ಸೋಮವಾರ, ನವೆಂಬರ್ 23, 2009

ನಮ್ಮ ಬೀದಿ ತುಂಬಾ ವರ್ಲ್ಡ್ ಫೇಮಸ್

ಕಣದ ಮನೆಯಲ್ಲಿ ಕಣಗಲ ಗಿಡವನ್ನ ಬೆಳೆಸಿದ್ದರ ಕಥೆಯ ಎರಡನೇ ಕಂತು ಇವತ್ತು ಹಾಕಿದ್ದೇನೆ...ಮೊದಲ ಕಂತನ್ನ ಈಗಾಗಲೇ ಓದಿಲ್ಲದಿದ್ದರೆ ಇಲ್ಲಿ ಓದಿ.

~~~

ಮೂರ್ತ್ಯಪ್ಪ ಇವತ್ತಿಗೆ ನಾಲ್ಕು ದಿನ ಆತು, ಆದ್ರೆ ಇನ್ನೂ ಚಿಗುರು ಕಾಣಿಸ್ತಿಲ್ಲ. ನಾನು ಸ್ವಲ್ಪ ಸರ್ಕಾರಿ ಗೊಬ್ರ ಹಾಕ್ತೀನಿ.

ಅಯ್ಯೋ! ಅದಕ್ಕೆ ಗೊಬ್ರ ಬೇಡ ಸಾವ್ಕಾರಾ, ಅದೆಲ್ಲ ಚಿಗುರೋಡೆಯುತ್ತೆ. ನಿಂಗೆ ಗೊತ್ತಾಗಲ್ಲ. ಈಗ್ಲೇ ಸರ್ಕಾರಿ ಗೊಬ್ರ ಹಾಕಿದ್ರೆ ಅದ್ರ ಎಳೆ ಬೇರು ಸುಟ್ಟು ಹೋಗುತ್ತೆ ಅಷ್ಟೇ. ಅದ್ರ ಪಾಡಿಗೆ ಅದನ್ನ ಬಿಟ್ಟು ನಿಮ್ಮ ಪಾಡಿಗೆ ನೀವು ಸ್ವಲ್ಪ ಇರ್ಬಾರ್ದೆ.

ಮೂರ್ತ್ಯಪ್ಪನ ಮಾತು ಲೆಕ್ಕಕ್ಕೆ ತೆಗಳ್ದೆ, ಪರೀಕ್ಷೆ ಮಾಡಣ ಅಂತ ಯೋಚ್ಸಿ, ಒಂದು ಬೊಗಸೆ ಪೂರ್ತಿ ಸರ್ಕಾರಿ ಗೊಬ್ರಾನೂ ತಗಮ್ಬಂದೆ. ಆದ್ರೆ ಎಲ್ಲಾ ಗುಣಿಗೂ ಸಮವಾಗಿ ಹಾಕ್ಲಿಲ್ಲ. ಒಂದು ಗುಣಿಗೆ ಜಾಸ್ತಿ ಹಾಕಿ, ಇನ್ನೊಂದಕ್ಕೆ ಸ್ವಲ್ಪವೆ ಸ್ವಲ್ಪ ಹಾಕಿದ್ದೆ. ಕರಿಬೇವಿನ ಗಿಡಕ್ಕೂ ಸ್ವಲ್ಪ ಹಾಕಿದೆ.

ಮತ್ತೊಂದೆರಡು ದಿನ ಬಿಟ್ಟು ಬಂದೆ, ಕಡ್ಡಿ ನೆಟ್ಟಿದ್ದ ಗುಂಡಿ ಮುಂದೆ ಕುಂತೆ, ಮೂರ್ತ್ಯಪ್ಪನೂ ನನ್ನಿಂದೆ ಇದ್ದ. ಕಡ್ಡಿಯಲ್ಲಿ ಇನ್ನೂ ಚಿಗುರಿಲೇನೇ ಕಾಣಿಸ್ತಿಲ್ಲ. ಕರಿಬೇವಿನ ಗಿಡದಲ್ಲಿ ಕೆಳಗಿನ ಎಲೆಗಳು ಒಣಗ್ತಾ ಬರ್ತಿದ್ವು.ನಾನು ಬೇಸರದಿಂದ ಮೂರ್ತ್ಯಪ್ಪನ ಕಡೆ ನೋಡ್ದೆ.

ನೋಡು ಮೂರ್ತ್ಯಪ್ಪ, ಸಾಕಷ್ಟು ನೀರಾಕಿದ್ದೀನಿ, ಬೇರೆ ಬೇರೆ ಮಣ್ಣು ಹಾಕಿದ್ದೀನಿ, ತಿಪ್ಪೆ ಗೊಬ್ರಾನೂ ಹಾಕಿದ್ದೀನಿ, ಕೊನೆಗೆ ಇರ್ಲಿ ಅಂತ ಸ್ವಲ್ಪ ಸರ್ಕಾರಿ ಗೊಬ್ರಾನೂ ಹಾಕಿದ್ದೀನಿ. ಆದ್ರೆ ಇನ್ನೂ ಚಿಗುರೇ ಕಾಣಿಸ್ತಿಲ್ಲ. ನೀನು ಹೇಳಿದ್ದೆ ಒಂದು ವಾರ ಆದ್ಮೇಲೆ ಚಿಗುರು ಬರುತ್ತೆ ಅಂತ, ಈಗ ನೋಡು ಒಂದ್ವಾರ ಆತು, ಇನ್ನೂ ಕಡ್ಡಿ, ಕಡ್ಡಿನೇ ಇದೆ, ಸಸಿನೇ ಹಾಗಿಲ್ಲಾ. ಕರಿಬೇವಿನ ಎಲೆಗಳು ಕೂಡ ಒಣಗ್ತಾ ಇವೆ. ಸ್ವಲ್ಪ ಔಷಧಿ ತಂದು ಈ ಕರಿಬೇವಿನ ಗಿಡಕ್ಕೆ ಸ್ಪ್ರೇ ಮಾಡ್ತೀನಿ.

ಸಾವ್ಕಾರಾ, ನಾನಾಗಲೇ ಹೇಳ್ದೆ ನಿಮ್ಗೆ, ಅದಿನ್ನೂ ಮೊದ್ಲು ಬೇರು ಬಿಡ್ಬೇಕು ಆಮೇಲೆ ಚಿಗುರು ಬರುತ್ತೆ ಅಂತ, ನೀವು ನನ್ನ ಮಾತು ಲೆಕ್ಕಕ್ಕೆ ತಗಳ್ದೇನೆ ಸರ್ಕಾರಿ ಗೊಬ್ರ ಹಾಕಿದ್ರಿ, ಈಗ ಇದ್ರ ಬೇರು ಕೂಡ ಸುಟ್ಟು ಹೋಗಿದೆ ಅನ್ಸುತ್ತೆ. ಆದ್ರೂ ಏನೂ ತಲೆ ಕೆಡಿಸ್ಕೂ ಬೇಡ್ರಿ, ಇನ್ನೂ ಸ್ವಲ್ಪ ದಿನ ಟೈಮ್ ಕೊಡಿ, ಈ ಮಣ್ಣಲ್ಲಿ ಸರ್ಕಾರಿ ಗೊಬ್ಬರದ ಶಕ್ತಿ ಕಡ್ಮೆ ಆದ್ಮೇಲೆ, ಬೇರು ಬಂದೇ ಬರುತ್ತೆ. ಆಮೇಲೆ ಚಿಗುರೆಲೆನೂ ಬರುತ್ತೆ. ಕರಿಬೇವಿನ ಗಿಡದಲ್ಲಿ ಈಗಿರೋ ಎಲ್ಲಾ ಎಲೆಗಳು ಉದ್ರುತಾವೆ. ಆಮೇಲೆನೇ ಜೊತೆಗೆ ಒಂದೊಂದೇ ಹೊಸ ಎಲೆ ಬರೋದು.

ಆದ್ರೂ ಮನಸ್ಸಿಗೆ ಸಮಾಧಾನ ಇರ್ಲಿಲ್ಲ. ಶೇಂಗ ಗಿಡಕ್ಕೆ ಹಾಕ್ತಿದ್ದನ್ನ ಗಮನಿಸಿದ್ದ ನಾನು, ಸುಣ್ಣವನ್ನೇ ಔಷಧಿ ಅಂತೇಳಿ ಊಹಿಸಿ, ಎಲ್ಲಾ ಗಿಡ್ಗಗಳಿಗೂ ಸುತ್ಲೂ ಸುಣ್ಣ ಹಾಕಿದೆ. ಮತ್ತೆ ಎಲೆನೆಲ್ಲ ಹಸಿ ಹಸಿ ಮಾಡಿ, ಎಲೆಗೂ ಸ್ವಲ್ಪ ಸುಣ್ಣ ಮೆತ್ತಿದೆ. ಯಾಕಂದ್ರೆ ರೋಗದ ಕೀಟಗಳು ಅಲ್ಲಿದ್ರೆ ಅವೂ ಸತ್ತು ಹೋಗ್ಲಿ ಅನ್ನೋ ಭಾವ್ನೆಯಾಗಿತ್ತು ನಂದು. :)

ಇಷ್ಟು ಮಾಡಿದ್ದು, ನೋಡಿದ ಮೂರ್ತ್ಯಪ್ಪ, ತುಂಬಾ ತಲೆ ಬಿಸಿ ಮಾಡ್ಕಂದಿದ್ದ. ಅದುಕ್ಕೆ ಗೊಬ್ರ, ಔಷಧಿ ಏನೂ ಬೇಡ ಅಂತ ಹೇಳಿದ್ನೆಲ್ಲಾ ಸಾವ್ಕಾರಾ. ಮತ್ಯಾಕೆ ಇದೆಲ್ಲ ಅಂತ ಕೇಳಿದ.

ಇಷ್ಟೆಲ್ಲಾ ಮಾಡಿದ್ರೂ ಹೊಸ ಚಿಗುರು ಬರ್ದೇ ಇದ್ದದ್ದನ್ನ ಗಮನಿಸಿ, ನನಿಗೆ ಕೆಟ್ಟ ಮೇಲೆ ಬುದ್ದಿ ಬಂತು ಅನ್ನೋ ಹಾಗಾಯ್ತು ಮತ್ತೆ ಅಂಗಾದ್ರೆ ಮೂರ್ತ್ಯಪ್ಪ, ಈ ಗುಣಿಲಿರೋ ಮಣ್ಣನ್ನೆಲ್ಲ ಬದಲ್ಸಿ ಇವತ್ತಿಂದ ಮತ್ತೆ ಬೇರೆ ಹೊಸ ಮಣ್ಣು ತಂದಾಕ್ಲ?

ಬೇಡ ಸಾವ್ಕಾರಾ, ನೀವು ಸ್ವಲ್ಪ ಅದಕ್ಕೆ ಟೈಮ್ ಕೊಡಿ ಸಾಕು.

ಮತ್ತೆ ಒಂದೆರ್ಡು ದಿನ ಕಾದೆ, ಆದ್ರೆ ಇನ್ನೂ ಚಿಗುರೆಲೇನೆ ಕಾಣಿಸ್ತಿಲ್ಲ, ಮೂರ್ತ್ಯಪ್ಪ ಇಲ್ದೆ ಇದ್ದಾಗ ಆಯಪ್ಪ ಹೇಳಿದ್ದೂ ನಿಜವ? ಈ ಕಡ್ಡಿಲಿ ನಿಜಕ್ಕೂ ಬೇರು ಬಂದಿರುತ್ತಾ? ಅಂತ ಪರೀಕ್ಷೆ ಮಾಡ್ಬೇಕು ಅಂತೇಳಿ, ಸ್ವಲ್ಪವೆ ಸರ್ಕಾರಿ ಗೊಬ್ರ ಹಾಕಿದ್ದ, ಗುಣಿಯಿಂದ ಒಂದು ಕಡ್ಡಿನ ಕಿತ್ತು ತಗ್ದು ನೋಡಿದರಾಯ್ತು ಅಂತ ಯೋಚ್ಸಿದೆ. ಹಾಗೇ ಮಾಡ್ದೆ. ಕಡ್ಡಿ ಕಿತ್ತು ಗಮನಿಸಿದೆ. ಅದ್ರಲ್ಲಿ ನಿಜಕ್ಕೂ ಬೇರು ಬರ್ತಾ ಇದ್ವು. ಅಜ್ಜಿಯ ನೆರೆ ಕೂದಲಿನ ಹಾಗೆ ಸಣ್ಣನೆಯ ಬಿಳಿ ಎಳೆಗಳು ಬರ್ತಿದ್ವು. ನೋಡಿ ಖುಷಿ ಆಯ್ತು, ಮತ್ತೆ ಆ ಕಡ್ಡಿನ ವಾಪಾಸ್ ನೆಟ್ಟೆ.

ಮುಂದಿನ ದಿನ ಮೂರ್ತ್ಯಪ್ಪನ ಹತ್ರ ಹೇಳ್ದೆ. ಮೂರ್ತ್ಯಪ್ಪ ನಿನ್ನೆ ನಾನು ಕಡ್ಡಿ ಕಿತ್ತು ನೋಡ್ದೆ, ನೀನೆಳ್ದಂಗೆ ಬೇರು ಬರ್ತಾ ಇವೆ. ಅಂದ್ರೆ ಇನ್ನು ಸ್ವಲ್ಪ ದಿನದ ಮೇಲೆ ಚಿಗುರೆಲೆ ಬರುತ್ತೆ ಅಲ್ವ?

ಬರುತ್ತೆ ಸಾವ್ಕಾರಾ, ಆದ್ರೆ ಈಗ ಮತ್ತೆ ತಿಪ್ಪೆ ಗೊಬ್ರ, ಸರ್ಕಾರಿ ಗೊಬ್ರ, ಸರ್ಕಾರಿ ಔಷಧಿ ಅಂತೆಲ್ಲ ತಂದು ಹಾಕ್ಬೇಡಿ. ಸ್ವಲ್ಪ ಚಿಗುರೆಲೆ ಬಂದ್ಮೇಲೆ ಏನಾದರೂ ಹಾಕಿ. ಉಪಯೋಗನೂ ಹಾಗುತ್ತೆ.

ಅಲ್ಲಿಂದ ಒಂದು ವಾರ - ಹದಿನೈದು ದಿನ, ಗಿಡಗಳ ಬಗ್ಗೆ ಹೆಚ್ಚು ತಲೆ ಕೇದಿಲ್ಕೊಳ್ಳಿಲ್ಲಾ.

ಅಷ್ಟೊತ್ತಿಗೆ ಒಂದಿನ ಅಮ್ಮ ಚಿಗುರೆಲೆ ಕಾಣಿಸಿ ಕೊಳ್ತಾ ಇರೋದನ್ನ ಗಮನಿಸಿದ್ರು, ಗಿಡಗಳಲ್ಲಿ ಹೊಸ ಚಿಗುರೆಲೆ ಬಂದಿದೆ ಅಂತ ಅವ್ರೇ ಬಂದು ನಂಗೆ ಹೇಳಿದ್ರು, ನಾನು ಹೋಗಿ ನೋಡ್ದೆ. ಸಣ್ಣ ಸಣ್ಣ ಚಿಗುರು ಸೂಕ್ಷ್ಮವಾಗಿ ಕಾಣಿಸ್ತಾ ಇದ್ವು. ಆವತ್ತೇ ಮೂರೂ ಗಿಡಗಳಿಗೆ ಸುತ್ತಲೂ ಬಿದಿರಿನ ಒಣ ಕಡ್ಡಿ ತಂದು ನೆಟ್ಟೆ, ಅದಕ್ಕೆ ತಂತಿ ಸುತ್ತಿ. ಬಿಗಿ ಭದ್ರತೆ ಮಾಡ್ಬಿಟ್ಟೆ. ಗಿಡನ ಮುಟ್ಬೇಕು ಅಂದ್ರೆ ಅಂದಕ್ಕೆ ಅಂತಾನೆ ಒಂದು ಚಿಕ್ಕ ಕಿಟಕಿ ಮಾಡಿದೆ.


ಅಲ್ಲಿಂದ ನಾನು ಇನ್ನೂ ಇಬ್ರನ್ನ ನನ್ನ ಜೊತೆ ಸೇರಿಸ್ಕಂದೆ. ಗೋಡೆಯ ಮಟ್ಟ ನೋಡೋಕ್ಕೆ ಅಂತ ತರಗಾರರು ಒಂದು ಸಣ್ಣ ಗಾತ್ರದ ಪೈಪನ್ನ ಉಪಯೋಗಿಸ್ತಾ ಇದ್ರು. ಅಂತ ಒಂದು ಹಳೇ ಪೈಪ್ ಉಪ್ಯೂಗಕ್ಕೆ ಬರಲ್ಲ ಅಂತ ಬಿಸಾಡಿದ್ರು. ಗಿಡಕ್ಕೆ ನೀರಾಕ್ಕೊಕ್ಕೆ ಅಂತ ಒಂದು ಲೀಟರಿನ ಡಬ್ಬದ ಕೆಳಗೆ ಒಂದು ರಂದ್ರ ಮಾಡಿ, ಈ ಪೈಪ್ನ ಒಂದೆರ್ಡು ಅಡಿ ಉದ್ದ ಕತ್ತರಿಸಿ ತಂದು ಸಿಗ್ಸಿದೆ. ಪಕ್ಕದ ತೊಟ್ಟಿಯಿಂದ ಡಬ್ಬದಲ್ಲಿ ನೀರ್ತಂದು, ಆ ಪೈಪ್ ಮೂಲ್ಕ ಗಿಡಕ್ಕೆ ಬಿದಿರಿನ ಕಡ್ಡಿ ಸಂದಿಯಿಂದ ನೀರಾಕೊದೇ ಒಂದು ಕುತೂಹಲವಾಗ್ಬಿಡ್ತು. ನಮ್ಗೆ ಆವತ್ತು ಇದೆ ಒಂದು ದೊಡ್ಡ ಇಂಜಿನೀರಿಂಗ್ ಅನ್ನಿಸಿತ್ತು.

~~~~ (*) ~~~~

ಮುಂದೆ ಕನಗಲ ಹೂವು ನಮ್ಮ ಮನೆಗೆ ಅಷ್ಟೇ ಅಲ್ಲಾ, ನಮ್ಮೂರಿನ ದೇವಸ್ಥಾನಗಳ ಪೂಜಾರಿಗಳ ಮನಗೆ ಮತ್ತೆ ನಮ್ಮೂರಿನ ದೇವಸ್ಥಾನಗಳಿಗೂ ಹೋಗಿ ಮುಟ್ಟಿತ್ತು. ದೇವಸ್ಥಾನದ ಪೂಜಾರಿಗಳೇ ದಿನ ಬಂದು ಹೂವು ಕಿತ್ಗಂಡು ಹೋಗ್ತಿದ್ರು. ಆದ್ರೆ ಕರಿಬೇವಿನ ಗಿಡ ಹೆಚ್ಚು ಎತ್ತರ ಬೆಳಿಲೆ ಇಲ್ಲಾ. ಎರಡ್ಮೂರು ವರ್ಷ ಆದ್ಮೇಲೆ ಸತ್ತು ಹೋತು. ಕನಗಲ ಗಿಡ ತುಂಬಾ ದೊಡ್ದಾಗಿತ್ತು. ಮತ್ತೆ ಅದ್ರ ಪಕ್ಕದಲ್ಲೇ ಇದ್ದ ಕೊಳವೆ ಬಾವಿಯ ಪಂಪ್ ಕೂಡ ಹಾಗಿನ್ದಾಗೆ ಕೆಟ್ಟು ನಿಲ್ತಿತ್ತು. ಇದರ ರಿಪೇರಿ ಮಾಡೋ ಸಂದರ್ಬದಲ್ಲಿ ಪಕ್ಕದಲ್ಲಿದ್ದ ಗಿಡ ತುಂಬಾ ಅಡ್ಡಿ ಮಾಡುತ್ತೆ ಅಂತಾ, ಗಿಡನ ಅಲ್ಲಿಂದ ಎತ್ತಂಗಡಿ ಮಾಡಿದ್ದಾರೆ. ಆದ್ರೆ ಅಮ್ಮ ಈಗ್ಲೂ ಮತ್ತೊಂದು ಕನಗಲ ಗಿಡನ ಅಲ್ಲೇ ಹತ್ರದಲ್ಲೇ ಬೆಳ್ಸಿದ್ದಾರೆ. ಈಗ ಅದೂ ನಮ್ಮ ಬೀದಿ ತುಂಬಾ ವರ್ಲ್ಡ್ ಫೇಮಸ್.

15 ಕಾಮೆಂಟ್‌ಗಳು:

ಸುಪ್ತವರ್ಣ ಹೇಳಿದರು...

ಒಂದು ಕಣಗಲ ಗಿಡ ನೆಟ್ಟಿದ್ದನ್ನ ಎಷ್ಟು ಚೆನ್ನಾಗಿ ಬರ್ದಿದೀರ್ರಿ! ಅಂದ ಹಾಗೆ ಎಲ್ಲಾ ಕಡ್ಡಿಗಳೂ ಗಿಡವಾಗಿ ಬೆಳೆದ್ವಾ ?

ಸವಿಗನಸು ಹೇಳಿದರು...

ಕಣಗಲ ಹೂವು ಶಿವನಿಗೆ ಶ್ರೇಷ್ಟವಂತೆ ....
ಕಣಗಲ ಗಿಡದ ಬಗೆ ಬಹಳ ಚೆನ್ನಾಗಿ ಹೇಳಿದ್ದೀರ...

ಚುಕ್ಕಿಚಿತ್ತಾರ ಹೇಳಿದರು...

ಲೋದ್ಯಾಶಿಯವರೆ...
ನಿಮ್ಮ ಕಣಗಿಲ ನೆಟ್ಟ ಸ೦ಬ್ರಮ ಚೆನ್ನಾಗಿ ವರ್ಣಿಸಿದ್ದೀರ.
ನಾನು ಸಣ್ಣವಳಿದ್ದಾಗ ಏನಾದರೂ ಗಿಡ ನೆಟ್ಟು ದಿನಾ ಬೇರು ಬ೦ದಿದೆಯಾ.... ಅ೦ತ ಕಿತ್ತು ನೋಡುತ್ತಿದ್ದುದು ನೆನಪಿಗೆ ಬ೦ತು.... ಹೀಗೆ ಬರೆಯುತ್ತಿರಿ...

ಸಾಗರದಾಚೆಯ ಇಂಚರ ಹೇಳಿದರು...

ಒಂದು ಗಿಡ ನೆಟ್ಟ ಸಂಭ್ರಮ ತುಂಬಾ ಸೊಗಸಾಗಿ ಬರೆದಿದ್ದಿರಾ,
ಗಿಡದ ಬಗೆಗಿನ ಪ್ರೀತಿ ನಮ್ಮಲ್ಲಿ ಮೊಳೆಯಬೇಕು
ಕಾಡನ್ನು ಬೆಳೆಸಿದರೆ ಮಾತ್ರ ನಾಡನ್ನು ಉಳಿಸಲು ಸಾದ್ಯ ಅನ್ನೋದು ತಿಳಿಬೇಕು

Me, Myself & I ಹೇಳಿದರು...

ಗಿಡದ ಬೆಳವಣಿಗೆಯನ್ನ ಓದಿ ಸಂಭ್ರಮಿಸಿದ ಅತ್ಮೀಯರಿಗೆಲ್ಲಾ ಧನ್ಯವಾದಗಳು.

Me, Myself & I ಹೇಳಿದರು...

ಆತ್ಮೀಯ ಸುಪ್ತವರ್ಣರವರೆ,
ಹೌದು ಅದ್ರಲ್ಲಿ ಮೂರೂ ಕಡ್ಡಿ ಚಿಗುರು ಬಂದಿದ್ದು ಮಾತ್ರ. :)

Me, Myself & I ಹೇಳಿದರು...

ಆತ್ಮೀಯ ಮಹೇಶರವರೆ,
ನಿಜ,,, ಕಾಕತಾಳೀಯ ವೆಂಬಂತೆ ಮೊದ ಮೊದ್ಲು ಹೋಗಿ ಸೇರ್ತಿದ್ದು ಈಶ್ವರನ ಮುಡಿಯನ್ನೇ... ನಂತರವೇ ಇತರ ದೇವಸ್ತಾನದ ಪೂಜಾರಿಗಳು ಬರೋದು ಶುರು ಮಾಡಿದ್ದು. ಅಷ್ಟೇ ಅಲ್ಲದೆ ನಮ್ಮ ಕಣದಲ್ಲೇ ಬಿಲ್ವ ಪತ್ರೆಯ ಮರ ಸಹ ಇದೆ...ಅತೀ ಹಳೆಯ ಮರ..ಇದು..ಈಶ್ವರನಿಗೆ ಇದೂ ಸಹ ಶ್ರೇಷ್ಠ ಅಲ್ಲವೇ?

Me, Myself & I ಹೇಳಿದರು...

ಆತ್ಮೀಯ ಚುಕ್ಕಿಚಿತ್ತಾರ,
ಇದನ್ನ ಬರ್ದು ನಿಮ್ಮೊಂದಿಗೆ ಸಂಭ್ರಮಿಸೋ ಭಾಗ್ಯ ಅಷ್ಟೇ ನಮ್ಮದು...ಆ ಬಾಲ್ಯ ಮಾತ್ರ ನಮ್ಮ ಜೀವನದಲ್ಲಿ ಮುಗಿದ ಅಧ್ಯಾಯವಷ್ಟೇ! ಅಲ್ಲವೇ?

Me, Myself & I ಹೇಳಿದರು...

ಆತ್ಮೀಯ ಗುರು..
ಇನ್ನು ಒಂದು ಕಥೆ ಇದೆ... ಬೇಕಾ?

ಗೋಪಾಲ್ ಮಾ ಕುಲಕರ್ಣಿ ಹೇಳಿದರು...

ಆತ್ಮೀಯ ಲೋದ್ಯಶಿಯವರೇ
ಸಹಜ ಕ್ರಿಯೆ ಏನೆಂದು ತಿಳಿಸಿಕೊಟ್ಟ ನಿಮ್ಮ ಮುರ್ತ್ಯಪ್ಪ. ನಿಮ್ಮ ಬರಹ ತುಂಬಾ ಚೆನ್ನಾಗಿದೆ. ಹೀಗೆ ಇನ್ನಷ್ಟು ಲೇಖನಗಳು ಚಿಗುರುವಡಯಲಿ.

shivu.k ಹೇಳಿದರು...

ಅಂತೂ ಒಂದು ಕಣಗಲ ಗಿಡವನ್ನು ಬೆಳೆಸಲು ಎಷ್ಟೆಲ್ಲಾ ಕಷ್ಟಪಟ್ಟಿದ್ದೀರಿ. ಅದರ ವಿವರಣೆಯನ್ನು ಓದುತ್ತಿದ್ದಾಗ ಬಹುಶಃ ಅದು ಚಿಗುರದೆ ಹೋಗಿರಬೇಕು ಅಂದುಕೊಂಡೆ. ಆದ್ರೆ ಕೊನೆಗೆ ಅದು ಫೇಮಸ್ ಆಗುವ ಮಟ್ಟಿಗೆ ಬೆಳೆದಿದೆ ಅಂದ ಮೇಲೆ ನಿಮ್ಮ ಸಾಧನೆ ಸಾರ್ಥಕವಾಯ್ತು.

ಜಲನಯನ ಹೇಳಿದರು...

ಲೋದ್ಯಾಶಿಯವರೇ..ಏನ್ರೀ ಮರೀಚಿಕೆ ಇದು..??!!
ಬೆಣ್ನೆ ದೋಸೆ...ಅಹಹ...ಬಿಸಿ ಬಿಸಿ ದೋಸೆ ಮೇಲೆ..ಮೆತ್ತ ಮೆತ್ತ- ಬೆಣ್ನೆ ಇಟ್ಟಿರ್ತೀರ ಅಮ್ತ ಬಂದ್ರೆ...??!! ಹೋಗ್ಲಿ ಬಿಡಿ ಮಾತಲ್ಲೀ ತಿನ್ಸಿದ್ದೀರಿ..ಚನ್ನ..ಬರವಣಿಗೆ...

Me, Myself & I ಹೇಳಿದರು...

ಆತ್ಮೀಯ ಗೋಪಾಲರೇ

ನಿಜ, ಇಲ್ಲಿ ಸಸಿ ಬೇರು ಚಿಗುರ್ ಬರೋದು ಸಹಜ ಕ್ರಿಯೇ , ಅಂತೆಯೇ ಬಾಲ್ಯದಲ್ಲಿ ಇಂತಹ ಕೂತೂಹಲವೂ ಸಹಜವಾದದ್ದು. ಏನಂತೀರ?

ಪ್ರೋತ್ಸಾಹಕ್ಕೆ ಮತ್ತೊಮ್ಮೆ ಧನ್ಯವಾದಗಳು

Me, Myself & I ಹೇಳಿದರು...

ಆತ್ಮೀಯ ಶಿವೂರವರೆ,
ಹ.ಹ. ಚಿಗುರು ಬರೋ ತನ ಕಾಯ್ತಿದ್ದ ಆ ಗಳಿಗೆಗಳೇ ಹಾಗಿದ್ದವು. ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು

Me, Myself & I ಹೇಳಿದರು...

ಆತ್ಮೀಯ ಜಲನಯನರವ್ರೆ
ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
ನಿಮ್ಮಗಳಲ್ಲೆರ ಬ್ಲಾಗಿಗೆ ಬೇಟಿ ನೀಡೋ ಕಾರ್ಯವನ್ನ ಇಷ್ಟರಲ್ಲೇ ಪುನರಾರಂಬಿಸ್ತೀನಿ. :)

blogspot add widget