ನಮ್ಮೆಲ್ಲರಿಗೆ ತಿಳಿದಿರುವಂತೆ ೧೯೪೭ ಆಗಸ್ಟ್ ೧೫ ರಂದು ಬ್ರಿಟೀಷ್ ಆಡಳಿತ ವ್ಯವಸ್ಥೆಯಿಂದ ಮುಕ್ತವಾಗಿ ಭಾರತ ಒಂದು ಸ್ವತಂತ್ರ ದೇಶವಾಗಿ ಹೊರಹೊಮ್ಮಿತು. ಸ್ವತಂತ್ರ ದೇಶ ಅಂತ ನಾಮಪಟ್ಟಿ ಸಿಕ್ಕರೂ ಸಹ, ತನ್ನದೇ ಆದ ಆಡಳಿತ ವ್ಯವಸ್ಥೆ ಮತ್ತು ಅದಕ್ಕೆ ಪೂರಕವಾಗಿ ಬೇಕಾಗಿದ್ದ ಇನ್ನೂ ಅನೇಕ ಅಂಶಗಳು ನಮ್ಮಲ್ಲಿ ಇನ್ನೂ ಸಿದ್ದವಾಗಿರಲಿಲ್ಲ. ೧೯೩೫ ರಲ್ಲಿ ರಚಿಸಿಕೊಂಡಿದ್ದ ಕೆಲವು ಆಡಳಿತ ಸೂತ್ರಗಳನ್ನೇ ಅಲ್ಪ ಸ್ವಲ್ಪ ತಿದ್ದು ಪಡಿ ಮಾಡಿ ಕೊಂಡು ದೇಶವನ್ನ ಮುನ್ನಡೆಸಲಾಯಿತು.
ಸ್ವತಂತ್ರ ಹೋರಾಟದ ಹಾದಿಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸು ವಹಿಸಿದ ಪಾತ್ರ ಪ್ರಮುಖವಾದದ್ದು. ಬ್ರಿಟೀಷರು ಭಾರತ ಬಿಟ್ಟು ತೊಲಗುವಂತೆ ಮಾಡಲು ಅನೇಕ ಚಳವಳಿಗಳು, ಸತ್ಯಾಗ್ರಹಗಳು ಮುಂತಾದ ಸ್ವರೂಪಗಳಲ್ಲಿ ಹೋರಾಟವನ್ನ ನಡೆಸಲಾಗಿತ್ತು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸು ಸ್ವತಂತ್ರ ಪೂರ್ವದ ಹೋರಾಟದ ದಿನಗಳಲ್ಲಿಯೇ ದಿನಾಂಕ ಜನವರಿ ೨೬, ಪ್ರತೀ ವರ್ಷವೂ ಭಾರತ ಸ್ವತಂತ್ರ ದಿನಾಚರಣೆ ಎಂದು ಆಚರಿಸುತ್ತಾ ಬರುತ್ತಿತ್ತು.
ಡಾ. ಸಚ್ಚಿದಾನಂದ ಸಿನ್ಹಾರವರು ಸಂವಿಧಾನರಚನಾಸಭೆಯ ಮೊದಲ ಅಧ್ಯಕ್ಷರಾಗಿದ್ದರು. ನಂತರ, ಡಾ.ರಾಜೇಂದ್ರ ಪ್ರಸಾದ್ ಅವರು ಅಧ್ಯಕ್ಷರಾಗಿಯೂ ಬಿ.ಆರ್.ಅಂಬೇಡ್ಕರ್ ಅವರು ಕರಡು ಸಮಿತಿ ಅಧ್ಯಕ್ಷರಾಗಿಯೂ ಆಯ್ಕೆಯಾದರು. ಡಿಸೆಂಬರ್ ೯ ೧೯೪೭ ರಿಂದ ನವೆಂಬರ್ ೨೬ ೧೯೪೯ ರ ಅವಧಿಯಲ್ಲಿ ನಮ್ಮ ಸಂವಿಧಾನವು ರಚಿನೆಗೊಂಡಿತು, ಅಂಬೇಡ್ಕರ್ ರವರು ಸಂಸತ್ತಿನಲ್ಲಿ ಮಂಡಿಸಿದ ನಂತರದ ದಿನಗಳಲ್ಲಿ ಕೆಲವೇ ಕೆಲವು ತಿದ್ದು ಪಡಿಗಳೊಂದಿಗೆ ಸಂವಿಧಾನವು ಭಾರತ ಸರ್ಕಾರದಿಂದ ಅಂಗೀಕೃತವಾಯಿತು. ೧೯೫೦ ಜನವರಿ ೨೬ ರಿಂದ ಅಧಿಕೃತವಾಗಿ ಜಾರಿಗೆ ತರಲಾಯಿತು. ಈ ಸಾಧನೆಯಲ್ಲಿ ಪ್ರಮುಖ ಪಾತ್ರವಹಿಸಿದ ಅಂಬೇಡ್ಕರ್ ರವರು "ಭಾರತ ಸಂವಿಧಾನ ಶಿಲ್ಪಿ" ಎಂದು ಕರೆಸಿಕೊಂಡರು. ಇವರ ಇತರ ಸಾಧನೆಗಳೆಂದರೆ ಸಮಾಜಿಕ ಸಮಾನತೆಯ ಬಗ್ಗೆ ಕಾಳಜಿ ಹಾಗೂ ಅಸ್ಪೃಶ್ಯತೆ, ಜಾತಿ ಪದ್ದತಿ ವಿರುದ್ದ ಹೋರಾಟ. ೧೯೫೬ ಡಿಸೆಂಬರ್ ೬ ರಂದು ಇವರು ಮರಣ ಹೊಂದಿದರು. ಇವರಿಗೆ ೧೯೯೦ ರಲ್ಲಿ ಭಾರತ ರತ್ನ (ಮರಣೋತ್ತರ) ಪ್ರಶಸ್ತಿ ನೀಡಲಾಯಿತು.
ಭಾರತದ ವಿಲೀನ & ಪ್ರಜಾಪ್ರಭುತ್ವ
ಅನೇಕ ಭಾಷೆಗಳು, ಸಂಸ್ಕೃತಿಗಳು, ರಾಜರುಗಳು (೫೬೫ ಸಂಸ್ಥಾನಿಕ ರಾಜರುಗಳು), ಧಾರ್ಮಿಕ ಆಚರಣೆಗಳು ಹೀಗೇ ಇನ್ನೂ ಅನೇಕ ಅಂಶಗಳಿಗೆ ತುತ್ತಾಗಿ ಹರಿದು ಹಂಚಿಹೋಗಿದ್ದ ದೇಶವನ್ನ ಒಗ್ಗೂಡಿಸುವ ದಿಟ್ಟ ಜವಾಬ್ದಾರಿಯನ್ನ ಯಶಸ್ವಿಯಾಗಿ ಪೂರ್ಣಗೊಳಿಸಿದ್ದು ಸರ್ದಾರ್ ವಲ್ಲಭಭಾಯ್ ಪಟೇಲ್ ರವರು. ಇದೇ ಸಾಧನೆಗಾಗಿಯೇ ಇವರನ್ನ ಭಾರತದ "ಉಕ್ಕಿನ ಮನುಷ್ಯ" ಎಂದು ಗುರುತಿಸಲಾಯಿತು. ಅಲ್ಲದೆ ಇವರನ್ನ ಭಾರತದ ಬಿಸ್ಮಾರ್ಕ್ ಅಂತಕೂಡ ಗುರುತಿಸಲಾಗಿದೆ. ( ಒಟ್ಟೋವನ್ ಬಿಸ್ಮಾರ್ಕ್ ಜರ್ಮನಿಯ ಏಕೀಕರಣದಲ್ಲಿ ಪ್ರಮುಖ ಮಾತ್ರವಹಿಸಿದವರು ಎಂದುಬು ನಿಮ್ಮೆಲರಿಗೆ ತಿಳಿದಿದೆ ಅಂದು ಭಾವಿಸುತ್ತೇನೆ.) ಸ್ವತಂತ್ರ ಭಾರತದ ಮೊಟ್ಟ ಮೊದಲ ಪ್ರಧಾನಮಂತ್ರಿಗಳಾಗುವ ಅವಕಾಶ ಸ್ವಲ್ಪದರಲ್ಲಿಯೇ ತಪ್ಪಿ ಹೋದರೂ ಉಪಪ್ರಧಾನಿಗಳಾಗಿ, ಸ್ವತಂತ್ರ ಭಾರತದ ಮೊಟ್ಟ ಮೊದಲ ಗೃಹ ಸಚಿವರಾಗಿ ಕಾರ್ಯ ನಿರ್ವಹಿದ ಇವರು ಡಿಸೆಂಬರ್ ೧೫ ೧೯೫೦ ರಂದು ಮರಣ ಹೊಂದಿದರು. ಇವರಿಗೆ ೧೯೯೧ ರಲ್ಲಿ ಭಾರತ ರತ್ನ (ಮರಣೋತ್ತರ) ಪ್ರಶಸ್ತಿ ನೀಡಲಾಯಿತು.
ಭಾರತ ವಾಸಿಗಳಾದ ನಾವು, ಭಾರತವನ್ನು ಸಾರ್ವಭೌಮ ಸಮಾಜವಾದಿ ಜಾತ್ಯಾತೀತ ಲೋಕತಂತ್ರಿಕ ಗಣತಂತ್ರವನ್ನಾಗಿ ವಿಧಿಯುಕ್ತವಾಗಿ ಸ್ಥಾಪಿಸಿ, ಅದರ ಎಲ್ಲಾ ಪ್ರಜೆಗಳಿಗೆ ಈ ಕೆಳಗಿನ ಹಕ್ಕುಗಳಾದ;
- ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ;
- ವಿಚಾರ, ಅಭಿವ್ಯಕ್ತಿ, ನಂಬಿಕೆ, ಭಕ್ತಿ ಮತ್ತು ಆರಾಧನೆಗಳಲ್ಲಿ ಸ್ವಾತಂತ್ರ್ಯ;
- ಸ್ಥಾನಮಾನ ಮತ್ತು ಅವಕಾಶಗಳ ಸಮಾನತೆ;
ಗಳನ್ನು ದೊರಕಿಸಿ,
ವಯಕ್ತಿಕ ಘನತೆ ಮತ್ತು ದೇಶದ ಒಗ್ಗಟ್ಟು ಮತ್ತು ಐಕ್ಯತೆಗೆ ಎಲ್ಲರಲ್ಲೂ ಭ್ರಾತೃತ್ವತೆ ಯನ್ನು ಪ್ರೋತ್ಸಾಹಿಸಲು ನಿರ್ಧರಿಸಿ;
ನಮ್ಮ ಸಂವಿಧಾನ ರಚನಾಸಭೆಯಲ್ಲಿ ಈ ೧೯೪೯ ನವೆಂಬರ್ ಮಾಹೆಯ ೨೬ನೇ ದಿನದಂದು ನಾವಾಗಿ ನಾವೇ ಈ ಸಂವಿಧಾನವನ್ನು ಸ್ವೀಕರಿಸಿ, ಶಾಸನವನ್ನಾಗಿ ವಿಧಿಸಿಕೊಳ್ಳುತ್ತೇವೆ.
ಭಾರತ ಸರ್ಕಾರದಲ್ಲಿ ಸಂವಿಧಾನವನ್ನ ಅಧಿಕೃತವಾಗಿ ಜಾರಿಗೊಳಿಸಿದ ಹಾಗೂ ಅನೇಕ ಅಂಶಗಳಿಗೆ ತುತ್ತಾಗಿ ಚದುರಿ ಹೋಗಿದ್ದ ತುಂಡು ತುಂಡು ಸಂಸ್ಥಾನಗಳನ್ನ ಒಗ್ಗೂಡಿಸಿ ವಿವಿದ ರಾಜ್ಯಗಳಾಗಿ ವಿಂಗಡಿಸಿ ಅಧಿಕಾರ ವಿಕೇಂದ್ರೀಕರಣದ ಸಾಧನೆಯ ಯಶಸ್ಸಿನ ನೆನೆಪಿಗಾಗಿ ನಾವು ಪ್ರತೀ ವರ್ಷ ಜನವರಿ ೨೬ ರಂದು ಗಣರಾಜ್ಯ ದಿನಾಚರಣೆ ಯನ್ನ ಆಚರಿಸುತ್ತಾ ಬರುತ್ತಿದ್ದೇವೆ,
----------
ಪ್ರತೀ ವರ್ಷದ ಜನವರಿ ೨೬ ರಂದು ಗಣರಾಜ್ಯ ದಿನಾಚರಣೆಯನ್ನ ಆಚರಿಸುವುದರ ಹಿನ್ನೆಲೆಯನ್ನ ಕೆಲವೇ ಕೆಲವು ಪ್ರಮುಖ ಅಂಶಗಳಲ್ಲಿ ಹೇಳಿ ಮುಗಿಸಲು ಪ್ರಯತ್ನಿಸಿದ್ದೇನೆ. ನಿಮಗೆ ಮೇಲಿನ ವಿವರಣೆಯನ್ನ ಗ್ರಹಿಸಲು ಸಾದ್ಯವಾದಲ್ಲಿ ಧನ್ಯವಾದಗಳು, ಇಲ್ಲವಾದಲ್ಲಿ ಏನೂ ಅಪಾಯವಿಲ್ಲ.
ಎಂದಿನಂತೆ ತಮ್ಮೆಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು.