ಭಾನುವಾರ, ಆಗಸ್ಟ್ 15, 2010

ಹಾಲಿವುಡ್ To ಬಳ್ಳಾರಿದುಡ್

"ಪೋಗೋ ಕನ್ನಡ ಡಬ್ಬಿಂಗು ಹೋಗೋ" ಪೋಸ್ಟ್ ನ ಮುಂದುವರಿದ ಭಾಗ.

ಡಬ್ಬಿಂಗ್‌ಗೆ ಕನ್ನಡದಲ್ಲಿ ಅವಕಾಶ ಕೊಡುವುದಕ್ಕೆ ಅನಿವಾರ್ಯತೆ ಎದುರಾಗಿದೆ. ಈ ಅನಿವಾರ್ಯತೆಗೆ ಪ್ರಮುಖ ಕಾರಣಗಳೇನಿರಬಹುದು ಎಂದು ಅವಲೋಕಿಸಿದಾಗ ನಮಗೆ ಎದುರಾದ ಕೆಲವು ಆಂಶಗಳು ಈ ರೀತಿ ಇವೆ.

1. ಮನರಂಜನೆಯ ಬಹುದೊಡ್ಡ ಸೋರ್ಸ್ ಎಂದರೆ ಚಿತ್ರರಂಗ ಹಾಗೂ ಕಿರುತೆರೆ.
2. ಈ ಮಾದ್ಯಮಗಳ ಕಾರ್ಯಕ್ರಮಗಳಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳುವುದು ನಮ್ಮೆಲ್ಲರ ಹೊಣೆ.
3. ಆದರೆ ಆ ನಿಟ್ಟಿನಲ್ಲಿ ಈಗ ನಾವು ಹಿಂದೆ ಬಿದ್ದಿದ್ದೇವೆ.
3. ಇಂದು ಹಳ್ಳಿ ಹಳ್ಳಿಗಳಲ್ಲಿ  ತೆಲುಗು, ತಮಿಳು, ಹಿಂದಿ, ಆಂಗ್ಲ ಚಿತ್ರಗಳು ಜನಪ್ರಿಯತೆ ಗಳಿಸುತ್ತಿವೆ.
4. ಕನ್ನಡದ ಕಂಪು ಹರಡ ಬೇಕಿದ್ದ ಕಡೆಗಳಲ್ಲಿ ಇಂದು ಅನ್ಯಭಾಷೆಗಳು ಆವರಿಸಿಕೊಳ್ಳುತ್ತಿವೆ. 
5. ಈ ಪರಿಸ್ಥಿತಿ ಹೀಗೇ ಮುಂದುವರೆದರೆ ಕನ್ನಡ ಒಂದು ಸೀಮಿತಭಾಷೆಯಾಗಲಿದ್ದು ಬರಬರುತ್ತಾ ಅವನತಿ ಮಾರ್ಗಹಿಡಿಯುತ್ತಿದೆ.
6. ಅನ್ನಕೊಡುವ ಭಾಷೆಯಾಗದ ಹೊರತು ಕನ್ನಡಕ್ಕೆ ಉಳಿಗಾಲವಿಲ್ಲ.
7. ಮಕ್ಕಳಲ್ಲಿ ಮಾತೃ ಭಾಷೆಯ ಮೇಲಿನ ಪ್ರೀತಿ, ಗೌರವ, ಉತ್ಸಾಹವನ್ನು ಉಳಿಸಿ ಅದು ನಮ್ಮ ಮುಂದೆ ಪೀಳಿಗೆಗೆ ಪ್ರಸಾರವಾಗುವಂತೆ ನಾವು ಕ್ರಮಗಳನ್ನು ರೂಪಿಸಬೇಕಿದೆ.
8. ಹಳ್ಳಿಹಳ್ಳಿಗಳಲ್ಲಿರುವ ಪ್ರತಿ ಕನ್ನಡಿಗರಿಗೆ ಮನರಂಜನೆ, ವಿಜ್ಞಾನ ತಂತ್ರಜ್ಞಾನವನ್ನು ತಮ್ಮ ಮಾತೃಭಾಷೆಯಲ್ಲಿಯೇ ತಲುಪಿಸಬೇಕು.
9. ಕನ್ನಡಭಾಷೆಯಲ್ಲಿ ಎಲ್ಲವೂ ಸಾಧ್ಯ ಎಂಬುದನ್ನು ನಿರೂಪಿಸಿ ತೋರಿಸಬೇಕು.
10. ಇದೆಲ್ಲಕ್ಕೆ ಈಗ ಬಹುಮುಖ್ಯವಾಗಿ ಕೂಡಲೇ ತೆಗೆದುಕೊಳ್ಳಬೇಕಾಗಿರುವ ಕ್ರಮವೆಂದರೆ, ಅನ್ಯಭಾಷೆಯಲ್ಲಿ ಪ್ರಸಾರವಾಗುವ ಕಿರುತೆರೆಯ ಜನಪ್ರಿಯ ಕಾರ್ಯಕ್ರಮಗಳನ್ನು ಹಾಗೂ ಉತ್ತಮ ಗುಣಮಟ್ಟದ ಚಲನಚಿತ್ರಗಳನ್ನು ಕನ್ನಡಕ್ಕೆ ಡಬ್‌ಮಾಡಲು ಅವಕಾಶ ನೀಡಬೇಕು.

ಹೌದು, ಕನ್ನಡ ಭಾಷೆಯ ವ್ಯಾಪ್ತಿಯ ಪರದಿಯನ್ನು ನಾವು ಹಿಗ್ಗಿಸಬೇಕಿದೆ. ಕಾಲಕ್ಕೆ ತಕ್ಕಂತೆ, ತಂತ್ರಜ್ಞಾನದ ಸದುಪಯೋಗ ಪಡೆದುಕೊಂಡು ನಮ್ಮ ಜೀವನಮಟ್ಟವನ್ನು ಸುಧಾರಿಸಿಕೊಳ್ಳಬೇಕಿದೆ. ಇಲ್ಲದೇ ಹೋದರೇ ಡಾರ್ವಿನ್‌ನ ವಿಕಾಸವಾದದ ಸಿದ್ದಾಂತದಂತೆ ಬಲಿಷ್ಟ ಹಾಗೂ ದುರ್ಬಲರ ಮಧ್ಯೆ ಸಂಘರ್ಷವಾಗಿ ಕಡೆಗೆ ದುರ್ಬಲವಾದದು ಕಾಲದ ವೇಗಕ್ಕೆ ಪ್ರತಿಸ್ಪರ್ದಿಸಲಾಗದೆ ಇತಿಹಾಸವನ್ನು ಸೇರಬೇಕಾಗುತ್ತದೆ.

1. ಸುಮಾರು ಹದಿನೈದು ವರ್ಷಗಳ ಹಿಂದಿನ ಪರಿಸ್ಥಿತಿ ಹೇಗಿತ್ತು ಎಂದು ಮೆಲುಕು ಹಾಕೋಣ.
ಹಳ್ಳಿಗಳಲ್ಲಿ ಜನರು ಒಂದು ಟೆಲಿಪೋನ್‌ ಕನೆಕ್ಷನ್‌ ಬೇಕೆಂದು ಆಸೆಪಟ್ಟರೆ ಆಗ ಅದಕ್ಕೊಂದು ಅಪ್ಲಿಕೇಶನ್ ಭರ್ತಿ ಮಾಡಿ ಕೊಡಬೇಕಿತ್ತು. ಅಪ್ಲಿಕೇಶನ್ ಭರ್ತಿಮಾಡಿ ಮುಂಗಡವಾಗಿ ಹಣಪಾವತಿಸಿ ಅದನ್ನು ಸೂಕ್ತ ಅಧಿಕಾರಿಯ ಕೈಗೆ ಸಲ್ಲಿಸಿದ ನಂತರ, ಅದು ಕಛೇರಿಯ ಅನೇಕ ಟೇಬಲ್‌ಗಳನ್ನು ಹತ್ತಿ ಇಳಿಯ ಬೇಕಿತ್ತು. ಈ ಹತ್ತಿ ಇಳಿಯುವ ಹಾವು ಏಣಿ ಆಟದಲ್ಲಿ ಅನೇಕ ಬಾರಿ ಅಪ್ಲಿಕೇಶನ್ ಕಳೆದೇ ಹೋಗಿರುತ್ತಿತ್ತು. ಅಧಿಕಾರಿಗಳು ಒಂದು ಭಾರ ತಪ್ಪಿತು ಎಂಬಂತೆ ಅದನ್ನು ಮರೆತು ಆಯಾಗಿರುತ್ತಿದ್ದರು. ಆಮೇಲೆ ಮೂರ್ನಾಲ್ಕು ತಿಂಗಳು ಕಾದು ಕಾದೂ ...ಏನೂ ಬೆಳವಣಿಗೆ ಕಂಡುಬರದ ಕಾರಣ ಆ ಹಳ್ಳಿಯಿಂದ ಬಂದ ವ್ಯಕ್ತಿ ತನ್ನ ಅಪ್ಲಿಕೇಶನ್ ಈಗ ಏನಾಗಿದೆ ಎಂದು ಪ್ರಶ್ನಿಸಿದನೆಂದರೆ ಆಗ ಅಧಿಕಾರಿಗಳು ನಾಲ್ಕು ನಿಮಿಷ ತಲೆಕೆಡಿಸಿಕೊಂಡು, ಕಡೆಗೆ ಸ್ವಾಮೀ, ಇನ್ನೊಂದು ಅಪ್ಲಿಕೇಶನ್ ಭರ್ತಿಮಾಡಿಕೊಡಿ, ನೀವು ಸಲ್ಲಿಸಿದ್ದ ಅಪ್ಲಿಕೇಶನ್ ಎಲ್ಲೋ ಕಳೆದುಹೋಗಿದೆ ಎಂದು ಏನೂ ತಿಳಿಯದವರಂತೆ ಹಾರಿಕೆಯ ಉತ್ತರಕೊಟ್ಟು ಪಾರಾಗುತ್ತಿದ್ದರು. ಏನೂ ಪ್ರಶ್ನಿಸದೇ ಆ ಹಳ್ಳಿಗರು ಮತ್ತೊಮ್ಮೆ ಅಪ್ಲಿಕೇಶನ್ ಕೊಟ್ಟುಬರಬೇಕಿತ್ತು.

ಈ ಪ್ರಕ್ರಿಯೆ  ಕನಿಷ್ಟ ಪಕ್ಷ ನಾಕ್ಕು ತಿಂಗಳಿಂದ ಒಂದು ವರ್ಷವಾದರೂ ಸಮಯ ತೆಗೆದುಕೊಂಡು ಕಡೆಗೊಮ್ಮೆ ಎಲ್ಲವೂ ಕೈಗೂಡಿ ಹಳ್ಳಿಗರ ಮನೆಗೆ ಟೆಲಿಪೋನ್‌ ಬರುತ್ತದೆ ಎಂದು ಇಟ್ಟುಕೊಳ್ಳಿ. ಈಗ ಮತ್ತೊಂದು ಸಮಸ್ಯೆ. ಅದೆಂದರೆ ಸ್ವಲ್ಪ ಹೆಚ್ಚುಗಾಳಿ ಬೀಸಿದರೆ ಸಾಕು ರಸ್ತೆಬದಿಯ ಯಾವುದೋ ಮರದ ಕೊಂಬೆ ಮುರಿದು ಟೆಲಿಪೋನ್‌ ತಂತಿಯ ಮೇಲೆ ಬಿದ್ದು ಎಲ್ಲವೂ ಅಸ್ತವ್ಯಸ್ತವಾಗುತ್ತದೆ. ಆಗ ಆ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳ ಟೆಲಿಪೋನ್‌ಗಳೆಲ್ಲವೂ ಸತ್ತುಬೀಳುತ್ತವೆ. ನಂತರ ಅನೇಕ ಬಾರಿ ಟೆಲಿಪೋನ್ ಎಕ್ಸ್‌ಚೇಂಜ್ ಆಫೀಸ್‌ಗೆ ಓಡಾಡಿದ ಬಳಿಕ ಒಂದು ತಿಂಗಳೊಳಗಾಗಿ ಸರಿ ಪಡಿಸುತ್ತೇವೆ ಎನ್ನುವ ಭರವಸೆ ಸಿಕ್ಕುತ್ತದೆ. ಅದಾದ ಎರಡು ತಿಂಗಳಲ್ಲಿ ಮತ್ತೆ ಪೋನ್‌ ಚಲಾವಣೆಯಲ್ಲಿ  ಬರುತ್ತದೆ. ಅಷ್ಟರಲ್ಲಿ ಮತ್ತೆ ಗಾಳಿ ಮಳೆ ಏನಾದರೂ ತೊಂದರೆ ಕೊಟ್ಟರೆ ಮತ್ತದೆ ಸತ್ತು ಬಿದ್ದ ಪೋನ್‌, ಸರಿ ಪಡಿಸುತ್ತಿದ್ದೇವೆ ಎನ್ನುವ ಅಧಿಕಾರಿಯ ಭರವಸೆಯ ಮೇಲೆಯೇ ಜನ ಕಾಯುತ್ತಿರಬೇಕಿತ್ತು.

ಇನ್ನು ರೇಡಿಯೋ ಬೇಕೆನಿಸಿದರೆ ತಟ್ಟನೇ ತರಬಹುದಿತ್ತು. ಆದರೆ ಅದರಲ್ಲಿ ಮಾತೃಭಾಷೆಯಲ್ಲಿ ಬರುವ ಕಾರ್ಯಕ್ರಮಗಳು ಸೀಮಿತವಾಗಿದ್ದವು .

ಇನ್ನು ಟೆಲಿವಿಷನ್ ಬಗ್ಗೆ ಹೇಳಬೇಂಕೆಂದರೆ, ಸರ್ಕಾರದ ಡಿಡಿ1 ಬಿಟ್ಟರೆ ಬೇರೆ ಚಾನಲ್‌ ಇರುತ್ತಿರಲಿಲ್ಲ. ಅಂದಿನ ಕಾಲದಲ್ಲಿ ನಮ್ಮ ಹಳ್ಳಿಗರಿಗೆ ಬಾಹ್ಯಪ್ರಪಂಚದ ಆಗುಹೋಗುಗಳ ಬಗ್ಗೆ ಒಂದು ಭರವಸೆಯ ಮಾದ್ಯಮವೊಂದಿದ್ದರೆ ಅದು ಕೇವಲ ದಿನಪತ್ರಿಕೆಗಳು ಮಾತ್ರ ಆಗಿದ್ದವು.

ಇದೆಲ್ಲಾ ಯಾಕೆ ಹೇಳಬೇಕಾಗಿದೆ ಎಂದರೆ ಅಂದಿನಕಾಲದಲ್ಲಿ ಹಳ್ಳಿಜನರ ಬಗ್ಗೆ ಎಷ್ಟು ನಿರ್ಲಕ್ಷೆವಿತ್ತು ಎಂಬುದನ್ನು ನಾವು ಮನಗಾಣಬೇಕಾಗಿದೆ. ಅವರು ಕೂಲಿಕೆಲಸಕ್ಕೆ ಹಾಗೂ ಕೃಷಿಗೆ ಬಿಟ್ಟು ಬೇರೇ ಯಾವುದಕ್ಕೂ ನಾಲಾಯಕ್ಕು ಎನ್ನುವಂತೆ ಅಲಿಖಿತ ಶಾಸನಗಳು ಜಾರಿಯಲ್ಲಿದ್ದವು.
ಹಳ್ಳಿಜನಕ್ಕೆ ವಿದ್ಯುತ್‌ ಇಲ್ಲದಿದ್ದರೇನೆಂತೆ?
ಟೀವಿ, ರೇಡಿಯೋ ಇಲ್ಲದಿದ್ದರೇನಂತೆ?
ಟೆಲಿಪೋನ್‌ ಯಾವ ಕೆಲಸಕ್ಕೆ?
ಹೊಲದಲ್ಲಿ ದುಡಿಯುವ ಅವಿಧ್ಯಾವಂತರಾದ ಅವರಿಗೆ ಇಷ್ಟೆಲ್ಲಾ ಸವಲತ್ತುಗಳ ಅವಶ್ಯಕತೆ ಏನಿದೆ?
ಈ ಸವಲತ್ತುಗಳನ್ನು ಪಡೆದು ಅವರು ಏನನ್ನು ಸಾಧಿಸಬೇಕಾಗಿದೆ??
ಎನ್ನುವಂತಹ ಪರಿಸ್ತಿತಿ ದಟ್ಟವಾಗಿತ್ತು. ಆಗಿನ ಹಳ್ಳಿಜನಗಳ ಮನೋಭಾವನೆಯೂ ಈ ನಿರ್ಲಕ್ಷೆಕ್ಕೆ ತಕ್ಕಂತೆಯೇ ಇದ್ದಿತು. ನಮ್ಮದೇನಿದ್ದರೂ ಇಷ್ಟೇ! ನಾವು ಪಡೆದುಕೊಂಡು ಬಂದದ್ದು ಇಷ್ಟೇ!
ಪಾಲಿಗೆ ಬಂದದ್ದನ್ನು ಅನುಭವಿಸಬೇಕು ಎಂಬಂತೆ, ಯಾವ ಮನರಂಜನೆಗೂ ಒತ್ತುನೀಡದೇ, ತಾವಾಯಿತು ತಮ್ಮ ಹೊಲದ ಕೆಲಸಗಳಾದವು ಎಂಬಂತೆ ಈ ಎಲ್ಲಾ ಸವಲತ್ತುಗಳಿಂದ ದೂರವಾಗತೊಡಗಿದರು.


2. ಈಗ ಪರಿಸ್ತಿತಿ ಏನಾಗಿದೆ???
ಈಗ ಟೆಲಿಪೋನ್‌ ಅಪ್ಲಿಕೇಶನ್ ಕೊಟ್ಟು ಬಂದು ತಿಂಗಳುಗಟ್ಟಲೇ ಕಾಯುವುದು ಅಥವಾ ಗಾಳಿ ಮಳೆಗೆ ಟೆಲಿಪೋನ್‌ ತಂತಿ ಕಟ್ಟಾಗಬಹುದು, ಪೋನ್ ಸಾಯಬಹುದು ಎಂಬ ಆತಂಕವೂ ಇಲ್ಲ. ಕೈಯಲ್ಲಿ ಸಾವಿರ ರೂಪಾಯಿ ಇದ್ದರೆ ಅರ್ಧಗಂಟೆಯಲ್ಲಿ ಕಾರ್ಯನಿರತ ಮೋಬೈಲ್ ಪೋನ್‌ ನಿನ್ನ ಕೈಸೇರುತ್ತದೆ. ಅದಕ್ಕೆ ಇನ್ನೋಂದಿಷ್ಟು ಜಾಸ್ತಿ ಹಣ ವ್ಯಯಿಸಿದರೆ ಮತ್ತಷ್ಟು ಅನುಕೂಲಕರ ಮೋಬೈಲ್ ಫೋನ್ ತೆಗೆದುಕೊಂಡು ಅದರಲ್ಲಿಯೇ ಹಾಡು ಕೇಳಬಹುದು, ವೀಡಿಯೋ ನೋಡಬಹುದು ಅಥವ ಆಟಗಳನ್ನು ಆಡಬಹುದು.

ಈಗ ಏಎಮ್ ರೇಡಿಯೋ ಅಲ್ಲದೇ, ಎಪ್‌ಎಮ್‌ ರೇಡಿಯೋಗಳು ಸಾಕಷ್ಟು ತಲೆಎತ್ತಿವೆ. ಎಂಟತ್ತು ಕನ್ನಡ ಎಪ್ಎಮ್‌ ಚಾನೆಲ್‌ಗಳಿವೆ. ಆದರೇ ಇವಿನ್ನೂ ಸಣ್ಣಪುಟ್ಟ ನಗರಗಳನ್ನು ಹಾಗೂ ಹಳ್ಳಿಗಳನ್ನು ತಲುಪಿಲ್ಲ.

ಈಗ ಟೆಲಿವಿಷನ್‌ನಲ್ಲಿ  ಏನಾಗಿದೆ. ಕೆಲವೇ ವರ್ಷಗಳ ಹಿಂದೆ ಕೇವಲ ಮೇಲ್ವರ್ಗದ ಆಸ್ತಿ ಎಂಬಂತಿದ್ದ ಟೆಲಿವಿಷನ್ ಇಂದು ಮನೆಮನೆಗು ತಲುಪುತ್ತಿದೆ.ಅಲ್ಲದೇ ಕೇವಲ ಡಿಡಿ1, ಚಂದನ, ಉದಯ, ಉಷೆ ಎಂದು ಎರಡು ಅಥವಾ ಮೂರು ಚಾನೆಲ್ ಮಾತ್ರ ಪ್ರಸಾರವಾಗುತ್ತಿದ್ದ ಕಾಲ ಈಗ ಮಾಯವಾಗಿದೆ. ಈ ಟೀವೀ, ಟೀವೀ9, ಝೀಟೀವೀ, ಕನ್ನಡ ಕಸ್ತೂರಿ, ಸುವರ್ಣ ಹಾಗೂ ತೀರ ಇತ್ತೀಚಿನ ಸಮಯ ಹೀಗೇ ಹತ್ತಾರು ಕನ್ನಡ ಟೀವೀ ಚಾನೆಲ್‌ಗಳು ಈಗ ಪ್ರಸಾರವಾಗುತ್ತಿವೆ. ಸದ್ಯಕ್ಕೆ  ಅಡ್ವರ್ಟೈಸ್ ಪ್ರಕಟಿಸುವವರಿಗೇ ಸಮಸ್ಯೆ ಎದುರಾಗಿದೆ. ಜನ ಯಾವ ಚಾನೆಲ್ನಲ್ಲಿ ಅಡ್ವರ್ಟೈಸ್ ಬರುತ್ತೋ ಆಗ ತಕ್ಷಣ ಮತ್ತೊಂದು ಚಾನೆಲ್‌ಗೆ ಸ್ವಿಚ್ ಮಾಡುತ್ತಾರೆ. ಕೇವಲ ಎರಡು ನಿಮಿಷದ ಬಿಡುವಿಗೂ ಸಹ ನಮ್ಮ ವೀಕ್ಷಕರು ಸಿದ್ದರಿಲ್ಲ.

ಈಗ ಡಿಟಿಎಚ್ ಮೂಲಕ ನೇರಉಪಪಗ್ರಹ ಸಂಪರ್ಕ ಸಾದ್ಯವಾಗಿರುವುದರಿಂದ ಮತ್ತಷ್ಟು ಹೆಚ್ಚಿನ ಚಾನೆಲ್‌ಗಳೂ ಲಭ್ಯ. ಅದೂ ಉತ್ತಮ ಕ್ಷಾಲಿಟಿಯದ್ದು. ಇಷ್ಟಲ್ಲದೇ ಇಂಟರ್ನೆಟ್ ಇನ್ನೂ ಏನೇನು ಕ್ರಾಂತಿ ಮಾಡಲಿದೆಯೋ? ತಿಳಿಯದು.

ತಂತ್ರಜ್ಞಾನದಲ್ಲಿ ಇಷ್ಟೆಲ್ಲಾ ಕ್ರಾಂತಿಗಳಾದ ಮೇಲೆ ನಮ್ಮ ಜನಜೀವನವೂ ಬದಲಾವಣೆಯಾಗದೇ ಉಳಿದಿರಲು ಹೇಗೆ ಸಾದ್ಯ? ನೀವೇ ಹೇಳಿ. ಮನರಂಜನೆಗೆ ಇಷ್ಟೆಲ್ಲಾ ಅವಕಾಶಗಳಿರುವಾಗ, ದುಡಿಮೆಯ ಕಡೆಗೆ ತಲೆಕೆಡಿಸಿಕೊಳ್ಳುವವರೂ ಕಡಿಮೆಯಾದರು..

ಮೊದಲೆಲ್ಲಾ ಅಂದಾಜು ಬೆಳಗ್ಗೆ 9 ರಿಂದ ಸಂಜೆ 5.30 ರ ತನಕ ಯಾವ ಬಿಡುವಿಲ್ಲದೆ ಮೈಬಗ್ಗಿಸಿ ದುಡಿಯುತ್ತಿದ್ದ ದಿನಗೂಲಿಗಳು ಇಂದು ತುಂಬಾ ಸ್ಮಾರ್ಟ್ ಆಗಿರುವವರಂತೆ ವರ್ತಿಸುತ್ತಾರೆ. ಬೆಳಗ್ಗೆ 9.30 ರಿಂದ ಮದ್ಯಾಹ್ನ 1 ಗಂಟೆ ಅಷ್ಟೇ ಅವರ ಕೆಲಸದ ವೇಳೆ. ಅಲ್ಲಿಗೆ ಆ ದಿನದ ಕೆಲಸ ಮುಗಿಯಿತು. ಇದು ಪ್ರತೀದಿನ ಅಲ್ಲ. ವಾರಕ್ಕೆ ಮೂರು ದಿನ ಮಾತ್ರ ಕೆಲಸ. ಉಳಿದ ದಿನಗಳಲ್ಲಿ ಇಷ್ಟೂ ಕೆಲಸ ಮಾಡುವುದಿಲ್ಲ.

2.1 ಮತ್ತೆ ಏನ್ಮಾಡ್ತಾರೆ?
ಮನರಂಜನೆ. ಉದಾಹರಣೆಗೆ ಟೀವೀ ನೋಡುವುದು, ಇಸ್ಪೀಟ್ ಆಡುವುದು, ಪಿಕ್ಚರ್ ನೋಡುವುದು. ಕಡೆಗೆ ಏನಿಲ್ಲವೆಂದರೆ ಗುಂಪುಕಟ್ಟಿಕೊಂಡು ಸಮಯದೂಡುತ್ತಾರೆ. ಅದೂ ದಿನಾ ತಡರಾತ್ರಿಯವರೆಗೆ. .

ಇಷ್ಟೆಲ್ಲದರ ನಡುವೆ ಇಂಟರ್ನೆಟ್ ಮಾಡಿರುವ ಕ್ರಾಂತಿ ಹೇಳತೀರದು. ಒಬ್ಬ ಕೂಲಿ ಕಾರ್ಮಿಕನೂ ಸಹ ಅಂತರ್ಜಾಲದ ಮೂಲಕ ಮುಂಬೈ ಶೇರುಮಾರುಕಟ್ಟೆಯ ಬೆಳವಣಿಗೆಗಳನ್ನು ತಿಳಿದುಕೊಳ್ಳಲು ಉತ್ಸಕನಾಗುತ್ತಾನೆಂದರೆ ನೀವೂ ನಂಬಲೇ ಬೇಕು.

ಈ ಅನುಕೂಲಗಳ ಮದ್ಯೆ ಮತ್ತೊಂದು ಅನುಕೂಲವೇನೆಂದರೆ ಈ ಬಡಜನರಿಗೆ ಈಗ ಬಿಪಿಓ ಕಾರ್ಡ್, ಯಶಸ್ವಿಸಿ ಕಾರ್ಡ್‌ ಮುಂತಾದ ಸರ್ಕಾರೀ ಸವಲತ್ತುಗಳು ಸಿಗುವುದರಿಂದ ಆಸ್ಪತ್ರೆಯ ಖರ್ಚೂ ಇಲ್ಲ, ಪಡಿತರ ಚೀಟಿ ಇರುವುದರಿಂದ ದಿನಬಳಕೆಯ ಅನೇಕ ವಸ್ತುಗಳು ತೀರಾ ಕಡಿಮೆಬೆಲೆಗೆ ಲಭ್ಯ. ಅಲ್ಲದೇ ದಿನಗೂಲಿಯೂ ಹೆಚ್ಚಾಗಿದೆ.

3 ತಾತ್ಪರ್ಯವೇನೆಂದರೆ, 
ವಿಜ್ಞಾನ ಹಾಗೂ ತಂತ್ರಜ್ಞಾನದ ದೂರಸಂಪರ್ಕ ವಿಭಾಗದ ಈ ಕ್ರಾಂತಿಗಳು, ಮನುಷ್ಯನ ಜೀವನಶೈಲಿಗೆ ಹಿಂದೆಂದಿಗಿಂತಲೂ ಅಧಿಕ ವೇಗವನ್ನು ಒದಗಿಸಿವೆ. ಅಂತರ್ಜಾಲದಲ್ಲಿ ಮಾಹಿತಿಯು ಕ್ಷಣಮಾತ್ರದಲ್ಲಿ ಪ್ರಪಂಚದ ಮೂಲೆಮೂಲೆಯನ್ನು ತಲುಪುತ್ತದೆ.  ಅಂತರ್ಜಾಲದ ಸೋಷಿಯಲ್‌ ನೆಟ್‌ವರ್ಕ್‌ಗಳ ಮೂಲಕ ಇಂದಿನ ಯುವಪೀಳಿಗೆ ತನ್ನ ಬಾಳಸಂಗಾತಿಯನ್ನು ಆಯ್ಕೆಮಾಡಿಕೊಳ್ಳಬಲ್ಲಂತಹ ಉದಾಹರಣೆಗಳು ನಮ್ಮ ಮುಂದಿವೆ. ದಶಕಗಳ ಹಿಂದೆ ಬೇರ್ಪಟ್ಟಿದ್ದ ತಂದೆ-ಮಕ್ಕಳು ಪೇಸ್ಬುಕ್‌ ಮೂಲಕ ಮತ್ತೆ ಒಂದಾದ ಉದಾಹರಣೆಗಳು ಸಿಗುತ್ತವೆ.  

ಈಗ ನಮ್ಮ ಹಳ್ಳಿಜನರು ಸಹ ಬದಲಾಗುತ್ತಿದ್ದಾರೆ. ಅವರು ಈ ಹಿಂದಿನಂತಿಲ್ಲ. ಮನರಂಜನೆಗೆ ಹೆಚ್ಚಿನ ಮಹತ್ವ ನೀಡಲಾರಂಬಿಸಿದ್ದಾರೆ. ಆದುದರಿಂದ ಅವರಿಗೆ ನಮ್ಮ ಮಾತೃ ಭಾಷೆಯ ಟೀವೀ ಕಾರ್ಯಕ್ರಮಗಳು,  ಚಲನಚಿತ್ರಗಳು ಸಾಲದಾಗಿದೆ. ತಮಿಳು, ತೆಲುಗು, ಹಿಂದಿ, ಇಂಗ್ಲೀಷ್ ಎಲ್ಲವೂ ಬೇಕಿದೆ. ಇಲ್ಲಿ ಮಾತೃ ಭಾಷೆ ಅವರಿಗೆ ಮತ್ತೊಂದು ನೆಪ ಮಾತ್ರ. ಅವರಿಗೆ ಮನರಂಜನೆಯೇ ಮುಖ್ಯ. ಅದು ಯಾವ ಭಾಷೆಯಾದರೇನಂತೆ. ಅದು ಅವರೀಗೂ ಬೇಕಿಲ್ಲ. ಬಿಡುವಿಲ್ಲದೇ ಟೀವೀ ವೀಕ್ಷಿಸುವವರಿಗೆ ತಮಿಳು, ತೆಲುಗು ಹಿಂದಿ, ಇಂಗ್ಲೀಷ್ ಅರ್ಥಮಾಡಿಕೊಳ್ಳುವುದೂ ಅಸಾದ್ಯವೇನಲ್ಲ ಬಿಡಿ.

ಈಗ ಅವರಿಗೆ ಮುಖ್ಯವಾಗಿ ಬೇಕಿರುವುದು ಮಾತೃ ಭಾಷೆಯ ಕಾರ್ಯಕ್ರಮಗಳಲ್ಲ. ನಿರಂತರವಾಗಿ ಮನರಂಜನೆ ಒದಗಿಸಬಲ್ಲ ಹೆಚ್ಚೆಚ್ಚು ಟೀವೀ ಚಾನೆಲ್ಗಳು. ಹಾಗಾಗಿಯೇ ಜನ ಇಂಗ್ಲೀಷ್‌ನ ಅವತಾರ್ , ಅನಕೊಂಡ, ಜುರಾಸಿಕ್ಪಾರ್ಕ್, ಇತ್ಯಾದಿ ಚಿತ್ರಗಳನ್ನೂ ವೀಕ್ಷಿಸುತ್ತಾರೆ. ಅಷ್ಟೇ ಅಲ್ಲದೇ ಹಿಂದಿ, ತಮಿಳು, ತೆಲುಗು, ಮಲಯಾಳಂ ಚಿತ್ರಗಳನ್ನೂ ವೀಕ್ಷಿಸುತ್ತಾರೆ. ಇನ್ನೂ ಪೋಗೋ, ಕಾರ್ಟೂನ್‌ , ನ್ಯಾಶನಲ್ ಜಿಯೋ ಮುಂತಾದ ಚಾನಲ್‌ಗಳು ಸಿಕ್ಕರೆ ಅವನ್ನೂ ಅಲ್ಪ ಸ್ವಲ್ಪ ವೀಕ್ಷಿಸಿಯಾರು. 


ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿರುವ ನಮ್ಮ ಮಾತೃಭಾಷೆಗೆ ಕೇವಲ ಕಳೆದ ಒಂದು ಶತಮಾನದ ಆರಂಬದಿಂದೀಚೆಗೆ ಬೆಳಕಿಗೆ ಬಂದಿರುವ ಟೀವೀ ಹಾಗೂ ಚಲನಚಿತ್ರಗಳಿಗೆ ಡಬ್ಬಿಂಗ್‌ ಅವಕಾಶ ನೀಡಲಿಲ್ಲ ಎಂದ ಮಾತ್ರಕ್ಕೆ, ನಮ್ಮ ಭಾಷೆ ನಾಶವಾಗಲಿದೆ ಎನ್ನುವಂತೆ ಆತಂಕ ವ್ಯಕ್ತಪಡಿಸುವವರು ಸ್ವಲ್ಪ ಧೈರ್ಯದಿಂದ ವರ್ತಿಸಬೇಕಾಗಿದೆ. ಭಾಷೆ ಅಷ್ಟು ಕ್ಷುಲ್ಲಕವೂ ಅಲ್ಲ, ಕ್ಷಣಿಕವೂ ಅಲ್ಲ.

ಇಂದು ಅಂತರ್ಜಾಲದಲ್ಲಿಯೂ ಭಾಷೆ ಬೆಳೆಯುತ್ತಿದೆ. ಮುಂದೆ ಅಂತರ್ಜಾಲವು ತನ್ನ ಪರದಿಯನ್ನು ಮತ್ತಷ್ಟು ವಿಸ್ತರಿಸುವುದು ಅಕ್ಷರಶಹ ನಿಜ. ಆಗ ಕನ್ನಡವೂ ಮತ್ತಷ್ಟು ಹೆಚ್ಚೆಚ್ಚು ಬೆಳಕಿಗೆ ಬರುವುದೂ ಸತ್ಯ. ಇಷ್ಟಲ್ಲದೇ ಸಾಕಷ್ಟು ಸಾಹಿತಿಗಳು ನಮ್ಮೆದುರಿಗೆ ಇದ್ದಾರೆ. ಅಪಾರ ಜ್ಞಾನಸಂಪತ್ತು ನಮ್ಮ ಭಾಷೆಯಲ್ಲಿದೆ. ತಂತ್ರಜ್ಞಾನ ಬೆಳೆದಂತೆ ಭಾಷೆಗಳಿಗೂ ಸಾಕಷ್ಟು ಅನುಕೂಲಗಳು ಬರಲಿವೆ.

ಇರಲಿ ಇಷ್ಟೆಲ್ಲಾ ಯಾಕೆ ಹೇಳುತ್ತಿದ್ದೇನೆ ಎಂದರೆ ಇಂದು ಎದ್ದಿರುವ ಡಬ್ಬಿಂಗ್‌ ವಿವಾದಕ್ಕೆ ಇವೆಲ್ಲವೂ ಪಾಲುದಾರರು.

ಏನೇ ಆಗಲಿ ನಮ್ಮ ಮಾತೃ ಭಾಷೆ ಅನ್ನಕೊಡುವ ಭಾಷೆಆಗಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಹೌದು. ಆಗಾಗಬೇಕಾಗಿದೆ.

ನಮ್ಮ ಕೆಲವು ಸ್ನೇಹಿತರು ವಿವರಿಸುವಂತೆ ತಮಿಳು, ತೆಲುಗು ಮುಂತಾದ ರಾಜ್ಯಗಳಲ್ಲಿ ಅಥವಾ ಚೀನಾ, ಜಪಾನ್‌ ಇತ್ಯಾದಿ ದೇಶಗಳಲ್ಲಿ ಜನರು ಎಲ್ಲಾ ಕಾರ್ಯಕ್ರಮಗಳನ್ನೂ ಅವರದೇ ಮಾತೃಭಾಷೆಯಲ್ಲಿ ವೀಕ್ಷಿಸುತ್ತಿದ್ದಾರೆ. ಇದು ಕನ್ನಡಿಗರಿಗೆ ಏಕೆ ಸಾದ್ಯವಿಲ್ಲ? ಕನ್ನಡಕ್ಕೂ ಡಬ್ಬಿಂಗ್ ಬರಲಿ ಎಂದು ಮೊರೆಹೋಗಿದ್ದಾರೆ. ಇವರ ಕಾಳಜಿಯನ್ನು ನಾವು ಸ್ವಾಗತಿಸಲೇಬೇಕು. ಆದರೆ ಡಬ್ಬಿಂಗ್‌ಗೆ ಅವಕಾಶ ನೀಡದಿದ್ದರೆ, ನಮ್ಮ ಮಾತೃಭಾಷೆಯ ಅಸ್ಥಿತ್ವಕ್ಕೆ ದಕ್ಕೆಯುಂಟಾಗುತ್ತದೆ ಎಂದರೆ ಅದನ್ನು ಸ್ವೀಕರಿಸಲು ಸಾದ್ಯವಿಲ್ಲ. ಸ್ನೇಹಿತರೇ ನೀವೇ ಉತ್ತರಿಸಿ,

"ಅನ್ಯ ಭಾಷೆಯವರು ಪೋಗೋ, ಕಾರ್ಟೂನ್‌ ನೆಟ್‌ವರ್ಕ, ಡಿಸ್ಕವರಿ...ಇತ್ಯಾದಿ ಟೀವೀ ಕಾರ್ಯಕ್ರಮಗಳನ್ನ ಅಥವಾ ಅವತಾರ್, ಜು.ಪಾರ್ಕ್‌ನಂತಹ ಚಲನಚಿತ್ರಗಳನ್ನು ಬಾಲ್ಯದಲ್ಲಿ ತಮ್ಮ ಮಾತೃ ಭಾಷೆಯಲ್ಲಿಯೇ ವೀಕ್ಷಿಸಿದ್ದಾರೆ ಎಂಬುದನ್ನೇ ಮಾನದಂಡವಾಗಿಟ್ಟುಕೊಂಡು ಅವರಿಗೆ ಯಾರಾದರೂ  ಯಾವುದಾದರೂ ಉದ್ದೆಯನ್ನು ನೀಡಲು ಮುಂದೆ ಬಂದಿದ್ದಾರೆಯೇ? ಅಥವಾ ಬರುತ್ತಿದ್ದಾರೆಯೇ?. ಅಥವಾ ಅಂತಹವರಿಗೇನಾದರೂ ವಿದ್ಯಾಬ್ಯಾಸದಲ್ಲಿ, ಉದ್ಯೋಗದಲ್ಲಿ ರಿಸರ್ವೇಶನ್‌  ಸಿಕ್ಕುತ್ತದೆಯೇ ? ಅಥವಾ ಆದಾಯ ತೆರಿಗೆಯಲ್ಲಿ ಡಿಸ್ಕೌಂಟ್‌  ಇದೆಯಾ?"

ಮತ್ತೊಮ್ಮೆ ನಮ್ಮ ಸ್ನೇಹಿತರು ಹೀಗೆ ವಿವರಿಸುತ್ತಾರೆ. ಈ ಮೇಲಿನ ಕೆಲವು ಚಿತ್ರಗಳನ್ನು ಡಬ್‌ ಮಾಡಿಯೇ ಅನ್ಯ ಭಾಷಿಕರೂ ಸಾಕಷ್ಟು ಹಣ ಗಳಿಸಿದ್ದಾರೆ ಎಂದು. ಆದುದರಿಂದ ಆರ್ಥಿಕವಾಗಿಯೂ ಕೂಡ ಡಬ್ಬಿಂಗ್‌ನಿಂದ ಲಾಭಗಳಿಸಬಹುದು ಎನ್ನುತ್ತಾರೆ.
ಲಾಭಗಳಿಸಕ್ಕೆ ಹಾಲಿವುಡ್ಡಿನ ಚಿತ್ರಗಳನ್ನು ಡಬ್‌ ಮಾಡಲು ಅವಕಾಶ ಕೊಡುವುದೇನೋ ಸೂಕ್ತವೇ. ಮತ್ತಷ್ಟು ಸಂಸಾರಗಳ ಜೀವನಾಂಶಕ್ಕೆ ಇದು ಆದಾಯಮೂಲವಾಗಬಹುದು. ಅಲ್ಲದೇ ಇದಕ್ಕೆ ಬೇಕಾದ ತಂತ್ರಜ್ಞರಿಗೂ ಕೆಲಸ ಒದಗಿಸದಂತಾಗುಹುದು. ಆಗ ಕನ್ನಡ ಅನ್ನ ಕೊಡುವ ಭಾಷೆಯಾಗಬೇಕು ಎನ್ನುವ ಉದ್ದೇಶವೂ ಕೈಗೂಡುತ್ತದೆ. ಹೌದು. ತುಂಬಾ ಒಳ್ಳೆಯ ಆಲೋಚನೆ. ಇದೊಂದು ಉತ್ತಮ ಅವಕಾಶವೇ ಸರಿ.

ಆದರೆ ನನ್ನದೊಂದು ಸಣ್ಣ ಅನುಮಾನ,  ಈ ರೀತಿ ಮುಂದೆ ಅನುಕೂಲವಾಗಬಹುದು ಎಂದು ಡಬ್ಬಿಂಗ್‌ಗೆ ಅವಕಾಶಬೇಕು ಎಂದು ಒತ್ತಾಯಿಸುವರು, ಇದಾಗಲೇ ಸಾಕಷ್ಟು ಸಂಸಾರಗಳಿಗೆ ಅನ್ನ ನೀಡುತ್ತಿರುವ ಬಳ್ಳಾರಿ ಗಣಿಗಾರಿಕೆಯನ್ನು ಏಕೆ ಬೆಂಬಲಿಸಬಾರದು? ಅಥವಾ ಮುಂದೆ ಬೆಂಬಲಿಸುವರೇ? ನೋಡೀ . ಅಲ್ಲೂ ಸಹ ಬಹಳ ಜನಕ್ಕೆ ಅನ್ನ ಸಿಕ್ತಿದೆ. ಅವರಲ್ಲಿ ಕನ್ನಡಿಗರೂ ಇದ್ದಾರೆ. ಅವರ ಜೀವನಾದಾರಕ್ಕೆ ಮಾರ್ಗವಾಗಿದೆ ಈ ಗಣಿಗಾರಿಕೆ . ಈಗ ಇದ್ದಕ್ಕಿದ್ದಂತೆ ಗಣಿಗಾರಿಕೆ ನಿಲ್ಲಿಸಬೇಕು ಎಂದು ಒತ್ತಡಬರುತ್ತಿರುವ ಇದೇ ಸಂದರ್ಭದಲ್ಲಿ ಡಬ್ಬಿಂಗ್‌ ಪರವಾದಿಸುವವರು ಗಣಿಗಾರಿಕೆಗೆ ಏಕೆ ಸಪೋರ್ಟ್ ಮಾಡಬಾರದು? ಏಕೆ ಇನ್ನೂ ಸುಮ್ಮನಿದ್ದಾರೆ? ಈಗ ಅಲ್ಲಿ ಬೀದಿಗೆ ಬರಲಿರುವ ಸಂಸಾರಗಳ ಬಗ್ಗೆ ಇವರ ಅಭಿಪ್ರಾಯವೇನು? .

ನಮ್ಮ ಚಿತ್ರರಂಗ ಅಥವಾ ಟೀವೀ ಮಾದ್ಯಮದವರು ವಿದೇಶದ ಉತ್ಪನ್ನಗಳನ್ನ ಬಳಸಿಕೊಂಡು ಲಾಭಗಳಿಸಬಹುದಾದರೆ. ಇದೇ ನಮ್ಮ ಕರ್ನಾಟಕದಿಂದ ಕಚ್ಚಾವಸ್ತುವೊಂದನ್ನ ವಿದೇಶಕ್ಕೆ ರಫ್ತು ಮಾಡಲು ಸಂಪೂರ್ಣ ಸ್ವಾತಂತ್ರ ಇರಬೇಕಿತ್ತಲ್ಲವೇ? ಮತ್ಯಾಕೆ ಇಷ್ಟೆಲ್ಲಾ ವಿರೋದವಿದೆ. ನಾಳೇ ಡಬ್ಬಿಂಗ್‌ ನಿಷೇದಿಸಿ ಎಂದು ನೀವೇ ಪಾದಯಾತ್ರೆ ಹೊರಡಲ್ಲ ಅಂತ ನಿಮಗೆ ಖಾತ್ರಿ ಇದೆಯಾ?

ಈ ಹಿಂದಿನ ಪೋಸ್ಟ್‌ಗೆ ಒಬ್ಬ ಓದುಗರು ಈ ರೀತಿ ಪ್ರಶ್ನಿಸಿದ್ದರು, "ಹಾಲಿವುಡ್‌ನ ಹೀಮ್ಯಾನ್, ಸೂಪಾರ್‌ಮ್ಯಾನ್‌, ಸ್ಪೈಡರ್‌ಮ್ಯಾನ್‌ ಇಂತಹ ಚಿತ್ರಗಳನ್ನು ವೀಕ್ಷಿಸಿ, ನಮ್ಮ ಮಕ್ಕಳು ಅದೇ ರೀತಿ ಹೀರೋಗಳಾಗಬೇಕೆಂದು ಬಯಸುತ್ತಾರೆ. ಆದರೆ ಈಗ ಅಂತಹ ಚಿತ್ರಗಳು ಕನ್ನಡದಲ್ಲಿ ಲಭ್ಯವಿಲ್ಲ, ಇದರಿಂದ ನಮ್ಮ ಮಕ್ಕಳು ವಂಚಿತರಾಗುತ್ತಿದ್ದಾರೆ. ನಾವೇನು ಮಾಡಬೇಕು?"
ಮಾನ್ಯರೇ ನಿಮ್ಮ ಮಕ್ಕಳು ಅಂತಹ ಹೀರೋಗಳಾದರೆ ನಮಗೂ ಸಂತೋಷವೇ. ಆದರೆ ಒಂದು ಮಾತು ತಿಳಿಸಲಿಚ್ಚಿಸುತ್ತೇನೆ. ಅಂತಹ ಸ್ಟಂಟ್‌ಗಳನ್ನು ಚಿತ್ರೀಕರಿಸುವ ಮುನ್ನ ಅವರು ಸಾಕಷ್ಟು ಪೂರ್ವಸಿದ್ದತೆಗಳನ್ನು ಮಾಡಿಕೊಂಡಿರುತ್ತಾರೆ, ಅಲ್ಲದೇ ಅದಕ್ಕೆಂದೇ ಇರುವ ವಿಶೇಷ ಸಾಹಸಿಗರ ತಂಡದಿಂದ ಟ್ರೈನಿಂಗ್‌ ತೆಗೆದುಕೊಂಡಿರುತ್ತಾರೆ. ಈ ಎಲ್ಲಾ ಸಿದ್ದತೆಗಳ ನಂತರವೂ ಅನೇಕ ಬಾರಿ ನಟರು ಪ್ರಾಣಾಂತಿಕ ಅಪಾಯಗಳನ್ನುಎದುರಿಸಿದ್ದಿದೆ. ಆದುದರಿಂದ ನಿಮ್ಮ ಮಕ್ಕಳಿಗೆ ಇಂತಹ ಚಿತ್ರಗಳನ್ನು ತೋರಿಸುವ ಮುನ್ನ ಅವರಿಗೆ ಮನವರಿಕೆ ಮಾಡಿಕೊಡಬೇಕಾದದ್ದು ನಿಮ್ಮ ಕರ್ತವ್ಯ. ನೀವೇ ಅವರಿಗೆ ಹುರಿದುಂಬಿಸುವವರಂತೆ ಕಾಣುತ್ತಿದೆ. ಸ್ವಲ್ಪ ಹುಷಾರು. ಮುಂಜಾಗೃತಕ್ರಮಗಳ ಕಡೆಗೂ ಹೆಚ್ಚರವಹಿಸಿ.

ಸಾರಾಂಶವೇನೆಂದರೆ,
1. ಡಬ್ಬಿಂಗ್‌ಗೆ ಅವಕಾಶಕೊಟ್ಟರೆ ನಮ್ಮ ಸಂಸ್ಕೃತಿಗೆ ದಕ್ಕೆ ಬರುತ್ತೆ ಹಾಗೂ
2. ಡಬ್ಬಿಂಗ್‌ ಇಲ್ಲವಾದರೆ ನಮ್ಮ ಭಾಷೆ ಅವನತಿಯಾಗುತ್ತದೆ
ಮೇಲಿನ ಎರಡೂ ಹೇಳಿಕೆಗಳು ಸಹ ಅವಾಸ್ತವ.
 
ಕಡೆಯದಾಗಿ ಮತ್ತೊಮ್ಮೆ ಸ್ಪಷ್ಟಪಡಿಸುತ್ತೇನೆ. ಕನ್ನಡಕ್ಕೆ ಡಬ್ಬಿಂಗ್‌ ಪರವಾಗಿ ಅಥವಾ ವಿರೋದವಾಗಿ ವಾದಮಾಡಲಿಕ್ಕೆಂದು ಈ ಲೇಖನವನ್ನು ಪ್ರಕಟಿಸಿದ್ದಲ್ಲ. ಇದು ಕೇವಲ ಒಂದು ವಿಶ್ಲೇಷಣೆ. ಆದರೂ ಈ ಲೇಖನವೂ ಓದುಗರ ಕಾಮೆಂಟ್‌ಗಳನ್ನು ಸ್ವಾಗತಿಸುತ್ತದೆ.

ಚಿತ್ರಗಳು ಅಂತರ್ಜಾಲ ಕೃಪೆ.

14 ಕಾಮೆಂಟ್‌ಗಳು:

b.suresha ಹೇಳಿದರು...

ನಿಮ್ಮ ತರ್ಕ ಸರಿಯಾಗಿದೆ ಎನಿಸಲಿಲ್ಲ. ಈ ಕುರಿತು ಎಂದಾದರೂ ಮುಖತಃ ಚರ್ಚಿಸೋಣ.
ಡಬ್ಬಿಂಗ್ ಮಾರಿ ಕನ್ನಡಕ್ಕೆ ಬರದೇ ಇರಲಿ ಎಂಬ ನನ್ನ ನಿಲುವನ್ನು ನಿಮ್ಮ ವಾದ ಬದಲಿಸಿಲ್ಲ.

Me, Myself & I ಹೇಳಿದರು...

ಬೀಸುರವರೇ,
ಲೇಖನ ಮಿತಿಮೀರಿ ಉದ್ದವಾದುದರಿಂದ ಓದುಗರಿಗೆ ಸ್ಪಷ್ಟ ಚಿತ್ರಣ ನೀಡದೇ ಇರಬಹುದು.
ಆದರೂ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

ವಿ.ರಾ.ಹೆ. ಹೇಳಿದರು...

ಹಾಲಿವುಡ್ ಸ್ಯಾಂಡಲ್ ವುಡ್ ಮೂಲಕ ಬಳ್ಳಾರಿದುಡ್ ಗೆ ಪಾದಯಾತ್ರೆ ಹೊರಟು ಬರಹ ದಾರಿತಪ್ಪಿದೆ. ಒಂದು ವಿಷಯದ ಬಗ್ಗೆ ಚರ್ಚಿಸುವಾಗ ಅದನ್ನು ಈ ರೀತಿ ಯಾವುದ್ಯಾವುದಕ್ಕೋ ಲಿಂಕ್ ಮಾಡಿದರೆ ತರ್ಕ ತಲೆಕೆಳಗಾಗುತ್ತದೆ.

ಅಂತರ್ಜಾಲದಲ್ಲಿ ಬೆಳೆಯುವ ಭಾಷೆಯ ಪ್ರಮಾಣಕ್ಕೂ ಸಿನೆಮಾ ಟೀವಿಗಳಂತಹ ಬಹುಸಂಖ್ಯೆಯಲ್ಲಿ ನೋಡಲ್ಪಡುವಲ್ಲಿ ಬೆಳೆಯುವ ಭಾಷೆಯ ಪ್ರಮಾಣಕ್ಕೂ ವ್ಯತ್ಯಾಸವಿರುತ್ತದೆ. ಅದನ್ನು ಅರ್ಥ ಮಾಡಿಕೊಳ್ಳಬೇಕು. ಡಬ್ಬಿಂಗ್ ಬಿಡದಿದ್ದರೆ ಭಾಷೆಯ ಸಾಯುತ್ತದೆ ಎಂಬುದು ಡಬ್ಬಿಂಗ್ ಬೇಕು ಎನ್ನಲು ಕಾರಣವಲ್ಲ ಅದು ಸಾಧ್ಯವೂ ಇಲ್ಲ. ಭಾಷೆಗೆ ಮತ್ತು ಭಾಷಿಕರಿಗೆ ಅನುಕೂಲವಾಗುವಂತೆ ಡಬ್ಬಿಂಗ್ ಬರುವುದಾದರೆ ಅದು ಬೇಕು ಎಂದಷ್ಟೆ.

(ನಂಗೆ Inception ಇಂಗ್ಲೀಷಲ್ಲಿ ೪ ಸಲ ನೋಡಿದರೂ ಪೂರ್ತಿ ಅರ್ಥಾಗ್ತಿಲ್ಲ . subtitle ಓದ್ತಾ ಕೂತ್ಕೊಂಡ್ರೆ ಸೀನ್ ಮಿಸ್ ಆಗತ್ತೆ. ಅದೇ ಕನ್ನಡದಲ್ಲಿ ನೋಡಿದರೆ ಅರ್ಥಾಗ್ತಿತ್ತು. ಆದರೆ ಈ ನನ್ನ ಹಕ್ಕು ಕಿತ್ತುಕೊಳ್ಳಲಾಗಿದೆ. ಅಮೆರಿಕಾಕ್ಕೆ ಹೋಗಿ ಅವರ accent ಇಂಗ್ಲೀಷ್ ಕಲಿತುಕೊಂಡು ಬರಲಾ? ಏನ್ ಮಾಡೋಣ ಹೇಳಿ)

Me, Myself & I ಹೇಳಿದರು...

ಇಲ್ಲಿ ಡಬ್ಬಿಂಗ್‌ ವರೋದಿಸುವವರನ್ನು ಬೆಂಬಲಿಬೇಕೆಂಬ ಅಥವಾ ಖಂಡಿಸಬೇಕೆಂಬ ಪ್ರಯತ್ನಮಾಡಿಲ್ಲ. ಡಬ್ಬಿಂಗ್ ವಿವಾದ ಈ ಲೇಖನಕ್ಕೆ ಒಂದು ನೆಪ ಮಾತ್ರ.
ಇಬ್ಬರಕಡೆಯಿಂದಲೂ ಸಮಾನ ಅಂತರ ಕಾಯ್ದುಕೊಳ್ಳುವುದು ಮೂಲ ಉದ್ದೇಶವಾಗಿತ್ತು.

ಹೌದು, ಎರಡೆರಡು ವಿಚಾರಗಳನ್ನು ಹೋಲಿಸುವಾಗ ತುಂಬಾ ಎಚ್ಚರವಹಿಸಬೇಕಾಗುತ್ತದೆ. ಬಳ್ಳಾರಿ ವಿಷಯ ಇಲ್ಲಿ ಬಹುಮುಖ್ಯವಲ್ಲ.

ಸಾಗರದಾಚೆಯ ಇಂಚರ ಹೇಳಿದರು...

ಡಬ್ಬಿಂಗ್ ಹಾವಳಿ ಮೂಲ ಭಾಷೆಗೆ ಧಕ್ಕೆ ಮಾಡದಿದ್ದರೆ ಓಕೆ

ಇಲ್ಲದಿದ್ದರೆ ಅದೆಲ್ಲ ಬೇಕೇ?

ಡಬ್ಬಿಂಗ್ ನಮಗ್ಯಾಕೆ?

Me, Myself & I ಹೇಳಿದರು...

ಹಣಬರುತ್ತೆ ಅನ್ನೋದೂ ಕಾರಣವಿರಬಹುದು. ಆದರೆ ಇನ್ನೊಬ್ಬರಿಗೆ ಹಣ ಬರುತ್ತೆ ಅದು ನಮಗೇ ಬರಲಿ ಎನ್ನೋದಾದರೆ, ಅದು ಅಸೂಯೆ ಎನ್ನಿಸಿಕೊಳ್ಳಲೂ ಬಹುದಲ್ಲವೇ?

ಒಳ್ಳೇದೋ ಕೆಟ್ಟದ್ದೋ ಎಂದು ಅಳೇಯುವುದು ಇನ್ನೂ ಕಷ್ಟವಲ್ಲವೇ? ಎಲ್ಲಾರಿಗೂ ಅವರವರ ಅಭಿಪ್ರಾಯ ತಿಳಿಸುವ ಸ್ವಾತಂತ್ರ ಇರಬೇಕಲ್ಲವೇ?

ಪ್ರತಿಕ್ರಿಯೆಗೆ ಧನ್ಯವಾದಗಳು ಗುರುಮೂರ್ತಿಯವರೇ

Unknown ಹೇಳಿದರು...

ನಲುಮೆಯ ಲೋದ್ಯಾಶಿ ಅವರೇ,
ನಿಮ್ಮ ಬರಹ ಓದಿದ ಮೇಲೆ ನೀವು ಏನು ಹೇಳಲು ಹೊರಟೀರಿ ಅನ್ನುವುದೇ ಗೊಂದಲವಾಯ್ತು.

ನನಗನಿಸಿದ ಕೆಲ ಅಂಶಗಳು:
೧> ಹಳ್ಳಿ ಜನಕ್ಕೆ ಟಿವಿ, ವಿದ್ಯುತ್, ಇತ್ಯಾದಿ ಇಲ್ಲದ ಕಾಲದ ಬಗ್ಗೆ ನೀವು ಬರೆದಿರುವ ಅನಿಸಿಕೆ ತಕ್ಕ ಮಟ್ಟಿಗೆ ಸರಿ. ಆ ಕಾಲದಲ್ಲಿ ಹಳ್ಳಿಗಳನ್ನು ತಲುಪುವ ತಂತ್ರಜ್ಞಾನವೂ ಇರಲಿಲ್ಲ.ಹಳ್ಳಿಗಳ ಬಗ್ಗೆ ನೂರಾರು ವರ್ಷಗಳಿಂದ ಇರುವ ಕಡೆಗಣನೆ ಇವತ್ತಿಗೂ ಒಂದು ಮಟ್ಟಿಗೆ ಮುಂದುವರೆದಿದೆ.
ಆದರೆ, ಈಗ ಕೆಲ ಸಮಯದಿಂದ ಹಳ್ಳಿಗಳಿಂದ ಒಂದಿಷ್ಟು ವ್ಯಾಪಾರ ಸಾಧ್ಯತೆ ಕಾಣುತ್ತಿರುವ ಕೆಲ ವಿಷಯಗಳಲ್ಲಿ ಕೆಲ ಸುಧಾರಣೆಗಳಾಗಿವೆ. ಉದಾ: ಮೋಬೈಲ್ ಫೋನ್ ತಲುಪು.
೨> ಟಿವಿ ಬಂದು ಜನ ಸೋಮಾರಿಗಳಾದರು ಅನ್ನೋದು gross generalisation. ಆ ರೀತಿ ಹೇಳುವುದಾದರೆ ಕಳೆದ ೫೦ ವರ್ಷಗಳಿಂದ ಮನೆ ಮನೆಗೂ ಟಿವಿ ವ್ಯವಸ್ಥ ಇರುವ ಅಮೇರಿಕ, ಬ್ರಿಟನ್ ತರಹದ ದೇಶದ ಜನರೆಲ್ಲ ಸೋಮಾರಿಗಳಲ್ಲೇ ಸೋಮಾರಿಗಳಾಗಬೇಕಿತ್ತು. ಅತಿ ಹೆಚ್ಚು ಟಿವಿ, ಅಂತರ್ಜಾಲ ಪೆನೆಟ್ರೇಶನ್ ಇರುವ ಜಪಾನ್, ಕೋರಿಯಾ ಮುಂತಾದ ದೇಶಗಳ ಜನರು ಅತ್ಯಂತ ಕಷ್ಟ ಪಟ್ಟು ದುಡಿಯುವ ಜನಾಂಗಗಳಾಗಿದ್ದಾರೆ ಅನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ಹೀಗಾಗಿ ಟಿವಿ ಬಂದು ನಮ್ಮ ಜನ ಸೋಮಾರಿಗಳಾದರು ಅನ್ನುವುದು ಸರಿಯಲ್ಲ. ಕೂಲಿ ಕಾರ್ಮಿಕ ಇಂಟರ್ ನೆಟ್ ಅಲ್ಲಿ ಶೇರು ಮಾರುಕಟ್ಟೆ ಬಗ್ಗೆ ತಿಳಿಯುತ್ತಾನೆ ಅನ್ನುವುದು ತಮಾಷೆಯಾಗಿದೆ. ನಮ್ಮ ಜನಸಂಖ್ಯೆ ೧೧೦ ಕೋಟಿ. ಭಾರತದಲ್ಲಿ ಅಂತರ್ಜಾಲ ಬಳಸುವವರ ಸಂಖ್ಯೆ ಬರೀ ಏಳು ಕೋಟಿ. ಅದರಲ್ಲೂ ಮೊಬೈಲ್ ನಲ್ಲಿ ಅಂತರ್ಜಾಲ ಬಳಸುವವರ ಸಂಖ್ಯೆ ೫೦ ಲಕ್ಷವನ್ನೂ ಮೀರುವುದಿಲ್ಲ.

೩> ಜನರಿಗೆ ಮನರಂಜನೆ ಬೇಕು, ಭಾಷೆ ಯಾವುದಾದರೇನು ಅನ್ನುವುದೇ ಆದಲ್ಲಿ, ಪಕ್ಕದ ಆಂಧ್ರದಲ್ಲಿ, ತಮಿಳುನಾಡಿನಲ್ಲಿ ಯಾಕೆ ಕನ್ನಡ, ಮಲಯಾಳಂ, ಬೆಂಗಾಲಿ ಚಿತ್ರಗಳು ಓಡಲ್ಲ? ಭಾಷೆಯ ಅಗತ್ಯವೇ ಇಲ್ಲ. ಇನ್ನೂ ಹೆಚ್ಚು ಹೆಚ್ಚು ಮನರಂಜನೆ ಬೇಕು ಅನ್ನುವುದೇ ಆದಲ್ಲಿ ಅಲ್ಲೆಲ್ಲ ಯಾಕೆ ಬರೀ ತೆಲುಗು, ತಮಿಳು ಚಿತ್ರಗಳೇ ಹೆಚ್ಚಿನ ಸಂಖ್ಯೆಯಲ್ಲಿ ಓಡುತ್ತವೆ? ನಿಮ್ಮ ಕಚೇರಿಯಲ್ಲಿರುವ ಒಬ್ಬ ತೆಲುಗ, ತಮಿಳನಿಗೆ ಇನ್ನೊಂದು ಭಾಷೆಯ ಚಿತ್ರರಂಗ, ಚಿತ್ರ ನಟರ ಬಗ್ಗೆ ಎಷ್ಟು ಗೊತ್ತು ಅನ್ನುವುದನ್ನು ಕೇಳಿ ತಿಳಿಯಿರಿ. ಆಗ ನಿಮಗೇ ತಿಳಿದೀತು,, ಅವರೆಲ್ಲ ಎಷ್ಟರ ಮಟ್ಟಿಗೆ "ಭಾಷೆಯ ಹಂಗಿಲ್ಲದೇ ಮನರಂಜನೆ" ಪಡೆಯುತ್ತಿದ್ದಾರೆ ಅನ್ನುವುದು.

೪> ಎರಡು ಸಾವಿರ ವರ್ಷ ಇತಿಹಾಸ ಕನ್ನಡಕ್ಕಿಲ್ಲ. ಅದಕ್ಕೆ ಕಡಿಮೆ ಎಂದರೂ ೧೦ ಸಾವಿರ ವರ್ಷ ಇತಿಹಾಸವಿದೆ. ಎರಡು ಸಾವಿರ ಇರುವುದು ಬರೀ ಲಿಪಿಗೆ. ಲಿಪಿ ಹುಟ್ಟುವ ಮೊದಲೇ ಭಾಷೆ ಹುಟ್ಟಿರುತ್ತೆ.

೫> ಅನ್ಯ ಭಾಷೆಯಲ್ಲಿಯಾಗಲಿ, ಪರ ಭಾಷೆಯಲ್ಲಾಗಲಿ ಮನರಂಜನೆ ಪಡೆದ ಯಾರಿಗೂ ಕೆಲಸಕ್ಕೆ ಮೀಸಲಾತಿ ಸಿಕ್ಕ ಯಾವ ಉದಾಹರಣೆ ಜಗತ್ತಲ್ಲೇ ಇಲ್ಲ. ಡಬ್ಬಿಂಗ್ ಚರ್ಚೆಗೂ, ಈ ಕಮೆಂಟಿಗೂ ಸಂಬಂಧವೇ ಕಾಣಿಸುತ್ತಿಲ್ಲ.

೬> ಬಳ್ಳಾರಿ ಗಣಿಗಾರಿಕೆ ಬಗ್ಗೆ ಹೇಳುವುದಾದರೆ, ಈ ನಾಡಿನ ಸಂಪನ್ಮೂಲ ಈ ನಾಡಿನ ಏಳಿಗೆಗೆ ಬಳಕೆಯಾಗಬೇಕು. ಅದು ಹುಟ್ಟು ಹಾಕುವ ಆದಾಯ ಕರ್ನಾಟಕದ ಮುಂದಿನ ಪೀಳಿಗೆಯ ಮಕ್ಕಳ ಭವಿಷ್ಯವನ್ನು ರೂಪಿಸಲು ( ಅವರ ಕಲಿಕೆ, ಅವರಿಗೆ ಮೂಲಭೂತ ಸೌಕರ್ಯ, ಆರೋಗ್ಯ ವ್ಯವಸ್ಥೆ ಇತ್ಯಾದಿ ಕಲ್ಪಿಸಲು) ಬಳಕೆಯಾಗಬೇಕು. ಅಕ್ರಮ ಗಣಿಗಾರಿಕೆಗೆ ತೆರೆಯೆಳೆದು, ಗಣಿ ಸಂಪನ್ಮೂಲ ನಾಡಿನ ಮಕ್ಕಳ ಭವಿಷ್ಯಕ್ಕೆ ಬಳಕೆಯಾಗುವಂತೆ ಮಾಡಬೇಕು. ಈಗ ಅಕ್ರಮ ಗಣಿಗಾರಿಕೆಯಿಂದ ಒಂದಿಷ್ಟು ಕನ್ನಡಿಗರಿಗೆ ಅನ್ನ ಸಿಕ್ಕಿದ್ದರೆ, ಅದು ನಿಲ್ಲಬೇಕು. ಎಸ್.ಟಿ.ಡಿ ಬೂತ್ ಮೇಲೆ ೫೦ ಸಾವಿರ ಜನರು ಅವಲಂಬಿತರಾಗಿದ್ದರು. ಹಾಗಂತೆ ಮೊಬೈಲ್ ಬಿಟ್ಟುಕೊಳ್ಳಲ್ಲ ಅನ್ನುವುದಕ್ಕೆ ಆಗುತ್ತದೆಯೇ? ಇವತ್ತು ಎಸ್.ಟಿ.ಡಿಗಳೆಲ್ಲ ಬಾಗಿಲು ಹಾಕಿ ಮೊಬೈಲ್ ಶಾಪ್ ಗಳನ್ನು ಇಟ್ಟುಕೊಂಡಿದ್ದಾರೆ, ಅಥವಾ ಇನ್ನಾವುದೋ ಬದುಕಿನ ಹಾದಿ ಕಂಡುಕೊಂಡಿದ್ದಾರೆ. ಅದಾವುದೂ ಆಗದವನು ಕಷ್ಟ ಪಟ್ಟೇ ಪಡುತ್ತಾನೆ. ಕೊನೆಗೆ ನೀವೇ ಹೇಳಿದಂತೆ ಡಾರ್ವಿನ್ ನ ನಿಯಮದಂತೆ ಗಟ್ಟಿಯಾಗಿರುವುವನು ಮಾತ್ರ ಉಳಿಯುತ್ತಾನೆ.

೭> ಡಬ್ಬಿಂಗ್ ನ ಸಾಧಕ-ಭಾದಕಗಳೆರಡನ್ನು ಅಳೆಯಲಿ. ಚರ್ಚೆ ನಡೆಯಲಿ. ಅದಾದ ನಂತರ ನಮ್ಮ ಉದ್ಯಮದ ಹಿತಾಸಕ್ತಿ ಗಮನದಲ್ಲಿರಿಸಿಕೊಂಡು ಅದರ ಬಗ್ಗೆ ನಮ್ಮ ಉದ್ಯಮ ನಿರ್ಧಾರ ತೆಗೆದುಕೊಳ್ಳಲಿ.

Me, Myself & I ಹೇಳಿದರು...

ಗುರುರಾಜ್‌ ಬೆಳ್ಳುಬ್ಬಿಯವರೇ,
ನಿಮಗೆ ನಮಸ್ಕಾರ ಹಾಗೂ ಸ್ವಾಗತ.

ಹೌದು. ಅಷ್ಟು ಉದ್ದದ ಪೋಸ್ಟ್ ಪ್ರಕಟಿಸಿದ್ದರೂ, ಡಬ್ಬಿಂಗ್‌ ಬೇಕೆಂದಾಗಲಿ! ಅಥವಾ ಬೇಡವೆಂದಾಗಲೀ! ಯಾವುದೇ ನಿಲುವಿಗೆ ಬಂದು ನಿಲ್ಲುವುದಿಲ್ಲ. ಅಲ್ಲವೇ? ಅದೇ ಈ ಪೋಸ್ಟ್‌ನ ವಿಶೇಷತೆ. ನಿಮಗಿದು ಗೊಂದಲವೆನ್ನಿಸಿದ್ದಲ್ಲಿ ಆಶ್ಚರ್ಯವೇನಿಲ್ಲ.

ಕೆಲವು ಸ್ಪಷ್ಟನೆಗಳನ್ನು ನಿಮ್ಮ ಮುಂದೆ ಇಡಲಿಚ್ಚಿಸುತ್ತೇನೆ.
೧. "ಟೀವೀ ಬಂದು ಜನ ಸೋಮಾರಿಗಳಾದರು" ಎನ್ನುವ ತೀರ್ಮಾನವನ್ನು ಲೇಖನವು ಬೆಂಬಲಿಸುವುದಿಲ್ಲ. ಅದರ ಬಗ್ಗೆ ಇಲ್ಲಿ ಚರ್ಚೆ ಮುಂದುವರೆಸುವುದು ಬೇಡವೆಂದು ಕೊಳ್ಳೋಣ.
೨."ಕೂಲಿಕಾರ್ಮಿಕ - ಶೇರುಪೇಟೆ". ನನ್ನ ಇಂದ್ರಿಯಗಳ ಮೇಲೆ ಇನ್ನೂ ನಂಬಿಕೆ ಇಟ್ಟುಕೊಂಡಿದ್ದೇನೆ. ಇದು ಸ್ವತಃ ಅನುಭವಕ್ಕೆ ಬಂದ ಘಟನೆ. ಅದನ್ನು ಇಲ್ಲಿ ಹಂಚಿಕೊಂಡಿದ್ದೇನೆ ಅಷ್ಟೇ. ಇದೊಂದು ಉಹಾಪೋಹ ಹೇಳಿಕೆಯಲ್ಲ. ಆದುದರಿಂದ ಈ ವಿಷಯವಾಗಿ ಹೆಚ್ಚಿನ ಸಾಕ್ಷ್ಯಗಳು ಬೇಕೆನಿಸುವುದಿಲ್ಲ.
೩. "ಕನ್ನಡ, ಮಲಯಾಳಂ, ಬೆಂಗಾಲಿ ಚಿತ್ರಗಳು ಓಡಲ್ಲ?" - ಇಲ್ಲಿ ಸ್ವಲ್ಪಗೊಂದಲದಲ್ಲಿದ್ದೇನೆ.
ಕನ್ನಡದ ಚಿತ್ರಗಳನ್ನು ಇತರರು ಡಬ್ಬಿಂಗ್ ಮಾಡಲಿ ಎಂದೇ?
ಅಥವಾ
ಕನ್ನಡಕ್ಕೆ ಡಬ್ಬಿಂಗ್ ಬಂದರೆ, ತಮಿಳು, ತೆಲುಗರು ಕನ್ನಡಚಿತ್ರಗಳನ್ನು ವೀಕ್ಷಿಸುತ್ತಾರೆ ಎಂದೇ?

ಇಂಗ್ಲೀಷ್ ಚಿತ್ರಗಳಲ್ಲಿ ಯಾವ ತೆಲುಗು ಅಥವಾ ತಮಿಳು ಚಿತ್ರದ ನಟರು ಅಭಿನಯಿಸಿದ್ದಾರೆ ಎಂದು ಅವರು ಇಂಗ್ಲೀಷ್ ಡಬ್ ಚಿತ್ರಗಳನ್ನು ವೀಕ್ಷಿಸುತ್ತಿದ್ದಾರೆ. ನಿಮ್ಮ ಅನಿಸಿಕೆ ಏನು?

ಇಲ್ಲಿ ನನ್ನ ಅಭಿಪ್ರಾಯವೇನೆಂದರೆ, ಕನ್ನಡಕ್ಕೆ ಡಬ್ಬಿಂಗ್ ಬಂದರೂ ಸಹ, ಅದರಿಂದ ಮತ್ತಿನ್ನೇನೋ ಕ್ರಾಂತಿಯಾಗಿ ಬಿಡುತ್ತದೆ ಎನ್ನುವಂತೆ ಅಸೀಮಿತ ನಿರೀಕ್ಷೆಗಳನ್ನು ನಾವು ಹುಟ್ಟುಹಾಕಬಾರದು. ಅಂತಹ ಒಂದು ಅವಾಸ್ತವ ನಿರೀಕ್ಷೆಯಿಂದ ಮತ್ತಷ್ಟು ವಿರೋಧವ್ಯಕ್ತವಾಗಬಹುದೇ ವಿನಃ ಬೆಂಬಲವನ್ನಂತೂ ನಿರೀಕ್ಷಿಸಗಲಾಗದು.

ಇಷ್ಟಾಗಿಯೂ ಇನ್ನೂ ಹೇಳಬೇಕಾಗಿರುವುದು ಮುಂದುವರೆಯುತ್ತಲೇ ಇರುತ್ತದೆ, ನಿಮ್ಮ ಉಳಿದ ಅಂಶಗಳನ್ನು ಇನ್ನಷ್ಟು ಅವಲೋಕಿಸಲು ಹೊರಡುವುದಿಲ್ಲ.

ನಿಮ್ಮಲ್ಲಿನ ಅಭಿಪ್ರಾಯಗಳನ್ನು ಹಂಚಿಕೊಂಡು ಇಲ್ಲಿ ಭಾಗವಹಿಸಿದ್ದಕ್ಕೆ ಧನ್ಯವಾದಗಳನ್ನು ತಿಳಿಸಲಿಚ್ಚಿಸುತ್ತಿದ್ದೇನೆ

Harisha - ಹರೀಶ ಹೇಳಿದರು...

ನಿಮ್ಮ ಹಿಂದಿನ ಲೇಖನಕ್ಕೆ ನಾನು ಕಮೆಂಟಿಸಿ ಕೇಳಿದ್ದ ಪ್ರಶ್ನೆಗಳಿಗೆ ಉತ್ತರಿಸುತ್ತೀರಿ ಎಂದುಕೊಂಡಿದ್ದೆ. ಆದರೆ ಆ ಕಮೆಂಟಿಗೆ ನೀವು ಉತ್ತರಿಸಿದ್ದ ಕಮೆಂಟಿನಷ್ಟೇ ಈ ಲೇಖನವೂ ಅಸಮರ್ಪಕವಾಗಿದೆ.. ಅಸಂಬದ್ಧ ಕೂಡ.

ಹಾಲಿವುಡ್, ಬಳ್ಳಾರಿ .. ಎತ್ತಣಿಂದೆತ್ತಣ ಸಂಬಂಧವಯ್ಯಾ?

ವಿ.ರಾ.ಹೆ. ಹೇಳಿದರು...

ಹಾಲಿವುಡ್ - ಬಳ್ಳಾರಿ - ಮೀಸಲಾತಿ - ಡಬ್ಬಿಂಗ್ ಎತ್ತಣಿಂದೆತ್ತಣ ಸಂಬಂಧವಯ್ಯಾ? :)

Me, Myself & I ಹೇಳಿದರು...

@ವಿಕಾಸ್‌: ಹಳ್ಳಿಜನಗಳ ಮೇಲಿನ ಅನುಕಂಪಕ್ಕೊಸ್ಕರ ಡಬ್ಬಿಂಗ್‌ ಬೇಕು ಎನ್ನುವವರಿದ್ದಾರೆ. ಆದ್ರೆ ಮೀಸಲಾತಿ ಇಟ್ಟರೆ ನಗರ ಪ್ರದೇಶದ ಜನಗಳನ್ನೂ ಡಬ್ಬಿಂಗ್‌ ಚಿತ್ರಗಳತ್ತ ಆಕರ್ಷಿಸಬಹುದಲ್ಲವೇ?

ಮತ್ತೆ ಹಾಲಿವುಡ್ಡಿಂದ ಇಮ್ಪೋರ್ಟ್ & ಬಳ್ಳಾರಿಯಿಂದ ಎಕ್ಸ್‌ಪೋರೋರ್ಟ್,ಯ್ಯಾಸ್ ಸಿಂಪಲ್ ಯ್ಯಾಸ್‌ ದಟ್ ಈ ಸೇ
:)

ಅನಾಮಧೇಯ ಹೇಳಿದರು...

ಲೋಹಿತ್,
ಗಾಂಧಿನಗರದಿಂದ ಮಾತು ಬಳ್ಳಾರಿಗೆ ತಗೊಂಡು ಹೋಗಿ ಹಾದಿ ತಪ್ಪಿಸಿದ್ದೀರಿ.ಸರಿ ನೀವು ಡಬ್ಬಿಂಗ್ ಪರ/ವಿರೋಧ ಎರಡರಿಂದಲೂ ದೂರ ಇರಿ. ಡಬ್ಬಿಂಗ್ ಬರದಿದ್ದರೆ ಭಾಷೆ ಕಳೆದು ಹೋಗುತ್ತೆ ಅನ್ನೋ ಡಬ್ಬಿಂಗ್ ಪರ ಮಾತದುತ್ತಿರುವವರ ವಾದವಲ್ಲ.ಪ್ರಪಂಚದ ಎಲ್ಲ ಭಾಷೆಯ ಅತ್ಯುತ್ತಮ ಚಿತ್ರಗಳು,ಕಾರ್ಯಕ್ರಮಗಳು ಪ್ರತಿಯೊಬ್ಬ ಕನ್ನಡಿಗನಿಗೆ ಕನ್ನಡದಲ್ಲಿ ದೊರಕಬೇಕು ಅನ್ನೋದೇ ನಮ್ಮ ವಾದದ ತಿರುಳು.ಇನ್ನ ಡಬ್ಬಿಂಗ್ಗೆ ಅವಕಾಶ ಕೊಟ್ರೆ ನಮ್ಮ ಸಂಸ್ಕೃತಿ ನೀರು ಪಾಲಾಗುತ್ತೆ ಅಂತ ಅಳತ ಇರೋದು ಡಬ್ಬಿಂಗ್ ವಿರೋಧಿಸುವ ಮಂದಿ.ಅದ್ಹೇಗೆ ಆಗುತ್ತೆ ಅಂತ ಅವರೇ ಹೇಳ್ಬೇಕು.

ರಾಕೇಶ್ ಶೆಟ್ಟಿ

Me, Myself & I ಹೇಳಿದರು...

ಥ್ಯಾಂಕ್ಯೂ ರಾಕೇಶ್

Me, Myself & I ಹೇಳಿದರು...

@ಶಿವಶಂಕರ
ಧನ್ಯವಾದಗಳು.
ಅಡ್ಡಗೋಡೆಯ ಮೇಲೆ ದೀಪ ಇಟ್ಟಿದ್ದೇನೆ ಎಂದಾಗಲಿ ಇಲ್ಲ ಎಂದಾಗಲಿ, ಎರಡನ್ನೂ ಸ್ಪಷ್ಟವಾಗಿ ಒಪ್ಪಿಕೊಳ್ಳಲಾಗುವುದಿಲ್ಲ.
ಲೇಖನದಲ್ಲಿ ತೀರ್ಮಾನಕ್ಕೆ ಬರಲಾಗಿಲ್ಲ ಎಂದಷ್ಟೇ ಎಣಿಸುತ್ತೇನೆ. ತೀರ್ಮಾನವನ್ನು ತೆಗೆದುಕೊಳ್ಳಲಿಚ್ಚಿಸುವವರಿಗೆ ಆಹ್ವಾನವಿತ್ತಿದ್ದೇನೆ (with some facts) ಎಂದು ಎಣಿಸಬಹುದೇನೋ...

blogspot add widget