ಬುಧವಾರ, ಡಿಸೆಂಬರ್ 30, 2009

ಮುಗಿಯದು ಮುತ್ತಿನ ಹಾರದ ಕವನ

ದೇವರು ಹೋಸೆದ ಪ್ರೇಮದ ದಾರ
ದಾರದಿ ಬೆಸೆದ ರುತುಗಳ ಧಾರ
ಋತುಗಳ ಜೊತೆಗೆ ಪ್ರೇಮದ ಪಯಣ
ಮುಗಿಯದು ಮುತ್ತಿನ ಹಾರದ ಕವನ


ಬೇಸಿಗೆಯಲಿ ಆ ಸೂರ್ಯ ...ಭೂತಾಯಿಯ ಸುಡುತಾನೆ
ಪ್ರೇಮಕು ಅಗ್ನಿಪರೀಕ್ಶೆ.ಸುಳಿವಿಲ್ಲದೆ ಕೊಡುತಾನೆ
ಬೇಡ ಯೆಂದರೆ ನಾವು..ಸುಡದೆ ಇರುವುದೆ ನೋವು
ಸರಿಯೊ ಕಾಲದ ಜೊತೆಗೆ...ವ್ಯಸನ ನಡೆವುದು ಹೊರಗೆ


ದೇವರು ಹೋಸೆದ ಪ್ರೇಮದ ದಾರ
ದಾರದಿ ಬೆಸೆದ ರುತುಗಳ ಧಾರ
ಋತುಗಳ ಜೊತೆಗೆ ಪ್ರೇಮದ ಪಯಣ
ಮುಗಿಯದು ಮುತ್ತಿನ ಹಾರದ ಕವನ


ಮೇಘವೊ ಮೇಘವು...ಮುಂಗಾರಿನ ಮೇಘವು
ಮೇಘವೊ ಮೇಘವು...ಇಂಗಾರಿನ ಮೇಘವು
ಹನಿ ಹನಿ ಹನಿ ಹನಿ ಛಿಟ ಪಟ ಮಳೆ ಹನಿ
ಹನಿ ಹನಿ ಹನಿ ಹನಿ ತುಂತುರು ಮಳೆ ಹನಿ
ಗುಡುಗುಡು ಗುಡುಗುಡು ಗುಡುಗೋ ಗುಡುಗಿನ
ಫಳಫಳ ಮಿನ್ಛುವ ಸಿಡಿಯುವ ಸಿಡಿಲಿನ


ಧರಣಿ ತಣಿಸುವ ಭರಣಿ ಮಳೆ ಮಳೆ
ಹಸ್ತ ಚಿತ್ತ ಸ್ವಾತಿ ಮಳೆ ಮಳೆ


ಸಿಡಿಯುವ ಭೂಮಿಗೆ ಗಂಗಾವಾಹಿನಿ
ಉರಿಯುವ ಪ್ರೇಮಕೆ ಅಮ್ರುತವರ್ಶಿನಿ


ವಸಂತ ಮಾಸದಲಿ ಪ್ರೇಮವು..ವಯ್ಯಾರಿಯಾಗಿ ಕುಣಿವೆವಸಂತ ಮಾಸದಲಿ ಪ್ರೇಮವು..ವಯ್ಯಾರಿಯಾಗಿ ಕುಣಿವೆ
ನದಿಗಳು ಝರಿಗಳು ಗಿಡಗಳು ಪೊದೆಗಳು..ಗಾಯನ ಮಾಡಿದವು


ಋತುಗಳ ಚಕ್ರವು ತಿರುಗುತ ಇರಲು
ಕ್ಶಣಿಕವೆ ಕೋಗಿಲೆ ಗಾನದ ಹೊನಲು


ಬಿಸಿಲೋ ಮಳೆಯೊ...ಚಿಗುರೋ ಹಿಮವೊ
ಅಳುವೋ ನಗುವೋ..ಸೋಲೋ ಗೆಲುವೋ
ಬದುಕೆ ಪಯಣ...ನಡೆಯೆ ಮುಂದೆ
ಒಲವೆ ನಮಗೆ..ನೆರಳು ಹಿಂದೆ


ದೇವರು ಹೋಸೆದ ಪ್ರೇಮದ ದಾರ
ದಾರದಿ ಬೆಸೆದ ರುತುಗಳ ಧಾರ
ಋತುಗಳ ಜೊತೆಗೆ ಪ್ರೇಮದ ಪಯಣ
ಮುಗಿಯದು ಮುತ್ತಿನ ಹಾರದ ಕವನ
ಡಾ. ವಿಷ್ಣುವರ್ದನ್ ಆತ್ಮಕ್ಕೆ ಶಾಂತಿ ಸಿಗಲಿ


ಮಂಗಳವಾರ, ಡಿಸೆಂಬರ್ 15, 2009

ಈ ಹೊಸ ತಂತ್ರಾಂಶದ ಹೆಸರು "ಲೋಹಿತಂತ್ರಾಂಶ"

ಈ ಹೊಸ ತಂತ್ರಾಂಶದ ಹೆಸರು "ಲೋಹಿತಂತ್ರಾಂಶ".

ಗಣಕದಲ್ಲಿ ಕನ್ನಡವನ್ನ ಬಳಸಲು ಈಗಾಗಲೇ ಬರಹ ಹಾಗೂ ನುಡಿ ತಂತ್ರಾಂಶಗಳು ಸಾಕಷ್ಟು ಜನಪ್ರಿಯವಾಗಿವೆ. ಇದೇ ಸಾಲಿನಲ್ಲಿ ಇನ್ನೊಂದು ಹೊಸ ಸೇರ್ಪಡೆ ಈಲೋಹಿತಂತ್ರಾಂಶ.
ಯಾಕಪ್ಪಾ ಗೌಡ ಇನ್ನೊಂದು ಹೊಸ ತಂತ್ರಾಂಶ? ಎಂದು ಪ್ರಶ್ನಿಸಿದರೆ, ನನ್ನ ಬಳಿ ಹೆಚ್ಚೇನು ಸಮಾಜಾಯಿಷಿ ಸಿದ್ದವಿಲ್ಲ.
ಇದು ಕೇವಲ ಆಸಕ್ತಿಯಿಂದ ಆರಂಭಿಸಿದ project. ಬ್ಲಾಗ್ ಸ್ನೇಹಿತರ ಸಲಹೆ ಹಾಗೂ ಪ್ರೋತ್ಸಾಹದ ಜೊತೆಗೆ ನನ್ನ ಹಲವು ರಾತ್ರಿಗಳ ನಿದ್ದೆ ಹಾಗೂ ಕೆಲವು ವಾರಾತ್ಯಗಳ ಸಂಪೂರ್ಣ ಅರ್ಪಣೆಯಿಂದ ಈ ತಂತ್ರಾಂಶ ಇಷ್ಟರ ಮಟ್ಟಿಗೆ ಸಿದ್ದವಾಗಿದೆ.
ಇದನ್ನು ಉಚಿತ ತಂತ್ರಾಂಶವನ್ನಾಗಿಸಲು ಇಚ್ಚಿಸುತ್ತಿದ್ದೇನೆ.
ಲೋಹಿತಂತ್ರಾಂಶದ ವಿಶೇಷತೆಗಳು
೧. ಒಮ್ಮೆಗೇ ಅನೇಕ ಕಡತಗಳನ್ನ ತೆರೆದು ಕೊಳ್ಳಬಹುದುಪ್ರತೀ ಕಡತವೂ ಒಂದು ಹೊಸ Tab ನಲ್ಲಿ ತೆರೆದುಕೊಳ್ಳುತ್ತದೆ.
೨. LINUX ನಲ್ಲಿಯೂ ಈ ತಂತ್ರಾಂಶವನ್ನ ಬಳಸ ಬಹುದು.
೩. ಬರಹ ಹಾಗೂ ನುಡಿ, ಎರ್ಡೂ ಮಾದರಿಯ ಕೀಲಿಮಣೆ ಯಲ್ಲಿ ಬರೆಯ ಬಹುದು.
೪. ಕಡತಗಳನ್ನ PDF ಆಗಿಯೂ ಉಳಿಸಿ ಕೊಳ್ಳ ಬಹುದು
೫. ಪದಪೂರ್ತಿ ಸಹಾಯ (auto - completion) ವಿರುತ್ತೆ.
೬.ಅಕ್ಷರಗಳನ್ನ ಅಲಂಕರಿಸ ಬಹುದು, ಹಾಗೆ ಅಲಂಕರಿಸಿದ ಕಡತಗಳನ್ನ HTML ಆಗಿ ಉಳಿಸಿಕೊಳ್ಳ ಬಹುದು
 ಎಲ್ಲಾ ಕಡೆ ಸಂಪೂರ್ಣವಾಗಿ ಕೇವಲ ಯೂನಿಕೋಡ್ (UTF-16) ಮಾತ್ರ ಬಳಸಲಾಗಿದೆ
. ANSI ಕನ್ನಡವನ್ನ ಬೆಂಬಲಿಸಲಾಗಿದೆ. (ಅಂದರೆ ಬರಹದ BRH ಕಡತಗಳನ್ನ ತೆರೆಯಬಹುದು)
. Table ಗಳನ್ನ, ಚಿತ್ರಗಳನ್ನ ಸೇರಿಸ ಬಹುದು.ವಿಶೇಷತೆಗಳ ಸಂಕ್ಷಿಪ್ತ ವಿವರಣೆ
LINUX ಬಳಕೆದಾರರು ಸಹ ಈ ತಂತ್ರಾಂಶವನ್ನ ಬಳಸಬಹುದು. ನಿಮ್ಮ LINUX ಗೆ ತಕ್ಕ ಭಿನ್ನ package ನೀಡಲಾಗುವುದು.

ಕೆಲವರು "ಬರಹ" ದ ಮಾದರಿಯನ್ನ, ಮತ್ತೆ ಇನ್ನು ಕೆಲವರು "ನುಡಿ" ಮಾದರಿಯನ್ನ ಅನುಸರಿಸುತ್ತಾರೆ. ಎರ್ಡೂ ಮಾದರಿಯ ಕೀಲಿ ಮಣೆ ಸಾಕಷ್ಟು ಪ್ರಚಾರ ದಲ್ಲಿದೆ. ಆದ್ದರಿಂದಲೇ ಎರ್ಡೂ ಮಾದರಿಯ ಮಣೆಗಳನ್ನ ಅಳವಡಿಸಲಾಗಿದೆ.
ನೀವು ಕೀಲಿಮಣೆ ಮಾದರಿಯನ್ನ switch ಮಾಡಿಕೊಳ್ಳಲು, ಮೇಲೆ ನೀಡಿರುವ "ಕಗಪ" ಅಥವ "ಕ್" ಎಂದಿರುವ ಗುಂಡಿಯನ್ನ ಒತ್ತಿ. ನಡುವೆ ಯಾವುದೇ ಗಳಿಗೆಯಲ್ಲಿ ನಿಮಗೆ ಬೇಕೆನಿಸಿದಾಗ ಬದಲಿಸಿಕೊಳ್ಳ ಬಹುದು.
PDF ಕಡತಗಳು ತುಂಬಾ portable, ಈ ಬಗ್ಗೆ ನಿಮಗೂ ತಿಳಿದಿರುತ್ತೆ, ಈ ರೀತಿಯ PDF ಕಡತಗಳನ್ನ ರಚಿಸಲು, ನೀವು ಮೇಲೆ ನೀಡಿರುವ "PDF" ಗುಂಡಿಯನ್ನ ಒತ್ತಿ. ಅದರಲ್ಲಿ ಹೊಸ ಕಡತದ ಒಂದು ಹೆಸರನ್ನ ಆಯ್ಕೆ ಮಾಡಿ. ನಂತರ "OK" ಒತ್ತಿದರೆ ಸಾಕು ನಿಮ್ಮ PDF ಕಡತ ಸಿದ್ದ.

ಪದಪೂರ್ತಿ ಸಹಾಯ, ಏನಿದು ಅಂತೀರ? ಒಂದು ಉದಾಹರಣೆ ಕೊಡ್ತೀನಿ.
ನೀವು ಈಗ "ಪ್ರದರ್ಶನ" ಎಂದು ಬರೆಯಲು ಇಚ್ಚಿಸುವಿರಿ ಎಂದು ಇಟ್ಟು ಕೊಳ್ಳಿ. ಅದಕ್ಕೆ ನೀವು ಮೊದಲು "ಪ್ರ" ಎಂದು ("pra") ಬರೆಯುತ್ತೀರಿ, ಆಗ, ಕೂಡಲೇ "ಪ್ರ" ಅಕ್ಷರದ ಮುಂದೆ ನಿಮಗೆ ಒಂದು ಸಹಾಯ ಕಿಡಕಿ ತೆರೆಯುತ್ತೆ. ಅದರಲ್ಲಿ "ಪ್ರ" ಅಕ್ಷರದಿಂದ ಆರಂಬವಾಗುವ ಅನೇಕ ಪದಗಳನ್ನ ಪಟ್ಟಿ ಮಾಡಲಾಗಿರುತ್ತೆ. ಆ ಪಟ್ಟಿಯಲ್ಲಿ "ಪ್ರದರ್ಶನ" ಎಂಬ ನಿಮ್ಮ ಆಯ್ಕೆ ಕೂಡಲೇ ಕಂಡು ಬಂದಲ್ಲಿ ಆ ಪದವನ್ನ high light ಮಾಡಿ ಕೊಳ್ಳಿ, Up ಅಥವ Down arrow ಕೀಲಿಯನ್ನ ಒತ್ತಿ.

ನಂತರ Tab ಅಥ್ವ Enter ಕೀಲಿಯನ್ನ ಒತ್ತಿ. ಈಗ "ಪ್ರದರ್ಶನ" ಪದ ಕೂಡಲೇ ಬರುತ್ತೆ. ಪ್ರದರ್ಶನ ಅಲ್ಲದೆ, ಬೇರೆ ಪದಗಳು ಬೇಕು ಅನ್ನಿಸಿದರೆ, ಸುಮ್ಮನೆ ಬರೆಯುತ್ತ ಹೋಗಿ, ಹತ್ತಿರದ ಪದಗಳ ಪಟ್ಟಿ ತಾನಾಗೆ ತೆರೆಯುತ್ತೆ, ಬೇಕೆಂದರೆ ಆಯ್ಕೆ ಮಾಡಿ ಇಲ್ಲ ಅಂದರೆ ನಿಮ್ಮ ಪಾಡಿಗೆ ನೀವು ಬರೆಯುತ್ತಾ ಹೋಗಿ.

ಅಕ್ಷರಗಳನ್ನ ಅಲಂಕರಿಸುವುದರ ಬಗ್ಗೆ ನಿಮಗೇ ತಿಳಿದಿರುತ್ತೆ, ಅಲಂಕರಿಸಿದ ಪಠ್ಯವನ್ನ HTML ಹಾಗಿ ಉಳಿಸಿ ಕೊಳ್ಳಿ. HTML ಹಾಗೂ ಸಂಪೂರ್ಣ ಯೂನಿಕೋಡ್, ಈ ಎರ್ಡು ಗುಣಗಳ ಪ್ರಭಾವದಿಂದ ನಿಮ್ಮ ಕಡತವನ್ನ ಬೇರೆ ಯಾವುದೇ ಕಂಪ್ಯೂಟರ್ನಲ್ಲಿ FIREFOX ಅಥ್ವ INTERNET EXPLORERಅಥ್ವ google chroome ಮುಂತಾದ ಬ್ರೌಸರ್ ಗಳಲ್ಲಿ ಸುಲಭವಾಗಿ ತೆರೆಯ ಬಹುದು.
ಬರಹದಲ್ಲಿ ಬರೆದು ಉಳಿಸಿಕೊಂಡ BRH ಕಡತಗಳನ್ನ ತೆರೆದು, ಕನ್ನಡ ಯೂನಿಕೋಡ್ ಗೆ ತರ್ಜುಮೆ ಮಾಡಬಹುದು.
Table ಅಂದರೆ, ಹೇಗಿರುತ್ತೆ ನೀವೇ ನೋಡಿ

ಕುವೆಂಪು

ಡಿ ವಿ ಜಿ

ಗುರುವಾರ, ಡಿಸೆಂಬರ್ 10, 2009

ಭಾರೀ ಉದಾರವಾಗಿ ಬರೀ ಉದಾರೀಕರಣ

ಹಣಕಾಸಿನ ಬಗ್ಗೆ, ಒಂದಿಷ್ಟು ಈ ಹಿಂದೆ ಇಲ್ಲಿ ಬರ್ದಿದ್ದೆ. ನೀವು ಕೂಡ ಅದನ್ನ ಓದಿ ಮುಂದಿನ ಭಾಗ ಹಾಕಿ ಅಂತ ಅಂದಿದ್ದ್ರಿ. ಆದ್ರೆ, ಕೆಲವು ಒತ್ತಡಗಳ ಕಾರಣ ಏನನ್ನೂ ಬರೆಯದೇ ಏಕತಾನತೆ ಅನುಭವಿಸಿ, ಕೊನೆಗೆ ಉಸಿರು ಬಿಗಿದಂತಾಯ್ತು, ಅದಕ್ಕೆ ಒಂದಿಷ್ಟು ಬರೀಲೇ ಬೇಕು ಅಂತ ಕೂರ್ಬೇಕು ಅನ್ನಿಸ್ತು. ಆದ್ರೆ ಅದಕ್ಕಿಂತ ಮುಂಚೆ ಈ ಕೆಳಕಂಡ ಬರಹವನ್ನ ಓದಿ. ನಿಮಗೆ ಏನಾದ್ರೂ ಇನ್ನೂ ಹೆಚ್ಚು ಮಾಹಿತಿ ತಿಳಿದಿದ್ರೆ. ಹಂಚಿಕೊಳ್ಳೋದನ್ನ ಮರಿಬೇಡಿ.

~~~~ (*) ~~~~

ಈಗ ಮತ್ತೋಂದು ಸುಲಭ ಉದಾಹಾರಣೆಯನ್ನ ತಗೋಳ್ಳಾಣ. ಸುಮಾರು ೧೯೯೮ ರಲ್ಲಿ ರಷ್ಯದ ಅರ್ಥ ವ್ಯವಸ್ಥೆಯಲ್ಲಿ ಒಂದು ಬಾರೀ ಬಿರುಗಾಳಿಯೇ ಬೀಸಿತ್ತು. ಅದ್ರ ಪರಿಣಾಮವಾಗಿ ರಷ್ಯದಲ್ಲಿ ಎಲ್ಲಾ ಉತ್ಪನ್ನಗಳ ದರ ಇದ್ದಕ್ಕಿದ್ದಂತೆ ಗಗನಕ್ಕೇರಿದ್ವು, ಇದನ್ನ ನನ್ನ ಒಬ್ಬ ಸ್ನೇಹಿತ ತನ್ನ ಮಾತಲ್ಲಿ ಹೀಗೆ ಹೇಳಿದ್ದ ಅಂತ ಇಲ್ಲಿ ಬರ್ದಿದ್ದೀನಿ.

"ನಾನು ಆಗ ಹದಿನಾರು ವರ್ಷದವನಿದ್ದೆ. ನನಗೆ ಕಂಪ್ಯುಟರ್ ಕೊಡ್ಸಿ ಅಂತ ಮನೆಯಲ್ಲಿ ತುಂಬಾ ದಿನದಿಂದ ಹಟ ಮಾಡ್ತಿದ್ದೆ. ನನ್ನ ಹುಟ್ಟುಹಬ್ಬದ ಕೊಡುಗೆಯಾಗಿ ನನಗೆ ಕಂಪ್ಯುಟರ್ ಕೊಡ್ಸಿದ್ರು. ಅದಕ್ಕೆ ಆಗ ಸುಮಾರು ಎಳ್ನೂರು ಅಮೇರಿಕನ್ ಡಾಲರ್ ಬೆಲೆ ಇತ್ತು, ಅಪ್ಪ, ಅಮ್ಮ, ಚಿಕ್ಕಪ್ಪ ಎಲ್ಲ ಸೇರಿ ಕೊಡ್ಸಿದ್ರು. ಇದಾಗಿ ಒಂದೇ ತಿಂಗ್ಳಲ್ಲಿ ನಮ್ಮ ರಬೆಲ್ಸ್ (ರಷ್ಯಾದ ದುಡ್ಡಿನ ಹೆಸರು)
ಬೆಲೆ ನೆಲ ಕಚ್ತು. ಎಳ್ಣೂರು ಅಮೇರಿಕನ್ ಡಾಲರ್ ಕೊಟ್ಟು, ಒಂದು ತಿಂಗ್ಳ ಹಿಂದೆ ಖರೀದಿಸಿದ್ದ ನನ್ನ ಕಂಪ್ಯುಟರ ಬೆಲೆ ಒಂದು ತಿಂಗ್ಳ ಅಂತರದಲ್ಲಿ ಹತ್ತು ಪಟ್ಟು ಹೆಚ್ಚಾಗಿತ್ತು. ಆ ದಿನ ನಾನು ಹಟ ಮಾಡ್ದೆ ಇದ್ದಿದ್ರೆ, ನನ್ನ ಕಂಪ್ಯುಟರ್ ತೊಗೊಳ್ಳೊಕ್ಕೆ ಮುಂದೆ ಇನ್ನೂ ಐದು ವರ್ಷನಾದ್ರೂ ಕಾಯ್ಬೇಕಿತ್ತು ಅನ್ಸುತ್ತೆ."

ಇದೊಂದು ಉದಾಹರಣೆಯಷ್ಟೇ. ಈಗ ನನ್ನ ಸ್ನೇಹಿತನ ಜಾಗ್ದಲ್ಲಿ ನೀವಿದ್ದಿದ್ರೆ? ಊಹಿಸಿಕೊಳ್ಳಿ ನಿಮಗೇನೇ ಎಲ್ಲಾ ಅರ್ಥ ಆಗುತ್ತೆ... http://en.wikipedia.org/wiki/1998_Russian_financial_crisis

ರಷ್ಯಾದ "ರಬೆಲ್ಸ್" ತರ ನಮ್ಮ "ರುಪಾಯಿ" ಮೌಲ್ಯನೂ ರಾತ್ರಿ ಕಳ್ದು ಬೆಳ್ಕಾಗೋದ್ರಲ್ಲಿ ಈ ರೀತಿ ಏನಾದ್ರೂ ಠುಸ್ಸೆಂದಿದ್ರೆ ನಮ್ಗೆ ಆಗ ಅದ್ರ (ದುಷ್)ಪರಿಣಾಮ ಏನು ಅಂತ ಸರ್ಯಾಗಿ ಮನವರ್ಕೆ ಆಗ್ತಿತ್ತು. ಅದು ಕ್ರಮೇಣವಾಗಿ ಹಂತ ಹಂತವಾಗಿ ಪಲ್ಟಿ ಹೋಡಿತಿರ‍ೋದ್ರಿಂದ ನಮ್ಗೆ ಅದಕ್ಕೆ ತಕ್ಕಂತೆ ಹೊಂದಿ ಕೊಂಡು ಹೋಗೋ ಗುಣನೂ ಬೆಳಿತಾ ಇದೆ ಅನ್ಸುತ್ತೆ. ಇಲ್ದೇ ಹೋಗಿದ್ರೆ ರುಪಾಯಿ ಮೌಲ್ಯವನ್ನ ಹೇಗೆ ಕಾಪಾಡ್ಕೋ ಬೇಕು ಅಂತ ಜ್ಞಾನನಾದ್ರೂ ಬೆಳೆಸ್ಕೋಳ್ತಿದ್ವಿ ಅಲ್ವ?.

ಹಣದುಬ್ಬರ ಅಂದ್ರೆ ಸಾಮಾನ್ಯ ಮನುಷ್ಯನಿಗೆ ಏನರ್ಥ? ಅಂತೇಳಿ ತಿಳಿಯಾಗಿ ತಿಳ್ದಿದೀವಿ. ಈಗ ಅದೇ ಜಾಗತಿಕ ಮಟ್ಟದಲ್ಲಿ ಇದರ ಅರ್ಥ ಏನು ಅಂತ ತಿಳ್ಕೋಳ್ಳೊಣ.

ಹಣದುಬ್ಬರ ಹೆಚ್ಚಾದ್ರೆ, ನಮ್ಮ ದೈನಂದಿನ ಅವಶ್ಯಕತೆಗಳಾದ ಅಕ್ಕಿ, ಬೇಳೆ, ಹಾಲು ಹೀಗೇ ಎಲ್ಲಾದರ ಬೆಲೆಯೂ ಗಗನೆಕ್ಕೇರಿ ಬಿಟ್ತಾವೆ. ಅದಕ್ಕೆ ತಕ್ಕಂತೆ ಇದ್ದಕ್ಕಿದ್ದಂತೆ ನಮ್ಮ ಆದಾಯವೇನೂ ಹೆಚ್ಚಾಗೋಲ್ಲ. ಆದ್ರೆ ಖರ್ಚು ಮಾತ್ರ ಬೆಳಿತಾನೇ ಇರ್ತದೆ. ಇಂತಹ ಪರಿಸ್ಥಿತಿ ಒಂದು ಮದ್ಯಮ ವರ್ಗದ ಕುಟುಂಬಕ್ಕೆ ಎದುರಾದ್ರೆ ಹೇಗಿರುತ್ತೆ ಅಂತ ಊಹೆ ಮಾಡ್ಕೋಬಹುದು. ಮಾಡ್ಕೋಂತೀರ ತಾನೆ?

ಇಂತಹ ಪರಿಸ್ಥಿತಿ ಒಂದು ದೇಶಕ್ಕೇನೆ ಎದುರಾದ್ರೆ ಹೇಗಿರುತ್ತೆ ಯೋಚ್ನೆ ಮಾಡಿ ಈಗ?
ಹೌದು, ನಾನು ಹಿಂದಿನ ಬರಹದಲ್ಲಿ ತಿಳ್ಸಿದಿನಲ್ಲ? ಇಂದಿರಮ್ಮನ ಹಸಿರು ಕ್ರಾಂತಿ ಬಗ್ಗೆ! ಅದರ ಹಿಂದಿನ ಕಥೆಯೇ ಹಾಗಿತ್ತು. ಸುಮ್ಮನೆ ಹಸಿರು ಕ್ರಾಂತಿಗೆ ಕೈ ಹಾಕಿದ್ದಲ್ಲ. ಜನ ಹೊಟ್ಟೆಗೆ ಹಿಟ್ಟು ಸಹ ಇಲ್ದೇ ಸಾಯ್ತಾ ಇದ್ದಂತ ಪರಿಸ್ಥಿತಿ ಇತ್ತು ಹಾಗ.

ಮೊದ್ಲೇ ನಮ್ಮನ್ನ ಕೊಳ್ಳೇ ಹೊಡ್ದಿದ್ದಾ ಬ್ರಿಟೀಷರ ಮುಷ್ಠಿಯಿಂದ ಆಗ್ತಾನೆ ಬಿಡಿಸಿ ಕೊಂಡು ಹೊರಗೆ ಬಂದಿದ್ದಾ, ಸ್ವಾತಂತ್ರ ಭಾರತಕ್ಕೆ, ಎದುರಾದ ಅತೀ ಗಂಭೀರ ಸಮಸ್ಯೆಗಳು ಅನೇಕ, ಅದ್ರಲ್ಲಿ ಅತೀ ಮುಖ್ಯವಾದವು ಅಂದ್ರೆ
 * ಪಾಕಿಸ್ಥಾನದ ಜೊತೆಗೆ ಪದೆ ಪದೆ ಗಡಿ ಸಮಸ್ಯೆಯ ಯುದ್ದ,
 * ಚೀನಾದ ಜೊತೆಗೆ ಯುದ್ದ,
 * ಇವೆರ್ಡು ಸಾಲ್ದಕ್ಕೆ ಬುಲೆಟ್ ವೇಗದಲ್ಲಿ ಬೆಳಿತಿದ್ದಾ ಜನಸಂಖ್ಯೆ,
 * ಜೊತೆಗೆ ನಮ್ಮ ಉನ್ನತ ರಾಜಕಾರಣಿಗಳ ಕೆಲ್ವು ತಪ್ಪು ತಪ್ಪು ನಿರ್ದಾರಗಳು
 * ಅನಕ್ಷರತೆ, ಬಡತನ, ನಿರುದ್ಯೋಗ,
ಹೀಗೇ ಎಲ್ಲಾ ಸೇರಿ ಸಮಾಜದ ಸಮತೋಲನವೇ ತಪ್ಪಿ ಹೋಗಿತ್ತು. ನಮ್ಮ ಅರ್ಥ ವ್ಯವಸ್ಥೆಯೇ ಕೊಚ್ಚಿ ಹೋಗಿತ್ತು.

ಇಂತಿಪ್ಪ ನಮ್ಮ ಕೇಂದ್ರ ಸರ್ಕಾರದಲ್ಲಿ ಕ್ರಮೇಣ ಬಾರೀ ಬೆಳ್ವಣಿಗೆಗಳು ಶುರುವಾದ್ವು. ಕೇವ್ಲ ಸರ್ಕಾರದಿಂದ ಎಲ್ಲ ಅಗತ್ಯಗಳನ್ನೂ ಪೂರೈಸೋದು ಕಷ್ಟ ಸಾದ್ಯ ಅಂತ ಮನವರಿಕೆ ಆಯ್ತು. ಹೀಗಾಗಿ ಕೆಲ್ವು ಉದ್ಯಿಮೆಗಳಲ್ಲಿ ಸಾಕಷ್ಟು ಸೇವೆಗಳನ್ನ ಉದಾರೀಕರಣದ ಗಾಳಿ ಬೀಸ್ತು.
 * ದೂರಸಂಪರ್ಕಸೇವೆಗಳಲ್ಲಿ ಉದಾರೀಕರಣ
 * ದೂರದರ್ಶನ ಸೇವೆಯಲ್ಲಿ ಸಾಧನೆ
 * ಬ್ಯಾಂಕ್ ಸೇವೆಗಳಲ್ಲಿ ಉದಾರೀಕರಣ
ಖಾಸಗಿಯವ್ರಿಗೂ ಸಾಮಾಜಿಕ ಜವಬ್ದಾರಿಗಳಲ್ಲಿ ಪಾಲ್ಗೋಳ್ಳೋ ಅವ್ಕಾಶ ಕೊಡೋ ವ್ಯವಸ್ಥೆಗೆ ಸಾಕಷ್ಟು ಪ್ರೋತ್ಸಾಹನೂ ಸಿಕ್ತು. ಇದೆಲ್ಲಾ ಹೆಚ್ಚಾಗಿ ನಡ್ದದ್ದು ಇಂದಿರಮ್ಮನ ಕಾಲ್ದಲ್ಲಿ.

ಇದೇ ದಿಶೆಯಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ೧೯೯೧ ರಲ್ಲಿ ನಮ್ಮ ಪ್ರಧಾನಮಂತ್ರಿಗಳಾಗಿದ್ದ ಪಿ.ವಿ ನರಸಿಂಹರಾವ್ ಹಾಗೂ ಆಗ ಇವ್ರ ಸಂಪುಟದಲ್ಲಿ ಕೇಂದ್ರ ಹಣಕಾಸು ಸಚಿವರಾಗಿದ್ದ ಈಗಿನ ಪ್ರಧಾನಮಂತ್ರಿಗಳಾದ ಮನ ಮೋಹನ ಸಿಂಗ್ ಇವ್ರೆಲ್ಲಾ ಸೇರಿ ಮತ್ತೋಂದು ಹೊಸ ಹೆಜ್ಜೆ ಇಟ್ರು. ಏನಪ್ಪಾ ಅದು ಅಂದ್ರೆ, ನಮ್ಮ ದೇಶದ ಮಾರುಕಟ್ಟೆಯನ್ನ ಹೊರದೇಶದವ್ರಿಗೂ ಮುಕ್ತಗೊಳಿಸಿದ್ರು. ಅಂದ್ರೆ, ಇತರೇ ದೇಶದವ್ರು ಸಹ ನಮ್ಮಲ್ಲಿ ಹಣವನ್ನ ಹೂಡಿಕೆ ಮಾಡ್ಬೌದು ಅಂತೇಳಿ ಅವ್ಕಾಶ ಮಾಡಿ ಕೊಟ್ರು.

~~~(*)~~~

ಸಶೇಷ...

ಸೋಮವಾರ, ನವೆಂಬರ್ 23, 2009

ನಮ್ಮ ಬೀದಿ ತುಂಬಾ ವರ್ಲ್ಡ್ ಫೇಮಸ್

ಕಣದ ಮನೆಯಲ್ಲಿ ಕಣಗಲ ಗಿಡವನ್ನ ಬೆಳೆಸಿದ್ದರ ಕಥೆಯ ಎರಡನೇ ಕಂತು ಇವತ್ತು ಹಾಕಿದ್ದೇನೆ...ಮೊದಲ ಕಂತನ್ನ ಈಗಾಗಲೇ ಓದಿಲ್ಲದಿದ್ದರೆ ಇಲ್ಲಿ ಓದಿ.

~~~

ಮೂರ್ತ್ಯಪ್ಪ ಇವತ್ತಿಗೆ ನಾಲ್ಕು ದಿನ ಆತು, ಆದ್ರೆ ಇನ್ನೂ ಚಿಗುರು ಕಾಣಿಸ್ತಿಲ್ಲ. ನಾನು ಸ್ವಲ್ಪ ಸರ್ಕಾರಿ ಗೊಬ್ರ ಹಾಕ್ತೀನಿ.

ಅಯ್ಯೋ! ಅದಕ್ಕೆ ಗೊಬ್ರ ಬೇಡ ಸಾವ್ಕಾರಾ, ಅದೆಲ್ಲ ಚಿಗುರೋಡೆಯುತ್ತೆ. ನಿಂಗೆ ಗೊತ್ತಾಗಲ್ಲ. ಈಗ್ಲೇ ಸರ್ಕಾರಿ ಗೊಬ್ರ ಹಾಕಿದ್ರೆ ಅದ್ರ ಎಳೆ ಬೇರು ಸುಟ್ಟು ಹೋಗುತ್ತೆ ಅಷ್ಟೇ. ಅದ್ರ ಪಾಡಿಗೆ ಅದನ್ನ ಬಿಟ್ಟು ನಿಮ್ಮ ಪಾಡಿಗೆ ನೀವು ಸ್ವಲ್ಪ ಇರ್ಬಾರ್ದೆ.

ಮೂರ್ತ್ಯಪ್ಪನ ಮಾತು ಲೆಕ್ಕಕ್ಕೆ ತೆಗಳ್ದೆ, ಪರೀಕ್ಷೆ ಮಾಡಣ ಅಂತ ಯೋಚ್ಸಿ, ಒಂದು ಬೊಗಸೆ ಪೂರ್ತಿ ಸರ್ಕಾರಿ ಗೊಬ್ರಾನೂ ತಗಮ್ಬಂದೆ. ಆದ್ರೆ ಎಲ್ಲಾ ಗುಣಿಗೂ ಸಮವಾಗಿ ಹಾಕ್ಲಿಲ್ಲ. ಒಂದು ಗುಣಿಗೆ ಜಾಸ್ತಿ ಹಾಕಿ, ಇನ್ನೊಂದಕ್ಕೆ ಸ್ವಲ್ಪವೆ ಸ್ವಲ್ಪ ಹಾಕಿದ್ದೆ. ಕರಿಬೇವಿನ ಗಿಡಕ್ಕೂ ಸ್ವಲ್ಪ ಹಾಕಿದೆ.

ಮತ್ತೊಂದೆರಡು ದಿನ ಬಿಟ್ಟು ಬಂದೆ, ಕಡ್ಡಿ ನೆಟ್ಟಿದ್ದ ಗುಂಡಿ ಮುಂದೆ ಕುಂತೆ, ಮೂರ್ತ್ಯಪ್ಪನೂ ನನ್ನಿಂದೆ ಇದ್ದ. ಕಡ್ಡಿಯಲ್ಲಿ ಇನ್ನೂ ಚಿಗುರಿಲೇನೇ ಕಾಣಿಸ್ತಿಲ್ಲ. ಕರಿಬೇವಿನ ಗಿಡದಲ್ಲಿ ಕೆಳಗಿನ ಎಲೆಗಳು ಒಣಗ್ತಾ ಬರ್ತಿದ್ವು.ನಾನು ಬೇಸರದಿಂದ ಮೂರ್ತ್ಯಪ್ಪನ ಕಡೆ ನೋಡ್ದೆ.

ನೋಡು ಮೂರ್ತ್ಯಪ್ಪ, ಸಾಕಷ್ಟು ನೀರಾಕಿದ್ದೀನಿ, ಬೇರೆ ಬೇರೆ ಮಣ್ಣು ಹಾಕಿದ್ದೀನಿ, ತಿಪ್ಪೆ ಗೊಬ್ರಾನೂ ಹಾಕಿದ್ದೀನಿ, ಕೊನೆಗೆ ಇರ್ಲಿ ಅಂತ ಸ್ವಲ್ಪ ಸರ್ಕಾರಿ ಗೊಬ್ರಾನೂ ಹಾಕಿದ್ದೀನಿ. ಆದ್ರೆ ಇನ್ನೂ ಚಿಗುರೇ ಕಾಣಿಸ್ತಿಲ್ಲ. ನೀನು ಹೇಳಿದ್ದೆ ಒಂದು ವಾರ ಆದ್ಮೇಲೆ ಚಿಗುರು ಬರುತ್ತೆ ಅಂತ, ಈಗ ನೋಡು ಒಂದ್ವಾರ ಆತು, ಇನ್ನೂ ಕಡ್ಡಿ, ಕಡ್ಡಿನೇ ಇದೆ, ಸಸಿನೇ ಹಾಗಿಲ್ಲಾ. ಕರಿಬೇವಿನ ಎಲೆಗಳು ಕೂಡ ಒಣಗ್ತಾ ಇವೆ. ಸ್ವಲ್ಪ ಔಷಧಿ ತಂದು ಈ ಕರಿಬೇವಿನ ಗಿಡಕ್ಕೆ ಸ್ಪ್ರೇ ಮಾಡ್ತೀನಿ.

ಸಾವ್ಕಾರಾ, ನಾನಾಗಲೇ ಹೇಳ್ದೆ ನಿಮ್ಗೆ, ಅದಿನ್ನೂ ಮೊದ್ಲು ಬೇರು ಬಿಡ್ಬೇಕು ಆಮೇಲೆ ಚಿಗುರು ಬರುತ್ತೆ ಅಂತ, ನೀವು ನನ್ನ ಮಾತು ಲೆಕ್ಕಕ್ಕೆ ತಗಳ್ದೇನೆ ಸರ್ಕಾರಿ ಗೊಬ್ರ ಹಾಕಿದ್ರಿ, ಈಗ ಇದ್ರ ಬೇರು ಕೂಡ ಸುಟ್ಟು ಹೋಗಿದೆ ಅನ್ಸುತ್ತೆ. ಆದ್ರೂ ಏನೂ ತಲೆ ಕೆಡಿಸ್ಕೂ ಬೇಡ್ರಿ, ಇನ್ನೂ ಸ್ವಲ್ಪ ದಿನ ಟೈಮ್ ಕೊಡಿ, ಈ ಮಣ್ಣಲ್ಲಿ ಸರ್ಕಾರಿ ಗೊಬ್ಬರದ ಶಕ್ತಿ ಕಡ್ಮೆ ಆದ್ಮೇಲೆ, ಬೇರು ಬಂದೇ ಬರುತ್ತೆ. ಆಮೇಲೆ ಚಿಗುರೆಲೆನೂ ಬರುತ್ತೆ. ಕರಿಬೇವಿನ ಗಿಡದಲ್ಲಿ ಈಗಿರೋ ಎಲ್ಲಾ ಎಲೆಗಳು ಉದ್ರುತಾವೆ. ಆಮೇಲೆನೇ ಜೊತೆಗೆ ಒಂದೊಂದೇ ಹೊಸ ಎಲೆ ಬರೋದು.

ಆದ್ರೂ ಮನಸ್ಸಿಗೆ ಸಮಾಧಾನ ಇರ್ಲಿಲ್ಲ. ಶೇಂಗ ಗಿಡಕ್ಕೆ ಹಾಕ್ತಿದ್ದನ್ನ ಗಮನಿಸಿದ್ದ ನಾನು, ಸುಣ್ಣವನ್ನೇ ಔಷಧಿ ಅಂತೇಳಿ ಊಹಿಸಿ, ಎಲ್ಲಾ ಗಿಡ್ಗಗಳಿಗೂ ಸುತ್ಲೂ ಸುಣ್ಣ ಹಾಕಿದೆ. ಮತ್ತೆ ಎಲೆನೆಲ್ಲ ಹಸಿ ಹಸಿ ಮಾಡಿ, ಎಲೆಗೂ ಸ್ವಲ್ಪ ಸುಣ್ಣ ಮೆತ್ತಿದೆ. ಯಾಕಂದ್ರೆ ರೋಗದ ಕೀಟಗಳು ಅಲ್ಲಿದ್ರೆ ಅವೂ ಸತ್ತು ಹೋಗ್ಲಿ ಅನ್ನೋ ಭಾವ್ನೆಯಾಗಿತ್ತು ನಂದು. :)

ಇಷ್ಟು ಮಾಡಿದ್ದು, ನೋಡಿದ ಮೂರ್ತ್ಯಪ್ಪ, ತುಂಬಾ ತಲೆ ಬಿಸಿ ಮಾಡ್ಕಂದಿದ್ದ. ಅದುಕ್ಕೆ ಗೊಬ್ರ, ಔಷಧಿ ಏನೂ ಬೇಡ ಅಂತ ಹೇಳಿದ್ನೆಲ್ಲಾ ಸಾವ್ಕಾರಾ. ಮತ್ಯಾಕೆ ಇದೆಲ್ಲ ಅಂತ ಕೇಳಿದ.

ಇಷ್ಟೆಲ್ಲಾ ಮಾಡಿದ್ರೂ ಹೊಸ ಚಿಗುರು ಬರ್ದೇ ಇದ್ದದ್ದನ್ನ ಗಮನಿಸಿ, ನನಿಗೆ ಕೆಟ್ಟ ಮೇಲೆ ಬುದ್ದಿ ಬಂತು ಅನ್ನೋ ಹಾಗಾಯ್ತು ಮತ್ತೆ ಅಂಗಾದ್ರೆ ಮೂರ್ತ್ಯಪ್ಪ, ಈ ಗುಣಿಲಿರೋ ಮಣ್ಣನ್ನೆಲ್ಲ ಬದಲ್ಸಿ ಇವತ್ತಿಂದ ಮತ್ತೆ ಬೇರೆ ಹೊಸ ಮಣ್ಣು ತಂದಾಕ್ಲ?

ಬೇಡ ಸಾವ್ಕಾರಾ, ನೀವು ಸ್ವಲ್ಪ ಅದಕ್ಕೆ ಟೈಮ್ ಕೊಡಿ ಸಾಕು.

ಮತ್ತೆ ಒಂದೆರ್ಡು ದಿನ ಕಾದೆ, ಆದ್ರೆ ಇನ್ನೂ ಚಿಗುರೆಲೇನೆ ಕಾಣಿಸ್ತಿಲ್ಲ, ಮೂರ್ತ್ಯಪ್ಪ ಇಲ್ದೆ ಇದ್ದಾಗ ಆಯಪ್ಪ ಹೇಳಿದ್ದೂ ನಿಜವ? ಈ ಕಡ್ಡಿಲಿ ನಿಜಕ್ಕೂ ಬೇರು ಬಂದಿರುತ್ತಾ? ಅಂತ ಪರೀಕ್ಷೆ ಮಾಡ್ಬೇಕು ಅಂತೇಳಿ, ಸ್ವಲ್ಪವೆ ಸರ್ಕಾರಿ ಗೊಬ್ರ ಹಾಕಿದ್ದ, ಗುಣಿಯಿಂದ ಒಂದು ಕಡ್ಡಿನ ಕಿತ್ತು ತಗ್ದು ನೋಡಿದರಾಯ್ತು ಅಂತ ಯೋಚ್ಸಿದೆ. ಹಾಗೇ ಮಾಡ್ದೆ. ಕಡ್ಡಿ ಕಿತ್ತು ಗಮನಿಸಿದೆ. ಅದ್ರಲ್ಲಿ ನಿಜಕ್ಕೂ ಬೇರು ಬರ್ತಾ ಇದ್ವು. ಅಜ್ಜಿಯ ನೆರೆ ಕೂದಲಿನ ಹಾಗೆ ಸಣ್ಣನೆಯ ಬಿಳಿ ಎಳೆಗಳು ಬರ್ತಿದ್ವು. ನೋಡಿ ಖುಷಿ ಆಯ್ತು, ಮತ್ತೆ ಆ ಕಡ್ಡಿನ ವಾಪಾಸ್ ನೆಟ್ಟೆ.

ಮುಂದಿನ ದಿನ ಮೂರ್ತ್ಯಪ್ಪನ ಹತ್ರ ಹೇಳ್ದೆ. ಮೂರ್ತ್ಯಪ್ಪ ನಿನ್ನೆ ನಾನು ಕಡ್ಡಿ ಕಿತ್ತು ನೋಡ್ದೆ, ನೀನೆಳ್ದಂಗೆ ಬೇರು ಬರ್ತಾ ಇವೆ. ಅಂದ್ರೆ ಇನ್ನು ಸ್ವಲ್ಪ ದಿನದ ಮೇಲೆ ಚಿಗುರೆಲೆ ಬರುತ್ತೆ ಅಲ್ವ?

ಬರುತ್ತೆ ಸಾವ್ಕಾರಾ, ಆದ್ರೆ ಈಗ ಮತ್ತೆ ತಿಪ್ಪೆ ಗೊಬ್ರ, ಸರ್ಕಾರಿ ಗೊಬ್ರ, ಸರ್ಕಾರಿ ಔಷಧಿ ಅಂತೆಲ್ಲ ತಂದು ಹಾಕ್ಬೇಡಿ. ಸ್ವಲ್ಪ ಚಿಗುರೆಲೆ ಬಂದ್ಮೇಲೆ ಏನಾದರೂ ಹಾಕಿ. ಉಪಯೋಗನೂ ಹಾಗುತ್ತೆ.

ಅಲ್ಲಿಂದ ಒಂದು ವಾರ - ಹದಿನೈದು ದಿನ, ಗಿಡಗಳ ಬಗ್ಗೆ ಹೆಚ್ಚು ತಲೆ ಕೇದಿಲ್ಕೊಳ್ಳಿಲ್ಲಾ.

ಅಷ್ಟೊತ್ತಿಗೆ ಒಂದಿನ ಅಮ್ಮ ಚಿಗುರೆಲೆ ಕಾಣಿಸಿ ಕೊಳ್ತಾ ಇರೋದನ್ನ ಗಮನಿಸಿದ್ರು, ಗಿಡಗಳಲ್ಲಿ ಹೊಸ ಚಿಗುರೆಲೆ ಬಂದಿದೆ ಅಂತ ಅವ್ರೇ ಬಂದು ನಂಗೆ ಹೇಳಿದ್ರು, ನಾನು ಹೋಗಿ ನೋಡ್ದೆ. ಸಣ್ಣ ಸಣ್ಣ ಚಿಗುರು ಸೂಕ್ಷ್ಮವಾಗಿ ಕಾಣಿಸ್ತಾ ಇದ್ವು. ಆವತ್ತೇ ಮೂರೂ ಗಿಡಗಳಿಗೆ ಸುತ್ತಲೂ ಬಿದಿರಿನ ಒಣ ಕಡ್ಡಿ ತಂದು ನೆಟ್ಟೆ, ಅದಕ್ಕೆ ತಂತಿ ಸುತ್ತಿ. ಬಿಗಿ ಭದ್ರತೆ ಮಾಡ್ಬಿಟ್ಟೆ. ಗಿಡನ ಮುಟ್ಬೇಕು ಅಂದ್ರೆ ಅಂದಕ್ಕೆ ಅಂತಾನೆ ಒಂದು ಚಿಕ್ಕ ಕಿಟಕಿ ಮಾಡಿದೆ.


ಅಲ್ಲಿಂದ ನಾನು ಇನ್ನೂ ಇಬ್ರನ್ನ ನನ್ನ ಜೊತೆ ಸೇರಿಸ್ಕಂದೆ. ಗೋಡೆಯ ಮಟ್ಟ ನೋಡೋಕ್ಕೆ ಅಂತ ತರಗಾರರು ಒಂದು ಸಣ್ಣ ಗಾತ್ರದ ಪೈಪನ್ನ ಉಪಯೋಗಿಸ್ತಾ ಇದ್ರು. ಅಂತ ಒಂದು ಹಳೇ ಪೈಪ್ ಉಪ್ಯೂಗಕ್ಕೆ ಬರಲ್ಲ ಅಂತ ಬಿಸಾಡಿದ್ರು. ಗಿಡಕ್ಕೆ ನೀರಾಕ್ಕೊಕ್ಕೆ ಅಂತ ಒಂದು ಲೀಟರಿನ ಡಬ್ಬದ ಕೆಳಗೆ ಒಂದು ರಂದ್ರ ಮಾಡಿ, ಈ ಪೈಪ್ನ ಒಂದೆರ್ಡು ಅಡಿ ಉದ್ದ ಕತ್ತರಿಸಿ ತಂದು ಸಿಗ್ಸಿದೆ. ಪಕ್ಕದ ತೊಟ್ಟಿಯಿಂದ ಡಬ್ಬದಲ್ಲಿ ನೀರ್ತಂದು, ಆ ಪೈಪ್ ಮೂಲ್ಕ ಗಿಡಕ್ಕೆ ಬಿದಿರಿನ ಕಡ್ಡಿ ಸಂದಿಯಿಂದ ನೀರಾಕೊದೇ ಒಂದು ಕುತೂಹಲವಾಗ್ಬಿಡ್ತು. ನಮ್ಗೆ ಆವತ್ತು ಇದೆ ಒಂದು ದೊಡ್ಡ ಇಂಜಿನೀರಿಂಗ್ ಅನ್ನಿಸಿತ್ತು.

~~~~ (*) ~~~~

ಮುಂದೆ ಕನಗಲ ಹೂವು ನಮ್ಮ ಮನೆಗೆ ಅಷ್ಟೇ ಅಲ್ಲಾ, ನಮ್ಮೂರಿನ ದೇವಸ್ಥಾನಗಳ ಪೂಜಾರಿಗಳ ಮನಗೆ ಮತ್ತೆ ನಮ್ಮೂರಿನ ದೇವಸ್ಥಾನಗಳಿಗೂ ಹೋಗಿ ಮುಟ್ಟಿತ್ತು. ದೇವಸ್ಥಾನದ ಪೂಜಾರಿಗಳೇ ದಿನ ಬಂದು ಹೂವು ಕಿತ್ಗಂಡು ಹೋಗ್ತಿದ್ರು. ಆದ್ರೆ ಕರಿಬೇವಿನ ಗಿಡ ಹೆಚ್ಚು ಎತ್ತರ ಬೆಳಿಲೆ ಇಲ್ಲಾ. ಎರಡ್ಮೂರು ವರ್ಷ ಆದ್ಮೇಲೆ ಸತ್ತು ಹೋತು. ಕನಗಲ ಗಿಡ ತುಂಬಾ ದೊಡ್ದಾಗಿತ್ತು. ಮತ್ತೆ ಅದ್ರ ಪಕ್ಕದಲ್ಲೇ ಇದ್ದ ಕೊಳವೆ ಬಾವಿಯ ಪಂಪ್ ಕೂಡ ಹಾಗಿನ್ದಾಗೆ ಕೆಟ್ಟು ನಿಲ್ತಿತ್ತು. ಇದರ ರಿಪೇರಿ ಮಾಡೋ ಸಂದರ್ಬದಲ್ಲಿ ಪಕ್ಕದಲ್ಲಿದ್ದ ಗಿಡ ತುಂಬಾ ಅಡ್ಡಿ ಮಾಡುತ್ತೆ ಅಂತಾ, ಗಿಡನ ಅಲ್ಲಿಂದ ಎತ್ತಂಗಡಿ ಮಾಡಿದ್ದಾರೆ. ಆದ್ರೆ ಅಮ್ಮ ಈಗ್ಲೂ ಮತ್ತೊಂದು ಕನಗಲ ಗಿಡನ ಅಲ್ಲೇ ಹತ್ರದಲ್ಲೇ ಬೆಳ್ಸಿದ್ದಾರೆ. ಈಗ ಅದೂ ನಮ್ಮ ಬೀದಿ ತುಂಬಾ ವರ್ಲ್ಡ್ ಫೇಮಸ್.

ಬುಧವಾರ, ನವೆಂಬರ್ 18, 2009

ಕಡ್ಡಿ, ಕಡ್ಡಿನೇ ಇದೆ, ಹೊಸ ಚಿಗುರೇ ಬಂದಿಲ್ಲಾ?

ಹವ್ಯಾಸಕ್ಕೆ ಇರ್ಲಿ ಅಂತ ಇನ್ನೊಂದು ಕೂತೂಹಲವಾದ ಕಾರ್ಯದಲ್ಲಿ ನನ್ನನ್ನ ನಾನು ತೊಡಗಿಸ್ಕೋಡ್ಡಿದ್ದೀನಿ. ಆದು ಏನೂ ಅಂತ ನಿಮ್ಗೆಲ್ಲ ಇಷ್ಟರಲ್ಲೇ ತಿಳಿಸ್ತೀನಿ. ಈ ನಡುವೆ ಹೊಸ ಬರಹವನ್ನ ಬರಿಯೊಕ್ಕಾಗ್ಲಿ ಅಥ್ವ ನಿಮ್ಮಗಳ ಬರಹಗಳನ್ನ ಓದೋದಕ್ಕಾಗ್ಲಿ ನನಗೆ ಪುರುಸೊತ್ತಾಗ್ತಾ ಇಲ್ಲ. ಆದ್ರೆ ಬಿಡುವು ಮಾಡ್ಕೋಂಡು ಮುಂದಿನ ಹದಿನೈದು ದಿನಗಳಲ್ಲಿ ಬ್ಲಾಗ್ನಲ್ಲಿ ಯಥಾ ಪ್ರಕಾರ ಕಾಣಿಸ್ಲೋಳ್ತೀನಿ. ಇಷ್ಟು ಮಾತ್ರ ಹೇಳಿ ಹೋದ್ರೆ ಹೇಗೆ? ಅದಕ್ಕೇಂತ ಈಗಾಗ್ಲೇ ಇಂತಹ ಒತ್ತಡದ ಸಂದರ್ಭಗಳಿಗೆ ಇರ್ಲಿ ಅಂತ ಬರೆದಿಟ್ಟಿದ್ದ ಬರಹವೊಂದನ್ನ ಇಲ್ಲಿ ಇವತ್ತು ಹಾಕಿರ್ತೀನಿ. ಅಮ್ಮ ಅಪ್ಪನ ನಡುವೆಯ ಸಂಭಾಷಣೆಯೊಂದಿಗೆ ಬರಹ ಆರಂಬವಾಗುತ್ತೆ.
~~~~ (*) ~~~~
ಮನೆ ಹಳೆದಾಯ್ತು, ಬೇಗ ಹೊಸ್ಮನೆ ಕಟ್ಸೋ ವ್ಯವಸ್ಥೆ ಮಾಡಿ.

ಆಯ್ತು, ಮುಂದಿನ ವರ್ಷದಿಂದ ಮನೆ ಕಟ್ಸಾಣ, ಈ ವರ್ಷನೇ ಬೇಡ!

ಮನೆ ಕಟ್ಸಿದ್ರೆ, ಇಲ್ಲಿ ಕಟ್ಸೋದು ಬೇಡ ಮತ್ತೆ. ಕಣದಲ್ಲಿ ಕಟ್ಸಣ, ಇಲ್ಲಿ ಜಾಗ ಸಾಕಾಗಲ್ಲ.

ಆಯ್ತು, ಹೊಸ್ಕಣದಲ್ಲಿ ನಮ್ಮ ಜಾಗ ಅಳತೆ ಮಾಡ್ಸಿ ಕಟ್ಸಿದ್ರಾಯ್ತು.

ಹೀಗೇ ಕಾಲ ಕಳ್ದು, ಒಂದು ಶುಭದಿನ ಮನೆ ಕಟ್ಸೋಕ್ಕೆ ಕೆಲಸ ಶುರು ಮಾಡಿದ್ರು. ಅಪ್ಪನಿಗೆ ಹಣದ ಬಗ್ಗೆ ಸ್ವಲ್ಪ ಆತಂಕ ಇದ್ರೂನೂ ಉತ್ಸಾಹದಿಂದಲೇ ಮನೆ ಕಟ್ಸೋದಕ್ಕೆ ತಕ್ಷಣಕ್ಕೆ ಬೇಕಿದ್ದ ಇಟ್ಟಿಗೆ, ಕಲ್ಲು, ಸಿಮೆಂಟು ಒಂದೊಂದೇ ವ್ಯವಸ್ಠೆ ಮಾಡೋದಕ್ಕೆ ಓಡಾಡ್ತಾ ಇದ್ರು.

ಆಗ ನನ್ನ ಜವಾಬ್ದಾರಿ ಏನಪ್ಪಾ ಅಂದ್ರೆ, ಊಟದ ಸಮಯ ಒಂದ್ಬಿಟ್ಟು, ಉಳ್ದಾ ದಿನ ಪೂರ್ತಿ ಕಣದಲ್ಲೇ ಇರ್ಬೆಕಿತ್ತು. ಎನಾದ್ರೂ ಕಳ್ಳತನ ಹಾಗುತ್ತೆ ಅನ್ನೋ ಯೋಚ್ನೆ ಇದ್ದಿದ್ದರಿಂದ, ಈ ರೀತಿ ಮಾಡ್ಬೇಕಾಗಿತ್ತು. ಆದ್ರೆ ರಾತ್ರಿ ನಾನು ಮನೇಲೇ ಇರ್ತಿದ್ದೆ, ಕಣದಲ್ಲಿ ಯಾರಾದ್ರು ಬೇರೆಯವರನ್ನ ಮಲಗಿಲಿಕ್ಕೆ ವ್ಯವಸ್ಠೆ ಮಾಡಿದ್ರು. ಬೇಸಿಗೆ ರಜಾ ಪೂರ್ತಿ ನಾನು ಕಣದಲ್ಲೇ ಕಳ್ದೆ.

ಈ ರೀತಿ ಇರ್ಬೇಕಾದ್ರೆ, ಒಂದಿನ ನಮ್ಮ ಹಳೇ ಮನೆ ಇತ್ತಲಲ್ಲಿ ಇದ್ದ ಕನಗಲ ಹೂವಿನ ಗಿಡವನ್ನ ನಾನು ನಮ್ಮ ಹೊಸ್ಮನೆ ಹತ್ರಾನು ಬೆಳಸ್ಬೇಕು ಅಂತ ಯೋಚ್ನೆ ಬಂತು. ಯಾಕಂದ್ರೆ ಹೊಸಮನೆಗೆ ಹೋದ್ಮೇಲೆ ಪೂಜೆಗೆ ಹೂವು ಅಂತ ಮತ್ತೆ ಹಳೇ ಮನೆಗೆ ಬರೋದು ಬೇಡ ಅಂತ.

ಅಮ್ಮ, ಕನಗಲ ಗಿಡನ ಹೊಸ್ಮನೆ ಹತ್ರನೂ ಬೆಳಿಸ್ಬೇಕು, ಹೊಸ್ಮನೆಗೆ ಹೋದ್ಮೇಲೆ ನಮಿಗೆ ಹೂವಿನ ಚಿಂತೆ ಇರಲ್ಲ.

ಹ್ಞೂ, ಅದಕ್ಕೇನಂತೆ ಈಗ ಇತ್ತಲಲ್ಲಿ ಇದೆಯಲ್ಲ ಅದೇ ಗಿಡದ ಒಂದೆರ್ಡು ರಮ್ಬೇಗಳನ್ನ ಕತ್ರಿಸ್ಕೊಂದು ಹೋಗಿ ಅಲ್ಲಿ ಹೊಸ್ಮನೆ ಕಣದಲ್ಲಿ ನೆಡು.

ಅಮ್ಮಾ , ಬರೀ ಕಡ್ಡಿ ನೆಟ್ರೆ ಸಾಕ? ಅದುನ್ನ ಪ್ಯಾಕೆಟ್ ಮಾಡಿ ನೆಡೋದಲ್ವ? ಬೇರು, ಬೀಜ ಏನೂ ಬೇಡ್ವ?

ಹೇ, ಇದನ್ನೆಲ್ಲಾ ಪ್ಯಾಕೆಟ್ ಯಾಕ್ಮಾಡ್ತೀಯ? ಕಡ್ಡಿನೇ ಸಾಕು, ಸ್ವಲ್ಪ ನೀರಾಕ್ತಾ ಇರು ಸಾಕು.

ಆಯ್ತು ಸರಿ ಇವತ್ತೇ ಗಿಡ ನೆಡ್ತೀನಿ.

ಇತ್ತಲಲ್ಲಿ ಒಂದೆರ್ಡು ತೆಳ್ಳನೆಯ ಉದ್ದನೆಯ ಕನಗಲ ರಮ್ಬೇಗಳನ್ನ ಕತ್ತರಿಸ್ಕಂದೆ, ತಗಂಡು ಹೊಸ್ಮನೆ ಕಣಕ್ಕೆ ಬಂದೆ. ಈಗ ಇದನ್ನ ಹೇಗೆ ನೆಡೋದು?

ನಮ್ಮನೆ ಕೆಲ್ಸಕ್ಕೆ ಒಬ್ಬ ಹೆಣ್ಮಗ್ಳು ಬರ್ತಿದ್ರು. ಅವ್ರ ಗಂಡನಿಗೆ ಒಂದು ಆಪರೇಷನ್ ಹಾಗಿತ್ತು. ಹಾಗಾಗಿ ಆಯಪ್ಪ ಏನೂ ಕೆಲಸ ಮಾಡ್ತಿರ್ಲಿಲ್ಲ. ಬರೀ ಅವ್ರಿವ್ರ ಮನೆ ಮುಂದೆ ಟೈಮ್ ಪಾಸ್ ಮಾಡ್ತಿದ್ದ. ಈಗ ಅವ್ನ ಹೆಂಡ್ತಿ ನಮ್ಮ ಹೊಸ್ಮನೆ ಕೆಲ್ಸಕ್ಕೆ ಬರ್ತಿದ್ರಿಂದ ಯಾವಾಗ್ಳೂ ಅಲ್ಲೇ ಕಣದಲ್ಲಿ ಇರ್ತಿದ್ದ. ಯಾರದ್ರೂ ಮಾತಾಡಕ್ಕೆ ಸಿಕ್ಕೇ ಸಿಕ್ತಾರೆ ಅಂತ. ನನಿಗೆ ಆಯಪ್ಪ ಯಾವಾಗ್ಲು "ಸಾವ್ಕಾರ" ಅಂತ ಕರೀತಿದ್ದು. ಆಯಪ್ಪನ ಹೆಸ್ರು "ಮೂರ್ತ್ಯಪ್ಪ". ನಾನು "ಮೂರ್ತ್ಯಪ್ಪ" ಅಂತಾನೆ ಕರೀತಿದ್ದೆ.

ಮೂರ್ತ್ಯಪ್ಪ, ನಮ್ಮ ಹಳೇ ಮನೆ ಇತ್ಲಲ್ಲಿ ಇರೋ ಕನಗ್ಲ ಗಿಡದ ಕಡ್ಡಿ ಇವು. ಈ ಕಡ್ಡಿಗಳು ಚಿಗುರೋಡ್ದು, ಗಿಡ ಹಾಗ್ತಾವಂತೆ, ಇಲ್ಲಿ ನೀರೂ ಹತ್ರದಲ್ಲೇ ಇದೆ, ಅದಕ್ಕೆ ಇಲ್ಲೇ ನೆಡ್ತೀನಿ. ಹಾಗೇ ಇದು ಕರಿಬೇವಿನ ಗಿಡ, ಇದನ್ನು ಇಲ್ಲೇ ನೆಡ್ತೀನಿ.

ಅಲ್ಲಾ ಸಾವ್ಕಾರಾ, ಒಂದು ಕಡಿ ನೆಡು ಸಾಕು, ನಿಮ್ದೊಂದು ಮನೆಗೆಲ್ಲ ಎಷ್ಟು ಗಿಡ ಬೇಕು? ಎಷ್ಟು ಹೂವು ಬೇಕು? ಮತ್ತೆ ಹೂವಿನ ಗಿಡ, ಕರಿಬೇವಿನ ಗಿಡದ ನಡ್ವೆ ಸ್ವಲ್ಪ ಜಾಗ ಬಿಡಿ. ಅವು ಬೆಳ್ದು ದೊಡ್ದವಾದ್ಮೇಲೆ ಅವಕ್ಕೆ ಇನ್ನೂ ಜಾಗ ಬೇಕಾಗುತ್ತೆ. ನಿಮ್ಮ ಹಳೇ ಮನೆ ಹಿಂದೆ ಇರೋ ಗಿಡನೆ ನೋಡಿ, ಈಗ ಎಷ್ಟು ದೊಡ್ಡದಾಗಿದೆ ಅಂತ.

ಆತು ಮೊರ್ತ್ಯಪ್ಪ ಸ್ವಲ್ಪ ಜಾಗ ಬಿಡ್ತೀನಿ. ಈ ಕಡ್ಡಿಗಳು, ಚಿಗುರೋಡಿಯೋದೆ ನಂಗೆ ಡೌಟು, ಅದಿಕ್ಕೆ ಈ ಎರಡು ಕಡ್ಡಿಗಳನ್ನ ನಾಲ್ಕು ಚಿಕ್ಕ ಚಿಕ್ಕ ಕಡ್ಡಿ ಮಾಡಿ, ಒಂದೊಂದತ್ರ ಎರಡೆರಡು ಕಡ್ಡಿ ನೆಡ್ತೀನಿ.

ಅಯ್ಯೋ ಬೇಡ ಸಾವ್ಕಾರಾ, ಒಂದೇ ಕಡ್ಡಿ ನೆಡಿ ಸಾಕು. ಅದಕ್ಕಿಂತ ಚಿಕ್ಕದಾಗಿ ಕತ್ತರಿಸ್ಬೇಡಿ. ಅದು ಉಪ್ಯೊಗಕ್ಕೆ ಬರಲ್ಲ.

ನಾನು ಮೂರ್ತ್ಯಪ್ಪನ ಮಾತನ್ನ ಲೆಕ್ಕಕ್ಕೆ ಇಟ್ಕಲ್ದೆ, ಎರಡನ್ನು ಕತ್ತರ್ಸಿ ನಾಕು ತುಂಡು ಮಾಡ್ದೆ. ಒಂದಡಿ ಆಳದ ಮೂರು ಗುಂಡಿ ತಗ್ದೆ, ಅದ್ರಲ್ಲಿ ಒಂದಿಷ್ಟು ಕಪ್ಪು ಮಣ್ಣು, ಕೆಂಪು ಮಣ್ಣು, ಒಂದಿಷ್ಟು ತಿಪ್ಪೆ ಗೊಬ್ರ ಹಾಕಿ ರಾಡಿ ಮಾಡ್ದೆ. ಒಂದು ಗುಣಿಗೆ ಎರಡು ಕಡ್ಡಿ, ಅಂದ್ರಂತೆ ಮೂರು ಗುಣಿಲಿ ನಾಲ್ಕು ಕಡ್ಡಿ ಮತ್ತೆ ಒಂದು ಕರಿಬೇವಿನ ಗಿಡ ಅಂತ ನನ್ನ ಪ್ಲ್ಯಾನ್ ಇತ್ತು.

ಗುಣಿಯ ಮದ್ಯೆದಲ್ಲಿ ಹೂವಿನ ಗಿಡದ ಎರಡೆರಡು ಕಡ್ಡಿ ಇಟ್ಟು, ಮುಚ್ಚಿದೆ. ಸಪೋರ್ಟಿಗೆ ಇರ್ಲಿ ಅಂತೇಳಿ ಇನ್ನೊಂದು ಬೇರೆ ಜಾತಿಯ ಒಣ ಕಂಡಿನೂ ಅದ್ರ ಜೊತೆ ನೆಟ್ಟಿದ್ದೆ. ಇದೆ ರೀತಿ ಕರಿಬೇವಿನ ಗಿಡಕ್ಕೂ ಮಾಡಿದ್ದೆ.

ಅಲ್ಲಾ ಸಾವ್ಕಾರಾ. ಅದಿನ್ನೂ ಬೇರಿಲ್ಲದ, ಎಲೆಯಿಲ್ಲದ ಕಡ್ಡಿ ಅಷ್ಟೇ. ಅದಕ್ಕೆ ಬೇರ್ಬೇರೆ ಮಣ್ಣು, ತಿಪ್ಪೆ ಗೊಬ್ರ ಎಲ್ಲಾ ಯಾಕೇ? ಸುಮ್ನೆ ಸ್ವಲ್ಪ ನೆಲ ಹಸಿ ಮಾಡಿ ಕಡ್ಡಿ ಸಿಗ್ಸಿ ಸಾಕು. ಕರಿಬೇವಿನ ಗಿಡಕ್ಕೂ ಅಷ್ಟೇ, ಅದು ಇನ್ನೂ ಹೊಸ ಬೇರು ಬರ್ಬೇಕು. ಅಲ್ಲಿತಂಕಾ ಅದಕ್ಕೆ ನೀರು ಮತ್ತೆ ಸ್ವಲ್ಪ ಮಣ್ಣು ಸಾಕು,

ಎರಡು ದಿನ ಬಿಟ್ಟು ಬಂದೆ, ಆದ್ರೆ ಇನ್ನೂ ಚಿಗುರೇ ಕಾಣಿಸ್ತಿಲ್ಲ. ಅಯ್ಯೋ ಕಡ್ಡಿ ಒಣಗಿ ಹೋಗಿದೆ ಅನ್ಸುತ್ತೆ. ಮೂರ್ತ್ಯಪ್ಪ ನೀನೆಳಿದ್ದು ಸರಿ, ನಾನು ಕಡ್ಡಿನ ಅಷ್ಟು ಚಿಕ್ಕದಾಗಿ ತುಂಡು ಮಾಡ್ಬಾರ್ದಾಗಿತ್ತು ಅನ್ಸುತ್ತೆ. ನಾನು ಮತ್ತೆ ಬೇರೆ ಕಡ್ಡಿ ತಂದು ನೆಡ್ತೀನಿ.

ಅಯ್ಯೋ ಸಾವ್ಕಾರಾ, ಅದಕ್ಕಿನ್ನೂ ಎರಡೇ ಎರಡು ದಿನ ಹಾಗಿದೆ, ಈಗ್ಲೇ ಹೇಗೆ ಚಿಗುರು ಬರುತ್ತೆ? ಒಂದು ವಾರನಾದ್ರೂ ಟೈಮ್ ಕೊಡ್ರಿ ಅದುಕ್ಕೆ. ಅದು ಮೊದ್ಲು ನೆಲದ ಒಳ್ಗೆನೇ ಸಣ್ಣ ಸಣ್ಣ ಬೇರು ಬರುತ್ತೆ. ಆ ಬೇರು ಬಂದಾದ ಮೇಲೆ ಸಣ್ಣ ಚಿಗುರೆಲೆ ಕಾಣ್ಸುತ್ತೆ. ಆ ಗಣ್ಣು ಇದ್ದಾವಲ್ಲ? ಅಲ್ಲೇ ಚೂರು ಹಸುರು ಬಣ್ಣದ ಚಿಗುರು ಬರುತ್ತೆ ನೋಡ್ತಿರಿ.

ಅನ್ಗಂತೀಯ ಮೂರ್ತ್ಯಪ್ಪ, ಯಾವ್ದುಕ್ಕು ಕಡ್ಡಿ ಒಣಗ್ದಂಗೆ ಅದರ ತುದಿಗೆ ಆಕ್ಳ ಸಗಣಿ ತಂದು ಅಂಟಿಸ್ತೀನಿ.

ಆ ಕೆಲಸ ಬೇಕಾದ್ರೆ ಮಾಡು ಸಾವ್ಕಾರಾ.

ಬೇರೆಯವರ ಮನೆ ಮುಂದಿನ ಹೊಸ ಗಿಡಗಳಿಗೆ ಈ ರೀತಿ ಮಾಡಿದ್ದು ಗಮನಿಸಿದ್ದ ನಾನು, ಸಗಣಿನ ತಂದು ಅದೇ ರೀತಿ ಕಡ್ಡಿ ತುದಿಗೆ ಮೆತ್ತಿದೆ.

ಮತ್ತೆ ಎರಡು ದಿನ ಬಿಟ್ಟು ಬಂದು ಗಮನ್ಸಿದೆ. ಆದ್ರೆ ಇನ್ನೂ ಚಿಗುರು ಕಾಣಿಸ್ತಿಲ್ಲ.ಅಷ್ಟೊತ್ತಿಗೆ ಮೂರ್ತ್ಯಪ್ಪ ನನ್ನ ಹಿಂದೆ ಬಂದು ನಿಂತು ನನ್ನನ್ನೇ ನೋಡ್ತಿದ್ದ.


~~~~ (*) ~~~~


ತುಂಬ ಉದ್ದ ಆಯ್ತು, ಅದಕ್ಕೆ ಇವತ್ತಿಗೆ ಇಲ್ಲಿಗೆ ನಿಲ್ಲಿಸಿ, ಮತ್ತೆ ಮುಂದಿನ ಭಾಗವನ್ನ ಇನ್ನೊಂದಿನ ಹಾಕ್ತೇನಿ

ಶನಿವಾರ, ನವೆಂಬರ್ 7, 2009

ಏನಪ್ಪಾ ಇದು? ರೂಪಾಯಿಗೇನೇ ಬೆಲೆ ಕಟ್ಟೋದಾ!

ನಮ್ಮ ದೇಶ ಪ್ರಗತಿಯನ್ನ, ಸ್ವಾವಲಂಬನೆಯನ್ನ ಹೇಗೆ ಸಾಧಿಸೋದು? ಅದಕ್ಕೂ ಹಣ ದುಬ್ಬರಕ್ಕೂ ಇರುವ ಸಂಬಂದ ಏನು? ಹೀಗೆ ಇನ್ನೂ ಕೆಲ್ವು ಆರ್ಥಿಕ ವಿಷ್ಯಗಳನ್ನ ದೀರ್ಘವಾಗಿ, ಸರಳ್ವಾದ ಭಾಷೆಯಲ್ಲಿ, ಕುತೂಹಲ ಬರಿತ್ವಾಗಿ ಬರಿಬೇಕು ಅಂತೇಳಿ ತುಂಬಾ ದಿನದಿಂದ ಮನಸ್ಸಿತ್ತು. ವಾಣಿಜ್ಯ ವಿಷಯದಲ್ಲಿ ಪದವಿ ಮಾಡಿರೋವ್ರಿಗೆ ಇಂತಹ ವಿಷ್ಯಗಳು ತುಂಬಾ ಆಳ್ವಾಗಿ ತಿಳ್ದಿರುತ್ತೆ. ನಾನು ವಾಣಿಜ್ಯ ವಿದ್ಯಾರ್ಥಿ ಅಲ್ದೇ ಹೊದ್ರೂನೂ ಆಸಕ್ತಿಯಿಂದ ಅಷ್ಟೆ ಇಲ್ಲಿ ಬರೆದದ್ದು. ತಪ್ಪು-ಒಪ್ಪುಗಳು ಇರ್ಬೌದು. ಓದಿ ಮುಗ್ಸಿ ಮೇಲೆ ಬರಹ ಇಷ್ಟನೂ ಆಗ್ಬೌದು ಅಥ್ವ ಹೊಸ ಹೊಸ ಗೊಂದಲಗಳೂ ಸಹ ಆಗ್ಬೌದು. ವಾಕ್ಯಗಳು ಹಿಂದು-ಮುಂದು ಆಗ್ಬೇಕಾಗಿತ್ತು ಅನ್ನಿಸ್ಬೌದು, ಅಥ್ವ ಅರ್ಥನೇ ಆಗ್ದೇನೇ ಇರ್ಬೌದು. ಇವೆಲ್ಲವನ್ನೂ ಗಮನದಲ್ಲಿಟ್ಟು ಕೊಂಡು ಏನಾದ್ರೂ ಮುಂಜಾಗ್ರತೆ ಕ್ರಮಗಳನ್ನ ತಗೋ ಬೇಕು ಅನ್ಸಿದ್ರೆ, ತಗೋಂಡು ನಂತರ ಓದಿ.


~~~ ( * ) ~~~

"ವ್ಯಾಪಾರ" ಮೊದಲ? "ಹಣ" ಮೊದಲ? (ಹಣ ಹುಟ್ಟಿದ್ದು ಹೇಗೆ?)
ನಮ್ಮ ದಿನ ನಿತ್ಯದ ಒಡನಾಟದಲ್ಲಿ ಮೊದಲು ಬಂದಿದ್ದು, ಹಣವೂ ಅಲ್ಲ, ವ್ಯಾಪಾರವೂ ಅಲ್ಲ. ಮೊದಲು ಹುಟ್ಟಿದ್ದು ಅವಶ್ಯಕತೆ,
 * ಅವಶ್ಯಕತೆಯಿಂದ - ಅನಿವಾರ್ಯತೆ,
 * ಅನಿವಾರ್ಯದಿಂದ - ಅವಲಂಬನೆ,
 * ಅವಲಂಬನೆಯಿಂದ - ಪರಸ್ಪರ ಸಹಬಾಳ್ವೆ,
 * ಸಹಬಾಳ್ವೆಯಲ್ಲಿಯೇ - ಒಂದು ಸ್ಪರ್ದೆ.
 * ಈ ಸ್ಪರ್ದೆಯೇ - ವ್ಯಾಪಾರ.
 * ವ್ಯಾಪಾರಕ್ಕೆ ಅನುವಾಗೋದಕ್ಕೆ ಹುಟ್ಟಿದ ಹೊಸ ಅಂಶವೇ "ಹಣ".

ಉದಾಹರಣೆಗೆ,
 * ಮೊದ್ಲು ಮನುಷ್ಯನಿಗೆ ಬೇಕಿದ್ದು ತಿನ್ನೋಕೆ ಒಂದಿಷ್ಟು ಆಹಾರ, ಇದು ಅವಶ್ಯಕತೆ. ತಿನ್ನೋಕೇ ಬೇಕಾದ ಎಲ್ಲಾ ಉತ್ಪನ್ನಗಳನ್ನೂ  ಒಬ್ಬನೇ ವ್ಯಕ್ತಿಯಿಂದ ಅಥ್ವ ಒಂದೇ ಕುಟುಂಬದಿಂದ ಪೂರೈಕೆ ಮಾಡ್ಕೊಳ್ಳೊಕ್ಕೆ ಹಾಗ್ತಿರ್ಲಿಲ್ಲ.
 * ಅಕ್ಕಿಯಿದ್ದವ್ನತ್ರ ಗೋದಿ ಇರ್ತಿರ್ಲಿಲ್ಲ. ಗೋದಿ ಇದ್ದವ್ನತ್ರ ತರ್ಕಾರಿ ಇರ್ತಿರ್ಲಿಲ್ಲ. ಈಗ ಪರಸ್ಪರ ಸಹಕಾರ ಅನಿವಾರ್ಯವಾಯ್ತು. ಅಕ್ಕಿಯಿದ್ದವ್ನು ಒಂದಿಷ್ಟು ಅಕ್ಕಿ ಕೊಟ್ಟು ಅದಕ್ಕೆ ಬದಲಾಗಿ ಸ್ವಲ್ಪ ಗೋದಿ ಇರೋವ್ನತ್ರ ಗೋದಿಯನ್ನ, ತರ್ಕಾರಿಯವ್ನತ್ರ ತರ್ಕಾರಿಯನ್ನ ತೊಗೋಂಡ.
 * ಇದೇ ತರ ಉಳ್ದವ್ರು ಸಹ ತಮ್ಮ ಉತ್ಪನ್ನಗಳನ್ನ ಇತರರ ಉತ್ಪನ್ನಗಳೊಂದಿಗೆ ಅವಶ್ಯಕತೆಗೆ ತಕ್ಕಂತೆ ಕೊಟ್ಟು ತಗೋಳ್ಳೋ ವ್ಯವಸ್ಥೆ ಸೃಷ್ಠಿ ಆಯ್ತು. ಈ ರೀತಿ ಪರಸ್ಪರ ಒಬ್ಬರಿಗೊಬ್ರು ಅವಲಂಬಿತವಾದ್ರು.
 * ಈ ರೀತಿಯ ಪರಸ್ಪರ ಸಹಕಾರದ ಅನಿವಾರ್ಯತೆಯ ಅವಲಂಬನೆಯನ್ನೇ ನಾನು ಸಹಬಾಳ್ವೆ ಅಂತ ಕರೆದದ್ದು.
 * ಈ ಸಹಬಾಳ್ವೆ ಹೀಗೇ ವ್ಯವಸ್ಥಿತವಾಗಿ ಸಾಗ್ತ ಇತ್ತು. ಜನಸಂಖ್ಯೆ ಹೆಚ್ಚಾಯ್ತು, ಉತ್ಪನ್ನಗಳ ಉತ್ಫಾದನೆ ಹಾಗೂ (ಕ)ಬಳಕೆ ಎರ್ಡರ ಪ್ರಮಾಣವೂ ಹೆಚ್ಚಾಯ್ತ ಬಂತು. ಮುಂದೆ ಇದರಲ್ಲಿ ಪರಸ್ಪರ ಸ್ಪರ್ಧೆ ಏರ್ಪಟ್ತು.
 * ಈ ಸ್ಪರ್ಧೆಯನ್ನೇ ನಾನು ವ್ಯಾಪಾರ ಅಂದಿದ್ದು. ಆದ್ರೆ ಈ ಹೊಸ ವ್ಯಾಪಾರದ ವ್ಯವಸ್ಥೆಯಲ್ಲಿ ಒಂದಿನ ಒಂದು ಗೊಂದಲ ಉಂಟಾತು. ಹೇಗೆ?
 * ಅಕ್ಕಿ, ಗೋದಿ, ತರ್ಕಾರಿ ಅಥ್ವಾ ಇನ್ನಾವುದೇ ಉತ್ಪನ್ನವಾಗಿರ್ಬೌದು, ಇವುಗಳನ್ನ ಕೊಡು-ತಗೋಳ್ಳೋವಾಗ, ಇವುಗಳ ಅಳತೆಯ ಪ್ರಮಾಣದಲ್ಲಿ, ಮೌಲ್ಯದ ವಿಷಯದಲ್ಲಿ, ಸಾಕಾಷ್ಟು ಭಿನ್ನಾಭಿಪ್ರಾಯಗಳು ಮೂಡಿದ್ವು. ಈ ವ್ಯವಸ್ಥೆಯಲ್ಲಿ ಸ್ವಲ್ಪ ಬದಲಾವಣೆಯ ಅವಶ್ಯಕತೆ ಇದೆ ಅನ್ನಿಸ್ತು. ಈ ಹೊಸ ಬೆಳವಣಿಗೆಯ ಪ್ರಕಾರ, ಪರಸ್ಪರರು ನೇರ್ವಾಗಿ ತಮ್ಮ ತಮ್ಮ ಉತ್ಪನ್ನಗಳನ್ನ ಅದಲು-ಬದಲು ಮಾಡ್ಕೊಳ್ಳೊದರ ಬದಲು, ಪ್ರತೀ ಉತ್ಪನ್ನಗಳಿಗೆ ಒಂದಿಷ್ಟು ಮೌಲ್ಯ ನಿಗದಿ ಮಾಡಿದ್ರು, ಈ ಮೌಲ್ಯವನ್ನ ಅಳತೆ ಮಾಡ್ಲಿಕ್ಕೆ ಬಂದ ಮತ್ತೊಂದು ಹೊಸ ವ್ಯವಸ್ಥೆಯೇ "ಹಣ".
 * ವ್ಯಾಪಾರದಿಂದ ಹಣ, ಹಣದಿಂದ ಮತ್ತೋಂದಿಷ್ಟು ಹಣ. ಇದೆಲ್ಲಕ್ಕೆ ಅನುಕೂಲವಾಗುವಂತೆ ಒಂದು ಮಾರುಕಟ್ಟೆ.

ಜಾಗತಿಕವಾಗಿ ಹಣವನ್ನ ವಿವಿದ ರೀತಿಯಲ್ಲಿ ಗುರ್ತಿಸ್ತಾರೆ. ಉದಾಹರಣೆಗೆ,
 * ನಮ್ಮಲ್ಲಿ "ರೂಪಾಯಿ" ( Rs; INR)
 * ಬ್ರಿಟೀಷ್ರಲ್ಲಿ "ಪೌಂಡ್" ( £; GBP)
 * ಅಮೇರಿಕದ "ಡಾಲರ್" ( $; USD)
 * ಯುರೋಪಿನ "ಯೂರೋ"( €; EUR) ,
 * ರಷ್ಯದಲ್ಲಿ "ರಬಲ್" ( руб; RUB)
 * ಜಪಾನ್ನಲ್ಲಿ "ಯನ್" ( ¥; JPY) ಇತ್ಯಾದಿ... http://www.xe.com/symbols.php


ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶದ ಪ್ರಗತಿಯನ್ನ ಪ್ರತಿಬಿಂಬಿಸೋದರಲ್ಲಿ ಕೆಳಗಿನ ಈ ಎರ್ಡೂ ಅಂಶಗಳು ಪಾತ್ರವಹಿಸ್ತಾವೆ.
 * ಹಣದ ಮೌಲ್ಯ
 * ಸ್ವಾವಲಂಬನೆ

ಹಣದ ಮೌಲ್ಯ ಅಂದ್ರೆ ಏನು? ಮೊದ್ಲು ತಿಳ್ಕೋಳ್ಳೋಣ.
ಹಣದ ಮೌಲ್ಯ ಅಂದ್ರೆ, ನನ್ನತ್ರ ಇರೋ ಪ್ರತಿ ಒಂದೊಂದು ರೂಪಾಯಿಗೆ, ಮಾರುಕಟ್ಟೆಯಲ್ಲಿ ಎಷ್ಟು ಬೆಲೆ ಇದೆ ಅಂತ ಅರ್ಥ.


ಏನಪ್ಪಾ ಇದು, ರೂಪಾಯಿಗೇನೇ ಬೆಲೆ ಕಟ್ಟೋದಾ!!! ಏನದರರ್ಥ?
ನೋಡೋಣ ಸಾದ್ಯವಾದಷ್ಟು ತಿಳ್ಕೋಳ್ಳೊ ಪ್ರಯತ್ನ ಮಾಡೋಣ. ಉದಾಹರಣೆಗೆ, ಈಗ್ಗೆ ಸುಮಾರು ಇಪ್ಪತ್ತು ವರ್ಷದ ಹಿಂದೆ, ನಮ್ಮತ್ರ ಒಂನ್ನೂರು ರೂಪಾಯಿ ಇತ್ತು ಅಂದಿದ್ರೆ, ನಾಲ್ಕಾರು ಜನ ಇರೋಂತ ಒಂದು ಕುಟುಂಬಕ್ಕೆ ಒಂದು ವಾರಕ್ಕೆ ಸಾಕಾಗೋಷ್ಟು ತರ್ಕಾರಿ, ಅಕ್ಕಿ, ಬೇಳೆ, ಎಣ್ಣೆ, ಹಾಲು ಇತ್ಯಾದಿಯನ್ನ ಕೊಂಡ್ಕೋಂಡು ಬರ್ಬೌದಿತ್ತು. ಆದ್ರೆ ಇವತ್ತು ಕೇವಲ ಒಂದು ಲೀಟರ್ ಹಾಲಿನ ಬೆಲೆ ಇಪ್ಪತ್ತು ರೂಪಾಯಿ ಮುಟ್ಟಿದೆ. ಒಂದು ಕೇ.ಜಿ ಅಕ್ಕಿ ಬೆಲೆ ನಲವತ್ತು ದಾಟಿದೆ. ತರ್ಕಾರಿಗಳಂತೂ ಮಾರ್ಕಟ್ಟೆಗೆ ಹೋಗಿ ಕೊಂಡ್ಕೋಂಡು ನಮ್ಮ ಚೀಲದಲ್ಲಿ ಹಾಕ್ಕೋಳ್ಳೊಕಿಂತ ಮುಂಚೆ ಬೆಲೆ ಎಷ್ಟು ಅಂತ ಹೇಳೊಕ್ಕೇ ಸಾದ್ಯ ಇಲ್ಲ.

ಇರ್ಬೌದು ಆದ್ರೆ ಆವತ್ತು ವಾರಕ್ಕೆ ಹತ್ತು ರೂಪಾಯಿ ಸಿಗೋ ಕೆಲ್ಸಕ್ಕೆನೇ ಈವತ್ತು ನೂರು ರೂಪಾಯಿ ಸಿಗುತ್ತಲ್ಲಾ? ಆದಾಯನೂ ಹೆಚ್ಚು ಖರ್ಚೂ ಹೆಚ್ಚು, ಅದ್ರಲ್ಲಿ ಹಣದ ಮೌಲ್ಯದ ಪ್ರಶ್ನೆ ಏನ್ಬಂತು?

ಹೌದು, ಆವತ್ತಿನ ದಿನಗಳಲ್ಲಿ ಆದಾಯನೂ ಕಡ್ಮೆ ಇತ್ತು ತಕ್ಕಂತೆ ಖರ್ಚೂ ಕಡ್ಮೆ ಇತ್ತು. ಇವತ್ತಿನ ದಿನಗಳಲ್ಲಿ ಉತ್ಪಾದನೆಯನ್ನ ಹೆಚ್ಚು ಮಾಡ್ಕಳ್ಳಕ್ಕೆ ಅನೇಕ ಹೊಸ ಹೊಸ ತಂತ್ರಜ್ಞಾನವನ್ನ ಅಳವಡಿಸ್ಕೊಳ್ತಾ ಇದೀವಿ. ಆದ್ರೆ ಹೆಚ್ಚುತ್ತಿರೋ ಜನಸಂಖ್ಯೆಗೆ ಸರ್ಯಾಗಿ ಉತ್ಪಾದನೆ ಜಾಸ್ತಿ ಹಾಗ್ದೆ ಹೋದ್ರೆ, ಎಲ್ವೂ ತಲೆ ಕೆಳಗಾಗುತ್ತೆ. ಹೀಗಾಗಿಯೇ ತಂತ್ರಜ್ಞಾನಕ್ಕೆ ಇವತ್ತು ಇಷ್ಟೋಂದು ಮಹತ್ವ ಬರೋಕ್ಕೆ ಕಾರಣ್ವಾಯ್ತು.

ಒಂದು ಉದಾಹರಣೆಗೆ, ಇಂದಿರಾಗ್ಯಾಂದಿಯವ್ರ ಕಾಲ್ದಲ್ಲಿ ಹಸಿರು ಕ್ರಾಂತಿ ಹಮ್ಮಿಕ್ಕೊಂಡಿದ್ರು. ಆಗ ನಮ್ಮ ಆಹಾರ ಉತ್ಪನ್ನಗಳ ಪ್ರಮಾಣವನ್ನ ಅನೇಕ ಪಟ್ಟು ಹೆಚ್ಚಿಸ್ಕೊಳ್ಳಿಕ್ಕಾಯ್ತು. ಅದು ನಮ್ಗೆ ತುಂಬಾನೇ ಅನಿವಾರ್ಯವಾಗಿತ್ತು. ನಮ್ಮ ಜನಸಂಖ್ಯೆಯ ಅವಶ್ಯಕತೆಗಿಂತ ಎಷ್ಟೋ ಪಟ್ಟು ಕಡ್ಮೆ ಪ್ರಮಾಣದಲ್ಲಿ ನಮ್ಮಲ್ಲಿ ಆಹಾರ ಉತ್ಪಾದನೆ ಇತ್ತು. ಅವತ್ತಿನ ದಿನಗಳಲ್ಲಿ ಆಮದು ಮಾಡ್ಕೋಳ್ಳೊದು ಸಹ ದುಬಾರಿಯಿತ್ತು. ಅಥ್ವ ಅದು ಸಾದ್ಯವಿತ್ತೊ ಇಲ್ವೊ ನಂಗೊತ್ತಿಲ್ಲ.

ಹಣದ ಮೌಲ್ಯ ಏರು-ಪೇರು ಹಾಗೋಕ್ಕೇ ಕಾರ್ಣಗಳು ಹಲ್ವಾರು ಇರ್ಬೌದು. ಅತೀ ಮುಖ್ಯವಾಗಿ ಉತ್ಪಾದನೆ ಹಾಗೂ ಭಕ್ಷಕರ ಪ್ರಮಾಣದ ಮೇಲೆ ಇದು ತುಂಬಾ ಅವಲಂಬಿತವಾಗಿರುತ್ತೆ.
 * ಮೊದಲ್ನೇದ್ರ ಪ್ರಮಾಣ ಎರಡ್ನೇದ್ರ ಪ್ರಮಾಣಕ್ಕಿಂತ ಹೆಚ್ಚಿದ್ದಾಗ ಹಣದ ಬೆಲೆ (ಮೌಲ್ಯ) ಯೂ ಹೆಚ್ಚಾಗುತ್ತೆ.
 * ಮೊದಲ್ನೇದ್ರ ಪ್ರಮಾಣ ಎರಡ್ನೇದ್ರ ಪ್ರಮಾಣಕ್ಕಿಂತ ಕಡ್ಮೆಯಾದಾಗ ಹಣದ ಬೆಲೆ (ಮೌಲ್ಯ) ನೂ ಕುಸಿಯುತ್ತೆ.

ಇದೇ ಕಾರಣಕ್ಕೇನೇ ಇಂದಿರಮ್ಮನ ಕಾಲ್ದಲ್ಲಿ ನಮ್ಮ ರೂಪಾಯಿಯ ಮೌಲ್ಯ ಡಾಲರ್ ಎದುರಿಗೆ ದಾಖಲೆ ಪ್ರಮಾಣ್ದಲ್ಲಿ ಕುಸಿದಿದ್ದು. ಇವತ್ತಿಗೂ ಕುಸಿತಿದೆ.

ಎಲ್ಲಿವರ್ಗೆ ನಮ್ಮ ಉತ್ಪನ್ನಗಳ ಮೇಲೆ ಬೇರೆಯವ್ರು ಅವಲಂಬಿತ್ವಾಗಿರ್ತಾರೋ ಅಲ್ಲಿವರ್ಗೆ ನಾವು ಸುರಕ್ಷಿತವಾಗಿರ್ತೀವಿ. ನಮ್ಮಲ್ಲಿ ಯಾವ್ದೂ ಉತ್ಪಾದನೆ ಇಲ್ಲಾಂದ್ರೆ ಅಥ್ವ ನಮ್ಮಲ್ಲಿರೋ ಉತ್ಪನ್ನಗಳಿಗೆ ಬೇಡಿಕೆ ಇಲ್ಲಾಂದ್ರೆ ಮುಂದಿನ ಕಷ್ಟದ ದಿನಗಳ ಬಗ್ಗೆ ಎಚ್ಚರಿಕೆ ವಹಿಸ್ಬೇಕಾಗುತ್ತೆ. ಉತ್ಪಾದನೆಗೆ ಕಚ್ಚಾವಸ್ತುಗಳು ಬೇಕು. ಇಂತಹ ಕಚ್ಚಾವಸ್ತುಗಳಿಗೆ ನಾವು ಪ್ರತ್ಯಕ್ಷವಾಗಿ ಅಥ್ವ ಪರೋಕ್ಷವಾಗಿ ನೈಸರ್ಗಿಕ ಸಂಪನ್ಮೂಲಗಳನ್ನ ಅವಲಂಬಿಸಿದಿವಿ. ಆದ್ರೆ ಇಂತಹ ಸಂಪನ್ಮೂಲಗಳು ತುಂಬ ನಿರ್ದಿಷ್ಠವಾಗಿ ಹಾಗೂ ಸೀಮಿತ್ವಾಗಿ ದೊರಿತವೆ. ಅವಕ್ಕೂ ಒಂದು ಅಂತ್ಯ ಅಂತ ಇರುತ್ತೆ. ಕಾಲ ಕ್ರಮೇಣ ಒಂದೊಂದೇ ಸಂಪನ್ಮೂಲಗಳು ಸಂಪೂರ್ಣವಾಗಿ ಖಾಲಿ ಹಾಗ್ತಾ ಬರುತ್ವೇ.

ಈಗ ಜಾಗತಿಕ ಮಟ್ಟದಲ್ಲಿ ಒಂದು ದೇಶದ ಹಣದ ಮೌಲ್ಯ ಹಾಗೂ ಆ ದೇಶದ ಪ್ರಗತಿ ಪರಸ್ಪರ ಒಂದಂಕ್ಕೊಂದು ಜೊತೆ ಜೊತೆಯಾಗಿ ಸಾಗ್ತಾವೆ. ನಾವು ನಮ್ಮ ಹಣವನ್ನ ಜಾಗತಿಕ ಮಾರುಕಟ್ಟೆಯಲ್ಲಿ ವ್ಯಯಿಸಿ, ಅದರ ಮೌಲ್ಯಕ್ಕೆ ತಕ್ಕಂತೆ ಇತರೆ ಅವಶ್ಯಕ ಉತ್ಪನ್ನಗಳನ್ನ ಖರೀದಿ ಮಾಡ್ಬೌದು. ಅದೇ ರೀತಿ, ಇತರೆ ದೇಶ್ದವ್ರು ಸಹ ತಮ್ಮ ಹಣವನ್ನ ಖರ್ಚ್ಮಾಡಿ, ಅವರಿಗೆ ಅಗತ್ಯವಾದ ಉತ್ಪನ್ನಗಳನ್ನ ಖರೀದಿಸ್ಬೌದು.

ಇವತ್ತು ಅಮೇರಿಕದ ಅರ್ಥ ವ್ಯವಸ್ಥೆ ದುಸ್ಥಿತಿಯಲ್ಲಿದ್ದಾಗ, ಬೇರೆ ಹಲವರು ಇದ್ರಿಂದ ನಷ್ಟಕ್ಕೆ ಒಳ್ಗಾಗಿದ್ದು ಸುಳ್ಳಲ್ಲ. ಅದಕ್ಕೆ ಕಾರಣ ಇಲ್ಲಿ ನಾವು ಒಬ್ಬರ ಮೇಲೆ ಇನ್ನೋಬ್ರು ಅವಲಂಬಿಗಳಾಗಿರೋದು. ಇದೇ ಸಂದರ್ಭದಲ್ಲಿ ಇನ್ನೂ ಕೆಲ್ವು ದೇಶಗಳು ತಮ್ಮ ಉತ್ಪನ್ನಗಳ ಮಾರುಕಟ್ಟೆಯನ್ನ ವಿಸ್ತರಿಸ್ಕೋಂಡ್ವು. ಜಾಗತಿಕ ಮಟ್ಟದಲ್ಲಿ ಹಣದ ಮೌಲ್ಯದಲ್ಲಿ ಆದ ಏರು.ಪೇರುಗಳನ್ನ ಚಿತ್ರದಲ್ಲಿ ಗಮನಿಸಿ. ಚಿತ್ರ ಕೃಪೆ ಗೂಗಲ್ ‍ಹಾಗೂ ಮಿಂಗ್ ಡಾಟ್ ಕಾಂ.

ಮಾಹಿತಿ ಸಂಗ್ರಹಣೆ, ಸ್ನೇಹಿತರೊಂದಿಗೆ, ಸಹೋದ್ಯೋಗಿಗಳೊಂದಿಗೆ ಅಲ್ಪ ಸ್ವಲ್ಪ್ ಚರ್ಚೆ, ಗೂಗಲ್ ತಾಣಗಳು ಹಾಗೂ ನನ್ನ ಅರ್ದಾಂಗಿಯ ಸಲಹೆಗಳು.


~~~ ( * ) ~~~

ನಿಮ್ಗೆ ಇಷ್ಟ ವಾಯ್ತು ಅಂದ್ರೆ ತಿಳ್ಸಿ, ಇನ್ನೋಂದಿಷ್ಟು ಬರಿತೀನಿ.

ಭಾನುವಾರ, ನವೆಂಬರ್ 1, 2009

ಪ್ರತಿ ಮನೆಮನೇಲಿ ಒಬ್ಬೊಬ್ರು ಇಂಜಿನಿಯರು ಮತ್ತೆ ಡಾಕ್ಟ್ರು

ಕನ್ನಡ ರಾಜ್ಯೋತ್ಸವಕ್ಕೆ ಅಂತೇಳಿ ಕನ್ನಡ ಭಾಷಾಭಿಮಾನದ ವಿಶೇಷ ಬರಹ ಇದು. ಹಾಗಂತ ಇದ್ರಲ್ಲಿ ಯಾವ್ದನ್ನೂ ಹೊಸ್ದಾಗಿ ಬೇಯಿಸಿ ತಂದು ನಿಂಗೆ ಬಡಿಸ್ತಿರೊದಲ್ಲಾ. ಹತ್ತನೇ ತರಗತಿವರ್ಗೆ ಕನ್ನಡ ಮಾದ್ಯಮದಲ್ಲಿಯೇ ಗ್ರಾಮೀಣ ಮಟ್ಟದ ಶಾಲೆಗಳಲ್ಲಿ ಓದ್ಕೊಂನ್ಡು ಬಂನ್ದೀರೊವ್ನು ನಾನು. ಹಾಗಾಗಿ ಅದ್ರ ಬಗ್ಗೆನೇ ಒಂನ್ದಿಷ್ಟು ಬರೀತಿದೀನಿ.

ಇಂಗ್ಳೀಷ್ ಮಾದ್ಯಮದಿಂದ ಬಂದಂತಹ ವಿದ್ಯಾರ್ಥಿಗಳು ಕನ್ನಡ ಮಾದ್ಯಮದಿಂದ ಬಂದಂತ ವಿದ್ಯಾರ್ಥಿಗಳು ಅಂದ್ರೆ ಅಥ್ವಾ ಗ್ರಾಮೀಣ ಮಟ್ಟದಿಂದ ಬಂದಂತಹ ಮಕ್ಳು ಅಂದ್ರೆ ಒಂದ್ರೀತಿ ಕೀಳರಿಮೆಯಿಂದ, ಸಂಕುಚಿತ ಭಾವದಿಂದ ನೋಡೊದಂತು ಸಾಮಾನ್ಯ ಸಂಗ್ತಿ. ಅದಕ್ಕೆ ವಿದ್ಯಾರ್ಥಿಗಳನ್ನ ಮಾತ್ರ ಧೂಷಿಸಿ ಏನೂ ಪ್ರಯೋಜ್ನ ಇಲ್ಲಾ. ಯಾಕಂದ್ರೆ ಬಾಲ್ಯದಿಂದ್ಲೆ ಆ ರೀತಿ ಭಾವ್ನೆಗಳನ್ನ ಅವ್ರ ಪೋಷಕರು ಮಕ್ಳ ತಲೆಗೆ ತುಂಬಿರ್ತಾರೆ. ಮೊದ್ಲು ನಮ್ಮ ಸಮಾಜದಲ್ಲಿರೋ ಇಂಗ್ಲೀಷ್ ಪ್ರಿಯರ ಮಡಿವಂತಿಗೆ ಕಡ್ಮೆ ಹಾಗ್ಬೇಕು. ಇಲ್ದೇ ಹೋದ್ರೆ ಇದೇ ಸಂಸ್ಕ್ರುತಿ ಮುಂದುವರ್ದು ಭವಿಷ್ಯದಲ್ಲಿ ಕನ್ನಡ ಭಾಷೆ ಕಂಣ್ಮರೆ ಆಗೋಕ್ಕೆ ಶತಮಾನಗಟ್ಲೆ ಕಾಯೋ ಅವಶ್ಯಕತೆ ಇಲ್ಲಾ ಅನ್ಸುತ್ತೆ.

ಇಷ್ಟಕ್ಕೂ ಇಂಗ್ಲೀಷೇ ಮಾತೃ ಭಾಷೆ ಆಗಿದ್ರೂ, ಇವತ್ತು ಅಮೇರಿಕದಲ್ಲಿ ಯಾಕೆ ಈ ರೀತಿ ನಿರುದ್ಯೋಗ ಸಮಸ್ಯೆ ಅಂತ ಪ್ರಶ್ನೆನೇ ಬರಲ್ವೇ? ಅದಕ್ಕೆ ಇತರೇ ಹಲ್ವಾರು ಕಾರಣಗಳು ಇರ್ಬೌದು. ಆದ್ರೆ ಕೇವ್ಲಾ ಇಂಗ್ಳೀಷ್ ಬರುತ್ತೆ ಅಂದ ಮಾತ್ರಕ್ಕೆ ಉದ್ಯೋಗ ಖಾತ್ರಿ ಅಂತೇನೂ ಇಲ್ವಲ್ಲಾ?

ನಮಗಿಷ್ಟ ಬಂದ ಯಾವ್ದೇ ವಿಷಯವನ್ನಾಗಲಿ ಮಾತೃ ಭಾಷೆಯಲ್ಲಿಯೇ ಕಲಿಯೋ ವ್ಯವಸ್ಥೆ ಖಂಡಿತ ಬರ್ಬೇಕು. ಕಲಿಕೆಗೆ ಮಾದ್ಯಮವಷ್ಟೇ ಮುಖ್ಯಾ ಅಲ್ಲ. ಕಲಿಯೋ ಭಾವ್ನೆ, ಛಲ, ಆಸಕ್ತಿ ಸೌಕರ್ಯ ಕೂಡ ಇರ್ಬೆಕು. ಸೌಕರ್ಯ ಅಂದಾಕ್ಷಣ ಅದು ಇಂಗ್ಳೀಷ್ ಮಾದ್ಯಮ ಅಂತಲ್ಲಾ. ಕಲಿಕೆಗೆ ಇಂಗ್ಲೀಷ್ ಮಾದ್ಯಮ ಒಂದು ಸೌಕರ್ಯ ಅಲ್ಲ. ಅದೊಂದು ನಮ್ಮನ್ನ ನಾವು ರಾತ್ರಿ ಕಂಡ ಬಾವಿಗೆ ಹಗಲಲ್ಲಿ ತಳ್ಳಿಕೊಂಡು ಬಿದ್ದ ಉದಾಹರಣೆಯಷ್ಟೇ. ಮೊದ್ಲು ಇಂಗ್ಲೀಷ್ ಬಗೆಗಿನ ಅನಗತ್ಯ ವ್ಯಾಮೋಹ ದೂರ್ವಾಗ್ಬೇಕು.

ಇತ್ತೀಚೆಗೆ ಒಂದಿನ ಯುರೋಪಿನಲ್ಲಿ ರೈಲಲ್ಲಿ ಸಂಚರಿಸ್ತಾ ಇದ್ದೆ. ಆಗ ನನ್ನ ಪಕ್ಕ ಕೂತಿದ್ದ ಹುಡ್ಗಿ ದಾರಿ ತುಂಬಾ ಓದ್ತಿದ್ದನ್ನ ಗಮನ್ಸಿ ಪರಿಚಯ ಮಾಡ್ಕಂಡೆ. ಆಕೆ ಫಾರ್ಮಸಿ ವಿದ್ಯಾರ್ಥಿನಿಯಂತೆ. ಅವ್ಳ ಕೈಲಿದ್ದಾ ಪುಸ್ತಕ ಅವ್ಳ ಮಾತೃ ಭಾಷೆಯಲ್ಲಿಯೇ ಇದ್ದದ್ದನ್ನ ಕಂಡು, ನಾನು ಇಂಗ್ಲೀಷ್ ಮಾದ್ಯಮಕ್ಕೆ ಸೇರಿದಾಗ (ಪಿ.ಯೂ.ಸಿ) ಮೊದ ಮೊದ್ಲು ಅನುಭವಿಸಿದ ಗೊಂದ್ಲದ ದಿನಗಳನ್ನ ಊಹಿಸ್ಕೊಂಡೆ. ಆದ್ರೆ ನಮ್ಮಲ್ಲಿ ವಿಪರ್ಯಾಸವೆಂಬಂತೆ ವಿಗ್ನಾನವನ್ನ ಕಲಿಯೊಕ್ಕೆ ಇಂಗ್ಲೀಷ್ ಗೊತ್ತಿರ್ಲೇ ಬೇಕು ಅನ್ನೋ ಕಡ್ಡಾಯ ಇದೆ. ಕಾಗುಣಿತ ಕಲಿಯೊಕ್ಕೆ ಮೊದ್ಲೇ ಅ, ಆ, ಇ, ಈ ... ಕಲಿಲೇ ಬೇಕು ಒಪ್ಕೋಳೋಣ. ಆದ್ರೆ ವಿಗ್ನಾನ, ಗಣಿತ ಇಂತದ್ದೆಲ್ಲಾ ಕಲಿಯೊಕ್ಕೆ ಇಂಗ್ಲೀಷ್ ಕಡ್ಡಾಯ ಏಕೆ?

ಇವತ್ತು ನಮ್ದೇಶದ ಗ್ರಾಮೀಣ ಮಟ್ಟದ ಪ್ರತಿಭೆಗಳು ಸಹ ಬೆಳಕಿಗೆ ಬರ್ಬೆಕು ಅಂದ್ರೆ ನಮ್ನಮ್ಮಾ ಮಾತೃ ಭಾಷೆಯಲ್ಲೇ ಎಲ್ಲವನ್ನೂ ಕಲಿಯೋ ವ್ಯವಸ್ಥೆ ಖಂಡಿತ ಸ್ವಾಗತಾರ್ಹ. ಹಾ!!! ಒಂದ್ಮಾತು, ಇಷ್ಟು ಮಾತ್ರಕ್ಕೆ ಇವತ್ತಿನವರ್ಗೆ ನಮ್ಮ ಸಮಾಜದಲ್ಲಿ ಆಗಿರೋ ಅಭಿವೃದ್ದಿ ಕಾರ್ಯಾಗಳೆಲ್ಲಾ ಕೆವ್ಲಾ ಇಂಗ್ಳೀಷ್ ಮಾದ್ಯಮದ ವಿದ್ಯಾರ್ಥಿಗಳಿಂದ ಅಥ್ವಾ ನಗರ ಪ್ರದೇಶದಿಂದ ಬಂದಿರೋ ಮಕ್ಳಿಂದ ಮಾತ್ರ ಅನ್ನೋ ತೀರ್ಮಾನಕ್ಕೆ ಬಂದ್ಬಿಡ್ಬೇಡಿ. ಎಷ್ಟೇ ಅಸೌಕರ್ಯಗಳಿದ್ರೂ ಸಹ, ಗ್ರಾಮೀಣ ಮಟ್ಟದ ಹಾಗೂ ಕನ್ನಡ ಮಾದ್ಯಮದ ಮಕ್ಳು ಸಹ ಸಾಕಷ್ಟು ಸಾಧನೆಗಳನ್ನ ಮಾಡಿದ್ದಾರೆ. ಮಾಡ್ತಿದಾರೆ, ಮುಂದೆಯೂ ಮಾಡ್ತಾರೆ.

ಯಾವ್ದೇ ವಿಷ್ಯಾವನ್ನಾ ಮಾತೃ ಭಾಷೆಯಲ್ಲಿಯೇ ಕಲಿ ಬೇಕಾದ್ರೆ, ವಿದ್ಯಾರ್ಥಿಗಳಿಗೂ ಸಾಕಷ್ಟು ಸರಳ್ವಾಗಿ, ಸುಲಭ್ವಾಗಿ ಅರ್ಥ ಆಗುತ್ತೆ. ಆದ್ರೇ ಅಲ್ಲೊಮ್ಮೆ ಇಲ್ಲೊಮ್ಮೆ ಬರುವಾ
 * ಗಣಿತದ ಪ್ರಮೇಯಗಳ ನಿರೂಪಣೆಯೋ
 * ವಿಗ್ನಾನದಲ್ಲಿ ಬರೋ ನಾಮಪದಗಳೋ, ಕ್ರಿಯಾಪದಗಳೋ ಅಥ್ವಾ
 * ಇನ್ನೂ ಕೆಲ್ವು ಸಾಮಾನ್ಯ ಪದಗುಚ್ಚಗಳೋ
ಅಲ್ಪ ಸ್ವಲ್ಪ ಕಷ್ಟವಾಗ್ಬೌದು. ಅದಕ್ಕೇಂತ ಶಿಕ್ಷಣ ಮಾದ್ಯಮವನ್ನೇ ಬದಲ್ಸೋದು ಎಷ್ಟು ಸೂಕ್ತ ಹೆಜ್ಜೆ? ಕಲಿಕೆಯಲ್ಲಿ ಮೊದಮೊದ್ಲು ಎಲ್ಲವೂ ಕಷ್ಟವಾಗೋದು ಸಾಮಾನ್ಯ. ಅದಕ್ಕೇ ಅದನ್ನ ಕಲಿಕೆ, ಶಿಕ್ಷಣ ಅಂತ ಅನ್ನೋದು. ಇಲ್ದೇ ಹೊದ್ರೆ ಶಿಕ್ಶಣಿಕಿಂತ ಮೊದ್ಲೇ ಪರೀಕ್ಷೆಗಳನ್ನ ನಡೆಸ್ಬೌದಾಗಿತ್ತು.

ಇಂಗ್ಳೀಷ್ ಮಾದ್ಯಮದಲ್ಲಿ ಅಂದ್ಮಾತ್ರಕ್ಕೆ ವಿಘ್ನಾನ, ಗಣಿತ ಎಲ್ವೂ ಕಲಿಯಕ್ಕೇ ಸರಲ್ವಾಗುತ್ತೆ, ಸುಲಭ್ವಾಗುತ್ತೆ ಅಂತಾದ್ರೆ
 * ಇಂಗ್ಲೀಷ್ನಲ್ಲಿ ಈ ವಿಷ್ಯಗಳಿಗೆ ಸಂಬಂದಿಸಿದ ಕಠಿಣ ಪದಗಳೇ ಇಲ್ವೇ?
 * ಆಗಿದ್ರೆ, ಇಂಗ್ಲೀಷ್ನಲ್ಲಿ ನಿಘಂಟು ಅಂತಾನೇ ಇಲ್ವೇ? ಇದ್ರೂ ಅದನ್ಯಾರೂ ಬಳಸೊದೇ ಇಲ್ವೇ?
 * ಯಾವ್ದೇ ಇಂಗ್ಳೀಷ್ ಪುಸ್ತಕ ಓದಿದ ಕೂಡ್ಲೇ ಎಲ್ವೂ ಸರಳ್ವಾಗಿ ಅರ್ಥ ಆಗ್ಬೇಕು ತಾನೇ?
 * ಅಂಗಾದ್ರೇ, ಇಂಗ್ಳೀಷ್ ಮಾದ್ಯಮದ ವಿದ್ಯಾರ್ಥಿಗಳೇಕೆ ಕಾಂನ್ವೆಟ್ಗೆ, ಶಾಲೆಗೆ, ಕಾಲೇಜ್ಗೆ ಹೋಗ್ತಾರೆ?
 * ವಿಶೇಷ ಮನೆಪಾಠಕ್ಕೆ (ಟ್ಯೂಷನ್) ಯಾಕೇ ಹೋಗ್ತಾರೆ?
 * ಮನೇಲೇ ಕೂತ್ಕಂಡು, ಸ್ವಂತ ಓದಿ ಎಲ್ಲಾ ಕಲ್ಕೋ ಬಹುದಲ್ವೇ?
 * ಕೊನೆಗೆ ಒಟ್ಟಿಗೇ ವರ್ಷದಲ್ಲಿ ಒಂದ್ಸಾರಿ ಪರೀಕ್ಷೆ ಬರಿಯೋಕ್ಕೆ ಮಾತ್ರ ಬಂದ್ರೆ ಸಾಕಾಗಲ್ವೇ?
 * ಇದ್ರಿಂದಾ ನಮ್ಮ ಸರ್ಕಾರಕ್ಕೂ ಹಾಗೂ ಎಲ್ಲಾ ಪೋಷಕರಿಗೂ ಸಾಕಷ್ಟು ಖರ್ಚು ಕಡ್ಮೆ ಹಾಗ್ತಿತ್ತಲ್ವೇ?
 * ಎಲ್ರೂ ತಮ್ತಮ್ಮಾ ಮನೇಲೇ ಒದ್ಕೊಂಡ್ರೆ ಸಾಕು ಅಂತಾದ್ರೆ ಕೆವ್ಲಾ ಆಸಕ್ತಿಯೊಂದಿದ್ರೆ ಸಾಕು, ಎಂತಹ ಬಡ ವಿದ್ಯಾರ್ಥಿ ಸಹ ಸಾಕಷ್ಟು ವಿದ್ಯಾಬ್ಯಾಸ ಮಾಡ್ಬೌದಾಗಿತ್ತಲ್ವೇ?
 * ಆಗ, ನಂದೇಶದ ಪ್ರತಿ ಮನೆಮನೇಲಿ ಒಬ್ಬೊಬ್ರು ಇಂಜಿನಿಯರು ಮತ್ತೆ ಡಾಕ್ಟ್ರು ಇರ್ತಿದ್ದ್ರಲ್ವೇ?

ಆದ್ರೂ ಇವತ್ತು ಇಂಗ್ಲೇಂಡ್, ಅಮೇರಿಕ, ಆಸ್ಟ್ರೇಲಿಯಾ ಇಲ್ಲೇಲ್ಲಾ
 * ಕಾಂನ್ವೆನ್ಟ್ ಗಳು
 * ಕಾಲೇಜ್ಗಳು
 * ವಿವಿದ ವಿಶ್ವ ವಿದ್ಯಾನಿಲಯಗಳು
ಅಂತ ಯಾಕಿವೇ? ಅಲ್ಲೇಲ್ಲಾ ಜನರ ಮಾತೃ ಭಾಷೆನೇ ಇಂಗ್ಲೀಷ್ ಅಲ್ವೇ?

ಯುರೋಪ್ ರಾಷ್ಟ್ರಗಳಲ್ಲಿ, ರಷ್ಯಾದಲ್ಲಿ, ಜಪಾನ್ನಲ್ಲಿ, ಅಷ್ಟು ದೂರ ಏಕೆ? ಪಕ್ಕದ ಚೀನಾದಲ್ಲಿ, ಇಂದಿಗೂ ಇಂಗ್ಲೀಷ್ ಭಾಷೆ ಅಂದ್ರೆ ನಂಮ್ದೇಶ್ದಲ್ಲಿ ಸಿಗೋ ರೀತಿಲಿ ವಿಷೇಶ ಪ್ರತಿಷ್ಟೆ, ಘನತೆ, ಮಾರ್ಯಾದೇ ಯಾವ್ದೂ ಸಿಗಲ್ಲಾ. ಆದ್ರೂ ಈ ದೇಶಗಳು ನಂಮ್ದೇಶಕ್ಕಿಂತ ಯಾವುದ್ರಲ್ಲಿ ಹಿಂದೆ ಇದಾವೇ ಸ್ವಾಮಿ? ಆದ್ರೆ ನಮ್ಮ ಸಮಾಜ್ದಲ್ಲಿ ಇದಕ್ಕೆ ವ್ಯತಿರಿಕ್ತವಾಗಿ ಇಂಗ್ಳೀಷ್ ಭಾಷೇನ ಬಳ್ಸೋದು ಅಂದ್ರೆ ಅವ್ರ ಪ್ರತಿಷ್ಟೆ, ಘನತೆ, ಗೌರವ ಹೆಚ್ಚಾದಂತೆ ಮತ್ತೆ ಅದನ್ನ ತಮ್ಮ ಅಭಿವೃದ್ದಿ ಸಂಖ್ಯೇತವಾಗಿ ಭಾವಿಸ್ತಾರಲ್ಲಾ? ಅದು ಯಾಕೆ?

ಈ ಪ್ರಶ್ನೆಗೆ ಉತ್ತರ ಸರಳ. ಬ್ರಿಟೀಷರು ನಮ್ಮ ಮೇಲೆ ಇನ್ನೂರು ವರ್ಷ ಸತತ್ವಾಗಿ ದಬ್ಬಾಳಿಕೆ ಮತ್ತೆ ಅತ್ಯಾಚಾರ ಮಾಡಿದ್ದೇ ಇದಕ್ಕೆಲ್ಲಾ ಮೂಲ ಕಾರ್ಣ.
ಇಲ್ದೇ ಹೋಗಿದ್ರೆ?
 * ಕನ್ನಡನೂ ಇಲ್ಲಾ
 * ಇಂಗ್ಲೀಷ್ ಕೂಡ ಇಲ್ಲಾ.

ಕೆಲ್ವು ಮೂಲಗಳ ಪ್ರಕಾರ, ಪ್ರಪಂಚದಲ್ಲಿ ಸದ್ಯಕ್ಕೆ ಅತೀ ಹೆಚ್ಚು ಇಂಗ್ಲೀಷ್ ಮಾತಾಡೋವ್ರ ಜನಸಂಖ್ಯೆಯಲ್ಲಿ ನಮ್ದೇಶಕ್ಕೆ ತೃತೀಯ ಸ್ಥಾನ ಸಿಗುತ್ತಂತೆ. ತುಂಬಾ ಅದ್ಬುತ ಸಾಧನೆ ಅಲ್ವೇ? ನಮ್ದೇ ದೇಶದ ಪ್ರತಿಭೆಗಳನ್ನ ಬಲಸ್ಕೋಳ್ದೇ ಹೋದ್ರೂನೂ ಪರ್ವಾಗಿಲ್ಲಾ, ಪ್ರೋತ್ಸಾಸದೇ ಹೋದ್ರೂ ಪರ್ವಾಗಿಲ್ಲಾ, ನಮ್ಗೆ ಇಂಗ್ಲೀಷ್ ಮಾತಾಡಕ್ಕೆ ಮಾತ್ರ ಚೆನ್ನಾಗಿ ಬರುತ್ತೆ. ಶಬ್ಬಾಶ್!

ಇಂಗ್ಲೀಷ್ರು ಬಂದ್ರು ಮುಸಲ್ಮಾನ ದೊರೆಗಳು ಮಾಡ್ತಿದ್ದಾ ದಬ್ಬಾಳಿಕೆಯಿಂದ ನಮ್ಮ ಸಮಾಜನ ಬಚಾವ್ ಮಾಡಿದ್ರು, ಇಲ್ದೇ ಹೋಗಿದ್ರೆ? ಏನಾಗ್ತಿತ್ತು ಅಂತೇಳಿ ಕೊನೆಗೆ ಒಂದು ಹಾಸ್ಯ ಸಂಭಾಷಣೆಯೊಂದಿಗೆ ಈ ಬರಹನ ಮುಗಿಸ್ತೀನಿ

 "ಹೇಯ್, ನಿಂಬ್ದು ಬೇಟಾ, ಯಾವ್ದೂ ಭಾಷೇಲಿ ಓದ್ತದೆ?"

 "ಜಿ, ನಮ್ದುಗೆ ಬೇಟಾಗೆ, ಕನ್ನಡಾಗೆ ಓದ್ತದೆ."

 "ಹೇ! ನಿಂಮ್ದುಗೇ ಇನ್ನೂ ಯಾವ್ದೂಗೇ ಕಾಲ್ದಾಗೇ ಐತೆ? ಕನ್ನಡಾಗೆ ಕಲ್ತು ಏನು ಉಪ್ಯೊಗ ಆಯ್ತದೆ? ಅನ್ತ ಕಳೀಸ್ತೀರಿ?"

 "ಜಿ, ಯಾಕೇ? ಈಗ ನಂಮ್ದುಗೇ ಏನಾತು?"

 "ನಮ್ದುಗೆ ನವಾಬಂಗೆ ಹೇಳಿದ್ದು ನಿಮ್ಗೆ ಇನ್ನೂ ಗೊತ್ತಾಗಿಲ್ಲಾ? ಎಲ್ರೂ ಉರ್ದೂಗೆ ಭಾಷೇಲೀ ಕಲ್ಸಿ ಅಂತ ಹೇಳಿದಾರೆ! ಮುಂದೆ, ಮಕ್ಳಿಗೇ ಇಗ್ನಾನ, ಗಣಿತ ಕಲಿಯಕ್ಕೆ ಶಾನಾ ಸುಲ್ಬಾ ಆಯ್ತಾದಂತೆ!"

 "ಹೌದಾಜೀ, ಇದು ನಮ್ದುಗೇ ಗೊತ್ತೇ ಇರ್ಲಿಲ್ಲಾ. ಇಗೋ ಈಗ್ಲೇ ಹೋಗಿ, ನಂಮ್ದುಗೇ ಬೇಟಾಂದು, ಉರ್ದುಗೇ ಮಾದ್ಯಾಮಕ್ಕೆ  ಸೇರಿಸ್ತದೆ!, ಜೈ ನವಾಬ್"

ಜೈ ಹಿಂದ್ ,
ಜೈ ಕರ್ನಾಟಕ ಮಾತೆ.

ಶನಿವಾರ, ಅಕ್ಟೋಬರ್ 3, 2009

ಅತೀವೃಷ್ಟಿ-ಭವಿಷ್ಯನ ನೋಡಿ ಬಂದವರಾರು?

ರಾಯಚೂರು, ಗುಲ್ಬರ್ಗಾ, ವಿಜಾಪುರ, ಬಾಗಲಕೋಟೆ, ದಾವಣಗೆರೆ, ಚಿತ್ರದುರ್ಗ, ಮಂಗಳೂರು, ಉಡುಪಿ, ಉತ್ತರ ಕನ್ನಡ, ಕಾರವಾರ, ಅಂಕೋಲ, ಶಿವಮೊಗ್ಗ, ಹಾವೇರಿ, ಕೊಡಗು, ಹಾಸನ, ಹೀಗೇ ಕರ್ನಾಟಕದ ಬಹು ಭಾಗದ ಜನ ಜೀವನ ಅಸ್ತ-ವ್ಯಸ್ತವಾಗಿದೆ. ನೂರಾರು ಸಾವು ಸಂಬವಿಸಿವೆ. ಕೆಲವು ಭಾಗಕ್ಕೆ ಸಂಚಾರ ವ್ಯವಸ್ಥೆ ಮುರಿದಿದೆ. ಮನೇ-ಆಸ್ತಿ ಎಲ್ಲಾ ಕಲ್ಕಂದು ಜನ ಕಂಗಾಲಾಗಿದ್ದಾರೆ. ಇನ್ನು ತುರ್ತಾಗಿ ಅವ್ರಿಗೆ ಬೇಕಾಗಿರೋದು ಒಂದಿಷ್ಟು ದೈರ್ಯಾ, ಆಹಾರ, ಔಷದ, ಹೊದಿಲಿಕ್ಕೆ ಬಟ್ಟೆ, ಮಲಗಲಿಕ್ಕೆ ಒಂದು ಸೂರು.

ಪ್ರಕೃತಿ ವಿಕೋಪಕ್ಕೆ ನಮ್ಮ ಜನ ಜೀವನ ದಿಕ್ಕಾ ಪಾಲಾಗಿರೋದು ಇದೇ ಮೊದ್ಲೆನಲ್ಲಾ...ಈ ಹಿಂದೆಯೂ ಆಗಿದೆ..ಮುಂಬೈಯಲ್ಲಿ ಬಾರೀ ಮಳೆ, ಗುಜರಾತ್ನಲ್ಲಿ ಭೂಕಂಪನ, ಕರಾವಳಿಯಲ್ಲಿ ಸುನಾಮಿ, ಅನಾವೃಷ್ಟಿಯಿಂದ ಕ್ಷಾಮ, ಹೀಗೇ ಅನೇಕ ಬಾರೀ ಅನಾಹುತಗಳು ಸಂಭವಿಸಿವೆ. ಇಂತಹ ಸಮಯದಲ್ಲೆಲ್ಲಾ ನಾವು ನಮ್ಮ ಬಂದುಗಳು, ಸಂಬಂದಿಗಳು, ಮೇಲ್ಜಾತಿ, ಕೀಳ್ಜಾತಿ, ಆಡಳಿತ ಪಕ್ಷ, ವಿರೋದ ಪಕ್ಷ, ಜಾತಿ, ಧರ್ಮ, ಮಠ, ಮತ, ಆಸ್ತಿ-ಪಾಸ್ತಿ ಅಂತ ಮೀನಾ ಮೇಷ ಮಾಡ್ದೆ, ನಮ್ಮಿನ್ದಾಗೋ ಸಹಾಯ ಮಾಡೋದು ಮರೀ ಬಾರ್ದು.

ಅತೀ ವೃಷ್ಟಿಯಿಂದ ಜನ ಕಂಗಾಲಾಗಿದ್ದಾರೆ ಇಂತಹ ಸಮಯದಲ್ಲಿ ನಮ್ಮ ರಾಜ್ಯದ ಮುಖ್ಯ ಮಂತ್ರಿಗಳಿಗೆ "ಕ್ಷೀರ ಬಂಧು" ಪಟ್ಟ ಬೇಕಿತ್ತಾ? ಖಂಡಿತಾ ಇಲ್ಲಾ... ಆದ್ರೆ ಹಾಗಂತ ಈಗ ಮಂತ್ರಿಗಳನ್ನ ತರಾಟೆಗೆ ತೊಗೊಳ್ತಾ ಕುಂತ್ರೆ ನಷ್ಟ ಯಾರಿಗೆ ಸ್ವಾಮಿ. ಸ್ವಲ್ಪನಾದ್ರೂ ಆತ್ಮ ಸಾಕ್ಷಿ ಅನ್ನೋದಿದ್ರೆ, ಮಂತ್ರಿಗಳೇ ಬಂದು ಅಮೃತ ಹಸ್ತದಿಂದ ಈ ಸುಕಾರ್ಯಾ ಆರಂಬ ಆಗ್ಲಿ ಅಂತ ಜಗಳ ಮಾಡೋದು ಬೇಡ. ಒಳ್ಳೆ ಕೆಲ್ಸಗಳಲ್ಲಾದ್ರೂ ನಾವು ನಮ್ಮ ಒಗ್ಗಟ್ಟನ್ನ ಪ್ರದರ್ಶಿಸೋಣ.

ಪ್ರಧಾನ ಮಂತ್ರಿಗಳಿಂದ ಹಿಡ್ದು, ಸಾಫ್ಟ್ವೇರ್, ಬ್ಯಾಂಕ್, ಅದ್ಯಾಪಕರು, ವ್ಯದ್ಯರು, ದಲ್ಲಾಲರು, ರಿಯಲ್ ಎಸ್ಟೇಟ್ ಚಲನಚಿತ್ರ, ಪತ್ರಿಕೆ, ಕ್ರಿಕೆಟ್ ಆಟಗಾರರು, ವಾಣಿಜ್ಯೋದಿಮಿಗಳು ಹೀಗೇ ಎಲ್ಲಾ ಕ್ಷೇತ್ರದ ಎಲ್ಲಾ ನೌಕರರು ಸ್ವಾಯಿಚ್ಚೆಯಿಂದ ತಮ್ಮ ತಮ್ಮ ಒಂದೊಂದು ದಿನದ ಆದಾಯವನ್ನ ಇದರ ಸಲುವಾಗಿ ತೆಗೆದಿಡ್ಬೇಕು. ಈ ರೀತಿ ಸಂಗ್ರಹಿಸಿದ ಮೊತ್ತವನ್ನ ಯಾವ್ದಾದ್ರೂ ಒಂದು ಅನಾಮಿಕ ಪರಿಹಾರ ನಿಧಿ ಸಂಗ್ರಹಣೆ ಅನ್ನೋ ಇನ್ನೊಬ್ಬ ದಲ್ಲಾಳಿ ಕೈಗೆ ಕೊಟ್ಟು ಬಂದು ಕೈ ತೊಳ್ಕೋಲ್ಳೋ ಕೆಲ್ಸಾ ಮಾಡ್ಬೇಡಿ.

ಒಟ್ಟು ಮೊತ್ತಾನ, ನೀವೇ ಒಂದಿಬ್ರು ಸ್ನೇಹಿತರು ತೆಗೆದು ಕೊಂಡು, ಸಂಬಂದಿಸಿದ ಕ್ಷೇತ್ರಕ್ಕೆ ಖುದ್ದು ಹೋಗಿ, ಅಲ್ಲಿನ ಜನ ಒಮ್ಮೆ ನೋಡಿ. ಅವ್ರಿಗೆ ಬೇಕಾಗಿರೋದು ಕೇವಲ ಒಂದು ತುತ್ತು ಅನ್ನ ಅಷ್ಟೇ ಅಲ್ಲಾ, ಬದಲಾಗಿ, ಭವಿಷ್ಯದ ಬಗ್ಗೆ, ಜೀವನದ ಬಗ್ಗೆ ಒಂದೆರಡು ಧೈರ್ಯಾ ತುಂಬೋ ಮಾತುಗಳು. ಅದನ್ನ ನೀವೇ ಮಾಡಿ, ಒಂದೆರಡು ಧೈರ್ಯದ ಮಾತಾಡಿ. ಆಮೇಲೆ ಅವ್ರ ತುರ್ತು ಅವಶ್ಯಕತೆಗಳನ್ನ ಅರ್ಥ ಮಾಡ್ಕೊಂಡು, ನೀವು ತೆಗೆದು ಕೊಂಡು ಹೋಗಿರೋ ಹಣದಲ್ಲಿ ಎಷ್ಟು ಸಾದ್ಯವೋ ಅಷ್ಟು ಸಹಾಯ ಮಾಡಿ.

ನಿಮಗೆ ಅಂತಹ ಒಂದು ನಿಸ್ವಾರ್ಥ ಮನಸ್ಸು ಖಂಡಿತ ಇದೇ, ಅದಕ್ಕೆ ನೀವು ಈ ಬರಹನ ಓದುತ್ತಾ ಇರೋದೇ ಸಾಕ್ಷಿ. ಇದಾದ ಮೇಲೆ ನೋಡಿ, ಸರ್ಕಾರಕ್ಕೆ ತನ್ನ ಕರ್ತವ್ಯದ ಅರಿವು ಮೂಡದೆ ಇದ್ರೆ ಅದಕ್ಕೆ ತಕ್ಕ ಶಾಸ್ತೀನ ಪ್ರಕ್ರುತಿನೇ ಮಾಡುತ್ತೆ. ಆ ಕೆಲಸದ ಜವಾಬ್ದಾರಿನ ಆ ಸರ್ವಶಕ್ತನ ಮೇಲೆ ಬಿಡಿ. ಬನ್ನೀ ಇನ್ನೂ ತಡವೇನೂ ಆಗಿಲ್ಲಾ. ಕಾರ್ಯೋನ್ಮುಖರಾಗೋಣ.

ಮಹಾತ್ಮಾ ಗಾಂಧೀಜಿ ಯವರ ಜಯಂತಿ ದಿನ ಪ್ರತೀ ವರ್ಷ ಅವ್ರ ಫೋಟೋಕ್ಕೆ ಹೂವಿನ ಹಾರ ಹಾಕಿ, ಕೈ ಮುಗ್ದು, ಶಾಲಾ ಕಾಲೇಜ್ಗೆ, ಕಚೇರಿಗಳಿಗೆ ಒಂದೊಂದು ದಿನ ರಜೆ ತಗೊಂನ್ದರೆ ಸಾಕೆ?

"ಬದಲಾಗುಹುದು ಈ ಲೋಕ ನೀ ಬದಲಾದರೆ,
ಬದಲಾಗುಹುದು ಈ ಸಮಾಜ ನೀ ಮೊದಲಾದರೆ" - ಮಹಾತ್ಮಾ ಗಾಂಧೀಜಿ


ಶನಿವಾರ, ಸೆಪ್ಟೆಂಬರ್ 26, 2009

ಶ್ವಾನರ ಮಿತ್ರರು - 2

ಶ್ವಾನರ ಮಿತ್ರರು - ಭಾಗ ೨. ಮೊದಲೇ ಹೇಳಿದಂತೆ ಇನ್ನಷ್ಟು ಮಿತ್ರರನ್ನ ಕರೆ ತಂದಿದ್ದೀನಿ. ಈಗ ನೋಡೋಣ ಬನ್ನಿ.                          

ಈ ಭಾರಿ ನಾಯಿಗಳು ಏನಂತಾರೆ ಅಂತ ನಾನೇನೂ ಹೇಳಿಲ್ಲಾ... ಈ ನಾಯಿ ಮಿತ್ರರ ಬಗ್ಗೆ ನಿಮಗೇನಾದ್ರು ಅನ್ನಿಸಿದ್ರೆ ತಿಳಿಸಿ. 

ಬುಧವಾರ, ಸೆಪ್ಟೆಂಬರ್ 23, 2009

ಭಾಷೆ, ಮಾಧ್ಯಮ ಹಾಗೂ ಕಲಿಕೆ - 2

"ಭಾಷೆ, ಮಾಧ್ಯಮ ಹಾಗೂ ಕಲಿಕೆ - ೧" ಬರಹ, ಎಷ್ಟು ಓದುಗರಿಗೆ ಆಸಕ್ತಿಂದ ಕೂಡಿತ್ತು ಅಂತ ನನಿಗೆ ಅಷ್ಟು ತಿಳಿದಿಲ್ಲಾ, ಆದ್ರೆ, ಅದರ ಇನ್ನೊಂದು ಭಾಗ ಇಲ್ಲಿ ಹಾಕಿದ್ದೀನಿ. ಸುಮ್ಮನೇ ಯಾಕಪ್ಪಾ ಈ ಜೀವಿ ಇಷ್ಟೊಂದು ಉದ್ದುದ್ದಾ ಬರ್ದು ಹಾಕಿ, ವೃತಾ ಶ್ರಮ ತಗೊಂತಾನಪ್ಪಾ. ಅಂತನ್ಸಿದ್ರೆ ಹೇಳ್ಬಿಡ್ರಿ.


ಈ ನಡುವೆ ಕೆಳಗಿನ ಎರಡು ಬ್ಲಾಗ್ಗಳಲ್ಲಿ ಅಡ್ಡಾಡ್ತಿರ್ಬೇಕಾಂದ್ರೆ ,
"ನೀವು ನಕ್ಕರೆ ಹಾಲು ಸಕ್ಕರೆ"
"ಯಳವತ್ತಿ ಬ್ಲಾಗ್...".
ನಾನೂ ಯಾಕೆ ಒಂದೆರಡು ಹಾಸ್ಯ ಬರಹ ಬರಿ ಬಾರದು ಅಂತೇನೂ ಅನ್ನಿಸ್ಲಿಲ್ಲಾ...ಆದ್ರೆ ನನ್ನ ಅನುಭವಗಳೇ ಕೆಲವು ಭಾರಿ ಹಾಸ್ಯ ಹಾಗ್ಬಿಟ್ತಿವೆ. ಹಾಗಾಗಿ ನೆನಪಿಗೆ ಸಿಕ್ಕಂತಹ ಕೆಲವು ಘಟನೆಗಳನ್ನ ಬರೀತಿದ್ದೀನಿ. ಶೀರ್ಷಿಕೆ ಏನೂ ಅಂದ್ರೆ, "ಹಾಸ್ಯ ಸನ್ನಿವೇಶದ ಕೆಲವು ತುಂಡುಗಳು!"


ಆದ್ರೆ ಅದಕ್ಕಿಂತ ಮೊದಲೇ, ಇದನ್ನ ಓದಿ ಬಿಡಿ. ಈ ಕೆಳ ಕಂಡ ಬರಹ ಇಷ್ಟ ಹಾಗ್ದೆ ಇದ್ರೆ ಅದನ್ನೇ ದೊಡ್ದು ಮಾಡ್ಬೇಡ್ರಿ. ಪುನಃ ಬರ್ತಾ ಇರ್ರಿ.. ಹೊಸ ಪೋಸ್ಟ್ ಇರುತ್ವೆ.


--------------------------------------------------------------------------------
ಇಲ್ಲಿಂದಾ ಮುಂದುವರೆದಿದೆ...


ಭಾಷೆ ಕೇವಲ ಒಂದು ಸಂಪರ್ಕ ಸಾಧನ ಅಷ್ಟೇ. ಅದ್ರಿನ್ದಾನೇ ಎಲ್ಲಾ ಅನ್ನೋದು ಎಷ್ಟು ಸರಿ? ವಿಷಯ ಜ್ಞಾನ ಬೆಳಸಿ ಕೊಳ್ಳೋಕ್ಕೆ ಪ್ರತಿಯೊಬ್ರಿಗೂ ಅವಕಾಶ ಇರ್ಬೇಕು, ಅದು ಯಾವ ಮಾದ್ಯಮದಲ್ಲಿ ಅನ್ನೋದು ತುಂಬಾ ಸಾಧಾರಣ ಪ್ರಶ್ನೆ ಆಗ್ಬಿಡುತ್ತೆ. ನನಗೆ ಕನ್ನಡ ಚೆನ್ನಾಗಿ ಗೊತ್ತು. ಯಾಕಂದ್ರೆ ನಾನು ಶಾಲೆಯಲ್ಲಿ ಮೇಷ್ಟ್ರು ಹೇಳ್ಕೋಡೋಕ್ಕೇ ಮೊದ್ಲೇ ನಮ್ಮ ಮನೇಲೆ ಮಾತಾಡೋದು ಕಲ್ತಿದ್ದೆ.


ನಮಿಗೆ ಮೊದ್ಲು ಮೊದ್ಲು ಇಂಗ್ಲೀಶ್ ಹೇಳ್ಕೋಟ್ಟಾಗ ನಾವು ಹೇಗೆ ಕಲೀತಿದ್ವಿ? ಅದನ್ನ ಕನ್ನಡಕ್ಕೆ ಅನುವಾದ ಮಾಡ್ಕಂಡು ಅಭ್ಯಾಸ ಮಾಡ್ತಿದ್ವಿ. ಆಮೇಲೆ ನಿಧಾನಕ್ಕೆ ವಾಕ್ಯ ಮಾಡೋದು ಕಲ್ತ್ವಿ. ಆಮೇಲೆ ಪುಸ್ತಕ ಓದೋದು ಕಲ್ತಿವಿ. ಈಗ ಇಂಗ್ಲಿಷ್ನಲ್ಲೇ ಮಾತೂ ಆಡ್ತೀವಿ.


ನಮಗೆ ಸ್ಕೂಲ್ನಲ್ಲಿ ಇಂಗ್ಲಿಷ್ನ ಮೊದ್ಲು ಮೊದ್ಲು ಹೇಳ್ಕೋಟ್ಟಾಗ ನಾನು ಹೇಗೆ ಯೋಚಿಸ್ತಿದ್ದೆ ಅಂತ ಗೊತ್ತೇ? ಇಂಗ್ಲೀಷ್ನ ಮೊದ್ಲು ಮೊದ್ಲು ಕಲಿ ಬೇಕಾದರೆ, ಜಗತ್ತಲ್ಲಿ ಎಲ್ಲರೂ ಸಹ, ಇಂಗ್ಲೀಶ್ ವಾಕ್ಯಗಳ ಅರ್ಥವನ್ನ ಮೊದಲು ಕನ್ನಡಕ್ಕೇ ಅನುವಾದ ಮಾಡ್ಕಂಡು ಕಲಿತಾರೆ. ಆಮೇಲೆ ನಿಧಾನಕ್ಕೆ ಇಂಗ್ಲಿಷ್ನಲ್ಲೇ ಮಾತಾಡೋದು ಕಲಿತಾರೆ. ಮಾತಾಡೋದು ಕಲಿತಮೇಲೆ ಇಂಗ್ಲಿಷ್ ಪುಸ್ತಕ ಅರಾಮಾಗಿ ಓದ್ಬೋಹುದು ಅಂತ.


ಆಗಂತ ಭಾಷೆಗೆ ಮಹತ್ವವೇ ಇಲ್ಲ ಅನ್ನೋದು ಎಷ್ಟು ಸರಿ? ಪ್ರತಿ ಭಾಷೆಗೂ ಅದರದೇ ಆದ ಮಹತ್ವವಿರುತ್ತೆ. ಅದರ ಅಸ್ತಿತ್ವ ಅದಕ್ಕೆ ಅಷ್ಟು ಸುಲಭವಾಗಿ ದಕ್ಕಿದುದಾಗಿರುವುದಿಲ್ಲ. ಉದಾಹರಣೆಗೆ ಸಂಸ್ಕೃತ ಅನ್ನೋದು ಒಂದು ಸತ್ತ, ಮೃತ ಭಾಷೆ ಅಂತೆಲ್ಲಾ ಜನ ಹೇಳೋದು, ಬರಿಯೋದು ಕೇಳಿದ್ದೇನೆ, ನೋಡಿದ್ದೇನೆ. ನಾನೊಬ್ಬ ಭಾಷಾ ತಜ್ಞನಲ್ಲ, ಆಗಂತ ಇಂತ ಚಾಣಾಕ್ಷ್ಯ ತೀರ್ಮಾನಗಳನ್ನ ಕಂಡಾಗ ಮನಸ್ಸು ತೀರಾ ಕುಪಿತಗೊಳ್ಳುತ್ತೆ. ನಾನು ಸಂಸ್ಕೃತ ಶಿಕ್ಷಕನೂ ಅಲ್ಲ, ಸಂಸ್ಕೃತ ವಿದ್ಯಾರ್ಥಿಯೂ ಅಲ್ಲ. ಆದ್ರೆ ಇಂತಹ ಅತಿರೇಕಿಗಳನ್ನ ಗಮನಿಸಿ ಈಗೀಗ ಸ್ವಲ್ಪ ಸಂಸ್ಕೃತದ ಬಗ್ಗೆ ಓದಿ ತಿಳೀತ ಇದ್ದೇನೆ ಅಷ್ಟೇ. 2006 ರ ಸಾಲಿನ " ಜ್ಞಾನಪೀಠ" ಪ್ರಶಸ್ತಿ ಲಭಿಸಿರೋದು ಸಂಸ್ಕೃತಕ್ಕೆ. ಸಂಸ್ಕೃತದಲ್ಲಿಯೂ ಬೆಳವಣಿಗೆಗಳು ಆಗ್ತಿರೋದಕ್ಕೆ ಇದಕ್ಕಿನ್ನ ಸಾಕ್ಷಿ ಬೇಕೇ?


ನನ್ನ ಪ್ರಕಾರ, ಒಬ್ಬ ವ್ಯಕ್ತಿಯ ಜ್ಞಾನದ ವಿಶಾಲತೆಯನ್ನ ಅಳಿಯಲಿಕ್ಕೆ ಇರೋ ಒಂದು ಸುಲಭ ಸಾಧನ ಅಂದ್ರೆ ಏನು ಗೊತ್ತೇ? ಅದು ವ್ಯಕ್ತಿಯ ಪದಕೋಶದ ವಿಶಾಲತೆಯನ್ನ ತಿಳಿಯೋದು. ಪದಕೋಶದ ವಿಶಾಲತೆಗೆ ಸಮಾನ ಅನುಪಾತದಲ್ಲಿ ಇರುತ್ತೆ ವಿಷಯ ಜ್ಞಾನ. ಹೆಚ್ಚು ಹೆಚ್ಚು ಅರ್ಥ ಗರ್ಭಿತ ಪದಗಳನ್ನ, ಪದ ಗುಚ್ಚದಳನ್ನ, ನುಡಿಗಳನ್ನ ಸಂಧರ್ಬಕ್ಕೆ ಅನುಗುಣವಾಗಿ ಯಾರು ಸರಾಗವಾಗಿ ಬಳಸ್ತಾನೋ ಅವ್ನಿಗೆ ವಿಷಯ ಜ್ಞಾನ ಸಾಕಷ್ಟು ಇರುತ್ತೆ.


ನಮ್ಮ ಕನ್ನದಲ್ಲಿರೋ ಪ್ರತಿಶತ 50 ಪದಗಳು ಸಂಸ್ಕೃತದಿಂದ ನೇರವಾಗಿ ಅಥವಾ ಪರೋಕ್ಷವಾಗಿ ಬಂದಿವೆ. ಇಂತಹ ಪದಗಳ ಬಳಕೆಯಿಂದ ನಮ್ಮ ಪದಕೊಶವನ್ನೂ ನಾವು ವಿಸ್ತರಿಸಿ ಕೊಂಡಿದ್ದೇವೆ. ಇಂಗ್ಲೀಷ ನಲ್ಲಿ ಅನೇಕ ಪದಗಳಿಗೆ ಮೂಲ ಸಂಸ್ಕೃತದಲ್ಲಿದೆ.
ಉದಾಹರಣೆಗೆ
ಮಾತೃ = ಮದರ್ (father)
ಪಿತೃ = ಫಾದರ್ (mother)
ದ್ವಾರ = ಡೋರ್ (door)
ನಾಮಃ = ನೇಮ್ (name)
ಸ್ಮಿತ್ = ಸ್ಮೈಲ್ (smile)
ಏಕ = ಈಕ್ವಲ್ (equal)
ದಂತ್ = ಡೆಂಟಲ್ (dental)
ಪಥ್ = ಪಾಥ್ (path)


ಇಲ್ಲಿ ಕ್ಲಿಕ್ಕಿಸಿ


ಒಂದು ಭಾಷೆ ಒಂದ್ಸಾರಿ ಅಸ್ತಿತ್ವಕ್ಕೆ ಬಂದ ನಂತರ, ಅದರಿಂದ ಹೆಚ್ಚಿನ ಅನುಕೂಲಗಳೂ ಸಾದ್ಯ. ಉದಾಹರಣೆಗೆ ಒಂದು ಪೀಳಿಗೆ ಇಂದ ಮುಂದಿನ ಹಲವಾರು ಪೀಳಿಗೆಗಳಿಗೆ ಜೀವನದ ಕಲೆಯನ್ನ ತಿಳಿಸಿ ಕೊಟ್ಟಂತಹ "ಭಗವದ್ಗೀತೆ" ಆಗಿರ್ಬೌದು ಅಥವ ಡಿ, ವಿ, ಜಿ, ಯವರ "ಮಂಕುತಿಮ್ಮನ ಕಗ್ಗ" ಆಗಿರ್ಬೌದು. ಒಂದು ಸಂಸ್ಕೃತ ದಲ್ಲಿದ್ರೆ, ಇನ್ನೊಂದು ಕನ್ನಡದಲ್ಲಿದೆ. ಮತ್ತೆ ಬಸವಣ್ಣನವರು ಮುಂತಾದವರ ವಚನಗಳಿರ ಬಹುದು. ಇಂತಹ ಗ್ರಂಥಗಳಿಂದ, ಸಾಹಿತ್ಯಗಳಿಂದ ಆಯಾ ಭಾಷೆಗಳ ಮಹತ್ವವೂ ಹೆಚ್ಚುತ್ತಾ ಹೋಗುತ್ತೆ.


ನಾವು ನಮ್ಮ ಭಾಷೆಗೆ ನೀಡ ಬಹುದಾದ ಒಂದು ಅಲ್ಪ ಕೊಡುಗೆ ಅಂದ್ರೆ, ನಮ್ಮ ತಿಳಿವಳಿಕೆಯನ್ನ, ಅರಿವನ್ನ, ಜ್ಞಾನವನ್ನ ಬರವಣಿಗೆ ರೂಪದಲ್ಲಿ ಹಂಚಿಕೊಳ್ಳೋದು. ಈ ರೀತಿಯಾಗಿ ಅಪಾರ ಜ್ಞಾನವನ್ನ ಪೀಳಿಗೆ ಇಂದ ಪೀಳಿಗೆಗೆ ವರ್ಗಾಯಿಸಬಹುದು. ಹಾಗಾಗಿಯೇ ಭಾಷೆಯ ಪೋಷಣೆ ನಮ್ಮಗಳ ಅಲಿಖಿತ ಕರ್ತವ್ಯ ಆಗ್ಬಿಡುತ್ತೆ. ಭಾಷಾ ಪ್ರೇಮ ತಪ್ಪಲ್ಲ. ಆದ್ರೆ ಅದು ಅತಿರೇಕಕ್ಕೆ ಹೋಗಿ, ಇನ್ನೊಂದು ಭಾಷೆನ ತುಳಿಯೋ ಮಟ್ಟಕ್ಕೆ ಹೋಗೋದು ಒಂದು ಆರೋಗ್ಯಕಾರಿ ಬೆಳವಣಿಗೆ ಅಲ್ಲವೇ ಅಲ್ಲ.


ಈಗಿನ ಸದ್ಯ ಪ್ರಪಂಚದಲ್ಲಿ ಹೆಚ್ಚು ಕಮ್ಮಿ 6000 ವಿವಿದ ಭಾಷೆಗಳು ಇವೆಯಂತೆ. ನಮ್ಮ ಕನ್ನಡನೂ ಇದ್ರಲ್ಲಿ ಒಂದು. ನಾವು ಕರ್ನಾಟಕದಲ್ಲಿ ಕನ್ನಡ ಹೊರತಾಗಿ, ಹಿಂದಿ, ಇಂಗ್ಲೀಶ್, ಕೊಂಕಣಿ. ತುಳು ಇನ್ನೂ ಅನೇಕ ಭಾಷೆಗಳನ್ನ ಮಾತಾಡ್ತೀವಿ/ಮಾತಾಡ್ತಾರೆ. ಇನ್ನ ಬಾರ್ಡರ್ ಅತ್ರ ಇರೋ ಊರ್ಗಳಿಗೆ ಹೋದ್ರೆ ಅಲ್ಲಿ ತೆಲುಗು, ತಮಿಳು, ಮರಾಠಿ, ಮಲಯಾಳಂ ಭಾಷೆ ಮಾತಾಡೋರೂ ಸಿಗ್ತಾರೆ.


ಕನ್ನಡ ಭಾಷೇನೆ ನಾಲ್ಕಾರು ವಿವಿದ ಶೈಲಿಯಲ್ಲಿ ಮಾತಡೋದು ನಮಗೆಲ್ಲ ಗೊತ್ತಿರೋದೆ.
  • ಕುಂದಾಪುರ ಕನ್ನಡ.
  • ಶಿರಸಿ ಕನ್ನಡ. 
  • ಹುಬ್ಬಳ್ಳಿ-ಧಾರವಾಡ ಕನ್ನಡ.
  • ಬೆಂಗಳೂರು ಕನ್ನಡ.
  • ಚಿತ್ರದುರ್ಗ ಕನ್ನಡ 
  • ಗುಲ್ಬರ್ಗ ಕನ್ನಡ
ಒಂದು ಅಂದಾಜಿನ ಪ್ರಕಾರ, ಕನ್ನಡ ಭಾಷೇನೆ, ಹೆಚ್ಚು ಕಮ್ಮಿ 20 ವಿವಿದ ರೀತಿಗಳಲ್ಲಿ ಮಾತಾಡ್ತಾರೆ. ಮಾತಾಡೋ ಶೈಲಿ ಬೇರೆ ಬೇರೆ ಇದ್ರೂ ಬರಿಯೋಕಂತ ಇರೋದು ಒಂದೇ ಒಂದು ಅದೇ ಕನ್ನಡ ಲಿಪಿ. ಅ, ಆ, ಇ, ಈ...ಕಾಗುಣಿತ


ಕನ್ನಡಕ್ಕೆ ಮೂಲ/ಮಾತೃ ಭಾಷೆ ಸಂಸ್ಕೃತ. ಇದು ಕನ್ನಡಕ್ಕಷ್ಟೇ ಅಲ್ಲ, ಭಾರತದ ಸರಾಸರಿ ಎಲ್ಲಾ ಭಾಷೆಗಳಿಗೂ ಮಾತೃ ಭಾಷೆ ಅಂತ ನಾವೆಲ್ಲಾ ಒಪ್ಕೋಳ್ಳಲೇ ಬೇಕು. ಕನ್ನಡ ಮಾತಾಡೋರು ಕೇವಲ ಕರ್ನಾಟಕದಲ್ಲಿ ಮಾತ್ರ ಅಲ್ಲದೆಯೇ, ಪ್ರಪಂಚದ ಇನ್ನೂ ಅನೇಕ ರಾಷ್ಟ್ರಗಳಲ್ಲಿಯೂ ಇದ್ದಾರೆ. ಅಮೇರಿಕ, ಸೌದಿ ಅರೇಬಿಯಾ, ಆಸ್ಟ್ರೇಲಿಯಾ, ಯುರೋಪ್ ಹೀಗೆ ಎಲ್ಲಾ ಭಾಗದಲ್ಲಿಯೂ ಇದ್ದಾರೆ. ಅಷ್ಟೇ ಏಕೆ, ಭಾರತದ ಇತರೆ ರಾಜ್ಯಗಳಲ್ಲಿಯೂ ಇದ್ದಾರೆ.


ಇಡೀ ಭೂಮಿಗೆ ಹೋಲಿಸಿದರೆ, ಬೌಗೋಳಿಕವಾಗಿ ಕರ್ನಾಟಕ ಎಷ್ಟು ದೊಡ್ಡ ಪ್ರದೇಶ? ಈ ಪ್ರಪಂಚದಲ್ಲಿ ಕನ್ನಡ ಮಾತಾಡೋವ್ರು ಎಷ್ಟು ಜನ?


ಇಷ್ಟರಲ್ಲಿಯೇ ಎಷ್ಟೊಂದು ವೈವಿದ್ಯತೆ. ಅಲ್ವ? ಇದಕ್ಕೆ ಹೋಲಿಸಿದರೆ ಪ್ರಪಂಚದ 6000 ಭಾಷೆಗಳಲ್ಲಿ ಇನ್ನೂ ಅದೆಷ್ಟು ವೈವಿದ್ಯತೆ ಇರಬೇಡ? ಇಷ್ಟೆಲ್ಲಾ ಭಾಷೆಗಳಲ್ಲಿ ಒಟ್ಟು ಅದೆಷ್ಟು ಜ್ಞಾನ ಇರಬೇಡ? ಸರಾಸರಿಯಾಗಿ ಪ್ರತಿ ಒಬ್ಬ ಮನುಷ್ಯ ಮೂರ್ನಾಲ್ಕು ಭಾಷೆ ಕಲಿತರೆ ಹೆಚ್ಚು. ಸಂಸ್ಕೃತ ಕಲೀರಿ, ಇಂಗ್ಲೀಶ್ ಕಲೀರಿ, ಹಿಂದಿ ಕಲೀರಿ, ಫ್ರೆಂಚ್ ಕಲೀರಿ, ಜರ್ಮನ್ ಕಲೀರಿ ಆದ್ರೆ ಕನ್ನಡ ಗೋತ್ತಿರೋ ವ್ಯಕ್ತಿ ಹತ್ರನಾದ್ರೂ ಕನ್ನಡದಲ್ಲೇ ಮಾತಾಡಿ. ಸಾಧ್ಯವಾದ ಕಡೆಗಳಲ್ಲೆಲ್ಲ ಕನ್ನಡ ಬಳಸಿ. ನಾವು ಬೇರೆ ಬೇರೆ ಭಾಷೆನ ಉಳಿಸಿ, ಬೆಳೆಸೋ ಪ್ರಯತ್ನ ಮಾಡ್ದೆ ಇದ್ರೂ ಪರ್ವಾಗಿಲ್ಲಾ, ಆದ್ರೆ ನಮ್ಮ ನಮ್ಮ ಮಾತೃ ಭಾಷೆನ ಉಳಿಸಲೇ ಬೇಕು, ಬೆಳಸಲೇ ಬೇಕು.


ಉಳಿದ ಭಾಷೆಗಳಲ್ಲಿ ಅದಿಲ್ಲಾ, ಇದಿಲ್ಲಾ, ಅದು ಸತ್ತ ಭಾಷೆ, ಇದು ಸುಟ್ಟ ಭಾಷೆ ಅಂತ ಕೀಳಾಗಿ ಯಾವ ಭಾಷೇನೂ ನೋಡೋ ಅಗತ್ಯ ಇಲ್ಲಾ. ಅಂತಹ ಸಂಧರ್ಬ ಸೃಷ್ಟಿ ಆಗೋದೂ ಬೇಡ.


ಶನಿವಾರ, ಸೆಪ್ಟೆಂಬರ್ 19, 2009

ಶ್ವಾನರ ಮಿತ್ರರು

ಬನ್ನಿ ಈ ವಾರದ ವಿಶೇಷ ಅತಿಥಿಗಳು ಏನೇನು ಹೇಳ್ತಾರೆ ಕೇಳೋಣ


ಓಹೋ ನಮಸ್ಕಾರ.
ಬರಬೇಕು ಬರಬೇಕು.
ಏನು ಮನೆಕಡೆ ಎಲ್ಲಾ ಆರಾಮ?

ಒಂದೇ ಒಂದು ನಿಮ್ಷ ಸುದಾರ್ಸ್ಕಂತೀನಿ, ಎಳಿ ಬೇಡ ನನ್ನ..  
ಚಳಿ ಆಗ್ತಾ ಇದೆ , ಬಿಸ್ಲು ಕಾಯ್ಸಾನ ಅಂತ. ನೀನು ಬಂದ್ಯಾ ಬಾ.. ಕೂತ್ಕ! 
ಅಯ್ಯೋ ನಾನಲ್ಲಾ. ನಾನೇನೂ ಮಾಡಿಲ್ಲಾ.  ನನ್ನೇನೂ ಬಾಡ್ಬೇಡಿ. ಪ್ಲೀಸ್ 
ನೋ...ನೀ ನನ್ನ ಮುಟ್ಟ ಬೇಡ.
ಯಾರಲ್ಲಿ?
ಅಲ್ಲೇ ದೂರ ನಿಂತು ಮಾತಾಡು..ಹತ್ರ ಬರಬೇಡ.
ಆ ಸಕತ್ತಾಗಿ ಇದೆ..ಏನಪ್ಪಾ? ಯಾಕಂಗೆ ನೋಡ್ತೀ?
   ನನ್ನ ಅರ್ದಾನ್ಗಿ ಮುನಿಸ್ಕಂದವ್ಲೆ ಅದಕ್ಕೆ ಒಂದು ರೌಂಡು ಆರಾಮಾಗಿ ಸುತ್ತಾಡಿಸಿ ಪಾರ್ಕ್ ತೋರ್ಸಿ ಕರ್ಕೋನ್ಡೋಗನ ಅಂತ ಬಂದ್ರೆ ಇಲ್ಲಿಗೂ ಬಂದು ನಮ್ಮ ಪ್ರೈವಸಿ ಹಾಳ್ಮಾಡ್ತಾ ಇದ್ದೀರಲ್ಲ! 
ಇದು ನಿಮಗೆ ನ್ಯಾಯವೇ? 
ಮೊನ್ನೆ ಗಾಯ ಮಾಡ್ಕಂದಿದ್ದೆ..ಡಾಕುಟ್ರು ಎಲ್ಲೂ ಹೊರಗೆ ಅಡ್ಡಾದ ಬೇಡ ಅಂದಿದಾರೆ. 
ಅದಕ್ಕೆ ಇನ್ನೂ ಸುಧರಿಸ್ಕಂತಾ ಇದ್ದೀನಿ.
ಯಾರಪ್ಪಾ ನೀನು?ಇನ್ನೂ ಅನೇಕ ವಿವಿದ ಶ್ವಾನ ಮಿತ್ರರ ಛಾಯಾಚಿತ್ರ ಮುಂದಿನ ಕಂತಿನಲ್ಲಿ ತರ್ತೀನಿ. ಅಲ್ಲಿಯವರೆಗೆ ಈಗಾಗಲೇ ಕರೆ ತಂದಿರುವ ಅತಿಥಿಗಳಿಗೆ ಬೋರ್ ಆಗ್ದಂಗೆ, ಬೇಜಾರ್ ಆಗ್ದಂಗೆ ಮಾತಾಡಿಸ್ತಾ ಇರಿ.


ಶುಕ್ರವಾರ, ಸೆಪ್ಟೆಂಬರ್ 18, 2009

ಭಾಷೆ, ಮಾಧ್ಯಮ ಹಾಗೂ ಕಲಿಕೆ - 1


ಭಾಷೆಯಂದ್ರೆ ಮುಖ್ಯವಾಗಿ ಬೇಕಾಗೋದು ಎನುಕ್ಕೆ? ಅನುಭವ-ಅನಿಸಿಕೆ ಗಳನ್ನ, ವಿಚಾರಗಳನ್ನ, ಹಾಗು-ಹೋಗುಗಳನ್ನ, ವಿಷಯಗಳನ್ನ ಪರಸ್ಪರ ವಿನಿಮಯ ಮಾಡ್ಕೊಳ್ಳೋಕೆ. ಹೇಳೋಕ್ಕೆ ಒಬ್ರು-ಕೇಳೋಕ್ಕೆ ಇನ್ನೊಬ್ರು, ಟೋಟಲಿ ಇಬ್ರು ಇದ್ರೆ ಸಾಕು, ಅವರಿಬ್ಬರಿಗೆ ಮಾತ್ರಾನೇ ಅರ್ಥ ಆದ್ರುನೂ ಸಾಕು. ಇಲ್ಲಿ ಪರಸ್ಪರ ಒಂದೇ ತೀರ್ಮಾನಕ್ಕೆ ಬರ್ಲೆ ಬೇಕು ಅಂತೇನೂ ಇಲ್ಲ. ಒಟ್ಟಿನಲ್ಲಿ ಸಂಪರ್ಕ ಏರ್ಪಟ್ಟರೆ ಅಷ್ಟೇ ಸಾಕು.

ಮಾನವನ ನಾಗರೀಕತೆ ದಿನಗಳಿಂದ ಗಮನಿಸಿದರೆ, ಆಗೆಲ್ಲಾ ಇಬ್ರಿಗೆ ಅಥವ ಮೂವರಿಗೆ ಸಾಮಾನ್ಯವಾಗಿ ಅರ್ಥ ಆಗ್ತಿದ್ದಾ ಒಂದೇ ಭಾಷೆ ಅಂತಾನೇ ಇರ್ಲಿಲ್ಲ. ಎಲ್ಲಾ ಮುಖಾಭಿನಯ!!!
ಇಲ್ಲಿ ವಿಷಯ ಅಂಚಿ ಕೊಳ್ಳೋಕ್ಕೆ ಒಂದು ಮಾಧ್ಯಮ ಬೇಕಿತ್ತು, ಅದು ಯಾವ್ದಾದರೂ ಪರವಾಗಿರ್ಲಿಲ್ಲಾ. ಶೀಟಿ ಹೊಡಿಯೋದು, ಜೋರಾಗಿ ಕೂಗಿ ಕೊಳ್ಳೋದು, ಬಿದ್ದು ಒದ್ದಾಡೋದು. ಒಂದು ರೀತಿಲಿ ಮಾತು ಬರದ ಒಂದು ಮಗು ಹೇಗೆ ತನಗೆ ಬೇಕಿನಿಸಿದ್ದನ್ನ ತನ್ನ ತಾಯಿ ಅತ್ರ ಹಠ ಮಾಡಿ ಕೇಳ್ತಿರುತ್ತೋ ಹಾಗೇ. ಎಲ್ಲಾ ಬರೀ ಸಂಜ್ಞೆ.

ಕಾಲ ಕ್ರಮೇಣ ಇಂತಹ ಒಂದೊಂದು ಸಂಜ್ಞೆಗೂ ಒಂದೊಂದು ಅರ್ಥ ಬೆಳಿಸಿ ಕೊಳ್ತಾ ಬಂದ್ರು, ತಮ್ಮ ಕಷ್ಟ ಸುಖಗಳನ್ನ ಪರಸ್ಪರ ಹಂಚಿ ಕೊಳ್ಲೋಕ್ಕೆ ಅನುಕೂಲ ಆಯ್ತು. ಜೀವನ ಕ್ರಮ ಸುಧಾರಿಸ್ತಾ ಹೋಯ್ತು. ಉದಾಹರಣೆಗೆ ಈಗಲೂ ಆಸಕ್ತಿ ತರೋ ಕೆಲವು ಸಜ್ಞೆಗಳನ್ನ ನೋಡೋಣ. 
ಕೆಲವು ಪ್ರಶ್ನೆಗಳಿಗೆ ನಾವು ಸರಿ, ತಪ್ಪು ಅಥವಾ ಹೌದು, ಅಲ್ಲ ಅಂತ ಸರಳವಾಗಿ ಉತ್ತರಿಸಬಹುದು, ಅದಕ್ಕೆ ನಾವು ಸಾಮಾನ್ಯವಾಗಿ ಅನುಸರಿಸೋ ಸಂಜ್ಞೆ ಅಂದ್ರೆ, ನಮ್ಮ ಕತ್ತನ್ನ (ಕುತ್ತಿಗೆ) ಮೇಲೆ-ಕೆಳಗೆ ಅಥವಾ ಎಡಕ್ಕೆ-ಬಲಕ್ಕೆ ಆಡಿಸೋದು.
ಮೇಲೆ-ಕೆಳಗೆ ಆಡಿಸಿದರೆ ಅದು ಸರಿ, ಹೌದು ಅಂತಲೂ, ಅದೇ ಎಡಕ್ಕೆ-ಬಲಕ್ಕೆ ಆಡಿಸಿದರೆ ಅದು ತಪ್ಪು ಅಥವ ಅಲ್ಲ ಅಂತಲೂ ಅರ್ಥ ಮಾಡ್ಕೊಂತೀವಿ.

ಆಗಂತ ಪ್ರಪಂಚದ ಎಲ್ಲ ರಾಷ್ಟ್ರಗಳಲ್ಲಿಯೂ ಇದೆ ರೀತಿ ಅರ್ಥ ಮಾಡ್ಕೊಂತಾರೆ ಅಂತೇನೂ ಇಲ್ಲ. ಆಸ್ಟ್ರೇಲಿಯಾದಲ್ಲಿ ಯಾರಾದರೂ ಪ್ರಶ್ನೆಗೆ ಕತ್ತನ್ನ ಮೇಲೆ-ಕೆಳಗೆ, ಅಥವ ಎಡಕ್ಕೆ-ಬಲಕ್ಕೆ ತಿರುಗಿಸಿದರೆ ಅವ್ರು ಏನೂ ಅರ್ಥ ಮಾಡ್ಕನಲ್ಲಾ!! ಬದಲಾಗಿ ನೀನು ಎಲ್ಲೋ ಸೊಳ್ಳೆನೋ, ನೋಣನೋ ಓಡಿಸ್ತಿರ ಬೇಕು ಅಂತ ಸುಮ್ನೆ ಉತ್ತರಕ್ಕೆ ಕಾಯ್ತಾ ನಿನ್ನ ಮುಖನೇ ನೋಡ್ತಾರೆ. ಅಲ್ಲಿ "ಯಸ್" ಅಥವಾ "ನೋ" ಅಂತ ಬಾಯಿಬಿಟ್ಟು ಹೇಳಲೇ ಬೇಕು.

ಇನ್ನೂ ಇದೇ ಸಜ್ಞೆನ ಇನ್ನೂ ಕೆಲವು ಕಡೆ, (ಉದಾಹರಣೆಗೆ ಬಲ್ಗೇರಿಯ) ಉಲ್ಟಾ ಸೀದಾ ಅರ್ಥ ಮಾಡ್ಕೊಂತಾರಂತೆ. ಅಂದ್ರೆ, ಕತ್ತನ್ನ ಮೇಲೆ-ಕೆಳಗೆ ಆಡಿಸಿದರೆ ಅದಕ್ಕೆ ನಿನ್ನ ಒಪ್ಪಿಗೆ ಇಲ್ಲ, ಅದು ತಪ್ಪು ಅಂತಲೂ ಅದೇ ಎಡಕ್ಕೆ-ಬಲಕ್ಕೆ ಆಡಿಸಿದರೆ ಅದಕ್ಕೆ ನಿನ್ನ ಉತ್ತರ ಹೌದು, ಅದು ಸರಿ ಅಂತಲೂ ಅರ್ಥ ಮಾಡ್ಕೊಂತಾರಂತೆ.

ನಮ್ಮ ದೇಶದಲ್ಲಿ ಒಬ್ಬರನ್ನೊಬ್ಬರು ಪರಸ್ಪರ ಭೇಟಿ ಆದಾಗ ಎರಡು ಕೈ ಎತ್ತಿ, ನಮ್ಮ ಎದೆ ನಡುವೆ ನಮ್ಮ ಹಸ್ತವನ್ನ ಒಂದಕ್ಕೊಂದು ಜೋಡಿಸಿ ಮುಗಿದು, ನಂತರ "ನಮಸ್ಕಾರ" ಅಂತ ಹೇಳ್ತೀವಿ. ಇದು ಪರಸ್ಪರರಿಗೆ ಗೌರವ ಸೂಚಕವೂ ಅವ್ದು. 
ಇದನ್ನೇ ಮುಸ್ಲೀಂ ರಾಷ್ಟ್ರಗಳಲ್ಲಿ ಹೋದರೆ, ಒಂದು ಕೈ ಮಾತ್ರ ಎದೆ ಮುಂದೆ ತಂದು, ತಮ್ಮ ಹಸ್ತ ತಮ್ಮ ಎದೆ ಕಡೆಗೆ ತಿರುಗಿಸಿ, ಸ್ವಲ್ಪ ನಡು ಭಾಗಿಸಿ, "ಖುದಾ ಹಫೀಜ್" ಅಂತಾರೆ.

ಇನ್ನ ಕೆಲವೊಮ್ಮೆ ಪರಸ್ಪರರು ಎದುರಾದಾಗ, ಹಸ್ತಲಾಘವ ಮಾಡ್ಕೊಂಡು ಮಾತು ಆರಂಬಿಸ್ತಾರೆ, ಅದೇ ಇನ್ನೂ ಕೆಲವರೋ (ಕ್ರಿಶ್ಚಿಯನ್ನರು?) ಪರಸ್ಪರ ಕೆನ್ನೆಯ ಮೇಲೆ ಮೆಲ್ಲಗೆ, ಲಘುವಾಗಿ ಒಂದೊಂದು ಮುತ್ತು ಹಂಚಿ ಕೊಂಡು, ಶುಭಾಷಯ ಹೇಳ್ಕೊಂತಾರೆ.

ಇದಕ್ಕೆಲ್ಲಾ ಏನು ಅರ್ಥ? ಇವರೆಲ್ಲಾ ಯಾಕಿಂಗೆ ಮಾಡ್ತಿದ್ದಾರೆ? ಅದು ಹೊರಗಿನ ವ್ಯಕ್ತಿಗೆ ಕೂಡಲೇ ಆರ್ಥ ಆಗಲಿಕ್ಕೆ ಇಲ್ಲ. ಆದ್ರೆ ಅದನ್ನ ಅನುಸರಿಸ್ತಿರೋವ್ರಿಗೆ ತಕ್ಷಣ ಅರ್ಥ ಆಗುತ್ತೆ. 
ಮೊನ್ನೆ ಒಂದ್ಸಾರಿ ಸಕತ್ ಹಲ್ಲು ನೋವು ಬಂದಿತ್ತು, ಡೆನ್ಟಿಸ್ಟ್ ಹತ್ರ ಹೋಗಿದ್ದೆ, ನನ್ನ ಹೆಸರು ಕೇಳಿದ್ರು ಹೇಳ್ದೆ, ಆಮೇಲೆ ಮಾತು ಹೇಗೆ ಆರಂಬಿಸೋದು? ನಾನು ಯೋಚಿಸ್ತಾ ಇದ್ದೆ ಈಗ ಇವರು ನನ್ನ ಏನು ಕೇಳ್ತಾರೆ ಅಂತ. "ಸಾರೀ ವೀ ವೋನ್ಟ್ ಶೇಕ್ ಹ್ಯಾಂಡ್ ಎನಿ ಮೋರ್" ಅಂದ್ರು, ಹೀಗ ಎಲ್ಲ ಕಡೆ ಹಂದೀ ಜ್ವರದ ಭಯ, ಅದಕ್ಕೆ ಹೀಗೇ ಅಂತ ಗೊತ್ತಾದ್ಮೇಲೆ, ಸರಿ ಬಿಡಿ ಇಬ್ಬರಿಗೂ ಒಳ್ಳೇದು ಅಂತ ಸುಮ್ಮನೆ ಅವರು ತೋರಿಸಿದ ಕುರ್ಚಿಯ ಮೇಲೆ ಕುಳಿತೆ. ಆಮೇಲೆ ನಡೆದದ್ದು ಹೀಗ ಬೇಡ.

ಭಾಷೆ ಇಬ್ಬರ ನಡುವಿನ ಸಂಪರ್ಕಕ್ಕೆ ಉಪಯೋಗ ಆಗುತ್ತದಲ್ಲಾ, ಹಾಗೇನೇ, ಅದು ನಿಧಾನಕ್ಕೆ ವಿಷಯವನ್ನ ಒಟ್ಟು ಹಾಕಿ (ಕ್ರೂಡೀಕರಿಸಿ) ಕೊಳ್ತಾ ಹೋಗುತ್ತೆ. ಆಗಲೇ ಭಾಷೆಗೂ ಒಂದು ಭೂಷಣ. ಒಂದು ಗುಂಪಿನ ಜನ ಹೆಚ್ಚು ಹೆಚ್ಚು ವಿಚಾರ ವಿನಿಮಯ ಮಾಡ್ಕೊಳ್ತಾ ಹೋದಂತೆ ಅಲ್ಲಿ ಹೆಚ್ಚೆಚ್ಚು ಆಲೋಚನೆಗಳೂ ಸೃಷ್ಟಿ ಆಗ್ತಾ ಹೋಗ್ತವೆ, ಎಷ್ಟೇ ಆದರು ಮನುಷ್ಯ ಪ್ರಾಣಿ ಅತೀ ಬುದ್ದಿ ಜೀವಿ. ಆಲೋಚನೆಗಳು ನಂತರ ಹವ್ಯಾಸಗಳಾಗುತ್ತೆ, ಹವ್ಯಾಸಗಳು ಆಚರಣೆಗಳಾಗ್ತಾವೆ. ಹೀಗೆಯೇ ಬರ ಬರುತ್ತಾ ಒಂದು ಸಂಸ್ಕೃತಿ ಬೆಳಿತಾ ಹೋಗುತ್ತೆ. ಹೀಗಾಗಿಯೇ ಹೇಳೋದು, ಒಂದು ಭಾಷೆ ಒಂದು ಸಂಸ್ಕೃತಿಯನ್ನ ಪ್ರತಿನಿಧಿಸುತ್ತೆ.

ಮನುಷ್ಯ ತರ್ಕ ಮಾಡಿ ತೀರ್ಮಾನಗಳನ್ನ ಮಾಡೋಕ್ಕೆ ಆರಂಬಿಸಿದಾಗಿನಿಂದ ಇಲ್ಲಿಯವರಗೆ ಸರಿ ತಪ್ಪು ಗಳನ್ನ ಸಮಂಜಸವಾಗಿ ತಿಳ್ಕೊಂಡು ಬಂದಿದ್ದೇ ಹಾಗಿದ್ರೆ ಈಗಿನ ಪೀಳಿಗೆ ಒಂದೇ ಒಂದೂ ತಪ್ನ್ನೂ ಮಾಡಬಾರದಿತ್ತು. ತಪ್ಪುಗಳನ್ನ ಹುಡ್ಕೊಕ್ಕೇ ಆಗಬಾರದಾಗಿತ್ತು. ಆದ್ರೆ ಹಾಗೆ ಆಗ್ಲಿಲ್ಲ/ಆಗಿಲ್ಲ/ಆಗಲ್ಲ! ದಿನ ಬೆಳಗಾದ್ರೆ ಒಂದಲ್ಲಾ ಒಂದು ಹೊಸ ಪರೀಕ್ಷೆ/ಸಮಸ್ಯೆ ನಾವು ಎದುರಿಸ ಬೇಕಾಗುತ್ತೆ. 

ಕೆಲ್ವಬ್ರಿಗೆ ಸರಿ ಅನ್ಸಿದ್ದು ಮತ್ತೆ ಕೆಲ್ವಬ್ರಿಗೆ ತಪ್ಪು ಅನ್ಸುತ್ತೆ. ಮಾನವ ಎಷ್ಟೇ ನಾಗರೀಕತೆ ಕಲ್ತ್ರುನೂ ಸರಿ ಯಾವ್ದು, ತಪ್ಪು ಯಾವ್ದು ಅಂತಾನೆ ನಮಗೆ ಇನ್ನೂ ತಿಳ್ದಿಲ್ಲಾ ಅಂತಾಗ್ತದೆ. ಅಥವಾ ಇನ್ನೇನು ಎಲ್ಲಾ ತಿಳ್ಕೋಲ್ಳೋ ದಿನ ಬಂದೇ ಬಿಡ್ತು ಅಂತಾನೂ ಯಾರೂ ಹೇಳಕಾಗಲ್ಲ. ಒಮ್ಮೆ ಸರಿ ಅನ್ನಿಸಿದ ವಿಷಯವೇ ಇನ್ನೊಮ್ಮೆ ತಪ್ಪು ಅಂತಲೂ ಅನ್ನಿಸ್ಬೌದು. 

ಸಮಾಜದಲ್ಲಿ, ಸರಿ ಯಾವ್ದೂ, ತಪ್ಪು ಯಾವ್ದೂ ಅಂತ ತೀರ್ಮಾನ ಮಾಡೋದೇ ಒಂದು ಭ್ರಮೆ. ಅಥವ ಇಂತಹ ಒಂದೊಂದು ಭ್ರಮೆಯ ಸೃಷ್ಟಿ ಮಾಡೋ ಒಂದು ಕಲೆ. ಅದು ವಿಜ್ಞಾನವೇ ಆಗಿರಲಿ, ವೇದವೇ ಆಗಿರಲಿ, ಜೋತಿಷ್ಯಾಸ್ತ್ರವೇ ಅಥವಾ ಇನ್ನಾವುದೋ ಮೂಡ ನಂಬಿಕೆಯೇ ಆಗಿರಲಿ. ಆ ಕ್ಷಣಕ್ಕೆ , ಆ ಜಾಗದಲ್ಲಿ ಹೆಚ್ಚು ಜನಕ್ಕೆ ಸರಿ ಅನ್ನಿಸಿದ್ರೆ ಅದೇ ಸರಿ, ಹೆಚ್ಚು ಜನಕ್ಕೆ ಅದು ತಪ್ಪು ಅನ್ನಿಸಿದ್ರೆ ಅದು ತಪ್ಪು ಅಷ್ಟೇ. ಹಿಂದೆ ಸರಿ ಅಂತ ಒಪ್ಕಂಡವ್ನು ಇವತ್ತು ಅದೇ ವಿಷಯ ತಪ್ಪು ಅಂತ ವಾದಿಸಿರೋ ದೃಶ್ಯಗಳು ಲೆಕ್ಕಕ್ಕಿಲ್ಲದಷ್ಟು ಸಿಕ್ತಾವೆ. ಹಾಗಾಗಿ, ಯಾವ್ದೂ ಸರಿಯಲ್ಲ. ಯಾವ್ದೂ ತಪ್ಪೂ ಅಲ್ಲ!

ಇಲ್ಲಿ ವಿಷಯವನ್ನ ವಿಜ್ಞಾನದ ಮೂಲಕ ಅಳಿಯೋರು ತಪ್ಪು ತಿಳಿಬಾರದು. ಏಕೆಂದರೆ ವಿಜ್ಞಾನದಲ್ಲಿಯೂ ಅನೇಕ ತಪ್ಪು ನಿರ್ಣಯಗಳು ಆಗಿವೆ, ಇನ್ನೂ ಆಗ್ತಿವೆ. ಪ್ರಯೋಗ ಮಾಡೀನೇ ಎಲ್ಲ ತಿಳ್ಕೊಲ್ತೀವಿ ಅನ್ನೋವ್ರ ವಿರೋಧ ನನಗೆ ಬೇಕಿಲ್ಲ. ಅಂತವರ ವಿರೋಧಿಯೂ ನಾನಲ್ಲ. ವಿಜ್ಞಾನದಿಂದಲೂ ನಾವು ನಮ್ಮ ಜೀವನ ಮಾದರಿಯನ್ನ ಸಾಕಷ್ಟು ಸುಧಾರಿಸಿ ಕೊಂಡಿದ್ದೇವೆ. ಆಗಂತ ಅದರಿಂದ ಆಗ್ತಿರೋ ಮಾರಕ ಬೆಳವಣಿಗೆಗಳೇನೂ ಸಾಧಾರಣ ಅಲ್ಲ. ಭವಿಷ್ಯವನ್ನ ಸಾಕಷ್ಟು ಬೀಕರವಾಗಿಯೂ ಮಾಡ್ಕಂದಿದ್ದೀವಿ!!! ಇದರ ಚರ್ಚೆ ಅವರವರ ಪ್ರೌಡಿಮೆಗೆ ಬಿಟ್ಟ ವಿಚಾರ.

ಕಲಿಕೆ ಅನಂತ. ಆಗಂತ, ಏನು ತಿಳ್ಕೊಳ್ಳೋದು ಬಿಡು, ಎಷ್ಟು ಕಲಿತರೂ ಕಲಿಯೊಕ್ಕೆ ಇನ್ನೂ ಇರುತ್ತಂತೆ. ಅನ್ಗಿದ್ಮೇಲೆ ಏನನ್ನೂ ಕಲಿಯೋದೇ ಬೇಡ ಅನ್ನೋಕಾಗುತ್ತದೆಯೇ? ಕಲಿಕೆ ಅನ್ನೋದು ನಮ್ಮ ಮನಸ್ಸಿನ ಮೇಲೆ ನಾವೇ ಹೇರಿ ಕೊಳ್ಳೋ ಒಂದು ಒರೆ ಆಗಬಾರದು. ಅದು ಒಂದು ಸಿಹಿ ಅನುಭವ ಆಗಿರಬೇಕು. ಹೊಸತನ ಇರ್ಬೇಕು.

ಮುಂದುವರೆಯುತ್ತದೆ...

ಶನಿವಾರ, ಸೆಪ್ಟೆಂಬರ್ 5, 2009

ತಾತ ಮೊಮ್ಮಗನ ಮಾತುಕತೆಯ ಒಂದು ಸನ್ನಿವೇಶ


ತಾತ, ನನ್ನ ತಾಯಿಯ ತಂದೆ, ನಮ್ಮ ಮನೆಗೆ ಬಂದಾಗ ನಮ್ಮಿಬ್ಬರ ನಡುವೆ ನಡೆದ ಒಂದು ಚಿಕ್ಕ ಮಾತುಕತೆ.
ತಾತ: ಇಲ್ನೋಡಪ್ಪ (ಜೇಬಲ್ಲಿದ್ದ ಕೆಲವು ಚೀಟಿ ಇತ್ಯಾದಿಗಳನ್ನು ಹೊರಗೆ ತೆಗೆಯುತ್ತಾ) ನೀನು ಕಳೆದ್ಸಾರಿ ವಿದೇಶಕ್ಕೆ ಹೋದಾಗಲೂ ನಿನ್ನ ಪೋಟೋ ಪೇಪರ್ ನಲ್ಲಿ ಬಂದಿತ್ತು. 
ಈ ಸರ್ತಿನು ಬಂದಿದೆ.
ನಾನು : ತಾತ ಅದು ಎರಡು ವರ್ಷದ ಹಿಂದಿನ ಪೇಪರ್? ಇನ್ನು ಇದೆಯಾ ನಿಮ್ಮತ್ರ?
ತಾತಹ್ಹೂನಪ್ಪಾ (ನಗುತ್ತಾ), ಮನೆ ಮುಂದೆ ಕುಂತಿರ್ತೀನಿಲ್ಲಾ ಸಾಯಂಕಾಲ ಅವಾಗ ದಿನಾ ಯಾರಾದ್ರೂ ಬಂದು ಕೂತು ಮಾತಾಡ್ಸಿ ಹೋಗ್ತಾರೆ. 
ಆಗ ಇದನ್ನ ತೋರಿಸಿ  ನಿನ್ನ ಬಗ್ಗೆ ಹೇಳ್ತಾ ಇರ್ತೀನಿ.
ನಾನು: ಹೌದಾ ತಾತ. 
(ಅಷ್ಟೊತ್ತಿಗೆ ನಾನು ನನ್ನ ಲ್ಯಾಪ್ಟಾಪ್ ದಲ್ಲಿದ್ದ ಅಜ್ಜಿಯ ಚಿತ್ರವನ್ನ ತೋರಿಸಿದೆ, ಈ ಚಿತ್ರ ನನ್ನ ಮದುವೇ ನಿಶ್ಚಿತಾರ್ದದ ದಿವಸ ತೆಗೆದದ್ದು. 
ಸುಮಾರು ಒಂದೂವರೆ ವರ್ಷದ ಹಳೆಯದು)
ತಾತ: ಅಯ್ಯೋ ನಿಮ್ಮವ್ವಾ  
(ನಾವು ನಮ್ಮ ಅಜ್ಜಿಯನ್ನ ಅವ್ವಾ ಅಂತಿದ್ವಿ.  ಅವ್ವಾ ಈಗ್ಗೆ ಐದು ತಿಂಗಳ ಹಿಂದೆ ಮೃತರಾದರು.  ಆಗ ನಾನು ವಿದೇಶದಲ್ಲಿದ್ದೆ
ಅಯ್ಯೋ, ಹೇಗೆ ನಿಂತಾಲ್ನೋಡಪ್ಪಾ ನಿಮ್ಮವ್ವ.? ತಾಯೀ ನೋಡ್ಬಾರವ್ವಾ ಇಲ್ಲಿ 
(ತಾತ ಅಮ್ಮನನ್ನ ಕರೆದರು, ಎಲ್ಲಾ ಹೆಣ್ಣು ಮಕ್ಕಳನ್ನೂ "ತಾಯೀ" ಅಂತಾನೆ ಕರಿಯೋದು ತಾತ).
ನಾನು: ಹ್ಞೂ ತಾತಾ. ಎಲ್ಲರಿಗೂ ಒಂದು ದಿವಸ ಅಂತ ಇರುತ್ತೆ. ಆ ದಿನ ಬಂದಾಗ ಹೊರಡಲೇ ಬೇಕು.
ತಾತ: ಅಲ್ಲಪ್ಪಾ ಈ ಜೀವನ ಆದ್ಮೇಲೆ ನಾವೆಲ್ಲಿಗೆ ಹೋಗ್ತೀವಿ? ನಾವು ದಿನ ಬೆಳಗ್ಗೆ ಏಳ್ತೀವಿ...ಊಟ ಮಾಡ್ತೀವಿ...ನಿದ್ದೆ ಮಾಡ್ತೀವಿ...ಇದೆಲ್ಲಾಕ್ಕೂ ಏನಪ್ಪಾ ಕಾರಣ?
(ಏನನ್ನೂ ಉತ್ತರಿಸದೆ. ನನ್ನ mp3 player ಹೊರಗೆ ತೆಗೆದು "ಮಂಕುತ್ತಿಮ್ಮನ ಕಗ್ಗ" ವನ್ನ ಹುಡುಕಿದೆ.ಅದರಲ್ಲಿ ಕೆಲವು ಸ್ಲೋಕಗಳ ತಾತ್ಪರ್ಯವನ್ನೇ ನನ್ನ ತಾತನಿಗೆ ಕೆಲವು ನಿಮಿಷ ಕೇಳಿಸಿದೆ. 
ಕೆಲವು ನಿಮಿಷ ಕೇಳಿದ ನಂತರ...
ತಾತ ತಾವು ಓದಿದ್ದ ಭಗವದ್ಗೀತೆಯ ತಾತ್ಪರ್ಯವನ್ನ ಹೇಳಲಿಕ್ಕೆ ಆರಂಬಿಸಿದರು...
ಕೆಲವು ನಿಮಿಷ ಕೇಳಿದ ನಂತರ...)
ನಾನು: ತಾತಾ ಇದನ್ನ ಎಲ್ಲಿ ಕಲಿತೆ? (ನನ್ನ ತಾತ ತುಂಬಾ ಹೆಚ್ಚೇನೂ ಓದಿಲ್ಲ.ಈಗ ಅವರಿಗೆ 85 ವರ್ಷ)
ತಾತ:  ನಮಿಗೆ ಸ್ಕೂಲ್ನಾಗೆ ಹೇಳ್ಕೊಟ್ಟಿದ್ರು.
ನಾನುತಾತ ನೀನು ಎಷ್ಟು ಓದಿದ್ದೀಯ?
ತಾತ :  ಹೇ (ನಗುತ್ತಾ) ಒಂದೋ ಎರಡೋ ಅಷ್ಟೇ ಅಂದರು.
(ನಕ್ಕು. ಸ್ವಲ್ಪ ಹೊತ್ತು ನನ್ನ ತಾತನ ಅಣ್ಣ-ಅಪ್ಪ ಇವರ ಬಗ್ಗೆ ವಿಚಾರಿಸದೆ)
ತಾತ:  ಇಲ್ಲ ಅಪ್ಪನನ್ನ ಸರಿಯಾಗಿ ನೋಡೇ ಇಲ್ಲ . ನಾನು ತೀರ ಚಿಕ್ಕವನಿದ್ದಾಗ (4 ತಿಂಗಳು) ತೀರಿ ಹೋದರಂತೆ. 
ನಾನು ಮತ್ತೆ ನಿಮಗೆ ಸಾಕಿದ್ದು ಯಾರು? 
ತಾತ:  ನಮ್ಮ  ದೊಡ್ಡಣ್ಣ. ದೊಡ್ಡಣ್ಣ ಅಷ್ಟೊತ್ತಿಗಾಗಲೇ ಬೇಸಾಯ ಹೊಡಿತಿದ್ದಾ. ನಾನು ನಮ್ಮಪ್ಪನಿಗೆ ಕೊನೆ ಮಗ. 
(ತಾತನ ಅಣ್ಣ ಈಗ ಯಾರೂ ಇಲ್ಲ. ತಾತ ಒಬ್ಬರೇ ಇರೋದು) 
ನಾನು : ನಿಮ್ಮ ಅಪ್ಪ ಏಕೆ ತೀರಿ ಕೊಂಡರು?
ತಾತಅಯ್ಯೋ ಅವಗೆಲ್ಲಾ ಇನ್ಗಿದ್ದಿಲ್ಲಾ... ವರ್ಷಕ್ಕೋ ಎರಡು ವರ್ಷಕ್ಕೋ ಒಂದ್ಸಾರ್ತಿ ರೋಗ ಬಂದು ಬಿಡ್ತಿದ್ವು. ಆಗ ಊರಲ್ಲಿ ಯಾರು ಇರ್ತಿರ್ಲಿಲ್ಲ. 
ಊರು ಬಿಟ್ಟು ತಿಂಗಳೋ ಎರಡು ತಿಂಗಳೋ ಎಲ್ಲೋ ದೂರ ಹೋಗಿ ಇರ್ಬೇಗಿತ್ತು. ಆಗ ರೋಗ ತಗಲಿ ನಮ್ಮಪ್ಪ ಹೋಗ್ಬಿಟ್ರಂತೆ.
ನಾನು : ಅಲ್ಲ ತಾತ. ಎರಡು ವರ್ಷಕ್ಕೆ ಒಂದ್ಸಾರಿ ಅಂದ್ರೂನು ಎಷ್ಟು ಕಷ್ಟ ಅಲ್ವ ಊರ್ಬಿಟ್ಟೋದು ಅಂದ್ರೆ? ಅದು ಸಂಸಾರ ಸಮೇತ?
ತಾತ: ಅಯ್ಯೋ ಇಲ್ಲ ಅಂದ್ರೆ ಬದುಕ್ತಿರ್ಲಿಲ್ಲಾಪ್ಪ. 
ನಾನು : ಆಮೇಲೆ ಏನಾಯ್ತು?
ತಾತ: ನಾನು ನಿಮ್ಮವ್ವನ್ನ (ಅಜ್ಜಿಗೆ ಅವ್ವ ಅಂತಿದ್ವಿ ನಾವು) ಮದ್ವೆ ಆದೆ. ನಮ್ಮೊರಿಂದ ಇಲ್ಲಿಗೆ 
(ನನ್ನ ಅವ್ವನ ತವರು ನನ್ನ ಅಜ್ಜ - ತಂದೆಯ ತಂದೆ - ಊರಿಗೆ ತುಂಬಾ ಸಮೀಪ) 
ನಿಮ್ಮವ್ವನ್ನ ನೋಡೋಕ್ಕೆ ನಾನು ಒಂದೆರಡು ಸಲ ಕುದುರೆಯಲ್ಲಿ ಬಂದಿದ್ದೆ.
ನಾನು (ನಗುತ್ತ) ಹೌದಾ ತಾತ. 
ತಾತ : ಹ್ಞೂ.. ಆಮೇಲಾಮೇಲೆ ಎಷ್ಟೋ ಬಾರಿ ನಡೆದು ಕೊಂಡೆ ಬರುತ್ತಿದ್ದೆ. (ಸುಮಾರು 30 ಕಿ ಮೀ)
ನಾನು:  ಅಲ್ಲ ತಾತ ಅಷ್ಟು ದೂರ ಹೇಗೆ ನಡಿತಿದ್ರಿ?
ತಾತ: ಬೆಳಗ್ಗೆ ಎದ್ದು , ರೊಟ್ಟಿ ಕಟ್ಟಿಸ್ಕಂದು ಹೊರಟರೆ, ಕಾಡು ದಾರಿಯಲ್ಲಿ ಬಂದರೆ ಮದ್ಯಾಹ್ನ ಇಲ್ಲಿರ್ತಿದ್ವಿ. ನಡುವೆ ಒಂದು ಬಾರಿ ಎಲ್ಲಾದರು ನೀರು ಇರೋ ಕಡೆ ಆ ರೊಟ್ಟಿ ತಿಂದು ಬರ್ತಿದ್ದೆ.
(ಸ್ವಲ್ಪ ಹೊತ್ತು ಯೋಚಿಸಿ)
ನಾನು : ತಾತ, ನಿಮಗೂ-ನಮಿಗು ಎಷ್ಟು ವ್ಯತ್ಯಾಸ ಅಲ್ವ?
ತಾತ (ನಕ್ಕು) ಆ ರೀತಿ ನಡದು-ನಡದು ನೋಡಪ್ಪ ಈ ವಯಸ್ಸಲ್ಲಿ ನನಗೆ ಮೊಣಕಾಲಿನ ನೋವು ಬರುತ್ತೆ.
ನಾನು: ನೀವು ಬಾರಿ ಗಟ್ಟಿ ತಾತ. (ಲ್ಯಾಪ್ಟಾಪ್ನಲ್ಲಿ ಚಿತ್ರಗಳನ್ನು ತೋರಿಸ್ತಾ ವಿದೇಶದ ಕೆಲವು ಚಿತ್ರಗಳನ್ನು ತೋರಿಸಿದೆ) 
ತಾತ: ಅಲ್ಲಪ್ಪಾ. ವಿಮಾನದಗೆ ಹಾರೋವಾಗ ಮೇಲೆ ಮೋಡ ಅಡ್ಡ ಬರುತ್ತೇನಪ್ಪ?
ನಾನು: ಹ್ಞೂ.. ಬರುತ್ತೆ ತಾತ. ಮೋಡಗಳ ಮದ್ದೇನೆ ಹಾರೋಗುತ್ತೆ ವಿಮಾನ.
ತಾತ: ಏನೋಪ್ಪ ಸುಖವಾಗಿ ಹೋಗಿ ಬಂದೆಲ್ಲ ಅಷ್ಟೇ ಸಾಕು. ನೀನು ಹುಟ್ಟಿದಾಗ ಜೋತಿಷಿ ಹೇಳಿದ್ರು ನೀನು ತುಂಬಾ ಹೆಸರು ಮಾಡ್ತೀಯ ಅಂತ ಮಗ ಆಗ್ತೀಯ ಅಂತ, ಅವರು ಹೇಳಿದ್ದು ನಿಜ ಆಯಿತು ನೋಡು.
ಅಮ್ಮ : ಊಟಕ್ಕೆ ಆಗಿದೆ. ಅಲ್ಲಿಗೆ ಕೊಡ್ಲ ಅಥವಾ ಇಲ್ಲಿಗೆ ಬರ್ತೀರಾ?
ನಾನುಕೈ ತೊಳ್ಕೊಬೇಕು ನಾವು. ಬಾ ತಾತ ಊಟ ಮಾಡೋಣ.
(ನಾನು ಕೈ ತೊಳ್ದು. ನನ್ನ ಜಾಗಕ್ಕೆ ಬಂದೆ. ತಾತ ಕೈ-ಕಾಲು ತೊಳ್ದು ಹೊರಗೆ ಬಂದು)
ತಾತ:  ತಾಯೀ ವಿಭೂತಿ ಕೊಡವ್ವ. ನೀನು ವಿಭೂತಿ ಅಚ್ಗಂದೆನಪ್ಪಾ ?
ನಾನುಇಲ್ಲ ತಾತ. 
ತಾತ: ವಿಭೂತಿ ಅಚ್ಕಂದಾಗೆ ಊಟ ಮಾಡ್ತೀಯ?
ನಾನು: ಹೇ ನನಿಗು ಬೇಗ ವಿಭೂತ ಕೊಡ್ರಿ. ತಾತ ಬೈತಾರೆ.
(ವಿಭೂತಿ ಅಚ್ಗೊಂದು.. ನಾನು ಲ್ಯಾಪ್ಟಾಪ್ ಮುಂದೆ ಕೂತ್ಗಂಡು ಊಟ ಮಾಡ್ದೆ. ತಾತ ಟೇಬಲ್ ಹತ್ರ ಕೂತು ಊಟ ಮಾಡಿದ್ರು. ಇಬ್ರದು ಊಟ ಆಯ್ತು)
ತಾತ: ತಾಯಿ ಟಿ ವಿ ಹಾಕ್ಬಾರವ್ವಾ... ಸುವರ್ಣ ಚಾನೆಲ್ "ಶಿವಲೀಲಾಮೃತ" ದಾರಾವಾಹಿಯನ್ನ  ತಪ್ಪದೆ ನೋಡ್ತೀನಿ.
(ತಾತ ಟಿ ವಿ ನೋಡೋದ್ರಲ್ಲಿ  ಮಗ್ನರಾದರು, ನಾನು ಒಂದು ರೌಂಡ್ ಹೋಗ್ಬರಣ ಅಂತ ಹೊರಗೆ ಹೊರಟೆ)

blogspot add widget