ಮಂಗಳವಾರ, ಆಗಸ್ಟ್ 17, 2010

ಮುಗ್ಗರಿಸಿದ ಮುಂಗಾರು

ಈ ಕೃಷ್ಣಪ್ಪ ಅವರ ನಿರ್ಮಾಣದ ಮೊದಲ ಹಾಗೂ ಯೋಗರಾಜ್‌ ಭಟ್ಟರ ನಿರ್ದೇಶನದ ಮೂರನೇ ಚಿತ್ರ ಮುಂಗಾರುಮಳೆ. ಚಿತ್ರಕ್ಕೆ ಈ ಹೆಸರನ್ನು ಸೂಚಿಸಿದ್ದೇ ಈ ಕೃಷ್ಣಪ್ಪನವರು. ಯಾಕೆ ಈ ಹೆಸರು ಕೊಟ್ಟಿದ್ದು ಎಂಬುದನ್ನೂ ಈ ರೀತಿ ವಿವರಿಸುತ್ತಾರೆ. "ಮುಂಗಾರು ಮಳೆ ಸಾಮನ್ಯವಾಗಿ ನಮ್ಮ ರೈತರಿಗೆ ಯಾವತ್ತೂ ಕೈಕೊಡಲ್ಲ. ಚಿತ್ರದಲ್ಲಿಯೂ ಸಹ ಮಳೆಯ ಸನ್ನಿವೇಶಗಳು ಸಾಕಷ್ಟಿವೆ. ಆದುದರಿಂದ ಈ ಚಿತ್ರಕ್ಕೆ ಮುಂಗಾಳುಮಳೆ ಅಂತಾನೇ ಹೆಸರಿಡೋಣ. ಚಿತ್ರವೂ ಗೆಲ್ಲುತ್ತದೆ ಎಂಬ ಭರವಸೆ ಇದೆ". ಅವರ ಆಶಯದಂತೆ ಚಿತ್ರವು ಗೆದ್ದು ಕನ್ನಡಚಿತ್ರರಂಗದಲ್ಲಿಯೇ ದಾಖಲೆಯನ್ನು ಸೃಷ್ಟಿಸಿದ್ದು ನಮಗೆಲ್ಲಾ ತಿಳಿದೇ ಇದೆ.

ಈ ಕೃಷ್ಣಪ್ಪರವರ ಎರಡನೇ ಚಿತ್ರ ಮೊಗ್ಗಿನಮನಸ್ಸು. ಯುವ ನಿರ್ದೇಶಕ ಶಶಾಂಕ್‌ ನಿರ್ದೇಶನದ ಈ ಚಿತ್ರವೂ ನಿರ್ಮಾಪಕರ ಜೇಬು ತುಂಬಿಸಿತು. ಈ ಎರಡು ಯಶಸ್ವೀ ಚಿತ್ರಗಳ ನಂತರ ಈ ಕೃಷ್ಣಪ್ಪ ಅವರು ಮೂರನೇ ಕೊಡುಗೆ  "ಮತ್ತೆಮುಂಗಾರು". ಚಿತ್ರದ ಹೆಸರು ಕೇಳಿದಾಗ, ಕೃಷ್ಣಪ್ಪನವರು ತಮ್ಮ ಮೊದಲಚಿತ್ರದ ಹೆಸರಿನ ಸೆಂಟಿಮೆಂಟ್‌ನಿಂದ ಪ್ರೇರೇಪಿತರಾಗಿ ಈ ಹೆಸರು ಸೂಚಿಸಿರಬಹುದೇ ಎನ್ನುವ ಅನುಮಾನ ಮೂಡಿತ್ತು.

ಈ ಚಿತ್ರದ ಕಥೆ ಮೊದಲೆರಡು ಚಿತ್ರಗಳ ಹಾಗೇ ಕೇವಲ ಕಥೆಯಲ್ಲ. ಒಬ್ಬ ಭಾರತೀಯ ಅದರಲ್ಲೂ ನಮ್ಮ ಕನ್ನಡಿಗ, ಹೆಸರು ನಾರಾಯಣ ಮಂಡಗದ್ದೆ, ಆಕಾಸ್ಮಾತ್‌ ಆಗಿ ಭಾರತದ ಗಡಿದಾಟಿ ಪಾಕಿಸ್ತಾನವನ್ನು ಸೇರಿಬಿಡುತ್ತಾರೆ. ಆಮೇಲೆ ಅವರು ತಿಳಿಯದೇ ಮಾಡಿದ ತಪ್ಪಿಗೆ 21 ವರ್ಷ ಪಾಕಿಸ್ತಾನದ ಕತ್ತಲ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಾರೆ. ಅನೇಕ ವರ್ಷಗಳ ನಂತರ ಬಿಡುಗಡೆಯಾಗಿ ಮತ್ತೆ ತಮ್ಮ ತಾಯ್ನಾಡಿಗೆ ಹಿಂದಿರುಗುತ್ತಾರೆ. ಅವರು ಕಳಕೊಂಡಿದ್ದ ಸ್ವತಂತ್ರ ಜೀವನವನ್ನು ಮತ್ತೆ ಕಂಡುಕೊಳ್ಳುತ್ತಾರೆ.

ಇಂತಹ ಒಂದು ಶುಷ್ಕಕಥೆಯನ್ನು ಒಂದು ಚಿತ್ರಕಥೆಯಾಗಿ ಎಣೆದು, ಪರದೆಯ ಮೇಲೆ ತಂದು ಚಿತ್ರವನ್ನು ವೀಕ್ಷಿಸುವ ಪ್ಪ್ರೇಕ್ಷಕನಿಗೆ ಎರಡೂವರೆ ಗಂಟೆ ಎಲ್ಲೂ ಬೋರಾಗದಂತೆ ಒಂದು ಚಿತ್ರವನ್ನು ನಿರ್ಮಿಸುವುದು ಅಷ್ಟು ಸುಲಭದ ಮಾತಲ್ಲ. ಕಾರ್ಗಿಲ್‌ ಯುದ್ದವಾದ ಮೇಲೆ ಅದರ ಆಧಾರದ ಮೇಲೆ ಕಥೆಯನ್ನು ಎಣೆದು ನಾಲ್ಕಾರು ಭಾಷೆಗಳಲ್ಲಿ ನಾಲ್ಕಾರು ಚಿತ್ರಗಳು ಬಂದವು. ಹಿಂದಿಯ ಮಿಷನ್ ಕಾಶ್ಮೀರ್, ಕನ್ನಡದ ಸೈನಿಕ ಹೀಗೆ ಪ್ರಯತ್ನಗಳು ನಡೆದಿದ್ದವು. ಅದೇ ರೀತಿ ಹೆಮ್ಮೆಯ ಸ್ವತಂತ್ರ ಹೋರಾಟಗಾರ ಭರತ್‌ಸಿಂಗ್ ಅವರ ಬಗ್ಗೆಯೂ ಕೆಲವು ಚಿತ್ರಗಳು ತೆರೆಕಂಡಿದ್ದವು. ಆದರೆ ಇಂತಹ ನೈಜಘಟನೆಗಳನ್ನ ಆಧರಿಸಿ ಬಂದ ಚಿತ್ರಗಳು ಅಷ್ಟು ಯಶನ್ನುಗಳಿಸದೇ ಹೋದವು.

ಈಗ ತೆರೆಕಂಡಿರುವ ಮತ್ತೆಮುಂಗಾರು ಚಿತ್ರವೂ ನಿರಾಶಾದಾಯಕವಾಗಿ ಸಾಗಿದೆ ಎಂದು ಕೇಳಿದಾಗ ಏಕೋ ಬೇಸರವಾಯಿತು.
ಇಂತಹ ಚಿತ್ರಗಳನ್ನು ನಿರ್ಮಿಸಲು ಚಿತ್ರತಂಡದವರು ಪ್ರೇಕ್ಷಕರನ್ನು ಸೆಳೆದಿಟ್ಟುಕೊಳ್ಳುವಂತಹ ಅಂಶಗಳನ್ನೂ ಸಹ ಸಾಕಷ್ಟು ಪ್ರಮಾಣದಲ್ಲಿ ಬೆರೆಸದೇ ಹೋದರೇ, ಚಿತ್ರ ಗೆಲ್ಲುವುದು ಕಷ್ಟಸಾಧ್ಯ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಉದಾಹರಣೆಗೆ "ಟೈಟಾನಿಕ್‌" ಚಿತ್ರ. ಎಷ್ಟು ಶುಷ್ಕಕಥೆಯದು?  ಆದರೆ ಚಿತ್ರವನ್ನು ನೋಡುವಾಗ ಎಲ್ಲಿಯೂ ಬೋರ್ ಹೊಡೆಸದಂತೆ, ಮಸಾಲೆ ಅಂಶಗಳನ್ನೂ ಸೇರಿಸಿಕೊಂಡಿದ್ದರಿಂದ ಚಿತ್ರ ದಾಖಲೆಯ ಪ್ರಮಾಣದಲ್ಲಿ ಯಶಸ್ಸುಗಳಿಸಿತ್ತು. ಇಂತಹ ಉದಾಹರಣೆಗಳನ್ನು ಗಮನದಲ್ಲಿಟ್ಟು ಕೊಂಡಾದರೂ ನಮ್ಮ ಕನ್ನಡ ನಿರ್ದೇಶಕರು ಮುಂದಿನ ಬಾರಿ ಮತ್ತೊಂದು ಪ್ರಯತ್ನವನ್ನು ಮಾಡಿ ಯಶನ್ನು ಗಳಿಸಲಿ ಎಂದು ಆಶಿಸೋಣ.

ನಂಬಿದರೆ ನಂಬಿ ಬಿಟ್ಟರೇ ಬಿಡಿ. 

1. ನಾರಾಯಣ ಮಂಡಗದ್ದೆಯವರು ಎಷ್ಟು ವರ್ಷಗಳು ಪಾಕಿಸ್ತಾನ ಜೈಲಿನಲ್ಲಿ ಶಿಕ್ಷೆ ಅನುಭವಿಸಿದರು?
ಮೊನ್ನೆ ಚಿತ್ರದ ಬಿಡುಗಡೆಯ ದಿನ, ಸ್ವತಃ ನಾರಾಯಣರವರೇ ನೇರಪ್ರಸಾರ ಕಾರ್ಯಕ್ರಮದಲ್ಲಿ ಮಾತಾಡ್ತಾ ಇದ್ದರು. ಆಗ ಇವರು 21 ವರ್ಷ ಜೈಲಿನಲ್ಲಿದ್ದೆ ಎಂದು ಹೇಳಿದ್ದನ್ನು ಕೇಳಿದ ನೆನಪಿತ್ತು. ಆದರೂ ನಿನ್ನೆಯ ವಿ.ಕ ಲವಲವಿಕೆಯಲ್ಲಿ ಬಂದಿದ್ದ ಲೇಖನವನ್ನೊಮ್ಮೆ ಓದಿ ಮಾಹಿತಿಯನ್ನು ಗಟ್ಟಿಮಾಡಿಕೊಳ್ಳೋಣದೆಂದು ನೋಡಿದಾಗ ಆಶ್ಚರ್ಯೊಂದು ಕಾದಿತ್ತು.
ಮಹೇಶ್ ದೇವಶೆಟ್ಟಿ ಹಾಗೂ ಎ. ಆರ್, ರಘುರಾಮ್ ಎಂದು ಇಬ್ಬರು ಪ್ರತ್ಯೇಕವಾಗಿ ಇದೇ ವಿಷಯವಾಗಿ ಒಂದೇ ಪುಟದಲ್ಲಿ ಅದೂ ಅಕ್ಕಪಕ್ಕದಲ್ಲಿ ಪ್ರಕಟಿಸಿರುವ ಈ ಲೇಖನದ ಚಿತ್ರವನ್ನು ಗಮನಿಸಿ.

ಗಮನಿಸಿದಿರಾ? ಒಬ್ಬರು 15 ವರ್ಷ ಜೈಲು ಶಿಕ್ಷೆ ಮತ್ತೊಬ್ಬರು 21 ವರ್ಷ ಜೈಲು ಶಿಕ್ಷೆ ಅಂತ ಬರ್ದಿದ್ದಾರೆ. ಎಡಗಡೆಯ ಮಾಹಿತಿ ಮಹೇಶ್ ದೇವಶೆಟ್ಟಿಯವರದು, ಎಡಗಡೆಯದು ಎ,ಆರ್,ರಘುರಾಮ್‌ಅವರದು...ಪೂರ್ತಿ ಲೇಖನವನ್ನು ವೀಕ್ಷಿಸಲು ಇಲ್ಲಿ ಕ್ಲಿಕ್‌ ಮಾಡಿ. ಈಗ ಇದರಲ್ಲಿ ಯಾವುದು ಸರಿ, ನೀವೇ ಹೇಳಿ.

2. ಇನ್ನೂ ಒಂದು ವಿಷಯವಿದೆ. ನೇರಪ್ರಸಾರ ಕಾರ್ಯಕ್ರಮದಲ್ಲಿ ಸ್ವತಃ ನಾರಾಯಣ ಮಂಡಗದ್ದೆಯವರು ಮಾತಾಡುತ್ತಿರುವಾಗ, ತಾವನುಭವಿಸಿದ ಕಹಿ ಘಟನೆಗಳ ಬಗ್ಗೆ ವಿವರಿಸಿದರು. ಕಡೆಗೆ ಕಾರ್ಯಕ್ರಮದ ಸಂದರ್ಶಕರು ನೀವು ಚಿತ್ರದ ನಾಯಕ ನಟ ಕಿಟ್ಟಿಯವರನ್ನು ನೇರವಾಗಿ ಭೇಟಿಯಾಗಿದ್ದೀರ? ಎಂದು ಪ್ರಶ್ನಿಸಿದರು. ಆಗ ನಾರಾಯಣ್‌ ಅವರು, ಇಲ್ಲ ಇನ್ನೂ ನೇರವಾಗಿ ಭೇಟಿಯಾಗಿಲ್ಲ. ಆದರೆ ಇವತ್ತು ಚಿತ್ರದ ಮೊದಲ ಪ್ರದರ್ಶನವನ್ನು ವೀಕ್ಷಿಸಲು ಅವರೂ ಬರುತ್ತಿದ್ದಾರೆ. ಆಗ ಅವರನ್ನೂ ಭೇಟಿಯಾಗುತ್ತಿದ್ದೇನೆ. ಎಂದು ಉತ್ತರಿಸಿದ್ದರು. ಆದರೆ ಇದೇ ಮೇಲಿನ ಎ.ಆರ್, ರಘುರಾಮ್‌ರವರು ಲವಲವಿಕೆಯ ಆರನೇ ಪುಟದಲ್ಲಿ ಏನೆಂದು ಬರೆದಿದ್ದಾರೆ ಎಂದು ಕೆಳಗಿನ ಚಿತ್ರದಲ್ಲಿ ನೀವೇ ವೀಕ್ಷಿಸಿ.

ಪೂರ್ಣ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ. ಇದಕ್ಕೇನೇಳ್ತೀರಿ? ಕೇವಲ 10 ದಿನಗಳ ಹಿಂದೆ ನೇರಪ್ರಸಾರ ಕಾರ್ಯಕ್ರಮದಲ್ಲಿ ಸ್ವತಃ ನಾರಾಯಣ್‌ ಅವರೇ ತಿಳಿಸಿದ್ದರು, ನಾನಿನ್ನೂ ಕಿಟ್ಟಿಯವರನ್ನು ಭೇಟಿಯಾಗಿಲ್ಲ ಎಂದು, ಆದರೆ ಇಲ್ಲಿ ನೋಡಿದರೆ, ಒಂದು ವರ್ಷದ ಭಾರೀ ಆತ್ಮೀಯತೆ ಅಂತೆಲ್ಲಾ ಬರ್ದಿದ್ದಾರೆ. ಯಾವ್ದ್ ಸರಿ, ಯಾವ್ದ್ ತಪ್ಪು?

ನಿಮ್ಮ ಅನಿಸಿಕೆಯನ್ನು ಕಾಮೆಂಟ್‌ ಮೂಲಕ ತಿಳಿಸಬಹುದು.

ಮೇಲಿನ ಈ ಎರಡು ಗೊಂದಲಗಳನ್ನು ಪಕ್ಕಕ್ಕಿಡೋಣ. ಇಂತಹ ವಿಭಿನ್ನ ಪ್ರಯತ್ನದ ಚಿತ್ರಗಳಿಗೆ ನಾವು ಪ್ರೋತ್ಸಾಹಿಸಬೇಕಾಗಿದೆ. ಈಗಲೂ ಸಮಯಮೀರಿಲ್ಲ, ಹೋಗಿ, ಚಿತ್ರವನ್ನು ವೀಕ್ಷಿಸಿಬನ್ನಿ, ಚಿತ್ರತಂಡಕ್ಕೆ ಪ್ರೋತ್ಸಾಹಿಸಿ.

4 ಕಾಮೆಂಟ್‌ಗಳು:

ಸಾಗರದಾಚೆಯ ಇಂಚರ ಹೇಳಿದರು...

ಇಂಥಹ ಚಿತ್ರಗಳು ಪ್ರೇಕ್ಷಕನಿಗೆ ಇಷ್ಟ ಆಗಲೇಬೇಕು

ಕೇವಲ ಮಸಾಲ ಚಿತ್ರಗಳು ಮಾತ್ರ ಚಿತ್ರವಲ್ಲ

ಒಳ್ಳೆಯ ಲೇಖನ

ಸವಿಗನಸು ಹೇಳಿದರು...

ಚಿತ್ರ ವಿಮರ್ಶೆ ಚೆನ್ನಾಗಿದೆ...

ಮನಸಿನ ಮಾತುಗಳು ಹೇಳಿದರು...

ತುಂಬಾ ಒಳ್ಳೆಯ ಲೇಖನ ಲೋದ್ಯಾಶಿಯವರೇ.. ನಿಮ್ಮ ಲೇಖನ ನೋಡಿ ಕೆಲವರಾದರೂ ಈ ಸಿನೆಮಾಗೆ ಹೋಗಲಿ ಅಂತ ಆಶಿಸೋಣ. ನನಗಂತೂ ಚಿತ್ರ ಹಿಡಿಸಿತು..ಒಳ್ಳೆ ಪ್ರಯತ್ನ ...:-)

Me, Myself & I ಹೇಳಿದರು...

@ಗುರುಮೂರ್ತಿ,
ಹೌದು, ಈ ರೀತಿಯ ವಿಶೇಷ ಪ್ರಯತ್ನಗಳನ್ನು ನಾವು ಬೆಂಬಲಿಸಿ ಸರಿ ತಪ್ಪುಗಳನ್ನು ಚರ್ಚಿಸಬೇಕು. ಅವರಿಗೂ ಮುಂದಿನ ಹೆಜ್ಜೆಗೆ ಅನುಕೂಲವಾಗಬಹುದು.

@ಮಹೇಶ್,
ಇದೊಂದು ಅಪರೂಪದ ಪ್ರಯತ್ನ. ನಾರಾಯಣ್‌ ಅವರು ಕನ್ನಡಿಗರೇ ಆಗಿರಬಹುದು. ಆದರೆ ಇದು ಒಂದು ಅಂತರಾಷ್ಟ್ರೀಯಮಟ್ಟದ ಸಮಸ್ಯೆ. ಇದನ್ನು ಬಿಂಬಿಸಿದ ನಿರ್ದೇಶಕ ದ್ವಾರ್ಕಿ ಅವರಿಗೆ ಧನ್ಯವಾದಗಳನ್ನು ಹೇಳೋಣ. ಏನಂತೀರಿ

@ದಿವ್ಯಾ,
ಚಿತ್ರವನ್ನು ಕೆಲವರಾದರೂ ಮೆಚ್ಚಿಕೊಳ್ಳುತ್ತಿದ್ದಾರೆ. ಆದರೆ ಚಿತ್ರತಂಡಕ್ಕೆ ಇಷ್ಟು ಪ್ರೋತ್ಸಾಹ ಸಾಲದು. ನೀರೀಕ್ಷೆ ಮೀರಿದ ಯಶಸ್ಸು ಗಳಿಸಲು ಸಾದ್ಯವಿಲ್ಲವಾದರೂ ನಿರಾಸೆಗೊಳಿಸಬಾರದು. ಅಲ್ಲವೇ

ಪ್ರತಿಕ್ರಿಯೆಗೆ ನಿಮ್ಮೆಲ್ಲರಿಗೂ ಧನ್ಯವಾದಗಳು.

blogspot add widget