್ಷವಾಗಿ ಬಂದಿವೆ. ಇಂತಹ ಪದಗಳ ಬಳಕೆಯಿಂದ ನಮ್ಮ ಪದಕೊಶವನ್ನೂ ನಾವು ವಿಸ್ತರಿಸಿ ಕೊಂಡಿದ್ದೇವೆ. ಇಂಗ್ಲೀಷ ನಲ್ಲಿ ಅನೇಕ ಪದಗಳಿಗೆ ಮೂಲ ಸಂಸ್ಕೃತದಲ್ಲಿದೆ.
ಉದಾಹರಣೆಗೆ
ಮಾತೃ = ಮದರ್ (father)
ಪಿತೃ = ಫಾದರ್ (mother)
ದ್ವಾರ = ಡೋರ್ (door)
ನಾಮಃ = ನೇಮ್ (name)
ಸ್ಮಿತ್ = ಸ್ಮೈಲ್ (smile)
ಏಕ = ಈಕ್ವಲ್ (equal)
ದಂತ್ = ಡೆಂಟಲ್ (dental)
ಪಥ್ = ಪಾಥ್ (path)


ಇಲ್ಲಿ ಕ್ಲಿಕ್ಕಿಸಿ


ಒಂದು ಭಾಷೆ ಒಂದ್ಸಾರಿ ಅಸ್ತಿತ್ವಕ್ಕೆ ಬಂದ ನಂತರ, ಅದರಿಂದ ಹೆಚ್ಚಿನ ಅನುಕೂಲಗಳೂ ಸಾದ್ಯ. ಉದಾಹರಣೆಗೆ ಒಂದು ಪೀಳಿಗೆ ಇಂದ ಮುಂದಿನ ಹಲವಾರು ಪೀಳಿಗೆಗಳಿಗೆ ಜೀವನದ ಕಲೆಯನ್ನ ತಿಳಿಸಿ ಕೊಟ್ಟಂತಹ "ಭಗವದ್ಗೀತೆ" ಆಗಿರ್ಬೌದು ಅಥವ ಡಿ, ವಿ, ಜಿ, ಯವರ "ಮಂಕುತಿಮ್ಮನ ಕಗ್ಗ" ಆಗಿರ್ಬೌದು. ಒಂದು ಸಂಸ್ಕೃತ ದಲ್ಲಿದ್ರೆ, ಇನ್ನೊಂದು ಕನ್ನಡದಲ್ಲಿದೆ. ಮತ್ತೆ ಬಸವಣ್ಣನವರು ಮುಂತಾದವರ ವಚನಗಳಿರ ಬಹುದು. ಇಂತಹ ಗ್ರಂಥಗಳಿಂದ, ಸಾಹಿತ್ಯಗಳಿಂದ ಆಯಾ ಭಾಷೆಗಳ ಮಹತ್ವವೂ ಹೆಚ್ಚುತ್ತಾ ಹೋಗುತ್ತೆ.


ನಾವು ನಮ್ಮ ಭಾಷೆಗೆ ನೀಡ ಬಹುದಾದ ಒಂದು ಅಲ್ಪ ಕೊಡುಗೆ ಅಂದ್ರೆ, ನಮ್ಮ ತಿಳಿವಳಿಕೆಯನ್ನ, ಅರಿವನ್ನ, ಜ್ಞಾನವನ್ನ ಬರವಣಿಗೆ ರೂಪದಲ್ಲಿ ಹಂಚಿಕೊಳ್ಳೋದು. ಈ ರೀತಿಯಾಗಿ ಅಪಾರ ಜ್ಞಾನವನ್ನ ಪೀಳಿಗೆ ಇಂದ ಪೀಳಿಗೆಗೆ ವರ್ಗಾಯಿಸಬಹುದು. ಹಾಗಾಗಿಯೇ ಭಾಷೆಯ ಪೋಷಣೆ ನಮ್ಮಗಳ ಅಲಿಖಿತ ಕರ್ತವ್ಯ ಆಗ್ಬಿಡುತ್ತೆ. ಭಾಷಾ ಪ್ರೇಮ ತಪ್ಪಲ್ಲ. ಆದ್ರೆ ಅದು ಅತಿರೇಕಕ್ಕೆ ಹೋಗಿ, ಇನ್ನೊಂದು ಭಾಷೆನ ತುಳಿಯೋ ಮಟ್ಟಕ್ಕೆ ಹೋಗೋದು ಒಂದು ಆರೋಗ್ಯಕಾರಿ ಬೆಳವಣಿಗೆ ಅಲ್ಲವೇ ಅಲ್ಲ.


ಈಗಿನ ಸದ್ಯ ಪ್ರಪಂಚದಲ್ಲಿ ಹೆಚ್ಚು ಕಮ್ಮಿ 6000 ವಿವಿದ ಭಾಷೆಗಳು ಇವೆಯಂತೆ. ನಮ್ಮ ಕನ್ನಡನೂ ಇದ್ರಲ್ಲಿ ಒಂದು. ನಾವು ಕರ್ನಾಟಕದಲ್ಲಿ ಕನ್ನಡ ಹೊರತಾಗಿ, ಹಿಂದಿ, ಇಂಗ್ಲೀಶ್, ಕೊಂಕಣಿ. ತುಳು ಇನ್ನೂ ಅನೇಕ ಭಾಷೆಗಳನ್ನ ಮಾತಾಡ್ತೀವಿ/ಮಾತಾಡ್ತಾರೆ. ಇನ್ನ ಬಾರ್ಡರ್ ಅತ್ರ ಇರೋ ಊರ್ಗಳಿಗೆ ಹೋದ್ರೆ ಅಲ್ಲಿ ತೆಲುಗು, ತಮಿಳು, ಮರಾಠಿ, ಮಲಯಾಳಂ ಭಾಷೆ ಮಾತಾಡೋರೂ ಸಿಗ್ತಾರೆ.


ಕನ್ನಡ ಭಾಷೇನೆ ನಾಲ್ಕಾರು ವಿವಿದ ಶೈಲಿಯಲ್ಲಿ ಮಾತಡೋದು ನಮಗೆಲ್ಲ ಗೊತ್ತಿರೋದೆ.
  • ಕುಂದಾಪುರ ಕನ್ನಡ.
  • ಶಿರಸಿ ಕನ್ನಡ. 
  • ಹುಬ್ಬಳ್ಳಿ-ಧಾರವಾಡ ಕನ್ನಡ.
  • ಬೆಂಗಳೂರು ಕನ್ನಡ.
  • ಚಿತ್ರದುರ್ಗ ಕನ್ನಡ 
  • ಗುಲ್ಬರ್ಗ ಕನ್ನಡ
ಒಂದು ಅಂದಾಜಿನ ಪ್ರಕಾರ, ಕನ್ನಡ ಭಾಷೇನೆ, ಹೆಚ್ಚು ಕಮ್ಮಿ 20 ವಿವಿದ ರೀತಿಗಳಲ್ಲಿ ಮಾತಾಡ್ತಾರೆ. ಮಾತಾಡೋ ಶೈಲಿ ಬೇರೆ ಬೇರೆ ಇದ್ರೂ ಬರಿಯೋಕಂತ ಇರೋದು ಒಂದೇ ಒಂದು ಅದೇ ಕನ್ನಡ ಲಿಪಿ. ಅ, ಆ, ಇ, ಈ...ಕಾಗುಣಿತ


ಕನ್ನಡಕ್ಕೆ ಮೂಲ/ಮಾತೃ ಭಾಷೆ ಸಂಸ್ಕೃತ. ಇದು ಕನ್ನಡಕ್ಕಷ್ಟೇ ಅಲ್ಲ, ಭಾರತದ ಸರಾಸರಿ ಎಲ್ಲಾ ಭಾಷೆಗಳಿಗೂ ಮಾತೃ ಭಾಷೆ ಅಂತ ನಾವೆಲ್ಲಾ ಒಪ್ಕೋಳ್ಳಲೇ ಬೇಕು. ಕನ್ನಡ ಮಾತಾಡೋರು ಕೇವಲ ಕರ್ನಾಟಕದಲ್ಲಿ ಮಾತ್ರ ಅಲ್ಲದೆಯೇ, ಪ್ರಪಂಚದ ಇನ್ನೂ ಅನೇಕ ರಾಷ್ಟ್ರಗಳಲ್ಲಿಯೂ ಇದ್ದಾರೆ. ಅಮೇರಿಕ, ಸೌದಿ ಅರೇಬಿಯಾ, ಆಸ್ಟ್ರೇಲಿಯಾ, ಯುರೋಪ್ ಹೀಗೆ ಎಲ್ಲಾ ಭಾಗದಲ್ಲಿಯೂ ಇದ್ದಾರೆ. ಅಷ್ಟೇ ಏಕೆ, ಭಾರತದ ಇತರೆ ರಾಜ್ಯಗಳಲ್ಲಿಯೂ ಇದ್ದಾರೆ.


ಇಡೀ ಭೂಮಿಗೆ ಹೋಲಿಸಿದರೆ, ಬೌಗೋಳಿಕವಾಗಿ ಕರ್ನಾಟಕ ಎಷ್ಟು ದೊಡ್ಡ ಪ್ರದೇಶ? ಈ ಪ್ರಪಂಚದಲ್ಲಿ ಕನ್ನಡ ಮಾತಾಡೋವ್ರು ಎಷ್ಟು ಜನ?


ಇಷ್ಟರಲ್ಲಿಯೇ ಎಷ್ಟೊಂದು ವೈವಿದ್ಯತೆ. ಅಲ್ವ? ಇದಕ್ಕೆ ಹೋಲಿಸಿದರೆ ಪ್ರಪಂಚದ 6000 ಭಾಷೆಗಳಲ್ಲಿ ಇನ್ನೂ ಅದೆಷ್ಟು ವೈವಿದ್ಯತೆ ಇರಬೇಡ? ಇಷ್ಟೆಲ್ಲಾ ಭಾಷೆಗಳಲ್ಲಿ ಒಟ್ಟು ಅದೆಷ್ಟು ಜ್ಞಾನ ಇರಬೇಡ? ಸರಾಸರಿಯಾಗಿ ಪ್ರತಿ ಒಬ್ಬ ಮನುಷ್ಯ ಮೂರ್ನಾಲ್ಕು ಭಾಷೆ ಕಲಿತರೆ ಹೆಚ್ಚು. ಸಂಸ್ಕೃತ ಕಲೀರಿ, ಇಂಗ್ಲೀಶ್ ಕಲೀರಿ, ಹಿಂದಿ ಕಲೀರಿ, ಫ್ರೆಂಚ್ ಕಲೀರಿ, ಜರ್ಮನ್ ಕಲೀರಿ ಆದ್ರೆ ಕನ್ನಡ ಗೋತ್ತಿರೋ ವ್ಯಕ್ತಿ ಹತ್ರನಾದ್ರೂ ಕನ್ನಡದಲ್ಲೇ ಮಾತಾಡಿ. ಸಾಧ್ಯವಾದ ಕಡೆಗಳಲ್ಲೆಲ್ಲ ಕನ್ನಡ ಬಳಸಿ. ನಾವು ಬೇರೆ ಬೇರೆ ಭಾಷೆನ ಉಳಿಸಿ, ಬೆಳೆಸೋ ಪ್ರಯತ್ನ ಮಾಡ್ದೆ ಇದ್ರೂ ಪರ್ವಾಗಿಲ್ಲಾ, ಆದ್ರೆ ನಮ್ಮ ನಮ್ಮ ಮಾತೃ ಭಾಷೆನ ಉಳಿಸಲೇ ಬೇಕು, ಬೆಳಸಲೇ ಬೇಕು.


ಉಳಿದ ಭಾಷೆಗಳಲ್ಲಿ ಅದಿಲ್ಲಾ, ಇದಿಲ್ಲಾ, ಅದು ಸತ್ತ ಭಾಷೆ, ಇದು ಸುಟ್ಟ ಭಾಷೆ ಅಂತ ಕೀಳಾಗಿ ಯಾವ ಭಾಷೇನೂ ನೋಡೋ ಅಗತ್ಯ ಇಲ್ಲಾ. ಅಂತಹ ಸಂಧರ್ಬ ಸೃಷ್ಟಿ ಆಗೋದೂ ಬೇಡ.


ಶನಿವಾರ, ಸೆಪ್ಟೆಂಬರ್ 19, 2009

ಶ್ವಾನರ ಮಿತ್ರರು

ಬನ್ನಿ ಈ ವಾರದ ವಿಶೇಷ ಅತಿಥಿಗಳು ಏನೇನು ಹೇಳ್ತಾರೆ ಕೇಳೋಣ


ಓಹೋ ನಮಸ್ಕಾರ.
ಬರಬೇಕು ಬರಬೇಕು.
ಏನು ಮನೆಕಡೆ ಎಲ್ಲಾ ಆರಾಮ?





ಒಂದೇ ಒಂದು ನಿಮ್ಷ ಸುದಾರ್ಸ್ಕಂತೀನಿ, ಎಳಿ ಬೇಡ ನನ್ನ..  




ಚಳಿ ಆಗ್ತಾ ಇದೆ , ಬಿಸ್ಲು ಕಾಯ್ಸಾನ ಅಂತ. ನೀನು ಬಂದ್ಯಾ ಬಾ.. ಕೂತ್ಕ! 




ಅಯ್ಯೋ ನಾನಲ್ಲಾ. ನಾನೇನೂ ಮಾಡಿಲ್ಲಾ.  ನನ್ನೇನೂ ಬಾಡ್ಬೇಡಿ. ಪ್ಲೀಸ್ 




ನೋ...ನೀ ನನ್ನ ಮುಟ್ಟ ಬೇಡ.




ಯಾರಲ್ಲಿ?




ಅಲ್ಲೇ ದೂರ ನಿಂತು ಮಾತಾಡು..ಹತ್ರ ಬರಬೇಡ.




ಆ ಸಕತ್ತಾಗಿ ಇದೆ..



ಏನಪ್ಪಾ? ಯಾಕಂಗೆ ನೋಡ್ತೀ?
   ನನ್ನ ಅರ್ದಾನ್ಗಿ ಮುನಿಸ್ಕಂದವ್ಲೆ ಅದಕ್ಕೆ ಒಂದು ರೌಂಡು ಆರಾಮಾಗಿ ಸುತ್ತಾಡಿಸಿ ಪಾರ್ಕ್ ತೋರ್ಸಿ ಕರ್ಕೋನ್ಡೋಗನ ಅಂತ ಬಂದ್ರೆ ಇಲ್ಲಿಗೂ ಬಂದು ನಮ್ಮ ಪ್ರೈವಸಿ ಹಾಳ್ಮಾಡ್ತಾ ಇದ್ದೀರಲ್ಲ! 
ಇದು ನಿಮಗೆ ನ್ಯಾಯವೇ? 




ಮೊನ್ನೆ ಗಾಯ ಮಾಡ್ಕಂದಿದ್ದೆ..ಡಾಕುಟ್ರು ಎಲ್ಲೂ ಹೊರಗೆ ಅಡ್ಡಾದ ಬೇಡ ಅಂದಿದಾರೆ. 
ಅದಕ್ಕೆ ಇನ್ನೂ ಸುಧರಿಸ್ಕಂತಾ ಇದ್ದೀನಿ.




ಯಾರಪ್ಪಾ ನೀನು?



ಇನ್ನೂ ಅನೇಕ ವಿವಿದ ಶ್ವಾನ ಮಿತ್ರರ ಛಾಯಾಚಿತ್ರ ಮುಂದಿನ ಕಂತಿನಲ್ಲಿ ತರ್ತೀನಿ. ಅಲ್ಲಿಯವರೆಗೆ ಈಗಾಗಲೇ ಕರೆ ತಂದಿರುವ ಅತಿಥಿಗಳಿಗೆ ಬೋರ್ ಆಗ್ದಂಗೆ, ಬೇಜಾರ್ ಆಗ್ದಂಗೆ ಮಾತಾಡಿಸ್ತಾ ಇರಿ.


ಶುಕ್ರವಾರ, ಸೆಪ್ಟೆಂಬರ್ 18, 2009

ಭಾಷೆ, ಮಾಧ್ಯಮ ಹಾಗೂ ಕಲಿಕೆ - 1


ಭಾಷೆಯಂದ್ರೆ ಮುಖ್ಯವಾಗಿ ಬೇಕಾಗೋದು ಎನುಕ್ಕೆ? ಅನುಭವ-ಅನಿಸಿಕೆ ಗಳನ್ನ, ವಿಚಾರಗಳನ್ನ, ಹಾಗು-ಹೋಗುಗಳನ್ನ, ವಿಷಯಗಳನ್ನ ಪರಸ್ಪರ ವಿನಿಮಯ ಮಾಡ್ಕೊಳ್ಳೋಕೆ. ಹೇಳೋಕ್ಕೆ ಒಬ್ರು-ಕೇಳೋಕ್ಕೆ ಇನ್ನೊಬ್ರು, ಟೋಟಲಿ ಇಬ್ರು ಇದ್ರೆ ಸಾಕು, ಅವರಿಬ್ಬರಿಗೆ ಮಾತ್ರಾನೇ ಅರ್ಥ ಆದ್ರುನೂ ಸಾಕು. ಇಲ್ಲಿ ಪರಸ್ಪರ ಒಂದೇ ತೀರ್ಮಾನಕ್ಕೆ ಬರ್ಲೆ ಬೇಕು ಅಂತೇನೂ ಇಲ್ಲ. ಒಟ್ಟಿನಲ್ಲಿ ಸಂಪರ್ಕ ಏರ್ಪಟ್ಟರೆ ಅಷ್ಟೇ ಸಾಕು.

ಮಾನವನ ನಾಗರೀಕತೆ ದಿನಗಳಿಂದ ಗಮನಿಸಿದರೆ, ಆಗೆಲ್ಲಾ ಇಬ್ರಿಗೆ ಅಥವ ಮೂವರಿಗೆ ಸಾಮಾನ್ಯವಾಗಿ ಅರ್ಥ ಆಗ್ತಿದ್ದಾ ಒಂದೇ ಭಾಷೆ ಅಂತಾನೇ ಇರ್ಲಿಲ್ಲ. ಎಲ್ಲಾ ಮುಖಾಭಿನಯ!!!
ಇಲ್ಲಿ ವಿಷಯ ಅಂಚಿ ಕೊಳ್ಳೋಕ್ಕೆ ಒಂದು ಮಾಧ್ಯಮ ಬೇಕಿತ್ತು, ಅದು ಯಾವ್ದಾದರೂ ಪರವಾಗಿರ್ಲಿಲ್ಲಾ. ಶೀಟಿ ಹೊಡಿಯೋದು, ಜೋರಾಗಿ ಕೂಗಿ ಕೊಳ್ಳೋದು, ಬಿದ್ದು ಒದ್ದಾಡೋದು. ಒಂದು ರೀತಿಲಿ ಮಾತು ಬರದ ಒಂದು ಮಗು ಹೇಗೆ ತನಗೆ ಬೇಕಿನಿಸಿದ್ದನ್ನ ತನ್ನ ತಾಯಿ ಅತ್ರ ಹಠ ಮಾಡಿ ಕೇಳ್ತಿರುತ್ತೋ ಹಾಗೇ. ಎಲ್ಲಾ ಬರೀ ಸಂಜ್ಞೆ.

ಕಾಲ ಕ್ರಮೇಣ ಇಂತಹ ಒಂದೊಂದು ಸಂಜ್ಞೆಗೂ ಒಂದೊಂದು ಅರ್ಥ ಬೆಳಿಸಿ ಕೊಳ್ತಾ ಬಂದ್ರು, ತಮ್ಮ ಕಷ್ಟ ಸುಖಗಳನ್ನ ಪರಸ್ಪರ ಹಂಚಿ ಕೊಳ್ಲೋಕ್ಕೆ ಅನುಕೂಲ ಆಯ್ತು. ಜೀವನ ಕ್ರಮ ಸುಧಾರಿಸ್ತಾ ಹೋಯ್ತು. ಉದಾಹರಣೆಗೆ ಈಗಲೂ ಆಸಕ್ತಿ ತರೋ ಕೆಲವು ಸಜ್ಞೆಗಳನ್ನ ನೋಡೋಣ. 
ಕೆಲವು ಪ್ರಶ್ನೆಗಳಿಗೆ ನಾವು ಸರಿ, ತಪ್ಪು ಅಥವಾ ಹೌದು, ಅಲ್ಲ ಅಂತ ಸರಳವಾಗಿ ಉತ್ತರಿಸಬಹುದು, ಅದಕ್ಕೆ ನಾವು ಸಾಮಾನ್ಯವಾಗಿ ಅನುಸರಿಸೋ ಸಂಜ್ಞೆ ಅಂದ್ರೆ, ನಮ್ಮ ಕತ್ತನ್ನ (ಕುತ್ತಿಗೆ) ಮೇಲೆ-ಕೆಳಗೆ ಅಥವಾ ಎಡಕ್ಕೆ-ಬಲಕ್ಕೆ ಆಡಿಸೋದು.
ಮೇಲೆ-ಕೆಳಗೆ ಆಡಿಸಿದರೆ ಅದು ಸರಿ, ಹೌದು ಅಂತಲೂ, ಅದೇ ಎಡಕ್ಕೆ-ಬಲಕ್ಕೆ ಆಡಿಸಿದರೆ ಅದು ತಪ್ಪು ಅಥವ ಅಲ್ಲ ಅಂತಲೂ ಅರ್ಥ ಮಾಡ್ಕೊಂತೀವಿ.

ಆಗಂತ ಪ್ರಪಂಚದ ಎಲ್ಲ ರಾಷ್ಟ್ರಗಳಲ್ಲಿಯೂ ಇದೆ ರೀತಿ ಅರ್ಥ ಮಾಡ್ಕೊಂತಾರೆ ಅಂತೇನೂ ಇಲ್ಲ. ಆಸ್ಟ್ರೇಲಿಯಾದಲ್ಲಿ ಯಾರಾದರೂ ಪ್ರಶ್ನೆಗೆ ಕತ್ತನ್ನ ಮೇಲೆ-ಕೆಳಗೆ, ಅಥವ ಎಡಕ್ಕೆ-ಬಲಕ್ಕೆ ತಿರುಗಿಸಿದರೆ ಅವ್ರು ಏನೂ ಅರ್ಥ ಮಾಡ್ಕನಲ್ಲಾ!! ಬದಲಾಗಿ ನೀನು ಎಲ್ಲೋ ಸೊಳ್ಳೆನೋ, ನೋಣನೋ ಓಡಿಸ್ತಿರ ಬೇಕು ಅಂತ ಸುಮ್ನೆ ಉತ್ತರಕ್ಕೆ ಕಾಯ್ತಾ ನಿನ್ನ ಮುಖನೇ ನೋಡ್ತಾರೆ. ಅಲ್ಲಿ "ಯಸ್" ಅಥವಾ "ನೋ" ಅಂತ ಬಾಯಿಬಿಟ್ಟು ಹೇಳಲೇ ಬೇಕು.

ಇನ್ನೂ ಇದೇ ಸಜ್ಞೆನ ಇನ್ನೂ ಕೆಲವು ಕಡೆ, (ಉದಾಹರಣೆಗೆ ಬಲ್ಗೇರಿಯ) ಉಲ್ಟಾ ಸೀದಾ ಅರ್ಥ ಮಾಡ್ಕೊಂತಾರಂತೆ. ಅಂದ್ರೆ, ಕತ್ತನ್ನ ಮೇಲೆ-ಕೆಳಗೆ ಆಡಿಸಿದರೆ ಅದಕ್ಕೆ ನಿನ್ನ ಒಪ್ಪಿಗೆ ಇಲ್ಲ, ಅದು ತಪ್ಪು ಅಂತಲೂ ಅದೇ ಎಡಕ್ಕೆ-ಬಲಕ್ಕೆ ಆಡಿಸಿದರೆ ಅದಕ್ಕೆ ನಿನ್ನ ಉತ್ತರ ಹೌದು, ಅದು ಸರಿ ಅಂತಲೂ ಅರ್ಥ ಮಾಡ್ಕೊಂತಾರಂತೆ.

ನಮ್ಮ ದೇಶದಲ್ಲಿ ಒಬ್ಬರನ್ನೊಬ್ಬರು ಪರಸ್ಪರ ಭೇಟಿ ಆದಾಗ ಎರಡು ಕೈ ಎತ್ತಿ, ನಮ್ಮ ಎದೆ ನಡುವೆ ನಮ್ಮ ಹಸ್ತವನ್ನ ಒಂದಕ್ಕೊಂದು ಜೋಡಿಸಿ ಮುಗಿದು, ನಂತರ "ನಮಸ್ಕಾರ" ಅಂತ ಹೇಳ್ತೀವಿ. ಇದು ಪರಸ್ಪರರಿಗೆ ಗೌರವ ಸೂಚಕವೂ ಅವ್ದು. 
ಇದನ್ನೇ ಮುಸ್ಲೀಂ ರಾಷ್ಟ್ರಗಳಲ್ಲಿ ಹೋದರೆ, ಒಂದು ಕೈ ಮಾತ್ರ ಎದೆ ಮುಂದೆ ತಂದು, ತಮ್ಮ ಹಸ್ತ ತಮ್ಮ ಎದೆ ಕಡೆಗೆ ತಿರುಗಿಸಿ, ಸ್ವಲ್ಪ ನಡು ಭಾಗಿಸಿ, "ಖುದಾ ಹಫೀಜ್" ಅಂತಾರೆ.

ಇನ್ನ ಕೆಲವೊಮ್ಮೆ ಪರಸ್ಪರರು ಎದುರಾದಾಗ, ಹಸ್ತಲಾಘವ ಮಾಡ್ಕೊಂಡು ಮಾತು ಆರಂಬಿಸ್ತಾರೆ, ಅದೇ ಇನ್ನೂ ಕೆಲವರೋ (ಕ್ರಿಶ್ಚಿಯನ್ನರು?) ಪರಸ್ಪರ ಕೆನ್ನೆಯ ಮೇಲೆ ಮೆಲ್ಲಗೆ, ಲಘುವಾಗಿ ಒಂದೊಂದು ಮುತ್ತು ಹಂಚಿ ಕೊಂಡು, ಶುಭಾಷಯ ಹೇಳ್ಕೊಂತಾರೆ.

ಇದಕ್ಕೆಲ್ಲಾ ಏನು ಅರ್ಥ? ಇವರೆಲ್ಲಾ ಯಾಕಿಂಗೆ ಮಾಡ್ತಿದ್ದಾರೆ? ಅದು ಹೊರಗಿನ ವ್ಯಕ್ತಿಗೆ ಕೂಡಲೇ ಆರ್ಥ ಆಗಲಿಕ್ಕೆ ಇಲ್ಲ. ಆದ್ರೆ ಅದನ್ನ ಅನುಸರಿಸ್ತಿರೋವ್ರಿಗೆ ತಕ್ಷಣ ಅರ್ಥ ಆಗುತ್ತೆ. 
ಮೊನ್ನೆ ಒಂದ್ಸಾರಿ ಸಕತ್ ಹಲ್ಲು ನೋವು ಬಂದಿತ್ತು, ಡೆನ್ಟಿಸ್ಟ್ ಹತ್ರ ಹೋಗಿದ್ದೆ, ನನ್ನ ಹೆಸರು ಕೇಳಿದ್ರು ಹೇಳ್ದೆ, ಆಮೇಲೆ ಮಾತು ಹೇಗೆ ಆರಂಬಿಸೋದು? ನಾನು ಯೋಚಿಸ್ತಾ ಇದ್ದೆ ಈಗ ಇವರು ನನ್ನ ಏನು ಕೇಳ್ತಾರೆ ಅಂತ. "ಸಾರೀ ವೀ ವೋನ್ಟ್ ಶೇಕ್ ಹ್ಯಾಂಡ್ ಎನಿ ಮೋರ್" ಅಂದ್ರು, ಹೀಗ ಎಲ್ಲ ಕಡೆ ಹಂದೀ ಜ್ವರದ ಭಯ, ಅದಕ್ಕೆ ಹೀಗೇ ಅಂತ ಗೊತ್ತಾದ್ಮೇಲೆ, ಸರಿ ಬಿಡಿ ಇಬ್ಬರಿಗೂ ಒಳ್ಳೇದು ಅಂತ ಸುಮ್ಮನೆ ಅವರು ತೋರಿಸಿದ ಕುರ್ಚಿಯ ಮೇಲೆ ಕುಳಿತೆ. ಆಮೇಲೆ ನಡೆದದ್ದು ಹೀಗ ಬೇಡ.

ಭಾಷೆ ಇಬ್ಬರ ನಡುವಿನ ಸಂಪರ್ಕಕ್ಕೆ ಉಪಯೋಗ ಆಗುತ್ತದಲ್ಲಾ, ಹಾಗೇನೇ, ಅದು ನಿಧಾನಕ್ಕೆ ವಿಷಯವನ್ನ ಒಟ್ಟು ಹಾಕಿ (ಕ್ರೂಡೀಕರಿಸಿ) ಕೊಳ್ತಾ ಹೋಗುತ್ತೆ. ಆಗಲೇ ಭಾಷೆಗೂ ಒಂದು ಭೂಷಣ. ಒಂದು ಗುಂಪಿನ ಜನ ಹೆಚ್ಚು ಹೆಚ್ಚು ವಿಚಾರ ವಿನಿಮಯ ಮಾಡ್ಕೊಳ್ತಾ ಹೋದಂತೆ ಅಲ್ಲಿ ಹೆಚ್ಚೆಚ್ಚು ಆಲೋಚನೆಗಳೂ ಸೃಷ್ಟಿ ಆಗ್ತಾ ಹೋಗ್ತವೆ, ಎಷ್ಟೇ ಆದರು ಮನುಷ್ಯ ಪ್ರಾಣಿ ಅತೀ ಬುದ್ದಿ ಜೀವಿ. ಆಲೋಚನೆಗಳು ನಂತರ ಹವ್ಯಾಸಗಳಾಗುತ್ತೆ, ಹವ್ಯಾಸಗಳು ಆಚರಣೆಗಳಾಗ್ತಾವೆ. ಹೀಗೆಯೇ ಬರ ಬರುತ್ತಾ ಒಂದು ಸಂಸ್ಕೃತಿ ಬೆಳಿತಾ ಹೋಗುತ್ತೆ. ಹೀಗಾಗಿಯೇ ಹೇಳೋದು, ಒಂದು ಭಾಷೆ ಒಂದು ಸಂಸ್ಕೃತಿಯನ್ನ ಪ್ರತಿನಿಧಿಸುತ್ತೆ.

ಮನುಷ್ಯ ತರ್ಕ ಮಾಡಿ ತೀರ್ಮಾನಗಳನ್ನ ಮಾಡೋಕ್ಕೆ ಆರಂಬಿಸಿದಾಗಿನಿಂದ ಇಲ್ಲಿಯವರಗೆ ಸರಿ ತಪ್ಪು ಗಳನ್ನ ಸಮಂಜಸವಾಗಿ ತಿಳ್ಕೊಂಡು ಬಂದಿದ್ದೇ ಹಾಗಿದ್ರೆ ಈಗಿನ ಪೀಳಿಗೆ ಒಂದೇ ಒಂದೂ ತಪ್ನ್ನೂ ಮಾಡಬಾರದಿತ್ತು. ತಪ್ಪುಗಳನ್ನ ಹುಡ್ಕೊಕ್ಕೇ ಆಗಬಾರದಾಗಿತ್ತು. ಆದ್ರೆ ಹಾಗೆ ಆಗ್ಲಿಲ್ಲ/ಆಗಿಲ್ಲ/ಆಗಲ್ಲ! ದಿನ ಬೆಳಗಾದ್ರೆ ಒಂದಲ್ಲಾ ಒಂದು ಹೊಸ ಪರೀಕ್ಷೆ/ಸಮಸ್ಯೆ ನಾವು ಎದುರಿಸ ಬೇಕಾಗುತ್ತೆ. 

ಕೆಲ್ವಬ್ರಿಗೆ ಸರಿ ಅನ್ಸಿದ್ದು ಮತ್ತೆ ಕೆಲ್ವಬ್ರಿಗೆ ತಪ್ಪು ಅನ್ಸುತ್ತೆ. ಮಾನವ ಎಷ್ಟೇ ನಾಗರೀಕತೆ ಕಲ್ತ್ರುನೂ ಸರಿ ಯಾವ್ದು, ತಪ್ಪು ಯಾವ್ದು ಅಂತಾನೆ ನಮಗೆ ಇನ್ನೂ ತಿಳ್ದಿಲ್ಲಾ ಅಂತಾಗ್ತದೆ. ಅಥವಾ ಇನ್ನೇನು ಎಲ್ಲಾ ತಿಳ್ಕೋಲ್ಳೋ ದಿನ ಬಂದೇ ಬಿಡ್ತು ಅಂತಾನೂ ಯಾರೂ ಹೇಳಕಾಗಲ್ಲ. ಒಮ್ಮೆ ಸರಿ ಅನ್ನಿಸಿದ ವಿಷಯವೇ ಇನ್ನೊಮ್ಮೆ ತಪ್ಪು ಅಂತಲೂ ಅನ್ನಿಸ್ಬೌದು. 

ಸಮಾಜದಲ್ಲಿ, ಸರಿ ಯಾವ್ದೂ, ತಪ್ಪು ಯಾವ್ದೂ ಅಂತ ತೀರ್ಮಾನ ಮಾಡೋದೇ ಒಂದು ಭ್ರಮೆ. ಅಥವ ಇಂತಹ ಒಂದೊಂದು ಭ್ರಮೆಯ ಸೃಷ್ಟಿ ಮಾಡೋ ಒಂದು ಕಲೆ. ಅದು ವಿಜ್ಞಾನವೇ ಆಗಿರಲಿ, ವೇದವೇ ಆಗಿರಲಿ, ಜೋತಿಷ್ಯಾಸ್ತ್ರವೇ ಅಥವಾ ಇನ್ನಾವುದೋ ಮೂಡ ನಂಬಿಕೆಯೇ ಆಗಿರಲಿ. ಆ ಕ್ಷಣಕ್ಕೆ , ಆ ಜಾಗದಲ್ಲಿ ಹೆಚ್ಚು ಜನಕ್ಕೆ ಸರಿ ಅನ್ನಿಸಿದ್ರೆ ಅದೇ ಸರಿ, ಹೆಚ್ಚು ಜನಕ್ಕೆ ಅದು ತಪ್ಪು ಅನ್ನಿಸಿದ್ರೆ ಅದು ತಪ್ಪು ಅಷ್ಟೇ. ಹಿಂದೆ ಸರಿ ಅಂತ ಒಪ್ಕಂಡವ್ನು ಇವತ್ತು ಅದೇ ವಿಷಯ ತಪ್ಪು ಅಂತ ವಾದಿಸಿರೋ ದೃಶ್ಯಗಳು ಲೆಕ್ಕಕ್ಕಿಲ್ಲದಷ್ಟು ಸಿಕ್ತಾವೆ. ಹಾಗಾಗಿ, ಯಾವ್ದೂ ಸರಿಯಲ್ಲ. ಯಾವ್ದೂ ತಪ್ಪೂ ಅಲ್ಲ!

ಇಲ್ಲಿ ವಿಷಯವನ್ನ ವಿಜ್ಞಾನದ ಮೂಲಕ ಅಳಿಯೋರು ತಪ್ಪು ತಿಳಿಬಾರದು. ಏಕೆಂದರೆ ವಿಜ್ಞಾನದಲ್ಲಿಯೂ ಅನೇಕ ತಪ್ಪು ನಿರ್ಣಯಗಳು ಆಗಿವೆ, ಇನ್ನೂ ಆಗ್ತಿವೆ. ಪ್ರಯೋಗ ಮಾಡೀನೇ ಎಲ್ಲ ತಿಳ್ಕೊಲ್ತೀವಿ ಅನ್ನೋವ್ರ ವಿರೋಧ ನನಗೆ ಬೇಕಿಲ್ಲ. ಅಂತವರ ವಿರೋಧಿಯೂ ನಾನಲ್ಲ. ವಿಜ್ಞಾನದಿಂದಲೂ ನಾವು ನಮ್ಮ ಜೀವನ ಮಾದರಿಯನ್ನ ಸಾಕಷ್ಟು ಸುಧಾರಿಸಿ ಕೊಂಡಿದ್ದೇವೆ. ಆಗಂತ ಅದರಿಂದ ಆಗ್ತಿರೋ ಮಾರಕ ಬೆಳವಣಿಗೆಗಳೇನೂ ಸಾಧಾರಣ ಅಲ್ಲ. ಭವಿಷ್ಯವನ್ನ ಸಾಕಷ್ಟು ಬೀಕರವಾಗಿಯೂ ಮಾಡ್ಕಂದಿದ್ದೀವಿ!!! ಇದರ ಚರ್ಚೆ ಅವರವರ ಪ್ರೌಡಿಮೆಗೆ ಬಿಟ್ಟ ವಿಚಾರ.

ಕಲಿಕೆ ಅನಂತ. ಆಗಂತ, ಏನು ತಿಳ್ಕೊಳ್ಳೋದು ಬಿಡು, ಎಷ್ಟು ಕಲಿತರೂ ಕಲಿಯೊಕ್ಕೆ ಇನ್ನೂ ಇರುತ್ತಂತೆ. ಅನ್ಗಿದ್ಮೇಲೆ ಏನನ್ನೂ ಕಲಿಯೋದೇ ಬೇಡ ಅನ್ನೋಕಾಗುತ್ತದೆಯೇ? ಕಲಿಕೆ ಅನ್ನೋದು ನಮ್ಮ ಮನಸ್ಸಿನ ಮೇಲೆ ನಾವೇ ಹೇರಿ ಕೊಳ್ಳೋ ಒಂದು ಒರೆ ಆಗಬಾರದು. ಅದು ಒಂದು ಸಿಹಿ ಅನುಭವ ಆಗಿರಬೇಕು. ಹೊಸತನ ಇರ್ಬೇಕು.

ಮುಂದುವರೆಯುತ್ತದೆ...

ಶನಿವಾರ, ಸೆಪ್ಟೆಂಬರ್ 5, 2009

ತಾತ ಮೊಮ್ಮಗನ ಮಾತುಕತೆಯ ಒಂದು ಸನ್ನಿವೇಶ


ತಾತ, ನನ್ನ ತಾಯಿಯ ತಂದೆ, ನಮ್ಮ ಮನೆಗೆ ಬಂದಾಗ ನಮ್ಮಿಬ್ಬರ ನಡುವೆ ನಡೆದ ಒಂದು ಚಿಕ್ಕ ಮಾತುಕತೆ.
ತಾತ: ಇಲ್ನೋಡಪ್ಪ (ಜೇಬಲ್ಲಿದ್ದ ಕೆಲವು ಚೀಟಿ ಇತ್ಯಾದಿಗಳನ್ನು ಹೊರಗೆ ತೆಗೆಯುತ್ತಾ) ನೀನು ಕಳೆದ್ಸಾರಿ ವಿದೇಶಕ್ಕೆ ಹೋದಾಗಲೂ ನಿನ್ನ ಪೋಟೋ ಪೇಪರ್ ನಲ್ಲಿ ಬಂದಿತ್ತು. 
ಈ ಸರ್ತಿನು ಬಂದಿದೆ.
ನಾನು : ತಾತ ಅದು ಎರಡು ವರ್ಷದ ಹಿಂದಿನ ಪೇಪರ್? ಇನ್ನು ಇದೆಯಾ ನಿಮ್ಮತ್ರ?
ತಾತಹ್ಹೂನಪ್ಪಾ (ನಗುತ್ತಾ), ಮನೆ ಮುಂದೆ ಕುಂತಿರ್ತೀನಿಲ್ಲಾ ಸಾಯಂಕಾಲ ಅವಾಗ ದಿನಾ ಯಾರಾದ್ರೂ ಬಂದು ಕೂತು ಮಾತಾಡ್ಸಿ ಹೋಗ್ತಾರೆ. 
ಆಗ ಇದನ್ನ ತೋರಿಸಿ  ನಿನ್ನ ಬಗ್ಗೆ ಹೇಳ್ತಾ ಇರ್ತೀನಿ.
ನಾನು: ಹೌದಾ ತಾತ. 
(ಅಷ್ಟೊತ್ತಿಗೆ ನಾನು ನನ್ನ ಲ್ಯಾಪ್ಟಾಪ್ ದಲ್ಲಿದ್ದ ಅಜ್ಜಿಯ ಚಿತ್ರವನ್ನ ತೋರಿಸಿದೆ, ಈ ಚಿತ್ರ ನನ್ನ ಮದುವೇ ನಿಶ್ಚಿತಾರ್ದದ ದಿವಸ ತೆಗೆದದ್ದು. 
ಸುಮಾರು ಒಂದೂವರೆ ವರ್ಷದ ಹಳೆಯದು)
ತಾತ: ಅಯ್ಯೋ ನಿಮ್ಮವ್ವಾ  
(ನಾವು ನಮ್ಮ ಅಜ್ಜಿಯನ್ನ ಅವ್ವಾ ಅಂತಿದ್ವಿ.  ಅವ್ವಾ ಈಗ್ಗೆ ಐದು ತಿಂಗಳ ಹಿಂದೆ ಮೃತರಾದರು.  ಆಗ ನಾನು ವಿದೇಶದಲ್ಲಿದ್ದೆ
ಅಯ್ಯೋ, ಹೇಗೆ ನಿಂತಾಲ್ನೋಡಪ್ಪಾ ನಿಮ್ಮವ್ವ.? ತಾಯೀ ನೋಡ್ಬಾರವ್ವಾ ಇಲ್ಲಿ 
(ತಾತ ಅಮ್ಮನನ್ನ ಕರೆದರು, ಎಲ್ಲಾ ಹೆಣ್ಣು ಮಕ್ಕಳನ್ನೂ "ತಾಯೀ" ಅಂತಾನೆ ಕರಿಯೋದು ತಾತ).
ನಾನು: ಹ್ಞೂ ತಾತಾ. ಎಲ್ಲರಿಗೂ ಒಂದು ದಿವಸ ಅಂತ ಇರುತ್ತೆ. ಆ ದಿನ ಬಂದಾಗ ಹೊರಡಲೇ ಬೇಕು.
ತಾತ: ಅಲ್ಲಪ್ಪಾ ಈ ಜೀವನ ಆದ್ಮೇಲೆ ನಾವೆಲ್ಲಿಗೆ ಹೋಗ್ತೀವಿ? ನಾವು ದಿನ ಬೆಳಗ್ಗೆ ಏಳ್ತೀವಿ...ಊಟ ಮಾಡ್ತೀವಿ...ನಿದ್ದೆ ಮಾಡ್ತೀವಿ...ಇದೆಲ್ಲಾಕ್ಕೂ ಏನಪ್ಪಾ ಕಾರಣ?
(ಏನನ್ನೂ ಉತ್ತರಿಸದೆ. ನನ್ನ mp3 player ಹೊರಗೆ ತೆಗೆದು "ಮಂಕುತ್ತಿಮ್ಮನ ಕಗ್ಗ" ವನ್ನ ಹುಡುಕಿದೆ.ಅದರಲ್ಲಿ ಕೆಲವು ಸ್ಲೋಕಗಳ ತಾತ್ಪರ್ಯವನ್ನೇ ನನ್ನ ತಾತನಿಗೆ ಕೆಲವು ನಿಮಿಷ ಕೇಳಿಸಿದೆ. 
ಕೆಲವು ನಿಮಿಷ ಕೇಳಿದ ನಂತರ...
ತಾತ ತಾವು ಓದಿದ್ದ ಭಗವದ್ಗೀತೆಯ ತಾತ್ಪರ್ಯವನ್ನ ಹೇಳಲಿಕ್ಕೆ ಆರಂಬಿಸಿದರು...
ಕೆಲವು ನಿಮಿಷ ಕೇಳಿದ ನಂತರ...)
ನಾನು: ತಾತಾ ಇದನ್ನ ಎಲ್ಲಿ ಕಲಿತೆ? (ನನ್ನ ತಾತ ತುಂಬಾ ಹೆಚ್ಚೇನೂ ಓದಿಲ್ಲ.ಈಗ ಅವರಿಗೆ 85 ವರ್ಷ)
ತಾತ:  ನಮಿಗೆ ಸ್ಕೂಲ್ನಾಗೆ ಹೇಳ್ಕೊಟ್ಟಿದ್ರು.
ನಾನುತಾತ ನೀನು ಎಷ್ಟು ಓದಿದ್ದೀಯ?
ತಾತ :  ಹೇ (ನಗುತ್ತಾ) ಒಂದೋ ಎರಡೋ ಅಷ್ಟೇ ಅಂದರು.
(ನಕ್ಕು. ಸ್ವಲ್ಪ ಹೊತ್ತು ನನ್ನ ತಾತನ ಅಣ್ಣ-ಅಪ್ಪ ಇವರ ಬಗ್ಗೆ ವಿಚಾರಿಸದೆ)
ತಾತ:  ಇಲ್ಲ ಅಪ್ಪನನ್ನ ಸರಿಯಾಗಿ ನೋಡೇ ಇಲ್ಲ . ನಾನು ತೀರ ಚಿಕ್ಕವನಿದ್ದಾಗ (4 ತಿಂಗಳು) ತೀರಿ ಹೋದರಂತೆ. 
ನಾನು ಮತ್ತೆ ನಿಮಗೆ ಸಾಕಿದ್ದು ಯಾರು? 
ತಾತ:  ನಮ್ಮ  ದೊಡ್ಡಣ್ಣ. ದೊಡ್ಡಣ್ಣ ಅಷ್ಟೊತ್ತಿಗಾಗಲೇ ಬೇಸಾಯ ಹೊಡಿತಿದ್ದಾ. ನಾನು ನಮ್ಮಪ್ಪನಿಗೆ ಕೊನೆ ಮಗ. 
(ತಾತನ ಅಣ್ಣ ಈಗ ಯಾರೂ ಇಲ್ಲ. ತಾತ ಒಬ್ಬರೇ ಇರೋದು) 
ನಾನು : ನಿಮ್ಮ ಅಪ್ಪ ಏಕೆ ತೀರಿ ಕೊಂಡರು?
ತಾತಅಯ್ಯೋ ಅವಗೆಲ್ಲಾ ಇನ್ಗಿದ್ದಿಲ್ಲಾ... ವರ್ಷಕ್ಕೋ ಎರಡು ವರ್ಷಕ್ಕೋ ಒಂದ್ಸಾರ್ತಿ ರೋಗ ಬಂದು ಬಿಡ್ತಿದ್ವು. ಆಗ ಊರಲ್ಲಿ ಯಾರು ಇರ್ತಿರ್ಲಿಲ್ಲ. 
ಊರು ಬಿಟ್ಟು ತಿಂಗಳೋ ಎರಡು ತಿಂಗಳೋ ಎಲ್ಲೋ ದೂರ ಹೋಗಿ ಇರ್ಬೇಗಿತ್ತು. ಆಗ ರೋಗ ತಗಲಿ ನಮ್ಮಪ್ಪ ಹೋಗ್ಬಿಟ್ರಂತೆ.
ನಾನು : ಅಲ್ಲ ತಾತ. ಎರಡು ವರ್ಷಕ್ಕೆ ಒಂದ್ಸಾರಿ ಅಂದ್ರೂನು ಎಷ್ಟು ಕಷ್ಟ ಅಲ್ವ ಊರ್ಬಿಟ್ಟೋದು ಅಂದ್ರೆ? ಅದು ಸಂಸಾರ ಸಮೇತ?
ತಾತ: ಅಯ್ಯೋ ಇಲ್ಲ ಅಂದ್ರೆ ಬದುಕ್ತಿರ್ಲಿಲ್ಲಾಪ್ಪ. 
ನಾನು : ಆಮೇಲೆ ಏನಾಯ್ತು?
ತಾತ: ನಾನು ನಿಮ್ಮವ್ವನ್ನ (ಅಜ್ಜಿಗೆ ಅವ್ವ ಅಂತಿದ್ವಿ ನಾವು) ಮದ್ವೆ ಆದೆ. ನಮ್ಮೊರಿಂದ ಇಲ್ಲಿಗೆ 
(ನನ್ನ ಅವ್ವನ ತವರು ನನ್ನ ಅಜ್ಜ - ತಂದೆಯ ತಂದೆ - ಊರಿಗೆ ತುಂಬಾ ಸಮೀಪ) 
ನಿಮ್ಮವ್ವನ್ನ ನೋಡೋಕ್ಕೆ ನಾನು ಒಂದೆರಡು ಸಲ ಕುದುರೆಯಲ್ಲಿ ಬಂದಿದ್ದೆ.
ನಾನು (ನಗುತ್ತ) ಹೌದಾ ತಾತ. 
ತಾತ : ಹ್ಞೂ.. ಆಮೇಲಾಮೇಲೆ ಎಷ್ಟೋ ಬಾರಿ ನಡೆದು ಕೊಂಡೆ ಬರುತ್ತಿದ್ದೆ. (ಸುಮಾರು 30 ಕಿ ಮೀ)
ನಾನು:  ಅಲ್ಲ ತಾತ ಅಷ್ಟು ದೂರ ಹೇಗೆ ನಡಿತಿದ್ರಿ?
ತಾತ: ಬೆಳಗ್ಗೆ ಎದ್ದು , ರೊಟ್ಟಿ ಕಟ್ಟಿಸ್ಕಂದು ಹೊರಟರೆ, ಕಾಡು ದಾರಿಯಲ್ಲಿ ಬಂದರೆ ಮದ್ಯಾಹ್ನ ಇಲ್ಲಿರ್ತಿದ್ವಿ. ನಡುವೆ ಒಂದು ಬಾರಿ ಎಲ್ಲಾದರು ನೀರು ಇರೋ ಕಡೆ ಆ ರೊಟ್ಟಿ ತಿಂದು ಬರ್ತಿದ್ದೆ.
(ಸ್ವಲ್ಪ ಹೊತ್ತು ಯೋಚಿಸಿ)
ನಾನು : ತಾತ, ನಿಮಗೂ-ನಮಿಗು ಎಷ್ಟು ವ್ಯತ್ಯಾಸ ಅಲ್ವ?
ತಾತ (ನಕ್ಕು) ಆ ರೀತಿ ನಡದು-ನಡದು ನೋಡಪ್ಪ ಈ ವಯಸ್ಸಲ್ಲಿ ನನಗೆ ಮೊಣಕಾಲಿನ ನೋವು ಬರುತ್ತೆ.
ನಾನು: ನೀವು ಬಾರಿ ಗಟ್ಟಿ ತಾತ. (ಲ್ಯಾಪ್ಟಾಪ್ನಲ್ಲಿ ಚಿತ್ರಗಳನ್ನು ತೋರಿಸ್ತಾ ವಿದೇಶದ ಕೆಲವು ಚಿತ್ರಗಳನ್ನು ತೋರಿಸಿದೆ) 
ತಾತ: ಅಲ್ಲಪ್ಪಾ. ವಿಮಾನದಗೆ ಹಾರೋವಾಗ ಮೇಲೆ ಮೋಡ ಅಡ್ಡ ಬರುತ್ತೇನಪ್ಪ?
ನಾನು: ಹ್ಞೂ.. ಬರುತ್ತೆ ತಾತ. ಮೋಡಗಳ ಮದ್ದೇನೆ ಹಾರೋಗುತ್ತೆ ವಿಮಾನ.
ತಾತ: ಏನೋಪ್ಪ ಸುಖವಾಗಿ ಹೋಗಿ ಬಂದೆಲ್ಲ ಅಷ್ಟೇ ಸಾಕು. ನೀನು ಹುಟ್ಟಿದಾಗ ಜೋತಿಷಿ ಹೇಳಿದ್ರು ನೀನು ತುಂಬಾ ಹೆಸರು ಮಾಡ್ತೀಯ ಅಂತ ಮಗ ಆಗ್ತೀಯ ಅಂತ, ಅವರು ಹೇಳಿದ್ದು ನಿಜ ಆಯಿತು ನೋಡು.
ಅಮ್ಮ : ಊಟಕ್ಕೆ ಆಗಿದೆ. ಅಲ್ಲಿಗೆ ಕೊಡ್ಲ ಅಥವಾ ಇಲ್ಲಿಗೆ ಬರ್ತೀರಾ?
ನಾನುಕೈ ತೊಳ್ಕೊಬೇಕು ನಾವು. ಬಾ ತಾತ ಊಟ ಮಾಡೋಣ.
(ನಾನು ಕೈ ತೊಳ್ದು. ನನ್ನ ಜಾಗಕ್ಕೆ ಬಂದೆ. ತಾತ ಕೈ-ಕಾಲು ತೊಳ್ದು ಹೊರಗೆ ಬಂದು)
ತಾತ:  ತಾಯೀ ವಿಭೂತಿ ಕೊಡವ್ವ. ನೀನು ವಿಭೂತಿ ಅಚ್ಗಂದೆನಪ್ಪಾ ?
ನಾನುಇಲ್ಲ ತಾತ. 
ತಾತ: ವಿಭೂತಿ ಅಚ್ಕಂದಾಗೆ ಊಟ ಮಾಡ್ತೀಯ?
ನಾನು: ಹೇ ನನಿಗು ಬೇಗ ವಿಭೂತ ಕೊಡ್ರಿ. ತಾತ ಬೈತಾರೆ.
(ವಿಭೂತಿ ಅಚ್ಗೊಂದು.. ನಾನು ಲ್ಯಾಪ್ಟಾಪ್ ಮುಂದೆ ಕೂತ್ಗಂಡು ಊಟ ಮಾಡ್ದೆ. ತಾತ ಟೇಬಲ್ ಹತ್ರ ಕೂತು ಊಟ ಮಾಡಿದ್ರು. ಇಬ್ರದು ಊಟ ಆಯ್ತು)
ತಾತ: ತಾಯಿ ಟಿ ವಿ ಹಾಕ್ಬಾರವ್ವಾ... ಸುವರ್ಣ ಚಾನೆಲ್ "ಶಿವಲೀಲಾಮೃತ" ದಾರಾವಾಹಿಯನ್ನ  ತಪ್ಪದೆ ನೋಡ್ತೀನಿ.
(ತಾತ ಟಿ ವಿ ನೋಡೋದ್ರಲ್ಲಿ  ಮಗ್ನರಾದರು, ನಾನು ಒಂದು ರೌಂಡ್ ಹೋಗ್ಬರಣ ಅಂತ ಹೊರಗೆ ಹೊರಟೆ)

blogspot add widget