ಬಾಲ್ಯ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಬಾಲ್ಯ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಸೋಮವಾರ, ನವೆಂಬರ್ 23, 2009

ನಮ್ಮ ಬೀದಿ ತುಂಬಾ ವರ್ಲ್ಡ್ ಫೇಮಸ್

ಕಣದ ಮನೆಯಲ್ಲಿ ಕಣಗಲ ಗಿಡವನ್ನ ಬೆಳೆಸಿದ್ದರ ಕಥೆಯ ಎರಡನೇ ಕಂತು ಇವತ್ತು ಹಾಕಿದ್ದೇನೆ...ಮೊದಲ ಕಂತನ್ನ ಈಗಾಗಲೇ ಓದಿಲ್ಲದಿದ್ದರೆ ಇಲ್ಲಿ ಓದಿ.

~~~

ಮೂರ್ತ್ಯಪ್ಪ ಇವತ್ತಿಗೆ ನಾಲ್ಕು ದಿನ ಆತು, ಆದ್ರೆ ಇನ್ನೂ ಚಿಗುರು ಕಾಣಿಸ್ತಿಲ್ಲ. ನಾನು ಸ್ವಲ್ಪ ಸರ್ಕಾರಿ ಗೊಬ್ರ ಹಾಕ್ತೀನಿ.

ಅಯ್ಯೋ! ಅದಕ್ಕೆ ಗೊಬ್ರ ಬೇಡ ಸಾವ್ಕಾರಾ, ಅದೆಲ್ಲ ಚಿಗುರೋಡೆಯುತ್ತೆ. ನಿಂಗೆ ಗೊತ್ತಾಗಲ್ಲ. ಈಗ್ಲೇ ಸರ್ಕಾರಿ ಗೊಬ್ರ ಹಾಕಿದ್ರೆ ಅದ್ರ ಎಳೆ ಬೇರು ಸುಟ್ಟು ಹೋಗುತ್ತೆ ಅಷ್ಟೇ. ಅದ್ರ ಪಾಡಿಗೆ ಅದನ್ನ ಬಿಟ್ಟು ನಿಮ್ಮ ಪಾಡಿಗೆ ನೀವು ಸ್ವಲ್ಪ ಇರ್ಬಾರ್ದೆ.

ಮೂರ್ತ್ಯಪ್ಪನ ಮಾತು ಲೆಕ್ಕಕ್ಕೆ ತೆಗಳ್ದೆ, ಪರೀಕ್ಷೆ ಮಾಡಣ ಅಂತ ಯೋಚ್ಸಿ, ಒಂದು ಬೊಗಸೆ ಪೂರ್ತಿ ಸರ್ಕಾರಿ ಗೊಬ್ರಾನೂ ತಗಮ್ಬಂದೆ. ಆದ್ರೆ ಎಲ್ಲಾ ಗುಣಿಗೂ ಸಮವಾಗಿ ಹಾಕ್ಲಿಲ್ಲ. ಒಂದು ಗುಣಿಗೆ ಜಾಸ್ತಿ ಹಾಕಿ, ಇನ್ನೊಂದಕ್ಕೆ ಸ್ವಲ್ಪವೆ ಸ್ವಲ್ಪ ಹಾಕಿದ್ದೆ. ಕರಿಬೇವಿನ ಗಿಡಕ್ಕೂ ಸ್ವಲ್ಪ ಹಾಕಿದೆ.

ಮತ್ತೊಂದೆರಡು ದಿನ ಬಿಟ್ಟು ಬಂದೆ, ಕಡ್ಡಿ ನೆಟ್ಟಿದ್ದ ಗುಂಡಿ ಮುಂದೆ ಕುಂತೆ, ಮೂರ್ತ್ಯಪ್ಪನೂ ನನ್ನಿಂದೆ ಇದ್ದ. ಕಡ್ಡಿಯಲ್ಲಿ ಇನ್ನೂ ಚಿಗುರಿಲೇನೇ ಕಾಣಿಸ್ತಿಲ್ಲ. ಕರಿಬೇವಿನ ಗಿಡದಲ್ಲಿ ಕೆಳಗಿನ ಎಲೆಗಳು ಒಣಗ್ತಾ ಬರ್ತಿದ್ವು.ನಾನು ಬೇಸರದಿಂದ ಮೂರ್ತ್ಯಪ್ಪನ ಕಡೆ ನೋಡ್ದೆ.

ನೋಡು ಮೂರ್ತ್ಯಪ್ಪ, ಸಾಕಷ್ಟು ನೀರಾಕಿದ್ದೀನಿ, ಬೇರೆ ಬೇರೆ ಮಣ್ಣು ಹಾಕಿದ್ದೀನಿ, ತಿಪ್ಪೆ ಗೊಬ್ರಾನೂ ಹಾಕಿದ್ದೀನಿ, ಕೊನೆಗೆ ಇರ್ಲಿ ಅಂತ ಸ್ವಲ್ಪ ಸರ್ಕಾರಿ ಗೊಬ್ರಾನೂ ಹಾಕಿದ್ದೀನಿ. ಆದ್ರೆ ಇನ್ನೂ ಚಿಗುರೇ ಕಾಣಿಸ್ತಿಲ್ಲ. ನೀನು ಹೇಳಿದ್ದೆ ಒಂದು ವಾರ ಆದ್ಮೇಲೆ ಚಿಗುರು ಬರುತ್ತೆ ಅಂತ, ಈಗ ನೋಡು ಒಂದ್ವಾರ ಆತು, ಇನ್ನೂ ಕಡ್ಡಿ, ಕಡ್ಡಿನೇ ಇದೆ, ಸಸಿನೇ ಹಾಗಿಲ್ಲಾ. ಕರಿಬೇವಿನ ಎಲೆಗಳು ಕೂಡ ಒಣಗ್ತಾ ಇವೆ. ಸ್ವಲ್ಪ ಔಷಧಿ ತಂದು ಈ ಕರಿಬೇವಿನ ಗಿಡಕ್ಕೆ ಸ್ಪ್ರೇ ಮಾಡ್ತೀನಿ.

ಸಾವ್ಕಾರಾ, ನಾನಾಗಲೇ ಹೇಳ್ದೆ ನಿಮ್ಗೆ, ಅದಿನ್ನೂ ಮೊದ್ಲು ಬೇರು ಬಿಡ್ಬೇಕು ಆಮೇಲೆ ಚಿಗುರು ಬರುತ್ತೆ ಅಂತ, ನೀವು ನನ್ನ ಮಾತು ಲೆಕ್ಕಕ್ಕೆ ತಗಳ್ದೇನೆ ಸರ್ಕಾರಿ ಗೊಬ್ರ ಹಾಕಿದ್ರಿ, ಈಗ ಇದ್ರ ಬೇರು ಕೂಡ ಸುಟ್ಟು ಹೋಗಿದೆ ಅನ್ಸುತ್ತೆ. ಆದ್ರೂ ಏನೂ ತಲೆ ಕೆಡಿಸ್ಕೂ ಬೇಡ್ರಿ, ಇನ್ನೂ ಸ್ವಲ್ಪ ದಿನ ಟೈಮ್ ಕೊಡಿ, ಈ ಮಣ್ಣಲ್ಲಿ ಸರ್ಕಾರಿ ಗೊಬ್ಬರದ ಶಕ್ತಿ ಕಡ್ಮೆ ಆದ್ಮೇಲೆ, ಬೇರು ಬಂದೇ ಬರುತ್ತೆ. ಆಮೇಲೆ ಚಿಗುರೆಲೆನೂ ಬರುತ್ತೆ. ಕರಿಬೇವಿನ ಗಿಡದಲ್ಲಿ ಈಗಿರೋ ಎಲ್ಲಾ ಎಲೆಗಳು ಉದ್ರುತಾವೆ. ಆಮೇಲೆನೇ ಜೊತೆಗೆ ಒಂದೊಂದೇ ಹೊಸ ಎಲೆ ಬರೋದು.

ಆದ್ರೂ ಮನಸ್ಸಿಗೆ ಸಮಾಧಾನ ಇರ್ಲಿಲ್ಲ. ಶೇಂಗ ಗಿಡಕ್ಕೆ ಹಾಕ್ತಿದ್ದನ್ನ ಗಮನಿಸಿದ್ದ ನಾನು, ಸುಣ್ಣವನ್ನೇ ಔಷಧಿ ಅಂತೇಳಿ ಊಹಿಸಿ, ಎಲ್ಲಾ ಗಿಡ್ಗಗಳಿಗೂ ಸುತ್ಲೂ ಸುಣ್ಣ ಹಾಕಿದೆ. ಮತ್ತೆ ಎಲೆನೆಲ್ಲ ಹಸಿ ಹಸಿ ಮಾಡಿ, ಎಲೆಗೂ ಸ್ವಲ್ಪ ಸುಣ್ಣ ಮೆತ್ತಿದೆ. ಯಾಕಂದ್ರೆ ರೋಗದ ಕೀಟಗಳು ಅಲ್ಲಿದ್ರೆ ಅವೂ ಸತ್ತು ಹೋಗ್ಲಿ ಅನ್ನೋ ಭಾವ್ನೆಯಾಗಿತ್ತು ನಂದು. :)

ಇಷ್ಟು ಮಾಡಿದ್ದು, ನೋಡಿದ ಮೂರ್ತ್ಯಪ್ಪ, ತುಂಬಾ ತಲೆ ಬಿಸಿ ಮಾಡ್ಕಂದಿದ್ದ. ಅದುಕ್ಕೆ ಗೊಬ್ರ, ಔಷಧಿ ಏನೂ ಬೇಡ ಅಂತ ಹೇಳಿದ್ನೆಲ್ಲಾ ಸಾವ್ಕಾರಾ. ಮತ್ಯಾಕೆ ಇದೆಲ್ಲ ಅಂತ ಕೇಳಿದ.

ಇಷ್ಟೆಲ್ಲಾ ಮಾಡಿದ್ರೂ ಹೊಸ ಚಿಗುರು ಬರ್ದೇ ಇದ್ದದ್ದನ್ನ ಗಮನಿಸಿ, ನನಿಗೆ ಕೆಟ್ಟ ಮೇಲೆ ಬುದ್ದಿ ಬಂತು ಅನ್ನೋ ಹಾಗಾಯ್ತು ಮತ್ತೆ ಅಂಗಾದ್ರೆ ಮೂರ್ತ್ಯಪ್ಪ, ಈ ಗುಣಿಲಿರೋ ಮಣ್ಣನ್ನೆಲ್ಲ ಬದಲ್ಸಿ ಇವತ್ತಿಂದ ಮತ್ತೆ ಬೇರೆ ಹೊಸ ಮಣ್ಣು ತಂದಾಕ್ಲ?

ಬೇಡ ಸಾವ್ಕಾರಾ, ನೀವು ಸ್ವಲ್ಪ ಅದಕ್ಕೆ ಟೈಮ್ ಕೊಡಿ ಸಾಕು.

ಮತ್ತೆ ಒಂದೆರ್ಡು ದಿನ ಕಾದೆ, ಆದ್ರೆ ಇನ್ನೂ ಚಿಗುರೆಲೇನೆ ಕಾಣಿಸ್ತಿಲ್ಲ, ಮೂರ್ತ್ಯಪ್ಪ ಇಲ್ದೆ ಇದ್ದಾಗ ಆಯಪ್ಪ ಹೇಳಿದ್ದೂ ನಿಜವ? ಈ ಕಡ್ಡಿಲಿ ನಿಜಕ್ಕೂ ಬೇರು ಬಂದಿರುತ್ತಾ? ಅಂತ ಪರೀಕ್ಷೆ ಮಾಡ್ಬೇಕು ಅಂತೇಳಿ, ಸ್ವಲ್ಪವೆ ಸರ್ಕಾರಿ ಗೊಬ್ರ ಹಾಕಿದ್ದ, ಗುಣಿಯಿಂದ ಒಂದು ಕಡ್ಡಿನ ಕಿತ್ತು ತಗ್ದು ನೋಡಿದರಾಯ್ತು ಅಂತ ಯೋಚ್ಸಿದೆ. ಹಾಗೇ ಮಾಡ್ದೆ. ಕಡ್ಡಿ ಕಿತ್ತು ಗಮನಿಸಿದೆ. ಅದ್ರಲ್ಲಿ ನಿಜಕ್ಕೂ ಬೇರು ಬರ್ತಾ ಇದ್ವು. ಅಜ್ಜಿಯ ನೆರೆ ಕೂದಲಿನ ಹಾಗೆ ಸಣ್ಣನೆಯ ಬಿಳಿ ಎಳೆಗಳು ಬರ್ತಿದ್ವು. ನೋಡಿ ಖುಷಿ ಆಯ್ತು, ಮತ್ತೆ ಆ ಕಡ್ಡಿನ ವಾಪಾಸ್ ನೆಟ್ಟೆ.

ಮುಂದಿನ ದಿನ ಮೂರ್ತ್ಯಪ್ಪನ ಹತ್ರ ಹೇಳ್ದೆ. ಮೂರ್ತ್ಯಪ್ಪ ನಿನ್ನೆ ನಾನು ಕಡ್ಡಿ ಕಿತ್ತು ನೋಡ್ದೆ, ನೀನೆಳ್ದಂಗೆ ಬೇರು ಬರ್ತಾ ಇವೆ. ಅಂದ್ರೆ ಇನ್ನು ಸ್ವಲ್ಪ ದಿನದ ಮೇಲೆ ಚಿಗುರೆಲೆ ಬರುತ್ತೆ ಅಲ್ವ?

ಬರುತ್ತೆ ಸಾವ್ಕಾರಾ, ಆದ್ರೆ ಈಗ ಮತ್ತೆ ತಿಪ್ಪೆ ಗೊಬ್ರ, ಸರ್ಕಾರಿ ಗೊಬ್ರ, ಸರ್ಕಾರಿ ಔಷಧಿ ಅಂತೆಲ್ಲ ತಂದು ಹಾಕ್ಬೇಡಿ. ಸ್ವಲ್ಪ ಚಿಗುರೆಲೆ ಬಂದ್ಮೇಲೆ ಏನಾದರೂ ಹಾಕಿ. ಉಪಯೋಗನೂ ಹಾಗುತ್ತೆ.

ಅಲ್ಲಿಂದ ಒಂದು ವಾರ - ಹದಿನೈದು ದಿನ, ಗಿಡಗಳ ಬಗ್ಗೆ ಹೆಚ್ಚು ತಲೆ ಕೇದಿಲ್ಕೊಳ್ಳಿಲ್ಲಾ.

ಅಷ್ಟೊತ್ತಿಗೆ ಒಂದಿನ ಅಮ್ಮ ಚಿಗುರೆಲೆ ಕಾಣಿಸಿ ಕೊಳ್ತಾ ಇರೋದನ್ನ ಗಮನಿಸಿದ್ರು, ಗಿಡಗಳಲ್ಲಿ ಹೊಸ ಚಿಗುರೆಲೆ ಬಂದಿದೆ ಅಂತ ಅವ್ರೇ ಬಂದು ನಂಗೆ ಹೇಳಿದ್ರು, ನಾನು ಹೋಗಿ ನೋಡ್ದೆ. ಸಣ್ಣ ಸಣ್ಣ ಚಿಗುರು ಸೂಕ್ಷ್ಮವಾಗಿ ಕಾಣಿಸ್ತಾ ಇದ್ವು. ಆವತ್ತೇ ಮೂರೂ ಗಿಡಗಳಿಗೆ ಸುತ್ತಲೂ ಬಿದಿರಿನ ಒಣ ಕಡ್ಡಿ ತಂದು ನೆಟ್ಟೆ, ಅದಕ್ಕೆ ತಂತಿ ಸುತ್ತಿ. ಬಿಗಿ ಭದ್ರತೆ ಮಾಡ್ಬಿಟ್ಟೆ. ಗಿಡನ ಮುಟ್ಬೇಕು ಅಂದ್ರೆ ಅಂದಕ್ಕೆ ಅಂತಾನೆ ಒಂದು ಚಿಕ್ಕ ಕಿಟಕಿ ಮಾಡಿದೆ.


ಅಲ್ಲಿಂದ ನಾನು ಇನ್ನೂ ಇಬ್ರನ್ನ ನನ್ನ ಜೊತೆ ಸೇರಿಸ್ಕಂದೆ. ಗೋಡೆಯ ಮಟ್ಟ ನೋಡೋಕ್ಕೆ ಅಂತ ತರಗಾರರು ಒಂದು ಸಣ್ಣ ಗಾತ್ರದ ಪೈಪನ್ನ ಉಪಯೋಗಿಸ್ತಾ ಇದ್ರು. ಅಂತ ಒಂದು ಹಳೇ ಪೈಪ್ ಉಪ್ಯೂಗಕ್ಕೆ ಬರಲ್ಲ ಅಂತ ಬಿಸಾಡಿದ್ರು. ಗಿಡಕ್ಕೆ ನೀರಾಕ್ಕೊಕ್ಕೆ ಅಂತ ಒಂದು ಲೀಟರಿನ ಡಬ್ಬದ ಕೆಳಗೆ ಒಂದು ರಂದ್ರ ಮಾಡಿ, ಈ ಪೈಪ್ನ ಒಂದೆರ್ಡು ಅಡಿ ಉದ್ದ ಕತ್ತರಿಸಿ ತಂದು ಸಿಗ್ಸಿದೆ. ಪಕ್ಕದ ತೊಟ್ಟಿಯಿಂದ ಡಬ್ಬದಲ್ಲಿ ನೀರ್ತಂದು, ಆ ಪೈಪ್ ಮೂಲ್ಕ ಗಿಡಕ್ಕೆ ಬಿದಿರಿನ ಕಡ್ಡಿ ಸಂದಿಯಿಂದ ನೀರಾಕೊದೇ ಒಂದು ಕುತೂಹಲವಾಗ್ಬಿಡ್ತು. ನಮ್ಗೆ ಆವತ್ತು ಇದೆ ಒಂದು ದೊಡ್ಡ ಇಂಜಿನೀರಿಂಗ್ ಅನ್ನಿಸಿತ್ತು.

~~~~ (*) ~~~~

ಮುಂದೆ ಕನಗಲ ಹೂವು ನಮ್ಮ ಮನೆಗೆ ಅಷ್ಟೇ ಅಲ್ಲಾ, ನಮ್ಮೂರಿನ ದೇವಸ್ಥಾನಗಳ ಪೂಜಾರಿಗಳ ಮನಗೆ ಮತ್ತೆ ನಮ್ಮೂರಿನ ದೇವಸ್ಥಾನಗಳಿಗೂ ಹೋಗಿ ಮುಟ್ಟಿತ್ತು. ದೇವಸ್ಥಾನದ ಪೂಜಾರಿಗಳೇ ದಿನ ಬಂದು ಹೂವು ಕಿತ್ಗಂಡು ಹೋಗ್ತಿದ್ರು. ಆದ್ರೆ ಕರಿಬೇವಿನ ಗಿಡ ಹೆಚ್ಚು ಎತ್ತರ ಬೆಳಿಲೆ ಇಲ್ಲಾ. ಎರಡ್ಮೂರು ವರ್ಷ ಆದ್ಮೇಲೆ ಸತ್ತು ಹೋತು. ಕನಗಲ ಗಿಡ ತುಂಬಾ ದೊಡ್ದಾಗಿತ್ತು. ಮತ್ತೆ ಅದ್ರ ಪಕ್ಕದಲ್ಲೇ ಇದ್ದ ಕೊಳವೆ ಬಾವಿಯ ಪಂಪ್ ಕೂಡ ಹಾಗಿನ್ದಾಗೆ ಕೆಟ್ಟು ನಿಲ್ತಿತ್ತು. ಇದರ ರಿಪೇರಿ ಮಾಡೋ ಸಂದರ್ಬದಲ್ಲಿ ಪಕ್ಕದಲ್ಲಿದ್ದ ಗಿಡ ತುಂಬಾ ಅಡ್ಡಿ ಮಾಡುತ್ತೆ ಅಂತಾ, ಗಿಡನ ಅಲ್ಲಿಂದ ಎತ್ತಂಗಡಿ ಮಾಡಿದ್ದಾರೆ. ಆದ್ರೆ ಅಮ್ಮ ಈಗ್ಲೂ ಮತ್ತೊಂದು ಕನಗಲ ಗಿಡನ ಅಲ್ಲೇ ಹತ್ರದಲ್ಲೇ ಬೆಳ್ಸಿದ್ದಾರೆ. ಈಗ ಅದೂ ನಮ್ಮ ಬೀದಿ ತುಂಬಾ ವರ್ಲ್ಡ್ ಫೇಮಸ್.

ಬುಧವಾರ, ನವೆಂಬರ್ 18, 2009

ಕಡ್ಡಿ, ಕಡ್ಡಿನೇ ಇದೆ, ಹೊಸ ಚಿಗುರೇ ಬಂದಿಲ್ಲಾ?

ಹವ್ಯಾಸಕ್ಕೆ ಇರ್ಲಿ ಅಂತ ಇನ್ನೊಂದು ಕೂತೂಹಲವಾದ ಕಾರ್ಯದಲ್ಲಿ ನನ್ನನ್ನ ನಾನು ತೊಡಗಿಸ್ಕೋಡ್ಡಿದ್ದೀನಿ. ಆದು ಏನೂ ಅಂತ ನಿಮ್ಗೆಲ್ಲ ಇಷ್ಟರಲ್ಲೇ ತಿಳಿಸ್ತೀನಿ. ಈ ನಡುವೆ ಹೊಸ ಬರಹವನ್ನ ಬರಿಯೊಕ್ಕಾಗ್ಲಿ ಅಥ್ವ ನಿಮ್ಮಗಳ ಬರಹಗಳನ್ನ ಓದೋದಕ್ಕಾಗ್ಲಿ ನನಗೆ ಪುರುಸೊತ್ತಾಗ್ತಾ ಇಲ್ಲ. ಆದ್ರೆ ಬಿಡುವು ಮಾಡ್ಕೋಂಡು ಮುಂದಿನ ಹದಿನೈದು ದಿನಗಳಲ್ಲಿ ಬ್ಲಾಗ್ನಲ್ಲಿ ಯಥಾ ಪ್ರಕಾರ ಕಾಣಿಸ್ಲೋಳ್ತೀನಿ. ಇಷ್ಟು ಮಾತ್ರ ಹೇಳಿ ಹೋದ್ರೆ ಹೇಗೆ? ಅದಕ್ಕೇಂತ ಈಗಾಗ್ಲೇ ಇಂತಹ ಒತ್ತಡದ ಸಂದರ್ಭಗಳಿಗೆ ಇರ್ಲಿ ಅಂತ ಬರೆದಿಟ್ಟಿದ್ದ ಬರಹವೊಂದನ್ನ ಇಲ್ಲಿ ಇವತ್ತು ಹಾಕಿರ್ತೀನಿ. ಅಮ್ಮ ಅಪ್ಪನ ನಡುವೆಯ ಸಂಭಾಷಣೆಯೊಂದಿಗೆ ಬರಹ ಆರಂಬವಾಗುತ್ತೆ.
~~~~ (*) ~~~~
ಮನೆ ಹಳೆದಾಯ್ತು, ಬೇಗ ಹೊಸ್ಮನೆ ಕಟ್ಸೋ ವ್ಯವಸ್ಥೆ ಮಾಡಿ.

ಆಯ್ತು, ಮುಂದಿನ ವರ್ಷದಿಂದ ಮನೆ ಕಟ್ಸಾಣ, ಈ ವರ್ಷನೇ ಬೇಡ!

ಮನೆ ಕಟ್ಸಿದ್ರೆ, ಇಲ್ಲಿ ಕಟ್ಸೋದು ಬೇಡ ಮತ್ತೆ. ಕಣದಲ್ಲಿ ಕಟ್ಸಣ, ಇಲ್ಲಿ ಜಾಗ ಸಾಕಾಗಲ್ಲ.

ಆಯ್ತು, ಹೊಸ್ಕಣದಲ್ಲಿ ನಮ್ಮ ಜಾಗ ಅಳತೆ ಮಾಡ್ಸಿ ಕಟ್ಸಿದ್ರಾಯ್ತು.

ಹೀಗೇ ಕಾಲ ಕಳ್ದು, ಒಂದು ಶುಭದಿನ ಮನೆ ಕಟ್ಸೋಕ್ಕೆ ಕೆಲಸ ಶುರು ಮಾಡಿದ್ರು. ಅಪ್ಪನಿಗೆ ಹಣದ ಬಗ್ಗೆ ಸ್ವಲ್ಪ ಆತಂಕ ಇದ್ರೂನೂ ಉತ್ಸಾಹದಿಂದಲೇ ಮನೆ ಕಟ್ಸೋದಕ್ಕೆ ತಕ್ಷಣಕ್ಕೆ ಬೇಕಿದ್ದ ಇಟ್ಟಿಗೆ, ಕಲ್ಲು, ಸಿಮೆಂಟು ಒಂದೊಂದೇ ವ್ಯವಸ್ಠೆ ಮಾಡೋದಕ್ಕೆ ಓಡಾಡ್ತಾ ಇದ್ರು.

ಆಗ ನನ್ನ ಜವಾಬ್ದಾರಿ ಏನಪ್ಪಾ ಅಂದ್ರೆ, ಊಟದ ಸಮಯ ಒಂದ್ಬಿಟ್ಟು, ಉಳ್ದಾ ದಿನ ಪೂರ್ತಿ ಕಣದಲ್ಲೇ ಇರ್ಬೆಕಿತ್ತು. ಎನಾದ್ರೂ ಕಳ್ಳತನ ಹಾಗುತ್ತೆ ಅನ್ನೋ ಯೋಚ್ನೆ ಇದ್ದಿದ್ದರಿಂದ, ಈ ರೀತಿ ಮಾಡ್ಬೇಕಾಗಿತ್ತು. ಆದ್ರೆ ರಾತ್ರಿ ನಾನು ಮನೇಲೇ ಇರ್ತಿದ್ದೆ, ಕಣದಲ್ಲಿ ಯಾರಾದ್ರು ಬೇರೆಯವರನ್ನ ಮಲಗಿಲಿಕ್ಕೆ ವ್ಯವಸ್ಠೆ ಮಾಡಿದ್ರು. ಬೇಸಿಗೆ ರಜಾ ಪೂರ್ತಿ ನಾನು ಕಣದಲ್ಲೇ ಕಳ್ದೆ.

ಈ ರೀತಿ ಇರ್ಬೇಕಾದ್ರೆ, ಒಂದಿನ ನಮ್ಮ ಹಳೇ ಮನೆ ಇತ್ತಲಲ್ಲಿ ಇದ್ದ ಕನಗಲ ಹೂವಿನ ಗಿಡವನ್ನ ನಾನು ನಮ್ಮ ಹೊಸ್ಮನೆ ಹತ್ರಾನು ಬೆಳಸ್ಬೇಕು ಅಂತ ಯೋಚ್ನೆ ಬಂತು. ಯಾಕಂದ್ರೆ ಹೊಸಮನೆಗೆ ಹೋದ್ಮೇಲೆ ಪೂಜೆಗೆ ಹೂವು ಅಂತ ಮತ್ತೆ ಹಳೇ ಮನೆಗೆ ಬರೋದು ಬೇಡ ಅಂತ.

ಅಮ್ಮ, ಕನಗಲ ಗಿಡನ ಹೊಸ್ಮನೆ ಹತ್ರನೂ ಬೆಳಿಸ್ಬೇಕು, ಹೊಸ್ಮನೆಗೆ ಹೋದ್ಮೇಲೆ ನಮಿಗೆ ಹೂವಿನ ಚಿಂತೆ ಇರಲ್ಲ.

ಹ್ಞೂ, ಅದಕ್ಕೇನಂತೆ ಈಗ ಇತ್ತಲಲ್ಲಿ ಇದೆಯಲ್ಲ ಅದೇ ಗಿಡದ ಒಂದೆರ್ಡು ರಮ್ಬೇಗಳನ್ನ ಕತ್ರಿಸ್ಕೊಂದು ಹೋಗಿ ಅಲ್ಲಿ ಹೊಸ್ಮನೆ ಕಣದಲ್ಲಿ ನೆಡು.

ಅಮ್ಮಾ , ಬರೀ ಕಡ್ಡಿ ನೆಟ್ರೆ ಸಾಕ? ಅದುನ್ನ ಪ್ಯಾಕೆಟ್ ಮಾಡಿ ನೆಡೋದಲ್ವ? ಬೇರು, ಬೀಜ ಏನೂ ಬೇಡ್ವ?

ಹೇ, ಇದನ್ನೆಲ್ಲಾ ಪ್ಯಾಕೆಟ್ ಯಾಕ್ಮಾಡ್ತೀಯ? ಕಡ್ಡಿನೇ ಸಾಕು, ಸ್ವಲ್ಪ ನೀರಾಕ್ತಾ ಇರು ಸಾಕು.

ಆಯ್ತು ಸರಿ ಇವತ್ತೇ ಗಿಡ ನೆಡ್ತೀನಿ.

ಇತ್ತಲಲ್ಲಿ ಒಂದೆರ್ಡು ತೆಳ್ಳನೆಯ ಉದ್ದನೆಯ ಕನಗಲ ರಮ್ಬೇಗಳನ್ನ ಕತ್ತರಿಸ್ಕಂದೆ, ತಗಂಡು ಹೊಸ್ಮನೆ ಕಣಕ್ಕೆ ಬಂದೆ. ಈಗ ಇದನ್ನ ಹೇಗೆ ನೆಡೋದು?

ನಮ್ಮನೆ ಕೆಲ್ಸಕ್ಕೆ ಒಬ್ಬ ಹೆಣ್ಮಗ್ಳು ಬರ್ತಿದ್ರು. ಅವ್ರ ಗಂಡನಿಗೆ ಒಂದು ಆಪರೇಷನ್ ಹಾಗಿತ್ತು. ಹಾಗಾಗಿ ಆಯಪ್ಪ ಏನೂ ಕೆಲಸ ಮಾಡ್ತಿರ್ಲಿಲ್ಲ. ಬರೀ ಅವ್ರಿವ್ರ ಮನೆ ಮುಂದೆ ಟೈಮ್ ಪಾಸ್ ಮಾಡ್ತಿದ್ದ. ಈಗ ಅವ್ನ ಹೆಂಡ್ತಿ ನಮ್ಮ ಹೊಸ್ಮನೆ ಕೆಲ್ಸಕ್ಕೆ ಬರ್ತಿದ್ರಿಂದ ಯಾವಾಗ್ಳೂ ಅಲ್ಲೇ ಕಣದಲ್ಲಿ ಇರ್ತಿದ್ದ. ಯಾರದ್ರೂ ಮಾತಾಡಕ್ಕೆ ಸಿಕ್ಕೇ ಸಿಕ್ತಾರೆ ಅಂತ. ನನಿಗೆ ಆಯಪ್ಪ ಯಾವಾಗ್ಲು "ಸಾವ್ಕಾರ" ಅಂತ ಕರೀತಿದ್ದು. ಆಯಪ್ಪನ ಹೆಸ್ರು "ಮೂರ್ತ್ಯಪ್ಪ". ನಾನು "ಮೂರ್ತ್ಯಪ್ಪ" ಅಂತಾನೆ ಕರೀತಿದ್ದೆ.

ಮೂರ್ತ್ಯಪ್ಪ, ನಮ್ಮ ಹಳೇ ಮನೆ ಇತ್ಲಲ್ಲಿ ಇರೋ ಕನಗ್ಲ ಗಿಡದ ಕಡ್ಡಿ ಇವು. ಈ ಕಡ್ಡಿಗಳು ಚಿಗುರೋಡ್ದು, ಗಿಡ ಹಾಗ್ತಾವಂತೆ, ಇಲ್ಲಿ ನೀರೂ ಹತ್ರದಲ್ಲೇ ಇದೆ, ಅದಕ್ಕೆ ಇಲ್ಲೇ ನೆಡ್ತೀನಿ. ಹಾಗೇ ಇದು ಕರಿಬೇವಿನ ಗಿಡ, ಇದನ್ನು ಇಲ್ಲೇ ನೆಡ್ತೀನಿ.

ಅಲ್ಲಾ ಸಾವ್ಕಾರಾ, ಒಂದು ಕಡಿ ನೆಡು ಸಾಕು, ನಿಮ್ದೊಂದು ಮನೆಗೆಲ್ಲ ಎಷ್ಟು ಗಿಡ ಬೇಕು? ಎಷ್ಟು ಹೂವು ಬೇಕು? ಮತ್ತೆ ಹೂವಿನ ಗಿಡ, ಕರಿಬೇವಿನ ಗಿಡದ ನಡ್ವೆ ಸ್ವಲ್ಪ ಜಾಗ ಬಿಡಿ. ಅವು ಬೆಳ್ದು ದೊಡ್ದವಾದ್ಮೇಲೆ ಅವಕ್ಕೆ ಇನ್ನೂ ಜಾಗ ಬೇಕಾಗುತ್ತೆ. ನಿಮ್ಮ ಹಳೇ ಮನೆ ಹಿಂದೆ ಇರೋ ಗಿಡನೆ ನೋಡಿ, ಈಗ ಎಷ್ಟು ದೊಡ್ಡದಾಗಿದೆ ಅಂತ.

ಆತು ಮೊರ್ತ್ಯಪ್ಪ ಸ್ವಲ್ಪ ಜಾಗ ಬಿಡ್ತೀನಿ. ಈ ಕಡ್ಡಿಗಳು, ಚಿಗುರೋಡಿಯೋದೆ ನಂಗೆ ಡೌಟು, ಅದಿಕ್ಕೆ ಈ ಎರಡು ಕಡ್ಡಿಗಳನ್ನ ನಾಲ್ಕು ಚಿಕ್ಕ ಚಿಕ್ಕ ಕಡ್ಡಿ ಮಾಡಿ, ಒಂದೊಂದತ್ರ ಎರಡೆರಡು ಕಡ್ಡಿ ನೆಡ್ತೀನಿ.

ಅಯ್ಯೋ ಬೇಡ ಸಾವ್ಕಾರಾ, ಒಂದೇ ಕಡ್ಡಿ ನೆಡಿ ಸಾಕು. ಅದಕ್ಕಿಂತ ಚಿಕ್ಕದಾಗಿ ಕತ್ತರಿಸ್ಬೇಡಿ. ಅದು ಉಪ್ಯೊಗಕ್ಕೆ ಬರಲ್ಲ.

ನಾನು ಮೂರ್ತ್ಯಪ್ಪನ ಮಾತನ್ನ ಲೆಕ್ಕಕ್ಕೆ ಇಟ್ಕಲ್ದೆ, ಎರಡನ್ನು ಕತ್ತರ್ಸಿ ನಾಕು ತುಂಡು ಮಾಡ್ದೆ. ಒಂದಡಿ ಆಳದ ಮೂರು ಗುಂಡಿ ತಗ್ದೆ, ಅದ್ರಲ್ಲಿ ಒಂದಿಷ್ಟು ಕಪ್ಪು ಮಣ್ಣು, ಕೆಂಪು ಮಣ್ಣು, ಒಂದಿಷ್ಟು ತಿಪ್ಪೆ ಗೊಬ್ರ ಹಾಕಿ ರಾಡಿ ಮಾಡ್ದೆ. ಒಂದು ಗುಣಿಗೆ ಎರಡು ಕಡ್ಡಿ, ಅಂದ್ರಂತೆ ಮೂರು ಗುಣಿಲಿ ನಾಲ್ಕು ಕಡ್ಡಿ ಮತ್ತೆ ಒಂದು ಕರಿಬೇವಿನ ಗಿಡ ಅಂತ ನನ್ನ ಪ್ಲ್ಯಾನ್ ಇತ್ತು.

ಗುಣಿಯ ಮದ್ಯೆದಲ್ಲಿ ಹೂವಿನ ಗಿಡದ ಎರಡೆರಡು ಕಡ್ಡಿ ಇಟ್ಟು, ಮುಚ್ಚಿದೆ. ಸಪೋರ್ಟಿಗೆ ಇರ್ಲಿ ಅಂತೇಳಿ ಇನ್ನೊಂದು ಬೇರೆ ಜಾತಿಯ ಒಣ ಕಂಡಿನೂ ಅದ್ರ ಜೊತೆ ನೆಟ್ಟಿದ್ದೆ. ಇದೆ ರೀತಿ ಕರಿಬೇವಿನ ಗಿಡಕ್ಕೂ ಮಾಡಿದ್ದೆ.

ಅಲ್ಲಾ ಸಾವ್ಕಾರಾ. ಅದಿನ್ನೂ ಬೇರಿಲ್ಲದ, ಎಲೆಯಿಲ್ಲದ ಕಡ್ಡಿ ಅಷ್ಟೇ. ಅದಕ್ಕೆ ಬೇರ್ಬೇರೆ ಮಣ್ಣು, ತಿಪ್ಪೆ ಗೊಬ್ರ ಎಲ್ಲಾ ಯಾಕೇ? ಸುಮ್ನೆ ಸ್ವಲ್ಪ ನೆಲ ಹಸಿ ಮಾಡಿ ಕಡ್ಡಿ ಸಿಗ್ಸಿ ಸಾಕು. ಕರಿಬೇವಿನ ಗಿಡಕ್ಕೂ ಅಷ್ಟೇ, ಅದು ಇನ್ನೂ ಹೊಸ ಬೇರು ಬರ್ಬೇಕು. ಅಲ್ಲಿತಂಕಾ ಅದಕ್ಕೆ ನೀರು ಮತ್ತೆ ಸ್ವಲ್ಪ ಮಣ್ಣು ಸಾಕು,

ಎರಡು ದಿನ ಬಿಟ್ಟು ಬಂದೆ, ಆದ್ರೆ ಇನ್ನೂ ಚಿಗುರೇ ಕಾಣಿಸ್ತಿಲ್ಲ. ಅಯ್ಯೋ ಕಡ್ಡಿ ಒಣಗಿ ಹೋಗಿದೆ ಅನ್ಸುತ್ತೆ. ಮೂರ್ತ್ಯಪ್ಪ ನೀನೆಳಿದ್ದು ಸರಿ, ನಾನು ಕಡ್ಡಿನ ಅಷ್ಟು ಚಿಕ್ಕದಾಗಿ ತುಂಡು ಮಾಡ್ಬಾರ್ದಾಗಿತ್ತು ಅನ್ಸುತ್ತೆ. ನಾನು ಮತ್ತೆ ಬೇರೆ ಕಡ್ಡಿ ತಂದು ನೆಡ್ತೀನಿ.

ಅಯ್ಯೋ ಸಾವ್ಕಾರಾ, ಅದಕ್ಕಿನ್ನೂ ಎರಡೇ ಎರಡು ದಿನ ಹಾಗಿದೆ, ಈಗ್ಲೇ ಹೇಗೆ ಚಿಗುರು ಬರುತ್ತೆ? ಒಂದು ವಾರನಾದ್ರೂ ಟೈಮ್ ಕೊಡ್ರಿ ಅದುಕ್ಕೆ. ಅದು ಮೊದ್ಲು ನೆಲದ ಒಳ್ಗೆನೇ ಸಣ್ಣ ಸಣ್ಣ ಬೇರು ಬರುತ್ತೆ. ಆ ಬೇರು ಬಂದಾದ ಮೇಲೆ ಸಣ್ಣ ಚಿಗುರೆಲೆ ಕಾಣ್ಸುತ್ತೆ. ಆ ಗಣ್ಣು ಇದ್ದಾವಲ್ಲ? ಅಲ್ಲೇ ಚೂರು ಹಸುರು ಬಣ್ಣದ ಚಿಗುರು ಬರುತ್ತೆ ನೋಡ್ತಿರಿ.

ಅನ್ಗಂತೀಯ ಮೂರ್ತ್ಯಪ್ಪ, ಯಾವ್ದುಕ್ಕು ಕಡ್ಡಿ ಒಣಗ್ದಂಗೆ ಅದರ ತುದಿಗೆ ಆಕ್ಳ ಸಗಣಿ ತಂದು ಅಂಟಿಸ್ತೀನಿ.

ಆ ಕೆಲಸ ಬೇಕಾದ್ರೆ ಮಾಡು ಸಾವ್ಕಾರಾ.

ಬೇರೆಯವರ ಮನೆ ಮುಂದಿನ ಹೊಸ ಗಿಡಗಳಿಗೆ ಈ ರೀತಿ ಮಾಡಿದ್ದು ಗಮನಿಸಿದ್ದ ನಾನು, ಸಗಣಿನ ತಂದು ಅದೇ ರೀತಿ ಕಡ್ಡಿ ತುದಿಗೆ ಮೆತ್ತಿದೆ.

ಮತ್ತೆ ಎರಡು ದಿನ ಬಿಟ್ಟು ಬಂದು ಗಮನ್ಸಿದೆ. ಆದ್ರೆ ಇನ್ನೂ ಚಿಗುರು ಕಾಣಿಸ್ತಿಲ್ಲ.ಅಷ್ಟೊತ್ತಿಗೆ ಮೂರ್ತ್ಯಪ್ಪ ನನ್ನ ಹಿಂದೆ ಬಂದು ನಿಂತು ನನ್ನನ್ನೇ ನೋಡ್ತಿದ್ದ.


~~~~ (*) ~~~~


ತುಂಬ ಉದ್ದ ಆಯ್ತು, ಅದಕ್ಕೆ ಇವತ್ತಿಗೆ ಇಲ್ಲಿಗೆ ನಿಲ್ಲಿಸಿ, ಮತ್ತೆ ಮುಂದಿನ ಭಾಗವನ್ನ ಇನ್ನೊಂದಿನ ಹಾಕ್ತೇನಿ

blogspot add widget